ಸ್ಟಾನ್ ಸ್ವಾಮಿಯವರ ಕಂಪ್ಯೂಟರಿನಲ್ಲೂ ಹುಸಿ ಕಡತಗಳನ್ನು ನೆಟ್ಟಿದ್ದರು!
ನವದೆಹಲಿ: ಅಂತಾರಾಷ್ಟ್ರೀಯ ಖ್ಯಾತಿಯ ಡಿಜಿಟಲ್ ಫೊರೆನ್ಸಿಕ್ ವಿಶ್ಲೇಷಣಾ ಕಂಪನಿ, ಆರ್ಸೆನಲ್ ಕನ್ಸಲ್ಟಿಂಗ್, ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ,2017 ರಿಂದ 2019 ರ ನಡುವೆ ಫಾದರ್ ಸ್ಟಾನ್ ಸ್ವಾಮಿ ಅವರ ಕಂಪ್ಯೂಟರ್‌ನಲ್ಲಿ ನಕಲಿ ದಾಖಲೆಗಳನ್ನು ಗುಪ್ತವಾಗಿ ಅಳವಡಿಸಲಾಗಿತ್ತು. ನಂತರ ಇವನ್ನು ಅವರು ‘ರಾಷ್ಟ್ರ-ವಿರೋಧಿ’ ಎನ್ನಲು ಪುರಾವೆಗಳಾಗಿ ಬಳಸಲಾಯಿತು. ಇದು ಒಂದು ಅತ್ಯಂತ ಆಕ್ರೋಶ ಉಂಟು ಮಾಡುವ ದೋಷಾರೋಪಣೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
2014 ರಿಂದ ಫಾದರ್ ಸ್ಟಾನ್ ಕಣ್ಗಾವಲಿನಲ್ಲಿ ಇದ್ದರು. ಈ ಅವಧಿಯಲ್ಲಿ ನಲ್ವತ್ತು ಕಡತ(ಫೈಲ್)ಗಳನ್ನು ಅವರ ಕಂಪ್ಯೂಟರಿನಲ್ಲಿ ಇಡಲಾಯಿತು. ಫೊರೆನ್ಸಿಕ್ ವರದಿಯ ಪ್ರಕಾರ ಅವನ್ನು ಅವರು ಎಂದಿಗೂ ನೋಡಲೇ ಇಲ್ಲ. ಸಾರ್ವಜನಿಕವಾಗಿ ಬಿಡುಗಡೆಯಾಗಿ ಲಭ್ಯವಿರುವ ಫೊರೆನ್ಸಿಕ್ ಸಾಕ್ಷ್ಯ ವಿಚಾರಣೆ ಪುಣೆ ಪೊಲೀಸರು ಸ್ಟಾನ್ ಸ್ವಾಮಿಯವರನ್ನು ಬಂಧಿಸಲಿದ್ದರು ಎಂಬುದು ಹ್ಯಾಕರ್‌ಗಳಿಗೆ ಮೊದಲೇ ತಿಳಿದಿತ್ತು ಎಂದು ಸೂಚಿಸುತ್ತದೆ ಎಂಬುದು ಇನ್ನೂ ಆಘಾತಕಾರಿ ಸಂಗತಿಯೆಂದು ಪೊಲಿಟ್ ಬ್ಯುರೊ ಹೇಳಿದೆ. ಹಿಂದಿನ ದಿನವಷ್ಟೇ ಅವರು ತಮ್ಮ ಚಟುವಟಿಕೆಗಳ ಕುರುಹುಗಳನ್ನು ಅಳಿಸಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.
ಎಲ್ಲಕ್ಕಿಂತ ಹೇಯ ಸಂಗತಿಯೆಂದರೆ, ಸ್ಟಾನ್ ಸ್ವಾಮಿಯವರಿಗೆ ಜಾಮೀನು ನಿರಾಕರಿಸಲಾಯಿತು, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ನಿರಾಕರಿಸಲಾಯಿತು, ಕಸ್ಟಡಿಯಲ್ಲಿ ಅವರ ಸಾವು ಕೊಲೆಗಿಂತ ಕಡಿಮೆ ಏನಲ್ಲ. ಅವರು ಎಂದಿಗೂ ಮಾಡದ ಅಪರಾಧದ ಆರೋಪ ಹೊತ್ತು ಕಸ್ಟಡಿಯಲ್ಲಿ ನಿಧನರಾದರು ಎಂದು ಪೊಲಿಟ್‍ಬ್ಯುರೊ ಈ ಸಂದರ್ಭದಲ್ಲಿ ನೆನಪಿಸಿದೆ.
