ನೌಕರಿ ಹೆಸರಲ್ಲಿ ವಂಚನೆ ; ವಿಧಾನಸೌಧವೇ ಇವರ ಅಡ್ಡ!

  • ಗೃಹ ಇಲಾಖೆಯಲ್ಲಿ ನೌಕರಿ ಆಮಿಷ
  • ವಿಧಾನಸೌಧದ ಸಿಬ್ಬಂದಿಯಿಂದ ವಂಚನೆ
  • ಮೋಸಕ್ಕೊಳಗಾದ ಪತ್ರಕರ್ತನಿಂದ ದೂರು ದಾಖಲು

ಬೆಂಗಳೂರು : ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವು ದಾಗಿ ನಂಬಿಸಿ ಸುಮಾರು 50 ಮಂದಿಯಿಂದ 1.61 ಕೋಟಿ ರೂಪಾಯಿ ಪಡೆದು ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸಿದ್ದ ಇಬ್ಬರು ಸರ್ಕಾರಿ ನೌಕರರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿದ್ದ ಶ್ರೀಲೇಖ ಮತ್ತು ವಿಧಾನಸೌಧದಲ್ಲಿ ಗ್ರೂಪ್ ಡಿ ನೌಕರ (ದಲಾಯತ್) ಮೋಹನ್ ಅಲಿಯಾಸ್ ಸಂಪತ್ ಕುಮಾರ್ ಬಂದಿತ ಆರೋಪಿಗಳು.

ಪತ್ರಕರ್ತ ಮಂಜುನಾಥ್ ನೀಡಿದ ದೂರಿನ ಅನ್ವಯ ‌ಪ್ರಕರಣ ದಾಖಲಾಗಿದ್ದು ಪ್ರಮುಖ ಆರೋಪಿ ರಾಧಾ ಉಮೇಶ್ ತಲೆ ಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ನೌಕರಿ ಹೆಸರಲ್ಲಿ ಮೋಸ – ವಂಚಕರ ಕೈಗೆ ಬೇಡಿ ಹಾಕುವವರು ಯಾರು?

ಪ್ರಕರಣ ಏನು? : 2019ನೆ ಸಾಲಿನಲ್ಲಿ ತಮ್ಮನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೆಂದು ಪರಿಚಯಿಸಿಕೊಂಡ ರಾಧಾ ಉಮೇಶ್ ಎಂಬಾಕೆ ತಮಗೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ಕಾರ್ಮಿಕರ ಬಗೆಗಿನ ಕೆಲಸಗಳನ್ನು ಅವರಿಂದ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಗಮನಿಸಿದ ಪತ್ರಕರ್ತ ಮಂಜುನಾಥ್ ಎಂಬುವವರು ಅವರ ತಮ್ಮನಿಗೆ ಯಾವುದೇ ಉದ್ಯೋಗವಿಲ್ಲದ ಕಾರಣ ಆತನಿಗೆ ಸಚಿವಾಲಯದಲ್ಲಿ ದಿನಗೂಲಿ ನೌಕರರ ಏಜೆನ್ಸಿ ಕೊಡಿಸಿಕೊಡಿ ಎಂದು ಕೇಳಿದ್ದರು. ಇದಕ್ಕಾಗಿ ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳಿ ಮಂಜುನಾಥ್ ಅವರಿಂದ 4 ಕಂತುಗಳಲ್ಲಿ 15 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಬಳಿಕ ಏಜೆನ್ಸಿಯ ಬಗ್ಗೆ ಮಂಜುನಾಥ್ ಅವರು ಪ್ರಶ್ನಿಸಿದಾಗ, ತಮಗೆ ಸರಕಾರಿ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿರುವ ಶ್ರೀಲೇಖಾ ಎಂಬುವವರ ಪರಿಚಯವಿದೆ, ಅವರು ನಿಮ್ಮ ಏಜೆನ್ಸಿ ಕೆಲಸ ಮಾಡಿಕೊಡುತ್ತಾರೆ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ.

ಶ್ರೀಲೇಖಾ ಅವರು ಏಜೆನ್ಸಿ ಕೊಡಿಸಲು ತಡವಾಗಲಿದ್ದು, ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕಿರಿಯ ಸಹಾಯಕರು, ಹಿರಿಯ ಸಹಾಯಕರು ಮತ್ತು ಅಧೀಕ್ಷಕರ ಹುದ್ದೆಗಳ ನೇಮಕಾತಿಗಳನ್ನು ನಿಮಗೆ ಪರಿಚಯವಿರುವವರಿಗೆ ಮಾಡಿಸಿಕೊಡುತ್ತೇನೆಂದು ನಂಬಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ನಂಬಿದ ಮಂಜುನಾಥ್ ಅವರು ಉದ್ಯೋಗಾಕಾಂಕ್ಷಿಗಳಿಗೆ ಸರಕಾರಿ ಉದ್ಯೋಗ ಕೊಡಿಸಬಹುದು ಎಂದು ಸುಮಾರು 55 ಮಂದಿಯನ್ನು ಸಂಪರ್ಕಿಸಿ ಆ.15 ರಿಂದ ಸೆ.20ರವರೆಗೆ 76.54 ಲಕ್ಷ ರೂ.ಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಜತೆಗೆ, 56.40 ಲಕ್ಷ ರೂ.ಗಳನ್ನು ಶ್ರೀಲೇಖಾ ಅವರಿಗೆ ನಗದು ರೂಪದಲ್ಲಿ ಕೊಟ್ಟಿರುತ್ತಾರೆ ಎಂದು ತಿಳಿದುಬಂದಿದೆ.

ನಕಲಿ ನೇಮಕಾತಿ ಪತ್ರ : ಶ್ರೀಲೇಖಾ ಸೂಚನೆಯಂತೆ, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿಗಳನ್ನು ವಿಕಾಸಸೌಧದಲ್ಲಿ ಕೆಲಸ ಮಾಡುವ ಮೋಹನ್ ಎಂಬುವವರು ಮಂಜುನಾಥ್ ಅವರಿಗೆ ತಂದುಕೊಟ್ಟಿದ್ದಾರೆ. ಇತ್ತೀಚಿಗೆ ಅಲ್ಲಿನ ಸಿಬ್ಬಂದಿ ಆದೇಶ ಪತ್ರವನ್ನು ಪರಿಶೀಲಿಸಿ ಈ ರೀತಿ ಯಾವುದೇ ನೇಮಕಾತಿಗಳನ್ನು ಇಲಾಖೆಯಲ್ಲಿ ಮಾಡುತ್ತಿಲ್ಲವೆಂದು ತಿಳಿಸಿ ಇದೊಂದು ನಕಲಿ ಆದೇಶ ಪತ್ರವೆಂದು ಹೇಳಿದ್ದಾರೆ.

ತಕ್ಷಣ ಅಭ್ಯರ್ಥಿಯೊಬ್ಬರು ಮಂಜುನಾಥ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಧಾನಸೌಧವೇ ಇವರ ಅಡ್ಡ! : ಉದ್ಯೋಗ ಆಕಾಂಕ್ಷಿಗಳಿಗೆ ವಂಚನೆ ಮಾಡುವ ಸಲುವಾಗಿ ವಿಧಾನಸೌಧವನ್ನೇ ಆರೋಪಿಗಳು ಅಡ್ಡ ಮಾಡಿಕೊಂಡಿದ್ದರು. ಕೆಲ ಯುವಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಅಧಿಕಾರಿಗಳನ್ನು ತೋರಿಸಿ ನಕಲಿ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದಾರೆ. ಗೃಹ ಇಲಾಖೆಯಲ್ಲೇ ನೌಕರಿ ಆಮಿಷ ಒಡ್ಡಿದ್ದು, ಪೊಲೀಸರಿಗೆ ಸವಾಲಾಗಿದೆ. ಇಂತಹ ಪ್ರಕರಣಗಳು ರಾಜ್ಯದಲ್ಲಿ ದಿನೆ ದಿನೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ರಾಜ್ಯ ಮತ್ತು‌ ದೇಶದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳ ಬಗ್ಗೆ ಜನಶಕ್ತಿ ಮೀಡಿಯಾ ಬೆಳಕು ಚೆಲ್ಲಿತ್ತು. ಜನ‌ ಜಾಗೃತರಾಗಬೇಕಿದೆ. ಹಣ ನೀಡಿ ನೌಕರಿ ಪಡೆಯುವುದು, ಅಥವಾ ಹಣ ಪಡೆದು ನೌಕರಿ ಕೊಡಿಸುವುದು ಅಸಾಧ್ಯ ಎಂಬದನ್ನು ಜನ ಅರಿಯಬೇಕಿದೆ. ಇಲ್ಲದೆ ಹೋದಲ್ಲಿ ಇಂತಹ ಮೋಸಗಳು ನಡೆಯುತ್ತಿರುತ್ತವೆ.

 

Donate Janashakthi Media

Leave a Reply

Your email address will not be published. Required fields are marked *