ಕೊಪ್ಪಳ: ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್ನಿಂದಾಗಿ ಜನರಲ್ಲಿ ಜ್ವರ, ಮೈ ಕೈ ನೋವು ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಜ್ವರದಿಂದ ತತ್ತರಿಸಿರುವ ಗ್ರಾಮಸ್ಥರಿಗೆ, ಗ್ರಾಮದ ದೇವಸ್ಥಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ
ವೈರಲ್ ಜ್ವರವು ಗ್ರಾಮವನ್ನು ಆವರಿಸಿದ ನಂತರ ನೂರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಂದು ತಿಂಗಳ ಹಿಂದೆ ಜ್ವರದ ಪ್ರಕರಣಗಳು ಪ್ರಾರಂಭವಾದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಕಳೆದ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳ ಸಂಖ್ಯೆ 100 ದಾಟಿದೆ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಕೆಲವು ಗ್ರಾಮಸ್ಥರನ್ನು ಭೀಮಾಂಬಿಕಾ ದೇವಸ್ಥಾನಕ್ಕೆ ಸ್ಥಳಾಂತರಿಸಿದರು.
ಭೀಮಾಂಬಿಕಾ ದೇವಾಲಯ ಈಗ ಆಸ್ಪತ್ರೆಯ ರೀತಿ ಬದಲಾಗಿದೆ, ಕೆಲವರಿಗೆ IV ಹಾಕಲಾಗಿದೆ. ಇದು ವೈರಲ್ ಜ್ವರ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಿದ್ದಂತೆ ರೋಗಿಗಳ ಕುಟುಂಬಸ್ಥರು ರೋಗಿಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ
ಇದನ್ನೂ ಓದಿ : ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ
ಕುಷ್ಟಗಿ ತಹಶೀಲ್ದಾರ್ ರವಿ ಅಂಗಡಿ ಅವರು ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು, ಗ್ರಾಮದಲ್ಲಿ ಎಲ್ಲಿ ನೋಡಿದರೂ ಸ್ವಚ್ಛತೆ ಕಾಣಸಿಗದಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ನಿಂತಿದ್ದು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಕುಡಿಯುವ ನೀರು ಕೂಡ ಶುದ್ಧವಾಗಿಲ್ಲ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ ಎಂದು ತಹಶಿಲ್ದಾರರೆದುರು ತಮ್ಮ ಅಳಲು ತೋಡಿಕೊಂಡರು.
ಬಳಿಕ ಮಾತನಾಡಿದ ತಹಶೀಲ್ದಾರ್ ರವಿ ಅಂಗಡಿ, ಚಿಕಿತ್ಸೆಗೆ ತಾಲೂಕು ಆಡಳಿತದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಕೈ, ಕಾಲು ನೋವು, ಗಂಟಲು ಬೇನೆ ಸೇರಿದಂತೆ ಜ್ವರ ಕಾಣಸಿಕೊಂಡಿದೆ. ಈಗಾಗಲೇ ಹಲವರಿಗೆ ಚಿಕಿತ್ಸೆ ನೀಡಲಾಗಿದ್ದು, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸದ್ಯ ಗ್ರಾಮದ ದೇವಸ್ಥಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲು ಸಕಲ ವ್ಯವಸ್ಥೆ ಕೂಡ ಮಾಡಲಾಗಿದೆ. ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ, ಕಳೆದ ಎರಡು ದಿನದ ಹಿಂದೆಯೇ ಕೆಲವರ ರಕ್ತ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ಕೆಲವರಿಗೆ ಚಿಕನ್ಗುನ್ಯಾ ಪಾಸಿಟಿವ್ ಕಂಡು ಬಂದಿದೆ ಮತ್ತೆ ಕೆಲವರಿಗೆ ನೆಗೆಟಿವ್ ಬಂದಿದೆ. ಲಾರ್ವ ಸೊಳ್ಳೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಸೊಳ್ಳೆ ನಾಶಕ್ಕೆ ತಾಲೂಕು ಆರೋಗ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ರಕ್ತದ ಮಾದರಿ ರಿಪೋರ್ಟ್ ಬರುವುದು ತಡವಾಗಿದ್ದಕ್ಕೆ ಈ ಸಮಸ್ಯೆಯಾಗಿದೆ. ಸದ್ಯ ನಿನ್ನೆ 30 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇಂದು ಸುಮಾರು 25 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಸೇರಿದಂತೆ ಇತರೆ ಗ್ರಾಮಗಳಲ್ಲೂ ಈತರದ ಸಮಸ್ಯೆ ಕಂಡುಬಂದಲ್ಲಿ ಅಂತವರ ರಕ್ತದ ಮಾಹಿತಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಿಡಿಯೋ ನೋಡಿ : ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