ಬೆಂಗಳೂರು: ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿ, ಪದವಿಪೂರ್ವ ದಾಖಲಾತಿಗಳ ಪ್ರಕ್ರಿಯೆಗಳು ಮುಕ್ತಾಯವಾಗಿದೆ, ಪದವಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಎಷ್ಟೋ ವಿದ್ಯಾರ್ಥಿಗಳು ವಸತಿಯ ಸಮಸ್ಯೆಯಿಂದಾಗಿ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾದ್ಯವಾಗುತ್ತಿಲ್ಲ, ಕೂಡಲೇ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಪ್ರವೇಶಾತಿಗೆ ಕ್ರಮವಹಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಜ್ಯ ಸಮಿತಿಯು ಆಗ್ರಹಿಸಿದೆ.
ಇದನ್ನು ಓದಿ: ವಿದ್ಯಾರ್ಥಿನಿಯರ ಮೇಲೆ ಹಲ್ಲೆ: ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಎಸ್‌ಎಫ್‌ಐ ಸಂಘಟನೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಹಿಂದುಳಿದ ವರ್ಗಗಳ ವಿಭಾಗದ ವಿದ್ಯಾರ್ಥಿ ವಸತಿ ನಿಲಯಗಳ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಸತಿ ನಿಲಯಗಳಿಗೆ ಹೊಸ ಪ್ರವೇಶಕ್ಕೆ ಅರ್ಜಿ ಕರೆದಿರುತ್ತಾರೆ. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾತ್ರ ಇಲ್ಲಿಯವರೆಗೆ ಅರ್ಜಿ ಆಹ್ವಾನ ಮಾಡದಿರುವ ಬಗ್ಗೆ ಆಯುಕ್ತರ ಗಮನಕ್ಕೆ ತಂದರು.
ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅತ್ಯಂತ ಮಹ್ವದ್ದಾಗಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಾರೆ ಮತ್ತು ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಕೊಡಲಿಪೆಟ್ಟು ಬಿದ್ದಂತಾಗುತ್ತದೆ ಎಂದು ಸಂಘಟನೆಯು ತಿಳಿಸಿದೆ.
ಕೂಡಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಬೇಕು ಇಲ್ಲವಾದಲ್ಲಿ ಸಂಘಟನೆಯು ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಸ್‌ಎಫ್‌ಐ ರಾಜ್ಯ ಅಧ್ಯಕ್ಷರಾದ ಅಮರೇಶ್ ಕಡಗದ್, ಜಂಟಿ ಕಾರ್ಯದರ್ಶಿ ಭೀಮನ್‌ಗೌಡ, ಉಪಾಧ್ಯಕ್ಷ ದಿಲೀಪ್, ರಾಜ್ಯ ಪದಾಧಿಕಾರಿ ರಮೇಶ್ ವಿರಾಪೂರ್ ಮನವಿ ಸಲ್ಲಿಸುವ ಸಂದರ್ಭದಲ್ಲಿ ತಿಳಿಸಿದರು.