ಎಚ್. ಆರ್. ನವೀನ್ ಕುಮಾರ್, ಹಾಸನ
ನಮ್ಮದೇ ಆದ ವಿಶಾಲ ತಳಹದಿಯ ಪ್ರಗತಿಪರ ಆಲೋಚನೆಗಳ, ಜನರ ಧ್ವನಿಯಾಗುವ ಒಂದು ಡಿಜಿಟಲ್ ಮೀಡಿಯಾವನ್ನ ಕಟ್ಟಬೇಕು ಎನ್ನುವುದು ವಿಠ್ಠಲ್ ಭಂಡಾರಿ ಅವರ ಕನಸಾಗಿತ್ತು. ಆದರೆ ಇಂಥದೊಂದು ಕೆಲಸವನ್ನು ಕಾಲೇಜಿನಲ್ಲಿ ಕೆಲಸ ಮಾಡಿಕೊಂಡು ಸಿದ್ದಾಪುರದಿಂದ ಮಾಡುವುದು ಸಾಧ್ಯವಾಗದ ಕೆಲಸ ಎಂದು ಗೊತ್ತಿದ್ದ ವಿಠ್ಠಲ್ ಅವರು ಅಂತಹ ಒಂದು ಮಾಧ್ಯಮದ ಹುಡುಕಾಟದಲ್ಲಿದ್ದರು. ಸರಿಯಾಗಿ ಒಂದುವರೆ ವರ್ಷಗಳ ಹಿಂದೆ ಜನಶಕ್ತಿ ಮೀಡಿಯಾ ತನ್ನ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಬೆಂಗಳೂರಿನಲ್ಲಿ ಒಂದು ಸಣ್ಣ ಸ್ಟುಡಿಯೋದಲ್ಲಿ ಕೆಲಸ ಆರಂಭಿಸಿದಾಗ ವಿಠ್ಠಲ್ ಗೆ ಎಲ್ಲಿಲ್ಲದ ಸಂತೋಷ!.
ತನ್ನೊಳಗಿದ್ದ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹೊಸತಲೆಮಾರಿನ ನಡುವೆ ಕೊಂಡೊಯ್ಯುವ ಕನಸು ಕಂಡಿದ್ದರು ಮಾತ್ರವಲ್ಲ ತನ್ನ ಕೊನೆಯ ಉಸಿರಿರುವವರೆಗೂ ಇದರ ಬಗ್ಗೆಯೇ ಯೋಚಿಸುತ್ತಿದ್ದರು.
ಇದನ್ನು ಓದಿ: ಹೋರಾಟ ಜೀವಿ ವಿಠ್ಠಲ್ ಭಂಡಾರಿ ನಿಧನ
ಈ ಒಂದುವರೆ ವರ್ಷಗಳ ಅವಧಿಯಲ್ಲಿ ಜನಶಕ್ತಿ ಮೀಡಿಯಾಕ್ಕಾಗಿ ವಿಠ್ಠಲ್ ಜವಾಬ್ದಾರಿ ನಿರ್ವಹಿಸಿ ನಡೆಸಿದ ಕಾರ್ಯಕ್ರಮಗಳಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳೆಂದರೆ 1. ವಾರದ ಕವಿತೆ, 2. ಪಿಚ್ಚರ್ ಪಯಣ, 3. ನಿರಂಜನ 96 ನೆನಪು.
ಜನಶಕ್ತಿ ಮೀಡಿಯಾದ ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿಯೇ ಮೂಡಿ ಬರುತ್ತಿವೆ. ಆದರೆ ವಿಠ್ಠಲ್ ಭಂಡಾರಿಯ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಮೂಡಿಬರುತ್ತಿದ್ದ ‘ವಾರದ ಕವಿತೆ’ ಒಂದು ರೀತಿಯ ಕ್ಲಾಸಿಕ್ ಕಾರ್ಯಕ್ರಮವಾಗಿ ಮೂಡಿ ಬರುತ್ತಿದೆ ಎಂದು ಸಂಗಾತಿ ವಸಂತ್ ರಾಜ್ ಹೇಳಿದ್ದರು.
