ಬೊಮ್ಮನಹಳ್ಳಿ: ದೇಶದ ಸೌಹಾರ್ದ ಪರಂಪರೆ, ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಭುತ್ವ ಪ್ರಾಯೋಜಿತ ಷಡ್ಯಂತ್ರ ನಡೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.
ಶುಕ್ರವಾರ ಹೆಚ್ಎಸ್ಆರ್ ಬಡಾವಣೆಯಲ್ಲಿ ಸೌಹಾರ್ದ ಕರ್ನಾಟಕ ವೇದಿಕೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ‘ಕರ್ನಾಟಕ ಶತಶತಮಾನಗಳಿಂದಲೂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ದಾಸ ಪರಂಪರೆ, ವಚನ ಚಳುವಳಿ, ಸೂಫಿ ಚಳುವಳಿಗಳು ಸೌಹಾರ್ದ ಪರಂಪರೆಯನ್ನು ಸಾರುತ್ತಾ ಬಂದಿವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂದ ಆದಿ ಕವಿ ಪಂಪನಿಂದ ಹಿಡಿದು, ವಿಶ್ವ ಮಾನವ ಸಂದೇಶ ನೀಡಿದ ಕುವೆಂಪುರವರೆಗೆ ಎಲ್ಲ ಮಹನೀಯರು ಮನುಷ್ಯರಾಗಿ ಕೂಡಿ ಬಾಳುವ ಸಂದೇಶ ಸಾರಿದ್ದಾರೆ, ಇದನ್ನು ಉಳಿಸಿ ಬೆಳೆಸುವ ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲೆ ಇದೆ’ ಎಂದರು.
ನಾಡಿನ ಸೌಹಾರ್ದ ಪರಂಪರೆಯನ್ನು ಕಾಪಿಟ್ಟುಕೊಳ್ಳುವ ಉದ್ದೇಶದೊಂದಿಗೆ ರಾಜ್ಯಾದ್ಯಂತ ಸೌಹಾರ್ದ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ನಾಡಿನ ಜನತೆ ಕೈಜೋಡಿಸಬೇಕೆಂದರು.
ಇದನ್ನೂ ಓದಿ : ಗಾಂಧಿ ಹುತಾತ್ಮ ದಿನ | ಸೌಹಾರ್ದ ಕರ್ನಾಟಕದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾನವ ಸರಪಳಿ
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್ ಮಾತನಾಡಿ ‘ಬಹು ಸಂಸ್ಕೃತಿಯ ಈ ದೇಶದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಡೆದಿದೆ, ಆದರೆ ದೇಶದ ಜನತೆ ಜಾತಿ, ಮತ ಧರ್ಮಗಳನ್ನು ಮೀರಿ ಜೀವಿಸಿದ ಸೋದರತ್ವದ ಮೌಲ್ಯವನ್ನು ಬೆಳೆಸಿದ ಚಾರಿತ್ರಿಕ ಹಿನ್ನೆಲೆ ಇದೆ, ಹೀಗಾಗಿಯೇ ಬಹುತ್ವದ ಬೇರುಗಳು ಗಟ್ಟಿಯಾಗಿ ಬೇರೂರಿವೆ’ ಎಂದರು.
ಹೊಸೂರು ರಸ್ತೆ ಭಾಗದಲ್ಲಿ ಮಾನವ ಸರಪಳಿಯನ್ನು ಮಡಿವಾಳದಿಂದ ಆರಂಭಿಸಿ ಎಲೆಕ್ಟ್ರಾನಿಕ್ ಸಿಟಿವರೆಗೂ ನಡೆಸಲು ಉದ್ದೇಶಿಸಲಾಗಿದೆ. ಕೋಮು ಸೌಹಾರ್ದತೆಯ ಪರವಾಗಿರುವ ಎಲ್ಲ ಜನತೆ ಈ ಮಾನವ ಸರಪಳಿಯಲ್ಲಿ ಭಾಗವಹಿಸಬೇಕು’ ಎಂದರು.
ಸೌಹಾರ್ದ ಕರ್ನಾಟಕ ಹೊಸೂರು ರಸ್ತೆ ಭಾಗದ ಸಂಚಾಲಕ ಅನಿಲ್ ರೆಡ್ಡಿ, ಸ್ಥಳೀಯರಾದ ಬಿ.ಎನ್.ಪರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವ ರೆಡ್ಡಿ, ಬಿಡುಗಡೆ ಚಿರತೆಗಳು ಸಂಘಟನೆ ಮುಖಂಡ ಅಬ್ದುಲ್ ನಜೀರ್ ಇದ್ದರು.