ವಿಜಯಪುರ ಪಾಲಿಕೆ ಚುನಾವಣಾ ಫಲಿತಾಂಶ: ಅಧಿಕಾರ ಸಮೀಪ ಬಿಜೆಪಿ, ಖಾತೆ ತೆರೆದ ಎಐಎಂಐಎಂ

ವಿಜಯಪುರ: ಅಕ್ಟೋಬರ್ 28ರಂದು ವಿಜಯಪುರ ಮಹಾನಗರ ಪಾಲಿಕೆ ಚುನಾವಣಾ ಮತದಾನ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ. ನಗರದ ದರಬಾರ್ ಹೈಸ್ಕೂಲ್ ಆವರಣದಲ್ಲಿ ಮತ ಎಣಿಕೆ ನಡೆದು ಸಂಪೂರ್ಣ ಫಲಿತಾಂಶ ಅಂತಿಮಗೊಂಡಿದ್ದು, 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವ ಸಮೀಪದ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿದೆ.

ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರೆ, ಪಕ್ಷೇತರರು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಖಾತೆ ತೆರದು ನಾಲ್ಕನೇ ಸ್ಥಾನ ಪಡೆದಿದೆ. ಜೆಡಿಎಸ್ ಕೇವಲ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟಿದೆ.

ಚುನಾವಣಾ ಫಲಿತಾಂಶವು ಮತದಾರರ ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. 35 ಸದಸ್ಯ ಬಲದ ಪಾಲಿಕೆಯಲ್ಲಿ ಸ್ಪಷ್ಟ ಬಹುಮತಕ್ಕೆ 18 ಸ್ಥಾನ ಪಡೆಯಬೇಕಾಗಿದೆ. ಸದ್ಯ ಬಿಜೆಪಿ 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪಾಲಿಕೆಯ ಆಧಿಕಾರದ ಹೊಸ್ತಿಲಲ್ಲಿದೆ. ಕಾಂಗ್ರೆಸ್ 10 ಸ್ಥಾನಗಳಲ್ಲಿ, ಪಕ್ಷೇತರರು 5 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಎಐಎಂಐಎಂ 2 ಸ್ಥಾನ ಗೆದ್ದು ಖಾತೆ ತೆರೆದಿದೆ. ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಶೂನ್ಯ ಸಂಪಾದನೆಯೊಂದಿಗೆ ಎಎಪಿ ಮುಖಭಂಗ ಅನುಭವಿಸಿದೆ.

ಪಾಲಿಕೆ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಸಿಹಿ ನೀಡಿದ್ದರೆ, ಕಾಂಗ್ರೆಸ್ ಗೆ ಅವಲೋಕನ ಪಾಠ ನೀಡಿದೆ. ಬಹು ತುರುಸಿನಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ 25 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿತ್ತು. ಬಿಜೆಪಿ ಟಿಕೆಟ್ ಸಿಗದೇ ಬಂಡಾಯವೆದ್ದವರು ಪಕ್ಷೇತರರಾಗಿ ಕಣಕ್ಕಿಳಿದಿದ್ದು ಅಲ್ಪಮಟ್ಟಿಗೆ ಬಿಜೆಪಿಗೆ ಹಿನ್ನಡೆ ಮಾಡಿದ್ದಾರೆ.

35 ಸದಸ್ಯ ಬಲದಲ್ಲಿ ಸದ್ಯ 17 ಸ್ಥಾನಗಳು ಬಿಜೆಪಿ ಪಾಲಾಗಿದ್ದು ನಗರ ಶಾಸಕ, ಓರ್ವ ಪರಿಷತ್ ಸದಸ್ಯ, ಸಂಸದರ ಮತಗಳ ಬೆಂಬಲದೊಂದಿಗೆ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯೋದು ಖಚಿತವೆಂದೇ ಹೇಳಲಾಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳು ಸಂತಸವನ್ನು ಹಂಚಿಕೊಂಡರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ:

ಟ್ವಿಟ್ ಮಾಡುವ ಮೂಲಕ ಗೆಲುವನ್ನು ಸಂಭ್ರಮಿಸಿ, ಅಭಿನಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಪಕ್ಷ ಅಭೂತಪೂರ್ವ ಸಾಧನೆಗೆದ್ದಿದ್ದು, ವಿಜಯಪತಾಕೆ ಹಾರಿಸಿದ ಪ್ರತಿಯೊಬ್ಬ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ದೇವದುರ್ಲಭ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ನನ್ನ ಹೃದಯ ಅಂತರಾಳದಿಂದ ಧನ್ಯವಾದಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನ ಮೆಚ್ಚಿ ಮತ ನೀಡಿದ ಮತದಾರ ಪ್ರಭುಗಳಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನ ಗಳಿಗೆ ಅಷ್ಟೊಂದು ನಿರಾಶೆಯನ್ನು ಮೂಡಿಸದಿದ್ದರೂ, ಸಮಾಧಾನಕರ ಪ್ರದರ್ಶನ ನೀಡಿದೆ. ಕಳೆದ ಬಾರಿ 10 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿಯೂ 10 ಸ್ಥಾನಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. 25 ಸ್ಥಾನಗಳಲ್ಲಿ ಸೋತ ಬಗ್ಗೆಯೂ ಮನನ ಮಾಡಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಪಾಲಿಗೆ ಈ ಫಲಿತಾಂಶ ನೀಡಿದೆ. ಎಎಪಿ ಹಾಗೂ ಎಐಎಂಎಐಎಂ ಪಕ್ಷಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ತಡೆಗೋಡೆಯಾದವು ಎಂದು ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ.

5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇನ್ನುಳಿದಂತೆ ಎಐಎಂಐಎಂ ನಿರೀಕ್ಷೆಯಂತೆ ಖಾತೆ ತರೆದಿದೆ, ನಾಲ್ಕು ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದ್ದ ಎಐಎಂಐಎಂ ಎರಡಲ್ಲಿ ಗೆದ್ದಿದೆ. ಇನ್ನು ಕೇವಲ 1 ಸ್ಥಾನಕ್ಕೆ ಜೆಡಿಎಸ್ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಜನರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ್ದ ಎಎಪಿ ಪಕ್ಷ ಶೂನ್ಯ ಸಂಪಾದನೆಯೊಂದಿಗೆ ತೀವ್ರ ಮುಖಭಂಗ ಅನುಭವಿಸಿದೆ. ಎಸ್ ಡಿ ಪಿ ಐ, ಜನತಾ ದಳ, ಕೆ ಆರ್ ಎಸ್, ಬಿ ಎಸ್‌ ಪಿ ಪಕ್ಷಗಳಿಗೂ ಮತದಾರರು ಮಣೆ ಹಾಕಿಲ್ಲ.

ಶೇ. 55.25ರಷ್ಟು ಮತದಾನ:

ಕಳೆದ 2019ರಲ್ಲೇ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆಯಬೇಕಿತ್ತು. ಹಲವಾರು ತಾಂತ್ರಿಕ ಕಾರಣಗಳು ಹಾಗೂ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ ಕಾರಣ ಚುನಾವಣೆ ನಡೆದಿರಲಿಲ್ಲ.

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 33, ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಕೆ ಆರ್ ಎಸ್ 3, ಜನತಾ ಪಾರ್ಟಿ 3, ಎಸ್ ಡಿ ಪಿಐ 2, ಬಿಎಸ್‌ಪಿ 1 ಹಾಗೂ 58 ಪಕ್ಷೇತರರು ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಅಕ್ಟೋಬರ್ 28 ರಂದು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆದಿತ್ತು. 35 ಸದಸ್ಯ ಬಲದ ಪಾಲಿಕೆಗೆ ನಡೆದ ಮತದಾನದಲ್ಲಿ ಕೇವಲ ಶೇ. 55.25ರಷ್ಟು ಮಾತ್ರ ಮತದಾನವಾಗಿತ್ತು. 44.75 ರಷ್ಟು ಮತದಾರರು ಮತದಾನ ಮಾಡಿರಲಿಲ್ಲಾ. ಮತದಾರರ ಪಟ್ಟಿಯಲ್ಲಿ ಹಲವು ಮಂದಿ ವಿವರಗಳು ರದ್ದಾಗಿರುವುದು ಸೇರಿದಂತೆ ಇತರೆ ಕಾರಣಗಳಿಂದ ಮತದಾನ ಗಣನೀಯ ಪ್ರಕಾಣದಲ್ಲಿ ಕಡಿಮೆಯಾಗಿತ್ತು.

Donate Janashakthi Media

Leave a Reply

Your email address will not be published. Required fields are marked *