ಕವಿತೆಗಳ ಆಯ್ಕೆ, ಅವುಗಳನ್ನು ವಾಚಿಸುವವರ ಆಯ್ಕೆ ಮತ್ತು ಕವಿತೆಗಳ ಕುರಿತು ಮಾತನಾಡುವವರ ಆಯ್ಕೆ, ಎಡಿಟಿಂಗ್ ಇವುಗಳಿಗೆ ವಿಠ್ಠಲ್ ತುಂಬ ಮುತುವರ್ಜಿ ವಹಿಸುತ್ತಿದ್ದರು. ಎಷ್ಟರ ಮಟ್ಟಿಗೆ ಅಂದರೆ ಈ ಕಾರ್ಯಕ್ರಮವನ್ನು ನಾನೇ ಎಡಿಟ್ ಮಾಡುತ್ತಿದ್ದರಿಂದ ಪ್ರತಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ ಮುನ್ನ ಕನಿಷ್ಟ ಮೂರ್ನಾಲ್ಕು ದಿನ ಅವರು ಇದರ ಹಿಂದೆ ಬಿದ್ದು ಅವರುಗಳಿಂದ ವೀಡಿಯೋ, ಆಡಿಯೋ ತರಿಸಿಕೊಂಡು ನನಗೆ ಕಳುಹಿಸುತ್ತಿದ್ದರು. ಶನಿವಾರ ಬೆಳಗ್ಗೆ ಎಪಿಸೋಡ್ ರೆಡಿ ಇದ್ದು ಅಪ್ಲೋಡ್ ಮಾಡಬೇಕು ಎನ್ನುವುದು ನಮ್ಮ ಯೋಜನೆ. ನಾನು ಎಡಿಟ್ ಮಾಡುವುದು ಸ್ವಲ್ಪ ತಡವಾದರೆ ಅತ್ಯಂತ ಆತಂಕದಿಂದ ಫೋನ್ ಮಾಡಿ “ಅಲ್ವೋ ಇದು ನಮ್ಮೆಲ್ಲರ ಮರ್ಯಾದೆ ಪ್ರಶ್ನೆ ಎಡಿಟ್ ಚೆನ್ನಾಗಿ ಮಾಡು ಮತ್ತು ಯಾವುದೇ ಕಾರಣಕ್ಕೂ ಈ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಬರುವುದು ಮಾತ್ರ ನಿಲ್ಲಬಾರದು” ಎನ್ನುತ್ತಿದ್ದರು. ಇದಕ್ಕಾಗಿ ಅವರು, ನಾನು ಹಲವು ದಿನಗಳು ನಿದ್ದೆ ಕಳೆದುಕೊಂಡಿದ್ದಿದೆ. ಎಲ್ಲ ತಾಪತ್ರಯಗಳ ನಡುವೆ ಸತತವಾಗಿ 28 ವಾರಗಳ ಕಾಲ ಯಾವ ಸಮಸ್ಯೆಯೂ ಇಲ್ಲದೆ ಪ್ರಸಾರವಾಯಿತು. ಮಾತ್ರವಲ್ಲ ಈ ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದ ವೀಕ್ಷಕರನ್ನು ಪಡೆಯಲು ಜನಶಕ್ತಿ ಮೀಡಿಯಾಗೆ ಸಾಧ್ಯವಾಯಿತು. ಇದರ ಹಿಂದಿನ ಕಾಯಕ ಶಕ್ತಿ ವಿಠ್ಠಲ್ ಭಂಡಾರಿ. ಆದರ ಮಧ್ಯ ಅನಿವಾರ್ಯ ಕಾರಣಗಳಿಂದ ನಿಂತಿದೆ.
ಜಗತ್ತಿನ ವಿವಿಧ ಭಾಷೆಗಳ ಸದಭಿರುಚಿಯ ಸಿನೆಮಾಗಳ ಕುರಿತು ಪರಿಚಯ, ವಿಶ್ಲೇಷಣೆಯೇ “ಪಿಚ್ಚರ್ ಪಯಣ”. ಇದು ಕೂಡ ವಿಠ್ಠಲ್ ನ ಕನಸಿನ ಕೂಸೇ ಹೌದು. ಸಹಯಾನದಲ್ಲಿ “ಸಿನೆಮಾ: ಹೊಸ ತಲೆಮಾರು” ಸಹಯಾನ ಸಾಹಿತ್ಯೋತ್ಸವ ಕಾರ್ಯಕ್ರಮದ ನಂತರ ಇಂತದ್ದೊಂದು ಕಾರ್ಯಕ್ರಮವನ್ನು ಮಾಡಲು ವಿಠ್ಠಲ್ ಆತುರವಾಗಿದ್ದರು. ಇದರಲ್ಲಿ ಮುಖ್ಯವಾಗಿ ಕೆ. ಪಣಿರಾಜ್, ಪ್ರತಿಭಾ ಸಾಗರ, ಗಗನ್, ಗುರುರಾಜ್ ದೇಸಾಯಿ ಮತ್ತು ನಾನು ಒಳಗೊಂಡ ಒಂದು ತಂಡವಿದ್ದರೂ ಎಲ್ಲರೊಂದಿಗೆ ಮಾತನಾಡುವ ಕ್ಯಾಪ್ಟನ್ ನ ಕೆಲಸವನ್ನು ವಿಠ್ಠಲ್ ಭಂಡಾರಿ ನಿರ್ವಹಿಸುತ್ತಿದ್ದರು. ಇದು ಕೂಡ ನಿರಂತರವಾಗಿ 35 ಸಂಚಿಕೆಗಳಲ್ಲಿ ಪ್ರಸಾರವಾಗಿದ್ದವು. ಕಳೆದ ಎರಡು ವಾರ ಮಾತ್ರ ವಿಠ್ಠಲ್ ನ ಅನಾರೋಗ್ಯದ ಕಾರಣಕ್ಕಾಗಿ ನಿಂತಿತ್ತು. ಈಗ ಮತ್ತೆ ಎಂದಿನಂತೆ ಪ್ರತಿ ಭಾನುವಾರ ಸಂಜೆ 6 ಗಂಟೆಗೆ 36 ನೇ ಸಂಚಿಕೆ ಪ್ರಸಾರವಾಗುತ್ತಿದೆ.
ವಿಠ್ಠಲ್ ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲಿದ್ದರೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಮಯದಲ್ಲೂ ವಸಂತ್ ರಾಜ್ ರವರಿಗೆ ಮೆಸೇಜ್ ಹಾಕಿ “ಯಾವುದೇ ಕಾರಣಕ್ಕೂ ಪಿಚ್ಚರ್ ಪಯಣ ನಿಲ್ಲಬಾರದು ಎರಡು ಎಪಿಸೋಡ್ ಗಳ ವೀಡಿಯೋ ಗಗನ್ ಬಳಿ ಇದೆ ಅದನ್ನ ಅವನಿಗೆ ಎಡಿಟ್ ಮಾಡಲು ಹೇಳಿ, ಗುರುರಾಜ್‌ಗೆ ಸಮಯಕ್ಕೆ ಸರಿಯಾಗಿ ಅಪ್ಲೋಡ್ ಮಾಡಲು ಹೇಳಿ” ಎಂದಿದ್ದರು.
ಕನ್ನಡದ ಪ್ರಮುಖ ಪ್ರಗತಿಶೀಲ ಸಾಹಿತಿ ನಿರಂಜನರ 96 ನೇ ಜನ್ಮದಿನದ ಅಂಗವಾಗಿ ಜನಶಕ್ತಿ ಮೀಡಿಯಾ ಸಮುದಾಯ ಕರ್ನಾಟಕದೊಂದಿಗೆ ಸೇರಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ವಿಠ್ಠಲ್ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ್ದರು. ಆ ಸಂದರ್ಭದಲ್ಲಿ ಅವರು ನನಗೆ ಹೇಳಿದ ಮಾತೊಂದು ಈಗಲೂ ನೆನಪಿದೆ “ನಿರಂಜನರ ಸಾಹಿತ್ಯ ಕೃಷಿ ಮತ್ತು ಅವರ ಆಲೋಚನೆ, ಬರಹಗಳ ಕುರಿತು ಹೊಸ ತಲೆಮಾರಿನ ಬಹುತೇಕರಿಗೆ ಗೊತ್ತಿಲ್ಲ. ಆದ್ದರಿಂದ 2024 ಕ್ಕೆ ನಿರಂಜನರ ಜನ್ಮಶತಮಾನೋತ್ಸವ ವರ್ಷ ಅಲ್ಲಿಯವರೆಗೆ ನಾನು ಅವರ ನೂರು ವರ್ಷದ ಕೊಡುಗೆಯಾಗಿ ಜನಶಕ್ತಿಯಲ್ಲಿ 100 ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ನಿರಂಜನರನ್ನು, ಅವರ ಸಾಹಿತ್ಯವನ್ನು ಸರಿಯಾಗಿ ಅರ್ಥಮಾಡಿಸಬೇಕು” ಎಂದಿದ್ದರು. ಕನಸುಗಾರನ ನೂರಾರು ಕನಸುಗಳಲ್ಲಿ ಇದೂ ಕೂಡ ಒಂದು. ಅದಕ್ಕಾಗಿ ಅವರ ಮನೆಯ ಗ್ರಂಥಾಲಯದ ಪುಸ್ತಕ ಗಳನ್ನು ಸರಿಯಾಗಿ ತೆಗೆದಿಟ್ಟು ನೋಟ್ಸ್ ಮಾಡಲು ಶುರು ಮಾಡಿದ್ದರು. ಕೆಲವು ಆಯ್ದ ಬರಹಗಳ ಓದನ್ನು ಸಹಯಾನ ಕೆರೆಕೋಣ ಫೇಸ್ ಬುಕ್ ಪೇಜಿನಲ್ಲಿ ಸಂಗಾತಿಯೊಂದಿಗೆ ಓದಿಸಿದ್ದರು.
ಇವುಗಳ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷೆ ವಿಚಾರಕ್ಕೆ ನಡೆದ ವಿವಾದದ ಕುರಿತು ಇವರೇ ಒಂದು ಪ್ಯಾನಲ್ ಚರ್ಚೆಯನ್ನು ನಡೆಸಿಕೊಟ್ಟಿದ್ದರು, ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಂವಿಧಾನ ಓದು ಕುರಿತು ಮಾತನಾಡಿದ್ದರು.
ತುರ್ತು ಪರಿಸ್ಥಿತಿ ಕುರಿತು ಒಂದು ವಿಶ್ಲೇಷಣಾತ್ಮಕ ಕಾರ್ಯಕ್ರಮ ಬರಬೇಕೆಂದು ಅತೀ ಜರೂರಿನಲ್ಲಿ ನನ್ನನ್ನೂ ಒಳಗೊಂಡು ಚಂದ್ರಶೇಖರ ಪಾಟೀಲರ ಪುಸ್ತಕ ಓದನ್ನು ಸಹಯಾನದಿಂದ ನಡೆಸಿದರು.
ಕಳೆದ ತಿಂಗಳು ಕಾಗೋಡು ರೈತ ಚಳುವಳಿಯ 70 ವರ್ಷಗಳ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಬೇಕೆಂದು ಚರ್ಚಿಸಿದ್ದೆವು.
ಈಗ ವಿಠ್ಠಲ್ ನ ಕನಸಿನ ಕೂಸುಗಳಾದ ಪಿಚ್ಚರ್ ಪಯಣ ಮತ್ತೆ ಆರಂಭವಾಗಿದೆ, ವಾರದ ಕವಿತೆ ಸಧ್ಯದಲ್ಲೇ ಆರಂಭವಾಗಲಿದೆ ಮತ್ತು ನಿರಂಜನರ ಜನ್ಮಶತಮಾನೋತ್ಸವದವರೆಗೆ ನಡೆಸಬೇಕಿರುವ 100 ಕಾರ್ಯಕ್ರಮಗಳಿಗೆ ಎಲ್ಲರೂ ಜನಶಕ್ತಿ ಮೀಡಿಯಾದೊಂದಿಗೆ ಕೈಜೋಡಿಸಿ ಯಶಸ್ವಿಗೊಳಿಸುವ ಮೂಲಕ ವಿಠ್ಠಲ್ ನ ಕನಸುಗಳನ್ನು ನನಸಾಗಿಸಿ ಅವನನ್ನ ಯಾವಾಗಲೂ ನಮ್ಮ ಜೊತೆ ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನ ಮಾಡೋಣ.
Please upload yesterday’s zoom meeting recording about Vital sir.