ವಿಧಾನ ಪರಿಷತ್ ಅಹಿತಕರ ಘಟನೆ : ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆ

ಘಟನೆಗೆ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಸಚಿವ ಜೆ.ಸಿ ಮಾಧುಸ್ವಾಮಿ ಅವರೇ ಕಾರಣ?!

ಬೆಂಗಳೂರು, ಜನವರಿ 22 : ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿಸೆಂಬರ್  15  ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯ ಸದನ ಸಮಿತಿ ಇಂದು 84 ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿತು.

ಇಂದು ವಿಧಾನ ಸೌಧದ ಸಭಾಪತಿಗಳ ಕೊಠಡಿಯಲ್ಲಿ ವರದಿ ಸಲ್ಲಿಸಿ ಮಾತಾನಾಡಿದ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರು ಸಮಿತಿಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು, ಈವರೆಗೆ ಸಮಿತಿ ಒಟ್ಟು ಐದು ಸಭೆಗಳನ್ನು ನಡೆಸಿದ್ದು, ಹೆಚ್ಚಿನ ಸಮಯವಾಕಾಶ ಬೇಕಾಗಿದೆ. ಆದ್ದರಿಂದ, ಸಮಿತಿಯ ಮೊದಲ ನಾಲ್ಕು ಸಭೆಗಳ ಮಾಹಿತಿಯನ್ನೊಳಗೊಂಡ ವರದಿ ಹಾಗೂ ಸಾಕ್ಷ್ಯದಾರಗಳನ್ನು ಸಿ.ಡಿ ರೂಪದಲ್ಲಿ ಮಧ್ಯಂತರ ವರದಿಯಲ್ಲಿ ಸಲ್ಲಿಸಲಾಗಿದೆ, ಸಂಪೂರ್ಣ ವರದಿ ಸಲ್ಲಿಸಲು ಇನ್ನೂ ಹೆಚ್ಚಿನ ಸಮಯವಾಕಾಶ ಕೇಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಪರಿಷತ್ ವಿಶೇಷ ಅಧಿವೇಶನ : ಕಾರ್ಯಸೂಚಿ ಪಟ್ಟಿ ಬಿಟ್ಟು ಚರ್ಚೆ – ಗದ್ದಲದ ನಡುವೆ ಕಲಾಪ ಮುಂದೂಡಿಕೆ

ಘಟನೆಯ ಕುರಿತು ಈವರೆಗೆ ನಡೆಸಿದ ಐದು ಸಭೆಗಳಲ್ಲಿ ಅಂದು ವಿಧಾನ ಪರಿಷತ್‍ನಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಕಾರ್ಯದರ್ಶಿ, ಮಾರ್ಷಲ್ಸ್ ಮತ್ತು ವಿಧಾನ ಪರಿಷತ್ ಸದಸ್ಯ ರಮೇಶ್ ಅವರಿಗೆ ನೋಟಿಸ್ ನೀಡಿ ಪ್ರಾಥಮಿಕ ಹೇಳಿಕೆ ಪಡೆಯಲಾಗಿದೆ. ಅಂದಿನ ಅಧಿವೇಶನದಲ್ಲಿ ಹಾಜರಿದ್ದು ಅಧಿವೇಶನದ ಕಲಾಪಗಳನ್ನು ಚಿತ್ರೀಕರಿಸಿರುವ ಖಾಸಗಿ ಸುದ್ದಿ ವಾಹಿನಿಗಳು, ವಿಧಾನ ಪರಿಷತ್‍ನ ವೆಬ್‍ಕಾಸ್ಟ್, ಲೋಕೋಪಯೋಗಿ ಇಲಾಖೆ ನಿರ್ವಹಿಸುವ ಸಿಸಿ ಕ್ಯಾಮೆರಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಘಟನೆ ಕುರಿತು ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸಮಿತಿ ತೀರ್ಮಾನಿಸಿದೆ.

