ಸಾರ್ಥಕತ ಸೇವೆ ಸಲ್ಲಿಸುತ್ತಿರುವ ವಿಕಲಾಂಗ ಮಹಿಳೆ : ಮಾಸಿಕ ಪಿಂಚಣಿ ಹಣದಲ್ಲಿ 50 ಜನರಿಗೆ ಆಹಾರದ ಕಿಟ್‌ ವಿತರಣೆ

ಕೊಡಗು : ಕೊವಿಡ್ ಲಾಕ್ಡೌನ್ ನಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದವರು ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿಕಲಾಂಗ ಮಹಿಳೆ ತನಗೆ ಪ್ರತೀ ತಿಂಗಳು ಬರುತ್ತಿದ್ದ ವಿಕಲಾಂಗ ವೇತನವನ್ನೇ ಉಳಿಸಿ 50 ಬಡಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಸಾರ್ಥಕ ಸೇವೆ ಮಾಡಿದ್ದಾರೆ.

ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂಡ್ಲೂರು ಗ್ರಾಮದ ವಿಶೇಷಚೇತನ ಮಹಿಳೆ ಕೆ.ಎನ್ ಮಂಜುಳಾ ಇಂತಹ ಸಾರ್ಥಕ ಸೇವೆ ಸಲ್ಲಿಸಿದದವರು. ಸರ್ಕಾರ ನೀಡುವ ರೂ 1500 ಮಾಸಿಕ ಭತ್ಯೆಯ ಹಣದಲ್ಲಿ ಒಂದಷ್ಟು ಪಾಲನ್ನು ಉಳಿಸಿ ಆ ಹಣದಲ್ಲಿ ತನ್ನ ಗ್ರಾಮದಲ್ಲಿನ 50 ಕ್ಕೂ ಹೆಚ್ಚು ಬಡಕುಟುಂಬಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.  ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಮಂಜುಳಾರವರು ಉದಾಹರಣೆಯಾಗಿ ನಿಲ್ಲುತ್ತಾರೆ. ದಿನಕ್ಕೆ ಲಕ್ಷಾಂತರ ರೂ ಆದಾಯವಿರುವ ಜನರು ಸಂಕಷ್ಟಗಳನ್ನು ನೋಡಿಯೂ ನೋಡದಂತೆ ಇದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರಕಾರ ಕಣ್ಣು – ಕಿವಿ ಇಲ್ಲದವರಂತೆ ವರ್ತನೆ ಮಾಡುತ್ತಿದೆ. ಸರಕಾರ ಮಾಡಬೇಕಿದ್ದ ಕೆಲಸವನ್ನು ತನಗೆ ಬರುವ ಅಲ್ಪ ಹಣದಿಂದಲೆ ಜನರ ಸಂಕಷ್ಟಕ್ಕೆ ನೆರವಾದ ಮಂಜುಳಾರವ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ : ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದ ಪಿಎಸ್ಐ ಅಮಾನತು

ಕೊರೋನಾ ಎಂಬ ರೋಗ ಎಲ್ಲಾ ವರ್ಗದ ಜನರ ನೆಮ್ಮದಿ ಕಸಿದುಕೊಂಡಿದೆ. ಅದರಲ್ಲೂ ಕಡು ಬಡತನದ ಅನೇಕ ಕುಟುಂಬಗಳ ಸ್ಥಿತಿ ಹೇಳ ತೀರದು. ನನಗೆ ಸರ್ಕಾರ ಕೊಡುವ ಮಾಸಿಕ ಭತ್ಯೆಯಲ್ಲಿ ಉಳಿಸಿದ ಹಣದಿಂದ 50 ಮಂದಿಗೆ ಏನಾದರೂ ಸಹಾಯ ಮಾಡಬೇಕೆಂಬ ಆಸೆ ಇತ್ತು. ನನ್ನ ಸೋದರ ಕೆ.ಎನ್.ಪವನ್ ಕುಮಾರ್ ಜೊತೆ ಚರ್ಚಿಸಿದಾಗ, ಆಹಾರದ ಕಿಟ್ ಗಳನ್ನು ಕೊಡುವ ಸಲಹೆ ನೀಡಿದರು. ಅಂತೆಯೇ ಆ ಒಂದು ಕೆಲಸವನ್ನು ತುಂಬಾ ಶ್ರದ್ದೆಯಿಂದ ಮಾಡಿದ ಆತ್ಮತೃಪ್ತಿ ನನಗಿದೆ ಎಂದು ಕೆ.ಎನ್.ಮಂಜುಳಾ ತಿಳಿಸಿದ್ದಾರೆ.  ನನ್ನ ಸಹೋದರಿ ಈ ರೀತಿ ಉತ್ತಮ ಕೆಲಸಕ್ಕೆ ಮುಂದಾಗಿರುವುದು ಸಂತೋಷದ ವಿಷಯ. ಇತರರ ಸಂಕಷ್ಟಗಳಿಗೆ ಮಿಡಿಯಬೇಕು ಎಂಬ ಭಾವನೆ ಕೆಲವರಲ್ಲಿ ಅಷ್ಟೆ ಇರುತ್ತದೆ. ನನ್ನ ಸಹೋದರಿ ಈ ರೀತಿ ತೀರ್ಮಾನ ತೆಗೆದುಕೊಂಡಾಗ ಸಂತೋಷದಿಂದಲೆ ನಾನು ಸಹಕರಿಸಿದೆ ಎಂದು ಪವನ್‌ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *