ವಿದ್ಯುತ್‌ ಚಾಲಿತ ಬಸ್ಸುಗಳನ್ನು ಬಿಎಂಟಿಸಿ ಚಾಲಕರು ಓಡಿಸುವಂತಿಲ್ಲ!

ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 90 ವಿದ್ಯುತ್‌ ಚಾಲಿತ ಬಸ್ಸುಗಳು ನಗರದಲ್ಲಿ ಸಂಚಾರ ನಡೆಸಲಿದೆ. ಆದರೆ ಈ ಹೊಸ ವ್ಯವಸ್ಥೆಯಿಂದಾಗಿ ಬಿಎಂಟಿಸಿ ನೌಕರರಿಗೆ ಕಂಟಕವಾಗಿ ಪರಿಣಮಿಸಿದೆ. ಏಕೆಂದರೆ ಈ ಬಸ್ಸುಗಳನ್ನು ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಯ ನೌಕರರೇ ಚಾಲಕರಾಗಿರುತ್ತಾರೆ.

ಮುಷ್ಕರ, ಲಾಕ್‌ಡೌನ್ ಬಳಿಕ ಈಗಷ್ಟೇ ಹಲವು ಬಿಎಂಟಿಸಿ ನೌಕರರು ತಮ್ಮೆಲ್ಲ ಸಮಸ್ಯೆ-ಸಂಕಟಗಳನ್ನು ಬದಿಗೊತ್ತಿ ಕೆಲಸ ಹಾಜರಾಗಿದ್ದಾರೆ. ಈ ನೌಕರರ ಪಾಲಿಗೆ ಈಗ ವಿದ್ಯುತ್‌ ಚಾಲಿತ ಬಸ್ಸುಗಳು ಕಂಟಕವಾಗಿದೆ. ವಿದ್ಯುತ್‌ ಚಾಲಿತ ಬಸ್ಸುಗಳ ಓಡಾಟ ಶುರುವಾದ ಬೆನ್ನಲ್ಲೇ ಬಿಎಂಟಿಸಿ ಚಾಲಕರರನ್ನು ಎತ್ತಂಗಡಿ ಮಾಡಲಾಗುತ್ತಿದೆ.

ಇದನ್ನು ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಸರ್ಕಾರ: ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ

ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ಸಂಚಾರ ನಡೆಸುತ್ತಿರುವ ಬಸ್ಸುಗಳಿಗೆ ಖಾಸಗಿ ಸಂಸ್ಥೆಯವರೇ ಚಾಲಕನನ್ನು ನೇಮಕ ಮಾಡಿರುವುದರಿಂದ ಬಿಎಂಟಿಸಿ ಚಾಲಕರಿಗೆ ತೊಂದರೆ ಎದುರಾಗಿದೆ.

ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮ ಲಿ.ನಿಂದ ಚಾಲನೆಯಾಗುತ್ತಿರುವ ವಿದ್ಯುತ್‌ ಚಾಲಿತ ಬಸ್ಸುಗಳಲ್ಲಿ ನಿರ್ವಾಹಕರು ಮಾತ್ರ ಸದ್ಯ ಬಿಎಂಟಿಸಿಯವರಾಗಿದ್ದು ಚಾಲಕರು ಖಾಸಗಿಯವರು. ಇನ್ನೂ ಕೆಲವೇ ದಿನಗಳಲ್ಲಿ ನಿರ್ವಾಹಕ ರಹಿತ ಚಾಲನೆಯ ಹೊಸ ವ್ಯವಸ್ಥೆಯನ್ನು ಸಹ ಅಳವಡಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಿರ್ವಾಹಕರ ಬದುಕಿಗೂ ಕಂಟಕ ಎದುರಾಗಲಿದೆ.

ಈಗಾಗಲೇ ಪ್ರತಿ ಡಿಪೋದಲ್ಲಿನ 80 ಚಾಲಕರನ್ನು ಇತರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿರುವ ಬಿಎಂಟಿಸಿಯ ಘಟಕ 8, 37 ಮತ್ತು 29ರಲ್ಲಿನ ಚಾಲಕರನ್ನು ಬೇರೆ ಘಟಕಕ್ಕೆ ನಿಯೋಜಿಸುವಂತೆ ಆದೇಶಿಸಲಾಗಿದೆ.

ಸದ್ಯಕ್ಕೆ ಮೂರು ಘಟಕಗಳ ಚಾಲಕರನ್ನು ಮಾತ್ರ ವರ್ಗ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಾದಾಗ ಚಾಲಕರನ್ನು ಕೆಲಸದಿಂದ ತೆಗೆಯುವ ಸಾಧ್ಯತೆಯೂ ಇದೆ. ಇನ್ನು ಕೆಲವೇ ವರ್ಷದಲ್ಲಿ ಬಿಎಂಟಿಸಿ ಇತಿಹಾಸದ ಪುಟ ಸೇರಲಿದ್ದು ಖಾಸಗಿಯವರ ಆಟ ಶುರುವಾಗಲಿದೆ ಎಂದೇ ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *