ಐಪಿಎಲ್‌ 2022ರ ಆವೃತ್ತಿಯಲ್ಲಿ 10 ತಂಡಗಳು-74 ಪಂದ್ಯಗಳು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟಗೊಂಡಿದೆ. 2022ರ ಐಪಿಎಲ್ ಆವೃತ್ತಿಯು  ಏಪ್ರಿಲ್, 2, 2022ರಂದು‌ ಆರಂಭಗೊಳ್ಳಲಿದೆ. ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಉದ್ಘಾಟನಾ ಪಂದ್ಯವನ್ನಾಡಲಿದ್ದು, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆರಂಭಿಕ ಪಂದ್ಯ ನಡೆಯಲಿದೆ.

ಬಿಸಿಸಿಐ ಆಂತರಿಕ ವರದಿಗಳ ಅಂದಾಜಿನ ಪ್ರಕಾರ ಮಂಡಳಿಯು ಐಪಿಎಲ್-2022ರ ಆವೃತ್ತಿಯನ್ನು ಮುಂಬರುವ ಏಪ್ರಿಲ್ 2 ರಂದು ಚೆನ್ನೈನಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ.

10 ತಂಡಗಳು 74 ಪಂದ್ಯಗಳು

ಇದುವರೆಗೂ ಐಪಿಎಲ್ ಆವೃತ್ತಿಗಳಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನು ಆಡುತ್ತಿದ್ದವು. ಆದರೆ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದಾಗಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು ಎನ್ನಲಾಗಿದೆ. ಅಂದರೆ, ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.

ಪ್ರತಿಯೊಂದ ತಂಡಕ್ಕೂ 14 ಪಂದ್ಯಗಳು

ಸದ್ಯ ಇರುವ ನಿಯಮದ ಪ್ರಕಾರ ಪ್ರತಿ ತಂಡವು ಐಪಿಎಲ್‌ ಲೀಗ್‌ನ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಆಗಿರುವುದರಿಂದ, ಉದ್ಘಾಟನಾ ಪಂದ್ಯಕ್ಕೆ ಚೆನ್ನೈ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಅವರ ಎದುರಾಳಿಗಳು ಮತ್ತೆ ಮುಂಬೈ ಇಂಡಿಯನ್ಸ್ ಆಗುತ್ತಾರೆಯೇ ಎಂಬ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

ಇತ್ತೀಚೆಗಷ್ಟೇ ಐಪಿಎಲ್ ಸಂಪೂರ್ಣವಾಗಿ ಭಾರತಕ್ಕೆ ಮರಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದ್ದರು. ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಸಿಎಸ್‌ಕೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಭಾರತದಲ್ಲೇ ಐಪಿಎಲ್ ನಡೆಯಲಿದೆ ಎಂದು ಘೋಷಿಸಿದ್ದರು.

”ಚೆಪಾಕ್‌ನಲ್ಲಿ ಸಿಎಸ್‌ಕೆ ಪಂದ್ಯವನ್ನು ನೋಡಲು ನೀವೆಲ್ಲರೂ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಐಪಿಎಲ್‌ನ 15ನೇ ಆವೃತ್ತಿ ಭಾರತದಲ್ಲಿ ನಡೆಯಲಿದೆ ಮತ್ತು ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳುವುದರೊಂದಿಗೆ ಇದು ಹಿಂದೆಂದಿಗಿಂತಲೂ ಹೆಚ್ಚು ರೋಮಾಂಚನಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮೆಗಾ ಹರಾಜು ಬರಲಿದೆ, ಆದ್ದರಿಂದ ಹೊಸ ಸಂಯೋಜನೆಗಳು ಹೇಗಿರುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಸಮಾರಂಭದಲ್ಲಿ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಐಪಿಎಲ್ 2020ರ ಪೂರ್ಣ ಆವೃತ್ತಿ ಮತ್ತು ಐಪಿಎಲ್ 2021ರ ಅರ್ಧ ಆವೃತ್ತಿ ಭಾರತದ ಹೊರಗೆ ನಡೆದಿದ್ದವು.

Donate Janashakthi Media

Leave a Reply

Your email address will not be published. Required fields are marked *