ಬೆಳಗಾವಿ: ವಿಧಾನಮಂಡಲದ ಅಧಿವೇಶನ ನಡೆದಾಗಲೆಲ್ಲಾ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸೀಮಿತವಾಗಿರುವ ವಿಚಾರಗಳನ್ನು ಚರ್ಚಿಸಲು ದಿನಗಳನ್ನು ಮೀಸಲಿಡಬೇಕೆಂದು ಆಗ್ರಹಿಸಲಾಗುತ್ತಿದೆ. ಅದರಂತೆ, ಈ ಬಾರಿ ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್ 19ರಿಂದ ಆರಂಭವಾಗಿರುವ 10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಚಾರಗಳ ಚರ್ಚೆಗೆ ಎರಡು ದಿನ ಸಿಗಲಿವೆಯೇ ಎಂಬ ಚರ್ಚೆ ಆರಂಭವಾಗಿದೆ.
ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆಯುವ ಅಧಿವೇಶನಗಳಂತೆ ಇಲ್ಲಿಯೂ ನಡೆಯುತ್ತಿದ್ದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಗಳು ಮಾತ್ರ ಕೊನೆಯ ದಿನ ಇರಿಸಲಾಗುತ್ತಿದೆ.
ಇದನ್ನು ಓದಿ: ಬೆಳಗಾವಿ ಅಧಿವೇಶನ : ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯಲಿಲ್ಲ, ಮತಾಂತರ ಬಿಲ್ ಪಾಸ್ ಮಾಡುವುದಷ್ಟೆ ಅಧಿವೇಶನದ ಗುರಿಯಾಗಿತ್ತು
ಬೆಳಗಾವಿ ಅಧಿವೇಶನದ ಅಂತಿಮ ದಿನ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ಎಷ್ಟರ ಮಟ್ಟಿಗೆ ಕಾರ್ಯಸಾಧು ಎಂಬ ಬಗ್ಗೆ ಸರಕಾರ ಒಮ್ಮೆ ಅವಲೋಕಿಸಬೇಕಿದೆ. ಅಧಿವೇಶನದ ಆರಂಭದಿಂದಲೇ ಎಲ್ಲ ದಿನಗಳನ್ನು ರಾಜಕೀಯ ವಿಷಯಗಳ ಕಿತ್ತಾಟದಲ್ಲಿ ಮುಗಿಯಲಿದೆ. ಕೊನೆಯ ದಿನ ಅನೇಕರ ಗೈರು ಹಾಜರಿಯಲ್ಲೇ ಸದನ ನಡೆಯಲಿದೆ.
ಉತ್ತರ ಕರ್ನಾಟಕ ಭಾಗದಲ್ಲಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವುದು ಅವಶ್ಯಕವಾಗಿದ್ದು, ಈ ಕುರಿತು ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಭಾಗದ ವಿಚಾರಗಳ ಚರ್ಚಿಸಲು ಎಷ್ಟರ ಮಟ್ಟಿಗೆ ಉತ್ಸುಕವಾಗಿವೆ ಎಂಬುದನ್ನು ನೋಡಬೇಕು.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಚಳಿಗಾಲದ ಅಧಿವೇಶನದ ಮೂಲಕ ಉತ್ತರ ಕರ್ನಾಟಕ ಭಾಗದ ಜನರ ಒಲವು ಗಳಿಸುವ ಕಾರ್ಯತಂತ್ರಗಳಲ್ಲಿ ಮೂರು ಪಕ್ಷಗಳು ತೊಡಗಿವೆ.
ಇದನ್ನು ಓದಿ: ಗೆಟ್ ಔಟ್” ಕುಣಿಗಲ್ ಶಾಸಕರಿಗೆ ಗದರಿದ ಸಚಿವ ಕಾರಜೋಳ: ಕೈ- ಬಿಜೆಪಿ ಜಟಾಪಟಿ
ಪ್ರಸಕ್ತ ಅಧಿವೇಶನದ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನದ ಸ್ಥಿತಿಗತಿ, ಕಬ್ಬು ಬೆಳೆಗಾರರ ಸಮಸ್ಯೆಗಳು, ಮುಳುಗಡೆ ಸಂತ್ರಸ್ತರ ಪುನರ್ ವಸತಿ, ಪುನರ್ ನಿರ್ಮಾಣ, ಪ್ರವಾಹದ ಸಂದರ್ಭದಲ್ಲಿ ಮುಳುಗಡೆಯಾಗುವ ಗ್ರಾಮಗಳ ಸ್ಥಳಾಂತರ, ಶಾಶ್ವತ ಪರಿಹಾರ, ರಾಜ್ಯ ಹಂಚಿಕೆಯಾಗಿರುವ ನೀರಿನ ಸದ್ಬಳಕೆ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಬೆಳಕು ಚೆಲ್ಲಿ ಪರಿಹಾರದ ಮಾರ್ಗೋಪಾಯಗಳನ್ನು ಕೊಳ್ಳಲಾಗುವುದು ಎನ್ನಲಾಗುತ್ತಿದೆ.
ಈಗಾಗಲೇ ಗಡಿ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳು ಉಭಯ ಸದನದಲ್ಲಿ ಪ್ರತಿಧ್ವನಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿವೆ. ಈ ನಡುವೆ ಪ್ರಸಕ್ತ ವಿಧಾನಮಂಡಲ ಅಧಿವೇಶನ ಸುಗಮವಾಗಿ ಜರುಗಿದ್ದಲ್ಲಿ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ, ಬೇಡಿಕಗಳ ಬಗ್ಗೆ ಚರ್ಚೆಗೆ ಅವಕಾಶ ಬರಲಿದೆ. ಪಕ್ಷಬೇಧ ಮರೆತು ಬಹುತೇಕ ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ಉಪಯುಕ್ತ ಸಲಹೆ, ಸೂಚನೆ ನೀಡಲಿದ್ದಾರೆ ಕಾದು ನೋಡಬೇಕು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