ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆ, ಚರಂಡಿ ಹಾಳಾಗಿದ್ದು, ತಕ್ಷಣವೇ ಬಿಬಿಎಂಪಿ ಅಧಿಕಾರಿಗಳು ವಿಳಬ ಮಾಡದಂತೆ ತುರ್ತಾಗಿ ಸಮರೋಪಾದಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಕಚೇರಿಯಲ್ಲಿ ಇಂದು ಸಚಿವರು ಮತ್ತು ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬಹುತೇಕ ನಗರ ಅದರಲ್ಲೂ ವಿಶೇಷವಾಗಿ ಉತ್ತರ ಮತ್ತು ಪೂರ್ವ ಬೆಂಗಳೂರು ಪ್ರದೇಶಗಳಿಗೆ ನೀರು ನುಗ್ಗಿ ಜನರು ಅತೀವ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೇ ಅಧಿಕಾರಿಗಳು ಮೈ ಚಳಿ ಬಿಟ್ಟು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳನ್ನು ವಿಸ್ತರಿಸಲು ಸೂಚಿಸಿದರಲ್ಲದೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೃಹತ್ ನೀರುಗಾಲುವೆಗಳ ಪುನರ್ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಹೇಳಿದರು. ಚರಂಡಿ ನೀರು ರಾಜಕಾಲುವೆ ಸೇರಲು ಒತ್ತುವರಿಯಿಂದ ಜಾಗದ ಅಭಾವವಿದೆ. ಬೆಂಗಳೂರಿನಲ್ಲಿ ಏಕಾಏಕಿ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲ ಆದ್ದರಿಂದ ಹಂತಹಂತವಾಗಿ ತೆರವುಗೊಳಿಸಲು ಸೂಚಿಸಿದರು.
ಬಡವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಒತ್ತುವರಿ ತೆರವುಗೊಳಿಸಬೇಕಾಗುವುದು, ಎಂದು ತಿಳಿಸಿದರು. ಹೆಬ್ಬಾಳ ವ್ಯಾಲಿ ನೀರು ಸರಾಗವಾಗಿ ಹರಿದುಹೋಗಲು ರೈಲ್ವೆ ವೆಂಟ್ ಅಗಲೀಕರಣ ಮಾಡಲು ಆದೇಶಿಸಿದರು.
ಈಗಾಗಲೆ, ನಗರದಾದ್ಯಂತ ತೆಗೆದುಕೊಂಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲೆಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲವೋ ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಚರಂಡಿಗಳಲ್ಲಿ ನೀರು ಹೊರ ಹರಿಯುವುದಕ್ಕೆ ಮುಖ್ಯ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿ ಸರ್ಕಾರದಿಂದ ಸಂಪೂರ್ಣ ನೀಡುವುದಾಗಿ ಸ್ಪಷ್ಟಪಡಿಸಿದರು.
ಹೊಸದಾಗಿ ಎಲ್ಲೆಲ್ಲಿ ಕಾಲುವೆಗಳನ್ನು ನಿರ್ಮಿಸಲು ಅಗತ್ಯವಿದೆಯೋ ಅಲ್ಲಲ್ಲಿ ಇದಕ್ಕೆ ಸೂಕ್ತ ಸಲಹೆ-ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಮುನಿರತ್ನ, ವಿ.ಸೋಮಣ್ಣ, ಬಿ.ಎ.ಬಸವರಾಜ, ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಬೊಮ್ಮಾಯಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೆಣ್ಣೂರು ಮುಖ್ಯರಸ್ತೆಯ ಪಟೇಲ್ ಮುನಿಶಾಮಪ್ಪ ಬಡಾವಣೆಯಲ್ಲಿ ಮಳೆಯಿಂದ ಉಂಟಾದ ಸಮಸ್ಯೆ ಹಾಗು ತೊಂದರೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.