ಸಿಪಿಐ(ಎಂ) ಕಾರ್ಯಕರ್ತರ ವಿರುದ್ಧದ ಹಲ್ಲೆಯನ್ನು ಪಕ್ಷವು ಧೈರ್ಯದಿಂದ ಎದುರಿಸಿದೆ: ಪಿಣರಾಯಿ ವಿಜಯನ್‌

ಕಣ್ಣೂರು: ಸಿಪಿಐ(ಎಂ) ಪಕ್ಷದ 23ನೇ ಮಹಾಧಿವೇಶನವು ಏಪ್ರಿಲ್‌ 6 ರಿಂದ 10ರವರೆಗೆ ಇಲ್ಲಿ ನಡೆಯುತ್ತಿದೆ. ಮೊದಲಿಗೆ ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯರು ಹಾಗೂ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕೆಂಪು ಬಾವುಟ ಧ್ವಜಾರೋಹಣ ಮಾಡುವ ಮೂಲಕ ಮಹಾಧಿವೇಶನಕ್ಕೆ ಚಾಲನೆ ನೀಡಿದರು.

ಎಕೆಜಿ ನಗರದಲ್ಲಿ ನಡೆದ ಮಹಾಧಿವೇಶನ ಉದ್ಘಾಟನಾ ಸಮಾರಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿ ಪಿಣರಾಯಿ ವಿಜಯನ್‌ ಅವರು, ಎಡ ಚಳವಳಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್, ಬಿಜೆಪಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮೂವರೂ ಒಟ್ಟಾಗಿ ಕಾರ್ಯಾಚರಣೆಗೆ ಇಳಿದಿವೆ. ಕೇರಳದ ಎಡ ಚಳುವಳಿಯ ಇತಿಹಾಸವನ್ನು ಉಲ್ಲೇಖಿಸಿ ಪಕ್ಷವು ತನ್ನ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಯನ್ನು ಧೈರ್ಯದಿಂದ ಎದುರಿಸಿದೆ ಮತ್ತು ರಾಜ್ಯದ ಜನರು ಅದರ ಪರವಾಗಿ ನಿಂತಿದ್ದಾರೆ ಎಂದು ಹೇಳಿದರು.

ನಾವು ಎಡ ಸರ್ಕಾರದ ವಿರುದ್ಧ ದಾಳಿ ಮಾಡಲು ಕಾಂಗ್ರೆಸ್, ಬಿಜೆಪಿ ಮತ್ತು ಮುಸ್ಲಿಂ ಲೀಗ್ ಒಟ್ಟಾಗಿ ಬಂದಿರುವುದನ್ನು ನಾವು ನೋಡಬಹುದು. ಬಿಜೆಪಿಗೆ ಎಡಪಕ್ಷಗಳು ಅದರ ದೊಡ್ಡ ಸೈದ್ಧಾಂತಿಕ ಶತ್ರುವಾಗಿದೆ. ಅವರು ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಎಡರಂಗ ಸರ್ಕಾರದ ಮೇಲೆ ನಿರಂತರ ದಾಳಿಗೆ ಮುಂದುವರೆಸುತ್ತಿವೆ ಎಂದರು.

ಎಡರಂಗ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಸಿಲ್ವರ್ ಲೈನ್ ಯೋಜನೆಗೆ ವಿರೋಧ ಪಕ್ಷಗಳ ಆರೋಪಗಳ ಪ್ರಸ್ತಾಪಿಸಿದ ಪಿಣರಾಯ್‌ ವಿಜಯನ್‌  ಉದ್ದೇಶಿತ ಕೆ-ರೈಲ್ ಯೋಜನೆಗೆ ಕಾಂಗ್ರೆಸ್ ವಿರೋಧವನ್ನು ಖಂಡಿಸಿದರು.