ಇತರ ಆರೋಪಿಗಳ ಸಾಧನಗಳ ಫೋರೆನ್ಸಿಕ್ ವಿಚಾರಣೆಗಳನ್ನು ಅನುಸರಿಸಿ ಬಂದಿರುವ ಐದನೇ ವರದಿ ಇದು, ಆರೋಪಕ್ಕೆ ಗುರಿಪಡಿಸಬೇಕಾದವರ ಕಂಪ್ಯೂಟರ್‌ಗಳಲ್ಲಿ ನುಸುಳಿ ನಕಲಿ ಫೈಲ್‌ಗಳನ್ನು ಇರಿಸುವ ಮಾದರಿಯನ್ನು ಅನುಸರಿಸಲಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ, ಇದರ ಬಗ್ಗೆ ಆರೋಪಿಗಳಿಗೆ ಏನೇನೂ ತಿಳಿದಿರಲಿಲ್ಲ, ಅಲ್ಲದೆ, ಈ ವಿಚಾರಣೆ ತೋರಿಸುವಂತೆ ಅವರು ಈ ಕಡತಗಳನ್ನು ನೋಡಿಯೂ ಇಲ್ಲ. ಆದರೂ ಈ ನಕಲಿ ಕಡತಗಳೇ ಭೀಮಾ ಕೋರೆಗಾಂವ್ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಮುಖ್ಯ ಸಾಕ್ಷ್ಯ ಎಂದು ಹೇಳಲಾಗುತ್ತಿದೆ. ಅವರಲ್ಲಿ ಹೆಚ್ಚಿನವರನ್ನು ಯುಎಪಿಎ ಕರಾಳ ನಿಬಂಧನೆಗಳ ಅಡಿಯಲ್ಲಿ ಜೈಲಿನಲ್ಲಿಡಲಾಗಿದೆ.
ಎನ್‍ಐಎ ಈ ಸಾಕ್ಷ್ಯದ ಬಗ್ಗೆ ತನ್ನದೇ ತನಿಖೆಯನ್ನು ನಡೆಸುವುದಿರಲಿ, ಇದು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಕೂಡ ನಿರಾಕರಿಸಿರುವುದು ಅತ್ಯಂತ ಖಂಡನೀಯ. ಎನ್‌ಐಎ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿರುವ ಕೇಂದ್ರ ಸರಕಾರ ಕೂಡ ಈ ವರದಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿರುವುದು ಖಂಡನೀಯ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಹಿಂದಿನ ವರದಿಗಳ ಜೊತೆಗೆ ಇತ್ತೀಚಿನ ಈ ವರದಿಯು ಈ ಸರ್ಕಾರ ಮತ್ತು ಎನ್‌ಐಎ ತಾವೇ ಸೃಷ್ಟಿಸಿದ ಪುರಾವೆಗಳಲ್ಲದೆ ಬೇರೆ ಯಾವುದೇ ಪುರಾವೆಗಳಿಲ್ಲದವರನ್ನು ಗುರಿಯಾಗಿಸಲು ಮತ್ತು ಜೈಲಿಗೆ ತಳ್ಳಲು ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆ ಒಂದು ಕಟುವಾದ ದೋಷಾರೋಪಣೆಯಾಗಿದೆ ಎಂದು ವರ್ಣಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಇಂದು ಈ ಅಪಾಯಕಾರಿ ತಂತ್ರಜ್ಞಾನ ಮತ್ತು ದುಷ್ಟತಂತ್ರಾಂಶಕ್ಕೆ ಭೀಮಾ ಕೋರೆಗಾಂವ್ ಬಂಧಿತರು ಗುರಿಯಾಗಿದ್ದಾರೆ, ನಾಳೆ ಈ ಆಳುವ ವ್ಯವಸ್ಥೆಯ ಯಾವುದೇ ವಿರೋಧಿಯನ್ನು ಇದೇ ರೀತಿ ಗುರಿಯಾಗಿಸಬಹುದು ಎಂದು ಎಚ್ಚರಿಸಿದೆ.
ಎಲ್ಲಾ ಭೀಮಾ ಕೋರೆಗಾಂವ್ ಆರೋಪಿಗಳನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು, ಎನ್‍ಐಎ ಅವರ ಜಾಮೀನು ಅರ್ಜಿಗಳನ್ನು ಮತ್ತು ಅಥವಾ ಬಿಡುಗಡೆ ಮೇಲ್ಮನವಿಗಳನ್ನು ನಿರಾಕರಿಸಬಾರದು ಮತ್ತು ಲಭ್ಯವಿರುವ ಫೋರೆನ್ಸಿಕ್ ಪುರಾವೆಗಳನ್ನು ಗಣನೆಗೆ ತೆಗೆದುಕೊಂಡು ಪರಿಣಿತ ನ್ಯಾಯೋಚಿತ ಮರು-ಪರೀಕ್ಷೆಯನ್ನು ಒಂದು ಕಾಲಮಿತಿಯ ಚೌಕಟ್ಟಿನಲ್ಲಿ ನಡೆಸಬೇಕು ಎಂದು ತಮ್ಮ ಪಕ್ಷ ಆಗ್ರಹಿಸುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.