ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಉಪ್ಪು
ಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ʼಆರೋಪದ ಕುರಿತು ತನಿಖೆಗೆ ಮುಖ್ಯಮಂತ್ರಿಯವರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಗಮನಕ್ಕೆ ಬಂದಿದೆ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲಿ. ಸತ್ಯಾಂಶ ಏನು ಎಂಬುದು ಹೊರಬರಲಿʼ ಎಂದರು.
ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪು ಮಾಡಿದವರನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ನಾನಾಗಲೀ, ಎಚ್.ಡಿ. ದೇವೇಗೌಡರಾಗಲೀ ಸಂಕಷ್ಟ ಹೇಳಿಕೊಂಡು ಬಂದ ಮಹಿಳೆಯರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಮಹಿಳೆಯರ ಬಗ್ಗೆ ಸದಾ ಗೌರವದ ಭಾವನೆ ಹೊಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ : ಇಂದೇ ವಿಚಾರಣೆ ಸಾಧ್ಯತೆ?
ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಪ್ರಶ್ನಿಸಿದಾಗ, ʼಪ್ರಜ್ವಲ್ ವಿದೇಶಕ್ಕೆ ಹೋಗಿದ್ದರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಅವರು ತಪ್ಪಿಸಿಕೊಂಡಿದ್ದರೆ ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿ ಕರೆತರಲಿ. ಅದಕಾಗಿಯೇ ನೇಮಿಸಿರುವ ಅಧಿಕಾರಿಗಳಿದ್ದಾರೆʼ ಎಂದರು.
ಆರೋಪ ಬಿಟ್ಟು ಕೆಲಸ ಮಾಡಲಿ: ಕೇಂದ್ರ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಬರ ಪರಿಹಾರ ನೀಡಿಲ್ಲ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʼಆರಂಭದಲ್ಲಿ ರಾಜ್ಯ ಸರ್ಕಾರ ₹ 4,000 ಕೋಟಿ ಇನ್‌ಪುಟ್ ಸಬ್ಸಿಡಿ ಮಾತ್ರ ಕೇಳಿತ್ತು. ಅಷ್ಟು ಮೊತ್ತವನ್ನು ಕೇಂದ್ರ ನೀಡಿದೆ. ಈಗ ಸುಮ್ಮನೆ ಆರೋಪದ ಮಾಡುವುದನ್ನು ಬಿಟ್ಟು ಕೊಟ್ಟ ಹಣವನ್ನು ಮೊದಲು ಖರ್ಚು ಮಾಡಲಿʼ ಎಂದು ಹೇಳಿದರು.
ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಹಲವು ವಿಡಿಯೊಗಳು ಎರಡು ಮೂರು ಪೆನ್‌ಡ್ರೈವ್‌ಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಹರಿದಾಡುತ್ತಿವೆ ಎಂದು ಸಾಮಾಜಿಕ ಜಲತಾಣದಲ್ಲಿ ಚರ್ಚೆ ಆಗುತ್ತಿತ್ತು. ಒಂದಲ್ಲ, ಎರಡಲ್ಲ ಸಾವಿರಾರು ವಿಡಿಯೋಗಳಿವೆ ಎಂದು ಹೇಳಲಾಗಿದೆ. ಹಲವು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಟ್ವಿಟರ್ ಸೇರಿದಂತೆ ಸೋಷಿಯಲ್ ಮಿಡಿಯಾಗಳ ಮೂಲಕವೂ ವಿಡಿಯೋ ವೈರಲ್ ಆಗುತ್ತಿವೆ. ಆದರೆ ಇದು ಮಾರ್ಫ್ ಮಾಡಲಾದ ವಿಡಿಯೋ ಎಂದು ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದರು. ಆದರೆ ಇನ್ನೊಂದೆಡೆ ಇದು ನೈಜ ವಿಡಿಯೋ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ಮಹಿಳಾ ಆಯೋಗದ ಕೈ ಸೇರಿತ್ತು. ಇದರ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂಗೆ ಪತ್ರ ಬರೆದಿದ್ದರು.