ಹಿಂದಿನ ಯುಡಿಎಫ್‌ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿದ ರಾಜ್ಯ ಸಂಬಂಧಿಸಿದ ಬೃಹತ್‌ ಯೋಜನೆಗಳನ್ನು ನಾವೆಂದೂ ವಿರೋಧ ಮಾಡಿರಲಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌, ಮುಸ್ಲಿಂ ಲೀಗ್‌ ಸಂಸದರು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಎಂದಾದರೂ ದ್ವನಿ ಎತ್ತಿದ್ದಾರೆಯೇ ಎಂದು ಪಿಣರಾಯಿ ವಿಜಯನ್ ಪ್ರಶ್ನಿಸಿದರು.

ಕಾಂಗ್ರೆಸ್‌, ಐಯುಎಂಎಲ್ ಕೇರಳದ ಅಭಿವೃದ್ಧಿ ಯೋಜನೆಗಳ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಬಹುದು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಬಯಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡದಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದು ಎಂದು ಹೇಳಿದರು.

ಧ್ವಜಾರೋಹಣಗೊಂಡ ಕೆಂಪು ಫತಾಕೆಯು ತಿರುವಾಂಕೂರು ರಾಜ-ದಿವಾನರ ದುರಾಡಳಿತದ ವಿರುದ್ಧ 1946ರಲ್ಲಿ ನಡೆದ ಐತಿಹಾಸಿಕ ಕಮ್ಯುನಿಸ್ಟ್ ದಂಗೆ ನಡೆದ ಸ್ಥಳವಾದ ವಯಲಾರ್-ಪುನ್ನಪಾರದಿಂದ ಕಣ್ಣೂರು ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದಿವೆ.

ಸಿಪಿಐ(ಎಂ) ಪಕ್ಷದ 23ನೇ ಮಹಾಧಿವೇಶನವು ಪ್ರಸಕ್ತ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪರಿಸ್ಥಿತಿಗಳ ಕುರಿತು ಸಮಗ್ರವಾಗಿ ಚರ್ಚಿಸುವ ಮತ್ತು ರಾಜಕೀಯ ಮತ್ತು ಕಾರ್ಯತಂತ್ರಾತ್ಮಕ ಕಾರ್ಯಾಚರಣೆಯನ್ನು ರೂಪಿಸಲಿದೆ ಮತ್ತು ಮುಂಬರುವ ದಿನಗಳಲ್ಲಿ ಪಕ್ಷವು ಅಳವಡಿಸಿಕೊಳ್ಳಬೇಕಾದ ನಿರ್ದಿಷ್ಟ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳಲಿದೆ.

ಸಿಪಿಐ(ಎಂ) ಪಕ್ಷದ ಮಹಾಧಿವೇಶನವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಉದ್ಘಾಟಿಸಿದರು.

ದೇಶಾದ್ಯಂತ ವಿವಿದೆಡೆಗಳಿಂದ ಪಕ್ಷದ ಸದಸ್ಯರು ಮತ್ತು ರಾಜಕೀಯ ವೀಕ್ಷಕರು ಸೇರಿದಂತೆ ಸುಮಾರು 800 ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಪಕ್ಷದ ಮಹಾಧಿವೇಶನಕ್ಕೂ ಮುಂಚಿತವಾಗಿ ಕಮ್ಯುನಿಸ್ಟ್ ಪಕ್ಷವು ಭಾರತೀಯ ಸಂವಿಧಾನ, ವಿಜ್ಞಾನ ಮತ್ತು ಶಿಕ್ಷಣ, ಕೃಷಿ, ಧರ್ಮ, ಕೋಮುವಾದ, ನಿರುದ್ಯೋಗ ಸಮಸ್ಯೆಗಳು, ರೈತ ಕಾರ್ಮಿಕರ ವಿಚಾರಗಳು ಒಳಗೊಂಡು ಇನ್ನೂ ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸಿತ್ತು.

ಏಪ್ರಿಲ್ 9ರಂದು ಪಿಣರಾಯಿ ವಿಜಯನ್ ಅವರೊಂದಿಗೆ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಹಮ್ಮಿಕೊಂಡಿರುವ ವಿಚಾರ ಸಂಕಿರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಸಿಪಿಐ(ಎಂ) ಪಕ್ಷವು ಆಹ್ವಾನ ನೀಡಿದೆ.

 

ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *