ವಿವಿ ಕುಲಪತಿ ಭೇಟಿಗೆ ಪೂರ್ವಾನುಮತಿ ನಿಯಮ: ಎಐಡಿಎಸ್‌ಒ ಖಂಡನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕುಲಪತಿಗಳ ಭೇಟಿಗೆ ಪೂರ್ವಾನುಮತಿ ಇಲ್ಲದೆ ಬರಬಾರದು ಎಂಬ ನಿರ್ಧಾರವು ಅತ್ಯಂತ ಆಘಾತಕಾರಿ ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಡ್ಸ್‌ ಆರ್ಗನೈಜಷೇನ್‌(ಎಐಡಿಎಸ್‌ಒ) ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಐಡಿಎಸ್‌ಒ ಬೆಂಗಳೂರು ಜಿಲ್ಲಾ ಸಮಿತಿ ಮುಖಂಡರಾದ ಕಲ್ಯಾಣ್ ಕುಮಾರ್ ವಿ. ಅವರು, ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭೇಟಿಯನ್ನು ವಿವಿಯು ಸ್ವೀಕರಿಸುವ ಇಲ್ಲವೇ, ತಿರಸ್ಕರಿಸುವ ಅಧಿಕಾರವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾಲಯದಲ್ಲಿ ಪ್ರಜಾತಾಂತ್ರಿಕ, ವೈಜ್ಞಾನಿಕ ವಾತಾವರಣವನ್ನು ಕಾಪಾಡಲು ಶ್ರಮಿಸಬೇಕಾದ ಸಮಯದಲ್ಲಿ, ವಿಶ್ವವಿದ್ಯಾಲಯದ ಈ ಅಪ್ರಜಾತಾಂತ್ರಿಕ, ವಿದ್ಯಾರ್ಥಿ ವಿರೋಧಿ ನಿರ್ಧಾರವು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಈ ಸುತ್ತೋಲೆ ಕೇವಲ ಹೋರಾಟಗಳ ಬಗ್ಗೆ ಮಾತ್ರವಲ್ಲ, ವಿದ್ಯಾರ್ಥಿಗಳು ಕುಲಪತಿಗಳನ್ನು ಭೇಟಿಯಾಗುವ ಅವರ ಹಕ್ಕನ್ನು ಕಸಿದಿದೆ. ಕುಲಪತಿಗಳು ಕೇವಲ ಸರ್ಕಾರಿ ಅಧಿಕಾರಿಯಲ್ಲ, ಅವರು ವಿದ್ಯಾರ್ಥಿಗಳ ಪ್ರತಿನಿಧಿ ಕೂಡ. ವಿದ್ಯಾರ್ಥಿಗಳು ಕುಲಪತಿಗಳನ್ನು ಭೇಟಿಯಾಗಲು ಯಾವ ಅಡೆತಡೆಯು ಇರಬಾರದು. ಅಂತೆಯೇ, ಹೋರಾಟಗಳಿಗೆ ಸ್ಪಂದಿಸುವ ಬಾಧ್ಯತೆ ಕುಲಪತಿಗಳ ಮೇಲೆ ಇದೆ. ಈಗ ವಿವಿಯು ತನ್ನ ಜವಾಬ್ದಾರಿ ಮತ್ತು ಬಾಧ್ಯತೆಯಿಂದ ದೂರ ಸರಿಯುವ ನಿರ್ಧಾರ ಮಾಡಿರುವುದು, ವಿಶ್ವವಿದ್ಯಾಲಯ ಹೋರಾಟ ವಿರೋಧಿ ಮನೋಭಾವನೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಸರ್| ಎಚ್. ನರಸಿಂಹಯ್ಯನವರು ಬೆಂಗಳೂರು ವಿವಿಯ ಕುಲಪತಿಯಾಗಿದ್ದ ಸಮಯದಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆ ನಡೆದಾಗ, ಅದು ಹಿಂಸಾಚಾರಕ್ಕೆ ತಿರುಗಬಹುದು ಎಂದು ಶಂಕಿಸಿ ವಿಶ್ವವಿದ್ಯಾಲಯದ ಆವರಣದ ಒಳಗೆ ಪೊಲೀಸ್ ಸಿಬ್ಬಂದಿಗಳು ನುಗ್ಗಲು ಮಂದಾದಾಗ ಅವರನ್ನು ತಡೆದು ನಿಲ್ಲಿಸಿ, ‘ಇದು ನನ್ನ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯ, ಇಲ್ಲಿ ನಿಮಗೆ ಜಾಗವಿಲ್ಲ. ಹಾಗೊಮ್ಮೆ ಬರುವುದೇ ಆದರೆ, ನನ್ನ ಹೆಣದ ಮೇಲೆ ಮೊದಲು ನಡೆಯಿರಿ’ ಎಂದು ಅತ್ಯಂತ ಧೃಢವಾಗಿ ಹೇಳಿದ್ದರು. ಇಂತಹ ವಿದ್ಯಾರ್ಥಿ ಪರ ಆಶಯವನ್ನು ಎತ್ತಿ ಹಿಡಿದಿದ್ದ ಕುಲಪತಿಗಳನ್ನು ಹೊಂದಿದ್ದ ಪರಂಪರೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಇದೆ.

ಹೀಗಿರುವಾಗ, ಪ್ರಸ್ತಕ ನಡೆಯೂ ಅತ್ಯಂತ ವ್ಯಕಿರಿಕ್ತಕ್ಕೆ ಬದಲಾಗಿರುವುದಕ್ಕೆ ಎಐಡಿಎಸ್‌ಒ ಆತಂಕವನ್ನು ವ್ಯಕ್ತಪಡಿಸಿದೆ. ಕೂಡಲೇ ಕುಲಪತಿಗಳ ಭೇಟಿಗೆ ಪೂರ್ವಾನುಮತಿ ಪಡೆಯಬೇಕು ಎಂಬ ನಿರ್ಧಾರವನ್ನು ಕೈ ಬಿಡಬೇಕು. ಬೆಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿ ಪರ, ಸತ್ಯದ ಪರವಾದ ನಿಲುವನ್ನು ಸ್ಥಾಪಿಸಬೇಕು ಹಾಗೂ ವಿವಿಯಲ್ಲಿ ಪ್ರಜಾತಾಂತ್ರಿಕ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ವಿನಂತಿಸಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *