ವಿನೇಶ್ ಫೋಗಟ್ ಅನರ್ಹತೆ ವಿವಾದ: ಪ್ರತಿಪಕ್ಷಗಳ ಪ್ರತಿಭಟನೆಗೆ ಸಭಾಧ್ಯಕ್ಷರಿಂದಲೇ ಸಭಾತ್ಯಾಗ

ನವದೆಹಲಿ : ಕುಸ್ತಿಪಟು ವಿನೇಶ್ ಪೊಗಟ್ ಫೈನಲ್ ನಿಂದ ಅನರ್ಹಗೊಂಡ ವಿವಾದ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಜಗದೀಪ್ ಧಂಕರ್ ಕಲಾಪ ಬಹಿಷ್ಕರಿಸಿದ ಘಟನೆ ಗುರುವಾರ ನಡೆದಿದೆ.

ಗುರುವಾರ ಮಧ್ಯಾಹ್ನದ ನಂತರ ನಡೆದ ಕಲಾಪದ ವೇಳೆ ವಿನೇಶ್ ಪೊಗಟ್ ಅವರನ್ನು ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅನರ್ಹಗೊಳಿಸಿರುವ ವಿಷಯದ ಕುರಿತು ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷಗಳು ಪಟ್ಟು ಹಿಡಿದವು. ಪ್ರತಿಭಟನೆಯ ವೇಳೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ನಗುತ್ತಿರುವುದನ್ನು ನೋಡಿ ಜಗದೀಪ್ ಧಂಕರ್, ನಿಮಗೆ ಸಭೆಯ ಮೇಲೆ ಗೌರವ ಕಡಿಮೆ ಆಗಿದೆ ಎಂಬುದು ಗೊತ್ತು ಎಂದು ಹೇಳಿದರು.

ನಿಮಗೆ ನನ್ನ ಮೇಲೆ ಅಲ್ಲ. ಈ ಆಸನದ ಮೇಲೆ ಅಸಮಾಧಾನ. ನಾನು ಈ ಸ್ಥಾನಕ್ಕೆ ಅರ್ಹನಲ್ಲ ಎಂಬುದು ನಿಮ್ಮ ಭಾವನೆ. ಅದಕ್ಕಾಗಿ ಹೀಗೆ ವರ್ತಿಸುತ್ತಿದ್ದೀರಿ ಎಂದು ಜಗದೀಪ್ ಧಂಕರ್ ಅಸಮಾಧಾನ ಹೊರಹಾಕಿದರು.

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಟ್ ಜತೆ ಸೆಣಸಬೇಕಿದ್ದ ವಿನೇಶ್, ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Donate Janashakthi Media

Leave a Reply

Your email address will not be published. Required fields are marked *