ವಿಫಲ ನಾಯಕತ್ವ ಎಂದು ಒಪ್ಪಿಕೊಂಡ ಬಿಎಸ್‌ವೈ: ಕಾಂಗ್ರೆಸ್ ಪ್ರತಿಕ್ರಿಯೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಕಾಂಗ್ರೆಸ್‌ ಪಕ್ಷವು ಸ್ವತಃ ಯಡಿಯೂರಪ್ಪನವರೇ ತಮ್ಮ ಸರಕಾರದ ವೈಫಲ್ಯ ಬಗ್ಗೆ ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುವ ಮೂಲಕ ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಅವರದು ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ‘ಪದಚ್ಯುತಿ’ ಮಾಡಿದ್ದೇಕೆ? ಎಂದು ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದೆ.

ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ

ಅಲ್ಲದೇ ʼಇದು ‘ಪದತ್ಯಾಗ’ ಅಲ್ಲ, ‘ಪದಚ್ಯುತಿ’ ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವುʼ ಎಂದು ಕುಟುಕಿದ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು “ನಾಯಕತ್ವ ಬದಲಾವಣೆ” ಅಲ್ಲ “ಸರ್ಕಾರದ ಬದಲಾವಣೆ” ಬಿಜೆಪಿ ಪಕ್ಷವು ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ.

ರಾಜ್ಯ ಬಿಜೆಪಿ ಸರಕಾರವು ಎರಡು ವರ್ಷ ಪೂರ್ಣಗೊಂಡಿದ್ದಕ್ಕಾಗಿ ಸಾಧನಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ ಎಸ್‌ ಯಡಿಯೂರಪ್ಪ ಭಾವುಕರಾಗಿ ಮಾತನಾಡಿದ್ದರು. ಈ ವೇಳೆ ಅವರು, 75 ವರ್ಷ ವಯಸ್ಸಾದರೂ ನನಗೆ ಎರಡು ವರ್ಷ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ನಾನು ಚಿರ ಋಣಿ ಎಂದು ಕಣ್ಣೀರು ಹಾಕಿದ್ದರು.

ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ? ಬ್ಲಾಕ್‌ಮೇಲ್‌ಗಾಗಿಯೇ? ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿಸುವಿರಾ ಎಂದು ಬಿ. ಎಸ್‌.ಯಡಿಯೂರಪ್ಪ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಪಕ್ಷವು ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಎಂದು ಸಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

Donate Janashakthi Media

Leave a Reply

Your email address will not be published. Required fields are marked *