ಘಟನೆಯ ನಂತರ ನಡೆದ ಉಪ ಸಭಾಪತಿ ಧರ್ಮೆಗೌಡ ಅವರ ಸಾವಿನ ಕುರಿತು ಅವರು ಬರೆದಿಟ್ಟಿರುವರು ಎನ್ನಲಾಗಿರುವ ಪತ್ರವನ್ನು ಒದಗಿಸಲು ಕೋರಿ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿದೆ. ಆದ್ದರಿಂದ, 20 ದಿನಗಳ ಒಳಗಾಗಿ ಪೂರ್ಣ ವರದಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನಮ್ಮ ದೇಶದ ಇತರೆ ರಾಜ್ಯಗಳಲ್ಲಿ ಸಹ ಇಂತಹ ಘಟನೆಗಳು ನಡೆದಿರುವ ಕುರಿತು ಮಾಹಿತಿಯನ್ನು ಪಡೆಯಲು ಸಮಿತಿ ತೀರ್ಮಾನಿಸಿದ್ದು, ಇನ್ನೂ ಎಷ್ಟು ಸಮಯ ಬೇಕಾಗಬಹುದು ಎನ್ನುವುದರ ಸ್ಪಷ್ಟತೆ ಸಿಕ್ಕಮೇಲೆ ಸಭಾಪತಿಗಳಿಗೆ ಪತ್ರ ಬರೆದು ಹೆಚ್ಚಿನ ಸಮಯಾವಾಕಾಶವನ್ನು ಲಿಖಿತವಾಗಿ ಕೇಳಲಾಗುವುದು ಎಂದು ತಿಳಿಸಿದರು.

ಸಮಿತಿಯ ಮಧ್ಯಂತರ ವರದಿಯನ್ನು ಸ್ವೀಕರಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡಿ ಅಂದು ನಡೆದ ಅಹಿತಕರ ಘಟನೆ ಕುರಿತು ಐದು ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿತ್ತು. ಆದರೇ, ಅದರಲ್ಲಿ ಹೆಚ್.ವಿಶ್ವನಾಥ್ ಮತ್ತು ಸಂಕನೂರು ಅವರು ಖಾಸಗಿ ಕಾರಣಗಳಿಂದ ಸಮಿತಿಗೆ ರಾಜಿನಾಮೆ ನೀಡಿದ್ದು, ಪ್ರಸ್ತುತ ಸಮಿತಿಯಲ್ಲಿ 3 ಸದಸ್ಯರಿದ್ದಾರೆ. ಸಮಿತಿಗೆ 20 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು, ಸಮಿತಿಗೆ ಕಾಲಾವಕಾಶ ಸಾಕಾಗುತ್ತಿಲ್ಲವೆಂದು ಇಂದು ಮಧ್ಯಂತರ ವರದಿಯನ್ನು ಸಲ್ಲಿಸಿ ಹೆಚ್ಚಿನ ಸಮಯವನ್ನು ಕೋರಿದೆ. ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸದನ ಸಮಿತಿಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ಬಿ.ತಿಮ್ಮಾಪುರ ಅವರು ಉಪಸ್ಥಿತರಿದ್ದರು.

ಘಟನೆಗೆ ಉಪಮುಖ್ಯಮಂತ್ರಿ ಕಾರಣ ? ; ವಿಧಾನಪರಿಷತ್ತಿನಲ್ಲಿ  ನಡೆದ ಗಲಾಟೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಸಚಿವ ಜೆ.ಸಿ ಮಾಧುಸ್ವಾಮಿ ಅವರೇ ಕಾರಣರು’ ಎಂದು ಗಲಾಟೆಯ ವಿಚಾರಣೆಗೆಂದು ನೇಮಿಸಿದ್ದ ಸದನ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಅಶ್ವತ್ಥನಾರಾಯಣ, ಮಾಧುಸ್ವಾಮಿ ಮತ್ತು ಗಲಾಟೆ ಮಾಡಿದ ಇತರರ ಸದಸ್ಯರ ವಿರುದ್ಧವೂ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಕುರಿತು ಸಭಾಪತಿಯವರನ್ನು ಜನಶಕ್ತಿ ಮೀಡಿಯಾ ಸಂಪರ್ಕಿಸಿದಾಗ ಇದು ಕಾನ್ಫಿಡೆನ್ಷಿಯಲ್ ವಿಚಾರ ಎಂದು ಪ್ರತಿಕ್ರೀಯೆಗೆ ನಿರಾಕರಿಸಿದ್ದಾರೆ. ಇದು ನಿಜವಾ ಅಥವಾ ಊಹೆಯಾ ಎಂಬುದು ರಾಜಕೀಯ ವಲಯದಲ್ಲಿ ಕೂತೂಹಲ ಹುಟ್ಟಿಸಿದೆ.

 

Donate Janashakthi Media

Leave a Reply

Your email address will not be published. Required fields are marked *