ಉಡುಪಿ : ಮೀನು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಮತ್ತು ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಗಾರರು ಬೃಹತ್ ಮತ ಪ್ರದರ್ಶನ ಹಾಗೂ ಪ್ರತಿಭಟನಾ ಹೋರಾಟ ನಡೆಸಿದರು.
ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾರ್ಮಿಕರ ಒಕ್ಕೂಟ (ಎಐಎಫ್‌ಎಫ್‌ಡಬ್ಲ್ಯೂಎಫ್)ಕ್ಕೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ(ರಿ) ಇದರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ನೆರೆದಿದ್ದರು.
ಇತ್ತೀಚಿಗೆ ಉಡುಪಿ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಜರುಗಿದ ಮೀನುಗಾರರ ಸಮಾವೇಶ ಉದ್ಘಾಟಿಸಿ, ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡುತ್ತಾ, ಕರಾವಳಿಯ ಮೂರು ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ಬಡ ಮೀನುಗಾರರು ನಿರುದ್ಯೋಗದಿಂದಾಗಿ ಜೀವನ ನಡೆಸಲಾಗದೆ ಅನಿವಾರ್ಯವಾಗಿ ಬದಲಿ ಉದ್ಯೋಗಕ್ಕಾಗಿ ದ್ವಿಚಕ್ರ ಮೋಟಾರ್ ಸೈಕಲ್ ನಲ್ಲಿ ಮನೆ ಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಆರ್ಥಿಕವಾಗಿ ಬಡತನದಲ್ಲಿರುವ ಇವರಿಗೆ ಸರಕಾರ ಸಾಮಾಜಿಕ ಭದ್ರತೆಗಾಗಿ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಮೀನುಗಾರರ ಬೃಹತ್ ಪ್ರತಿಭಟನೆಯ ನಂತರ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದರು.
ಪಿಂಚಣಿ ಸೌಲಭ್ಯ, ಕಲ್ಯಾಣ ಮಂಡಳಿ ರಚನೆ ಅಪಘಾತ ಪರಿಹಾರ ಇತ್ಯಾದಿ ಬೇಡಿಕೆ ಈಡೇರಿಸುವುದಕ್ಕಾಗಿ ಈ ಕೂಡಲೇ ಮೀನುಗಾರರ ಸಂಘದ ಮುಖಂಡರೊಡನೆ ಮೀನುಗಾರಿಕಾ ಇಲಾಖಾಧಿಕಾರಿ ಜತೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜಂಟೀ ಸಭೆ ಏರ್ಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಕಾರ್ಯಕ್ರಮದ ನೇತೃತ್ವವನ್ನು ಮೀನುಗಾರರ ಸಂಘದ ಮುಖಂಡರಾದ ಕವಿರಾಜ್.ಎಸ್, ಕೋಣಿ ವೆಂಕಟೇಶ್ ನಾಯಕ್, ನಳಿನಿ.ಎಸ್, ಉಮೇಶ್ ಕುಂದರ್ ಮಹೇಶ್ ಪೂಜಾರಿ ಅನ್ವರ್, ಸಂಗಮೇಶ್, ವಸಂತ, ಅನ್ವರ್ ಕಟಪಾಡಿ ಮೊದಲಾದವರು ವಹಿಸಿದ್ದರು.
ವರದಿ: ಕೋಣಿ ವೆಂಕಟೇಶ್ ನಾಯಕ್