ವಿಜಯಪುರ: ಕರೊನಾ ವಾರಿಯರ್ಸ್ ಸೋಗಿನಲ್ಲಿ ಸಂಚರಿಸುತ್ತಿದ್ದ ಅರ್ಚಕರನ್ನು ವಿಜಯಪುರ ಪೊಲೀಸರು ಗಾಡಿಯಿಂದ ಕೆಳಗಿಳಿಸಿ ಗಾಡಿಯನ್ನು ಸೀಜ್ ಮಾಡಿದ ಘಟನೆ ನಡೆದಿದೆ.
ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಾಗಿದ್ದು, ಪೊಲೀಸರು ಎಲ್ಲೆಡೆ ನಾಕಾ ಬಂದಿ ಹಾಕಿ ಕಾವಲು ಕಾಯುತ್ತಿದ್ದಾರೆ. ಆದರೆ ಪೊಲೀಸರ ಕಣ್ಣು ತಪ್ಪಿಸಿ, ಅರ್ಜೆಂಟ್ ಕೋವಿಡ್-19 ಆನ್ ಡ್ಯೂಟಿ’ ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಅರ್ಚಕರನ್ನು ಕರೆದೊಯ್ಯುತ್ತಿದ್ದ ಕಾರನ್ನ ವಿಜಯಪುರ ಪೊಲೀಸರು ನಡುರಸ್ತೆಯಲ್ಲೇ ನಿಲ್ಲಿಸಿದ ಪೊಲೀಸರು ಸೀಜ್ ಮಾಡಿದ್ದಾರೆ.
ಆರಂಭದಲ್ಲಿ ಕೋವಿಡ್ ಡ್ಯೂಟಿಗೆ ಸಂಬಂಧಿಸಿದ ವಾಹನ ಇರಬೇಕು ಎಂದುಕೊಂಡ ಪೊಲೀಸರಿಗೆ ಆ ಕಾರಿನಲ್ಲಿ ಅರ್ಚಕರು ಕಣ್ಣಿಗೆ ಬಿದ್ದರು. ಕೂಡಲೇ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದು, ಮುಂಬದಿ ಮತ್ತು ಹಿಂಬದಿ ಸೀಟಿನಲ್ಲಿ ಇಬ್ಬರು ಅರ್ಚಕರು ಕುಳಿತಿದ್ದರು. ಕಾರು ತಡೆದು ವಿಚಾರಣೆ ನಡೆಸಿದಾಗ ಕೋವಿಡ್ ಡ್ಯೂಟಿ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರಿನಿಂದ ಅರ್ಚಕರನ್ನು ಕೆಳಗಿಳಿಸಿ ಕಾರನ್ನು ಸೀಜ್ ಮಾಡಿದ್ದಾರೆ.
ಕೋವಿಡ್ ನಿಯಮ ಗಾಳಿಗೆ ತೂರಿದ್ದಲ್ಲದೆ, ಕೋವಿಡ್ ವಾರಿಯರ್ ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಇವರ ಮೇಲೆ ಕ್ರಮ ಜರುಗಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.