ವಿಧಾನಸಭೆ ವಿಶೇಷ ಅಧಿವೇಶನ ಕರೆಯಲು ಕುಮಾರಸ್ವಾಮಿ ಮನವಿ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶವನ್ನು ಕರೆಯಬೇಕೆಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌‌ ಡಿ ಕುಮಾರಸ್ವಾಮಿ ಅವರು ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ವಿಧಾನಸಭಾಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ.

ಕೋವಿಡ್‌ ಒಳಗೊಂಡು ಇನ್ನಿತರೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ, ಕನ್ನಡ, ಕನ್ನಡಿಗ, ಕರ್ನಾಟಕ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ನಿಂದಾಗಿ ಒಂದೆಡೆ ಹಾನಿಯಾಗಿದ್ದರೆ, ಮತ್ತೊಂದು ಕಡೆ ಜನರ ಜೀವನಕ್ಕೂ ಹಾನಿಯಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.

ಪ್ರಮುಖವಾಗಿ ಲಾಕ್‌ಡೌನ್‌ಗೆ ಪರಿಹಾರವಾಗಿ ಸರಕಾರ ಘೋಷಿಸಿದ ಪ್ಯಾಕೇಜ್‌ ಅತ್ಯಂತ ಅಲ್ಪ ಪ್ರಮಾಣದ್ದು, ಸರಕಾರ ಪ್ಯಾಕೇಜ್‌ ಘೋಷಣೆ ಮಾಡುವುದಕ್ಕೂ ಮೊದಲು ಸರ್ವ ಪಕ್ಷಗಳ ಅಭಿಪ್ರಾಯವನ್ನು ಒಮ್ಮೆ ಕೇಳಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಇತ್ತೀಚನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪೆಟ್ಟು ಬೀಳುತ್ತಿದೆ. ಕನ್ನಡಿಗರಿಗೆ ಹಿನ್ನಡೆಗಳಾಗುತ್ತಿವೆ. ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯ ಅಡಿಯಲ್ಲಿ ನಾಲ್ಕು ವರ್ಷಗಳ ಪದವಿ ತರಗತಿಗಳಲ್ಲಿ ಕನ್ನಡ ಕಲಿಕೆಗೆ ಒಂದೇ ವರ್ಷ ಆದ್ಯತೆ ನೀಡುವುದು, ಭಾಷೆಗಳ ಕಲಿಕಾ ತರಬೇತಿಯಲ್ಲಿ ಲೋಕಸಭೆಯೇ ಕನ್ನಡವನ್ನು ಕಡೆಗಣಿಸಿವುದು ಸೇರಿದಂತೆ ಮತ್ತಿತರ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಕೋವಿಡ್‌ ಮೂರನೇ ಅಲೆ ಎದುರಾಗದಂತೆ ಸೂಕ್ತ ರೀತಿಯಲ್ಲಿ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯುವ ಅತ್ಯವಿದೆ. ಅಲ್ಲದೆ, ಕೋವಿಡ್‌ ಸ್ಥಿತಿಗತಿಗಳು ಒಳಗೊಂಡು ಸರಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಇನ್ನೂ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಅಗತ್ಯವಿದೆ ಎಂದು ಪತ್ರದ ಮೂಲಕ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರದ ಪ್ಯಾಕೇಜ್ ಜನರಿಗೆ ಹೇಗೆ ತಲುಪುತ್ತಿದೆ ಎಂಬ ಬಗ್ಗೆ ಕೂಡ ಚರ್ಚೆಯಾಗಬೇಕು. ಸರ್ಕಾರದ ಮೇಲೆ ಗಂಭೀರವಾದ ಭ್ರಷ್ಟಾಚಾರ ಆರೋಪ ಕೂಡ ಕೇಳಿಬರುತ್ತಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರ ಕೈವಾಡವಿದೆ ಎಂದು ಕೂಡ ಕೇಳಿಬರುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು. ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕೆಂದು ಹೆಚ್‌‌ಡ ಿಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *