ವಿಜಯಪುರ ಪಾಲಿಕೆ ಚುನಾವಣೆ: ಬಿಜೆಪಿ ತೊರೆದು ಜೆಡಿಎಸ್‌ ನಿಂದ ಅಖಾಡಕ್ಕಿಳಿದ ಮಾಜಿ ಮೇಯರ್‌, ಉಪ ಮೇಯರ್

ವಿಜಯಪುರ:  2019 ರಲ್ಲೇ ನಡೆಯಬೇಕಿದ್ದ 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ ಹಲವಾರು ಕಸರತ್ತಿನ ಬಳಿಕ ಮೂರುವರೆ ವರ್ಷದ ಬಳಿಕ ನಡೆಯುತ್ತಿದೆ. ಸದ್ಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು ಕೇಸರಿ ಪಡೆಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಬಂಡಾಯ ಹಾಗೂ ಪಕ್ಷ ಬಿಟ್ಟು ಬೇರೆ ಪಕ್ಷದಿಂದ ನಾಮಪತ್ರ ಸಲ್ಲಿಸುವಂತೆ ಮಾಡಿದೆ.

ವಿಜಯಪುರ ಮಹಾನಗರಪಾಲಿಕೆಯ ಬಿಜೆಪಿಯ ಮಾಜಿ ಮೇಯರ್‌ ಮತ್ತು ಮಾಜಿ ಉಪ ಮೇಯರ್‌ ಟಿಕೆಟ್‌ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಜೆಡಿಎಸ್‌ ಪಕ್ಷದಿಂದ ಚುನಾವಣೆ ಅಖಾಢಕ್ಕಿಳಿದು, ಬಿಜೆಪಿಗೆ ದೊಡ್ಡ ಶಾಕ್‌ ನೀಡಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸಂಗೀತಾ ಪೋಳ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರಾಗಿದ್ದು, ಬಿಜೆಪಿಯಲ್ಲಿಯೇ ತಮ್ಮ ಅಸ್ತಿತ್ವ ಕಂಡುಕೊಂಡು ಎರಡು ಬಾರಿ ಮೇಯರ್‌ ಆಗಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಆಪ್ತರಲ್ಲಿ ಒಬ್ಬರಾಗಿರುವ ಆನಂದ ಧುಮಾಳೆ ಅವರಿಗೂ ಕೂಡಾ ಟಿಕೆಟ್‌ ಕೈ ತಪ್ಪಿದೆ.

ಮಾಜಿ ಮೇಯರ್‌ ಸಂಗೀತಾ ಪೋಳ ಅವರಿಗೆ ಟಿಕೆಟ್‌ ಸಿಗದ್ದಕ್ಕೆ ಅಸಮಾಧಾನಗೊಂಡು ಪರಿಶಿಷ್ಟಜಾತಿ ಮಹಿಳೆ ಗುಂಪಿಗೆ ಮೀಸಲಾಗಿರುವ ವಾರ್ಡ್‌ ನ. 33ರಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಅಲ್ಲದೆ ಹಿಂದುಳಿದ ಬ ವರ್ಗಕ್ಕೆ ಮೀಸಲಾದ 30ನೇ ವಾರ್ಡ್‌ನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಪಾಲಿಕೆಯ ಮಾಜಿ ಉಪ ಮೇಯರ್‌ ಬಿಜೆಪಿಯ ಆನಂದ ಧುಮಾಳೆ ಅವರು ಸ್ಪರ್ಧಿಸಿದ್ದಾರೆ. ಟಿಕೆಟ್‌ ಸಿಗದೆ ಈ ಇಬ್ಬರು ಬಿಜೆಪಿಗರು ಜೆಡಿಎಸ್‌ ಪಕ್ಷದಿಂದ ಚುನಾವಣೆ ಕಣಕ್ಕಿಳಿದು ಬಿಜೆಪಿಗೆ ಆಘಾತ ನೀಡಿದ್ದಾರೆ. ಬರುವ ಚುನಾವಣೆಯಲ್ಲಿ ಬಂಡಾಯ ಯಾವ ರೀತಿ ತಿರುವು ಪಡೆಯುತ್ತಿದೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.

236 ನಾಮಪತ್ರ ಕ್ರಮಬದ್ಧ: ಪಾಲಿಕೆಯ 35 ವಾರ್ಡ್‌ಗಳಿಗೆ ಬಿಜೆಪಿಯಿಂದ 93, ಕಾಂಗ್ರೆಸ್‌ನಿಂದ 65, ಜೆಡಿಎಸ್‌ನಿಂದ 25, ಬಿಎಸ್‌ಪಿ 1, ಕೆಆರ್‌ಎಸ್‌ 3, ಆಮ್‌ ಆದ್ಮಿ ಪಾರ್ಟಿಯಿಂದ 19, ಎಐಎಂಐಎಂ 4, ಸಮಾಜವಾದಿ ಪಾರ್ಟಿ 2, ಜನತಾ ಪಾರ್ಟಿ 3, ಪಕ್ಷೇತರ 140 ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸ್ವೀಕೃತವಾಗಿದ್ದವು.

ಮಂಗಳವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 119 ಅಭ್ಯರ್ಥಿಗಳ ನಾಮಪತ್ರಗಳು ಸೂಕ್ತ ದಾಖಲೆ, ಪತ್ರಗಳು ಇಲ್ಲದ ಕಾರಣ ತಿರಸ್ಕೃತವಾಗಿವೆ. 235 ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಮಪತ್ರ ಪಡೆಯಲು ಅ.20 ಕೊನೆಯ ದಿನವಾಗಿದ್ದು, ಈ ನಿಟ್ಟಿನಲ್ಲಿ ಯಾರೆಲ್ಲ ಅಂತಿಮವಾಗಿ ಕಣದಲ್ಲಿ ಉಳಿಯಲಿದ್ದಾರೆ ಎಂಬುದು ಕುತೂಹಲ ಹೆಚ್ಚಿಸಿದೆ.

ಪಕ್ಷಗಳ ಟಿಕೆಟ್‌ ಸಿಗದಿರುವುದರಿಂದ ಬೇಸರಗೊಂಡು ಸ್ಪರ್ಧಿಸಿರುವವರನ್ನು ಮನವೊಲಿಸುವುದರ ಜೊತೆಗೆ ಪಕ್ಷೇತರವಾಗಿ ಹಾಗೂ ಬೇರೆ, ಬೇರೆ ಪಕ್ಷಗಳಿಂದ ನಿರೀಕ್ಷೆ ಮೀರಿ ಕಣಕ್ಕಿಳಿದಿರುವವರು ಕಾಂಗ್ರೆಸ್‌, ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *