ಬೆಂಗಳೂರು: ಜೆಡಿಎಸ್ ಅವರು ಮೇಲ್ನೋಟಕ್ಕೆ ಬಿಜೆಪಿ ವಿರುದ್ಧ ಮಾತನಾಡುತ್ತಾರೆ, ನಂತರ ಮುಖ್ಯಮಂತ್ರಿಗಳ ಬಳಿ ಹೋಗಿ ತಮ್ಮ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಸುತ್ತಾರೆ. ಕಲ್ಬುರ್ಗಿ ಪಾಲಿಕೆ ಚುನಾವಣೆಯಲ್ಲಿ 4 ಸೀಟು ಬಂದರೂ ಬಿಜೆಪಿ ಜತೆ ಕೈಜೋಡಿಸುತ್ತಾರೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ ಕಿತ್ತು ಬಿಜೆಪಿ ಗೆಲುವಿಗೆ ಸಹಕರಿಸಲು ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಇವರ ತಂತ್ರಗಾರಿಕೆ ಜನರಿಗೂ ಅರಿವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಚಲಯವರಾಯಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಲುವರಾಯಸ್ವಾಮಿ ಜೆಡಿಎಸ್ ನೋಡಿ ನಮಗೆ ನಡುಕ ಆಗಿದೆ ಎಂದು ನಾವ್ಯಾರು ಹೇಳಿಕೊಂಡಿಲ್ಲ. ಯಾರಿಗೆ ಸೋಲಿನ ಭೀತಿ ಇರುತ್ತದೆಯೋ ಅವರು ಎಲ್ಲರಿಗೂ ಮುಂಚಿತವಾಗಿ ಯೋಚಿಸಲು ಆರಂಭಿಸುತ್ತಾರೆ. 2018ರ ಚುನಾವಣೆಯಲ್ಲಿ ನಮ್ಮದೇ ಪೂರ್ಣ ಸರ್ಕಾರ ಬರುತ್ತದೆ. ಜನ ಆ ಅವಕಾಶ ಕೋಡದಿದ್ದರೆ ಯಾವ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಕಳೆದ 20 ವರ್ಷಗಳಿಂದ ಅವರು ಒಂದೇ ಮಾತನ್ನು ಪದೇ ಪದೆ ಪುನರುಚ್ಛರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದರೆ ಅವರು ಟೀಕೆ ಮಾಡುತ್ತಾರೆ, ಆಗ ಜನರ ಸಿಂಪತಿ ಸಿಗುತ್ತದೆ ಎಂಬ ತಂತ್ರಗಾರಿಕೆಯಿಂದ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್ಗೆ ಕೌಂಟರ್ ಮಾಡಿಕೊಂಡು ರಾಜಕಾರಣ ಮಾಡುವ ಪರಿಸ್ಥಿತಿ ನಮಗಿಲ್ಲ. ನಾವು ರಾಜಕಾರಣ ಮಾಡಲು ಅನೇಕ ಜನಪರ ಕಾರ್ಯಕ್ರಮಗಳು ಇವೆ. ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಕಾರ್ಯಕ್ರಮಗಳೇ ನಮ್ಮ ಶಕ್ತಿ ಎಂದು ಚಲುವರಾಯಸ್ವಾಮಿ ಹೇಳಿದರು.
10 ಕೆ.ಜಿ ಅಕ್ಕಿ ಕೊಟ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡುವುದಾದರೆ, ತಮಿಳುನಾಡಿನಲ್ಲಿ ಕೊಟ್ಟ ಕಾರ್ಯಕ್ರಮಗಳಿಂದ ಅವರು ಭಿಕ್ಷುಕರಾಗಿದ್ದಾರಾ? ಇನ್ನು ಮೋದಿ ಅವರು ಖಾತೆಗೆ 500 ರೂ. ಹಾಕಿರುವುದು ಭಿಕ್ಷೆಯೇ? ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ಅವರು ಅಕ್ಕಿ ಕೊಟ್ಟಿದ್ದರಿಂದಲೇ ನಾವು ಇಂದು ಊಟ ಮಾಡಿ ನೆಮ್ಮದಿಯಿಂದ ಇದ್ದೇವೆ ಎಂದು ಜನ ಮಾತನಾಡಿಕೊಳ್ಳುತಿದ್ದಾರೆ. ಇದೇ ರೀತಿ ಹಸಿವು ನೀಗಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಭಯದಲ್ಲಿ ಕುಮಾರಸ್ವಾಮಿ ಅವರು ಈ ಎಲ್ಲ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅವರು ಪೂರ್ಣ ಬಹುಮತಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಕುಮಾರಸ್ವಾಮಿ ಅವರು ಯಾವತ್ತು ನಾವು ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ? ಕಾಂಗ್ರೆಸ್ ಹಾಗೂ ಬಿಜೆಪಿಗೆ 115ಕ್ಕಿಂತ ಹೆಚ್ಚು ಸೀಟು ಹೋಗದಂತೆ ನೋಡಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ಧಿವಂತರಿದ್ದು, ಇವರ ರಣತಂತ್ರಕ್ಕೆ ಬಲಿಯಾಗುವುದಿಲ್ಲ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ಔದಾರ್ಯತೆ ಇರುವುದು ನಿಜವೇ ಆಗಿದ್ದರೆ, ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಹಿಂಪಡೆಯಲಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅವರ ಮಾತು ನಿಜವೇ ಆಗಿದ್ದರೆ ಸಾಬೀತು ಮಾಡಲಿ ಎಂದರು.
ಸರ್ವಜನಾಂಗದ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್: ನರೇಂದ್ರಸ್ವಾಮಿ
ಯಾವ ಯಾವ ರಾಜ್ಯದಲ್ಲಿ ಯಾವ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ನಮ್ಮ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಈಗಾಗಲೇ ಸಾಬೀತುಪಡಿಸಿದೆ. ಕಾಂಗ್ರೆಸ್ ಎಂದಿಗೂ ಹೇಳಿಕೊಂಡು ಈ ಕೆಲಸ ಮಾಡಿಲ್ಲ. ಸರ್ವಜನಾಂಗದ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್. ನಮಗೆ ಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ತಪ್ಪಲ್ಲ. ಪಕ್ಷದ ತೀರ್ಮಾನ ಅಂತಿಮ. ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ನರೇಂದ್ರಸ್ವಾಮಿ ಹೇಳಿದರು.