ಹೊಸಪೇಟೆ: ವಿಜಯನಗರ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೆ ಒಳಗಾದ 20 ವರ್ಷದ ಮುಸ್ಲಿಂ ಯುವಕ ಆಲಂ ಪಾಷಾ ಅವರ, “ನಾನು ಯಾವ ತಪ್ಪು ಮಾಡಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ” ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಸ್ವತಂತ್ರ ಸುದ್ದಿ ಮಾಧ್ಯಮ ಸೌತ್ ಫಸ್ಟ್ ವರದಿ ಮಾಡಿದೆ. ಪ್ಯಾಲೆಸ್ತೀನ್ ಪರವಾಗಿ ವಾಟ್ಸಪ್ ಸ್ಟೇಟಸ್ ಹಾಕಿದ ಕಾರಣಕ್ಕೆ ಅವರನ್ನು ಪೊಲೀಸರು ಬಂಧಿಸಿದ್ದು, ನಂತರ ವಿವಾದವಾಗಿತ್ತು. ಬಂಧನದ ನಂತರ ಪೊಲೀಸರು ಅವರಿಂದ “ಶೂರಿಟಿ” ಗೆ ಸಹಿ ಹಾಕಿಸಿದ್ದಾರೆ ಎಂದು ವರದಿಯಾಗಿದೆ.
“ಪೊಲೀಸರು ತನ್ನೊಂದಿಗೆ ಇಷ್ಟೊಂದು ಘೋರವಾಗಿ ಯಾಕೆ ನಡೆಕೊಂಡರು? ನನ್ನ ತಪ್ಪೇನು?” ಎಂಬ ಅವರ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. “ವಿ ಸ್ಟ್ಯಾಂಡ್ ವಿತ್ ಪ್ಯಾಲೆಸ್ತೀನ್- ಪ್ಯಾಲೆಸ್ತೀನ್ ಜಿಂದಾಬಾದ್” ಎಂಬ ಪದಗಳಿಂದ ಯುದ್ಧ ಪೀಡಿತ ಪ್ಯಾಲೆಸ್ತೀನ್ ಚಿತ್ರದೊಂದಿಗೆ ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ್ದಕ್ಕಾಗಿ ಯುವಕನನ್ನು ಪೊಲೀಸರು ಏಳು ಗಂಟೆಗಳ ಕಾಲ ಬಂಧಿಸಿದ್ದಾರೆ ಎಂದು ಸೌತ್ ಫಸ್ಟ್ ವರದಿ ಹೇಳಿದೆ.
ಇದನ್ನೂ ಓದಿ: ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಕ್ರಮಕೈಗೊಳ್ಳಲು | ಸಚಿವ ಡಾ.ಎಂ.ಸಿ. ಸುಧಾಕರ್ ಸೂಚನೆ
ಹೊಸಪೇಟೆ ನಿವಾಸಿಯಾಗಿರುವ ಆಲಂ ಬಾಷಾ ಅವರನ್ನು ಪೊಲೀಸರು ತಮ್ಮ ಕಸ್ಟಡಿಯಲ್ಲಿಟ್ಟಿದ್ದಲ್ಲದೆ, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಅಷ್ಟೆ ಅಲ್ಲದೆ ಯುವಕನ ಸಂಬಂಧಿಕರಿಂದ ಶ್ಯೂರಿಟಿ ಕೂಡಾ ಪಡೆದಿದ್ದಾರೆ ಎಂದು ವರದಿ ಹೇಳಿದೆ.
“ಯುವಕನನ್ನು ವಶಕ್ಕೆ ಪಡೆದಿರುವುದಾಗಿ ಹಿರಿಯ ಪೊಲೀಸರು ಒಪ್ಪಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆತನ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ” ಎಂದು ಸೌತ್ ಫಸ್ಟ್ ಉಲ್ಲೇಖಿಸಿದೆ. ಆದರೆ, ಆಲಂ ಬಾಷಾ ಅವರು ಮಾಡಿದ ಅಪರಾಧ ಏನು ಎಂಬುದನ್ನು ವಿವರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಸೌತ್ ಫಸ್ಟ್ ಹೇಳಿದೆ.
ಸೌತ್ ಫಸ್ಟ್ ಜೊತೆಗೆ ಮಾತನಾಡಿರುವ ಆಲಂ ಪಾಷಾ, “ಅಕ್ಟೋಬರ್ 12ರ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಹೊಸಪೇಟೆ ಪಟ್ಟಣದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಯಲ್ಲಿದ್ದೆ. ಆಗ ಪೊಲೀಸರು ಆಗಮಿಸಿ ನನ್ನನ್ನು ಹೊಸಪೇಟೆ ಟೌನ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಫೋನ್ ಬಳಸಿ ನನ್ನ ಚಿತ್ರವನ್ನು ಕ್ಲಿಕ್ಕಿಸಿದರು. ನನ್ನ ತಪ್ಪೇನು ಎಂದು ನಾನು ಅವರನ್ನು ಕೇಳಿದಾಗ, ಇನ್ಸ್‌ಪೆಕ್ಟರ್ ‘ಏನೂ ದೊಡ್ಡದಿಲ್ಲ’ ಎಂದು ಹೇಳಿದರು” ಎಂದು ತಿಳಿಸಿದ್ದಾರೆ.
ಆಲಂ ಪಾಷಾ ಅವರ ತಂದೆ ಹೊಸಪೇಟೆ ಪಟ್ಟಣದಲ್ಲಿ ಉಪಾಹಾರ ಗೃಹ ನಡೆಸುತ್ತಿದ್ದಾರೆ. ಡಿಗ್ರಿ ಆಟ್ಸ್ ಮೊದಲ ವರ್ಷದಲ್ಲಿ ಕಾಲೇಜು ತೊರೆದಿದ್ದ ಆಲಂ ಪಾಷಾ ಅವರು ಸೆಪ್ಟೆಂಬರ್ 26 ರಂದು ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಅಟೆಂಡರ್ ಆಗಿ ಸೇರಿದ್ದರು.
ಇದನ್ನೂ ಓದಿ: ರೈತರಿಗೆ 5 ತಾಸು ವಿದ್ಯುತ್ ಪೂರೈಕೆ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
“ಇನ್‌ಸ್ಪೆಕ್ಟರ್ ನಂತರ ಪ್ಯಾಲೆಸ್ಟೈನ್ ಅನ್ನು ಉಲ್ಲೇಖಿಸುವ ನನ್ನ ಎಲ್ಲಾ ಸ್ಟೇಟಸ್ ಸಂದೇಶಗಳನ್ನು ಅಳಿಸಿದ್ದಾರೆ. ಜೊತೆಗೆ ನನ್ನ ಫೋನ್‌ನಲ್ಲಿ ಅಂತಹ ಯಾವುದೇ ಸಂದೇಶಗಳಿವೆಯೇ ಎಂದು ಪರಿಶೀಲಿಸಿದ್ದಾರೆ. ಭವಿಷ್ಯದಲ್ಲಿ ನಾನು ಇದನ್ನು ಪುನರಾವರ್ತಿಸುವುದಿಲ್ಲ ಎಂದು ನನ್ನ ಕೃತ್ಯಕ್ಕೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕಬೇಕು ಎಂದು ತಹಸೀಲ್ದಾರ್ ಕಚೇರಿಗೆ ನನ್ನನ್ನು ಕರೆದುಕೊಂಡು ಹೋಗುವುದಾಗಿ ಇನ್ಸ್‌ಪೆಕ್ಟರ್ ಹೇಳಿದರು” ಎಂದು ಬಾಷಾ ಹೇಳಿದ್ದಾರೆ ಸೌತ್ ಫಸ್ಟ್ ವರದಿ ಹೇಳಿದೆ.
“ನನ್ನನ್ನು ಸಂಜೆ 6 ಗಂಟೆಯವರೆಗೆ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು. ನಂತರ ನನ್ನ ಸಹೋದ್ಯೋಗಿಗಳು, ಸಮುದಾಯದ ಮುಖಂಡರು ಮತ್ತು ಸ್ಥಳೀಯ ಮಸೀದಿಯವರು ಪೊಲೀಸ್ ಠಾಣೆಗೆ ಬಂದು ನನ್ನನ್ನು ಹೋಗಲು ಬಿಡುವಂತೆ ಇನ್ಸ್‌ಪೆಕ್ಟರ್‌ಗೆ ವಿನಂತಿಸಿದರು. ನಾನು ಯಾವುದೇ ಅಪರಾಧ ಮಾಡದಿದ್ದರೂ ನನ್ನ ಚಿಕ್ಕಪ್ಪ ಮತ್ತು ಸಂಬಂಧಿಯೊಬ್ಬರು ತಹಸೀಲ್ದಾರ್‌ಗೆ ನನಗೆ ಶ್ಯೂರಿಟಿ ನೀಡಿದರು” ಎಂದು ಬಾಷಾ ಹೇಳಿದ್ದಾರೆ.
“ನಾನು ಹೆಮ್ಮೆಯ ಭಾರತೀಯ. ನಾನು ಪ್ಯಾಲೆಸ್ತೀನಿಯನ್ನರಿಗಾಗಿ ಪ್ರಾರ್ಥಿಸುತ್ತಾ ನನ್ನ ಫೋನ್‌ನಲ್ಲಿ ವಾಟ್ಸಪ್ ಸ್ಟೇಟಸ್ ಪೋಸ್ಟ್ ಮಾಡಿದ್ದೆ. ಇದು ಪ್ರಾರ್ಥನೆಯಾಗಿದ್ದು, ನಾನು ಪ್ಯಾಲೆಸ್ಟೈನ್‌ನಲ್ಲಿರುವ ಮುಸ್ಲಿಮರಿಗಾಗಿ ಪ್ರಾರ್ಥಿಸುತ್ತಿದ್ದೆ. ನಾನು ಯಾವುದಾದರೂ ದೇಶ ವಿರೋಧಿ ಚಟುವಟಿಕೆ ಮಾಡಿದ್ದೇನೆಯೆ ಎಂದು ನನಗೆ ಆಶ್ಚರ್ಯವಾಗಿತ್ತು. ನನ್ನ ತಪ್ಪೇನೆಂದು ನನಗೆ ಖಚಿತವಾಗಿಲ್ಲ. ನನ್ನ ಪೋಸ್ಟ್‌ನಲ್ಲಿ ಪ್ಯಾಲೇಸ್ಟಿನಿಯನ್ ಧ್ವಜಗಳ ಜೊತೆಗೆ ‘ಪ್ಯಾಲೆಸ್ತೀನ್ ಜಿಂದಾಬಾದ್’ ಮತ್ತು ‘ಸರ್ವಶಕ್ತನು ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡಲಿ’ ಎಂಬ ಪದಗಳು ಇದ್ದವು” ಎಂದು ಬಾಷಾ ಸೌತ್ ಫಸ್ಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಹಸಿವು 111ಕ್ಕೆ ಏರಿಕೆ; ವಾಡಿಕೆಯಂತೆ ವರದಿ ನಿರಾಕರಿಸಿದ ಕೇಂದ್ರ ಸರ್ಕಾರ
ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಹೊಸ ಪೇಟೆ ಡಿಎಸ್‌ಪಿ, “ಬಾಷಾ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ” ಎಂದು ಹೇಳಿದ್ದಾರೆ. ಅದಾಗ್ಯೂ ಪ್ರಜಾವಾಣಿ ಮತ್ತು ಟಿವಿ9 ಕನ್ನಡ ಮಾಧ್ಯಮಗಳು ಅವರ ವಿರುದ್ಧ “CRPC 108-151 ಅಡಿಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ವರದಿ ಮಾಡಿವೆ. “ಆರೋಪಿ ಸ್ಟೇಟಸ್ ಇಟ್ಟುಕೊಂಡು ರಾಜದ್ರೋಹದಂತಹ ಕೃತ್ಯ ಪ್ರಚಾರ ಮಾಡುತ್ತಿದ್ದುದು ಗೊತ್ತಾಗಿದೆ. ಇದರಿಂದ ಸಾರ್ವಜನಿಕ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ” ಎಂದು ಪ್ರಜಾವಾಣಿ ವರದಿ ಹೇಳಿದೆ.
ವರದಿಯ ಬಗ್ಗೆ ಪ್ರಜಾವಾಣಿ ವರದಿಗಾರ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ್ದು, “ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಅವರ ಹೇಳಿಕೆಯಂತೆ ವರದಿಯಲ್ಲಿ ಉಲ್ಲೇಖಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಆದರೆ ಸೌತ್ ಫಸ್ಟ್ ಅವರ ಜೊತೆಗೆ ಮಾತನಾಡಿದ ಶ್ರೀಹರಿಬಾಬು ಬಿಎಲ್ ಅವರು, “ನಾವು ಅವರನ್ನು ಬಂಧಿಸಿಲ್ಲ. ವಿಚಾರಣೆಗಾಗಿ ವಶಕ್ಕೆ ಪಡೆದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದೇವೆ. ಇದು ಒಂದು ಪ್ರಕರಣವಲ್ಲ, ಇದು ತಡೆಗಟ್ಟುವ ಕ್ರಮವಾಗಿದೆ” ಎಂದು ಹೇಳಿದ್ದಾರೆ ಎಂದು ವರದಿ ಹೇಳಿದೆ.
ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಲೋಕೇಶ್ ಕುಮಾರ್ ಅವರು ಕೂಡಾ ಎಸ್‌ಪಿ ಶ್ರೀಹರಿಬಾಬು ಅವರ ಹೇಳಿಕೆಯಂತೆ ಹೇಳಿಕೆ ನೀಡಿದ್ದಾರೆ. “ಅದು ಅಪರಾಧವಾಗಿರಲಿಲ್ಲ. ಯಾವುದೇ ಪ್ರಕರಣ ದಾಖಲಾಗಿಲ್ಲ. ನಾವು ಅವರನ್ನು ವಿಚಾರಣೆಗೆ ಕರೆದೊಯ್ದು ತಡೆಗಟ್ಟುವ ಕ್ರಮವಾಗಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದೇವೆ. ನಂತರ ಅವರನ್ನು ಬಿಡುಗಡೆ ಮಾಡಿದ್ದೇವೆ” ಎಂದು ಲೋಕೇಶ್ ಕುಮಾರ್ ಹೇಳಿದ್ದಾರೆ ಎಂದು ಸೌತ್ ಫಸ್ಟ್ ವರದಿ ಉಲ್ಲೇಖಿಸಿದೆ.
ವಿಡಿಯೊ ನೋಡಿ: ವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಪುಸ್ತಕ ಕುರಿತು ಪ್ರೊ.ಸಬಿಹಾ ಭೂಮಿಗೌಡ ಮಾತುಗಳು Janashakthi Media