ಕವಿತಾಳ: ಏಪ್ರಿಲ್ 25 ಶುಕ್ರವಾರದಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೆಂಚಮರಡಿ ಗ್ರಾಮದಲ್ಲಿ ಎರಡು ತಿಂಗಳಿಂದ ಗೋಗರೆದರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ನರೇಗಾ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳ ತಂಡದ ಮೇಲೆ ದಾಳಿ ಮಾಡಿದ್ದಾರೆ. ವ್ಯವಸ್ಥೆ
ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯ ನಿರ್ದೇಶಕ ಶರಣಬಸಪ್ಪ, ಮಸ್ಕಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಪಿಡಿಒ ಕೃಷ್ಣ ಹನುಗುಂದ ಮತ್ತು ಕೇಂದ್ರ ತಂಡದ ಅಧಿಕಾರಿ ಪಿ.ಶಿವಶಂಕರ ಮೇಲೆ ದಾಳಿ ಮಾಡಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನರೇಗಾ ಕಾಮಗಾರಿ ಸ್ಥಳದಲ್ಲಿ ನೆರಳಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಮಹಿಳೆಯರು, ಹಿರಿಯರು ಸುಡು ಬಿಸಿಲಿಗೆ ಬಳಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: ಮೇ 25ರಂದು ರಾಜ್ಯದ 265 ಗ್ರಾ.ಪಂಚಾಯತ್ ಸ್ಥಾನಗಳಿಗೆ ಉಪಚುನಾವಣೆ
ಜಿಲ್ಲೆಯಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮೂವರ ಸದಸ್ಯರ ತಂಡವೊಂದನ್ನು ಕಳಿಸಿ ಪರಿಶೀಲನೆ ನಡೆಸುತ್ತಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿಕೊಡುತ್ತಲೇ ಗ್ರಾಮಸ್ಥರು ಅಧಿಕಾರಿಗಳನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ತಂಡದ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ವಾಗ್ವಾದ ನಡೆಯಿತು. ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾ ಕೇಂದ್ರದಲ್ಲಿರುವ ಅಧಿಕಾರಿಗಳಿಗೆ ವರದಿ ಕೊಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳೂ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಜಿಲ್ಲಾ ಪಂಚಾಯಿತಿ ನರೇಗಾ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ ನೂಕಾಟವೂ ನಡೆಯಿತು. ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು. ಇದರಿಂದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತು. ಕುಡಿಯುವ ನೀರು ಕೇಳುವುದಾದರೆ ಗ್ರಾಮಸ್ಥರೆಲ್ಲರನ್ನೂ ಬಂಧಿಸಿ ಎಂದು ಗ್ರಾಮಸ್ಥರು ಪೊಲೀಸ್ ವಾಹನದತ್ತ ನುಗ್ಗಿದರು.
ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು. ಜನರ ಆಕ್ರೋಶ ಹಾಗೂ ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅರಿತು ಅಧಿಕಾರಿಗಳು ಗ್ರಾಮದಿಂದ ಹೊರಟು ಹೋದರು.
ಇದನ್ನೂ ನೋಡಿ: ಚಾಮರಾಜನಗರಕ್ಕೆ ಬರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿಯಾಗ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media