ಬೆಂಗಳೂರು: ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದೇವೆ. ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮಾಡುತ್ತಿದ್ದೇವೆ. ವಿದೇಶಿ ಪ್ರಯಾಣಿಕರ ಸಂಪರ್ಕಕ್ಕೆ ಬಂದವರಿಗೂ ಇದು ಅನ್ವಯವಾಗಲಿದೆ. ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಇಲ್ಲ. ಈ ಕುರಿತಂತೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.
ಬೆಂಗಳೂರಿನ ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಲಾಕ್‌ಡೌನ್ ಮಾಡುವ ಪ್ರಸ್ತಾಪವಿಲ್ಲ. ಜನಜೀವನ ಎಂದಿನಂತೆ ನಡೆಯಬೇಕು. ಹೆಚ್ಚು ಜನರು ಸೇರುವಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಘಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿ: ಲಾಕ್‌ಡೌನ್ ಪ್ರಸ್ತಾವನೆ ಇಲ್ಲ-ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ: ಸಚಿವ ಡಾ. ಕೆ. ಸುಧಾಕರ್
ಕೋವಿಡ್ ಹೊಸ ತಳಿ ಒಮಿಕ್ರಾನ್ ಕುರಿತು ನಿಗಾ ಇರಿಸಲಾಗಿದೆ. ಈಗಿರುವ ಡೆಲ್ಟಾ ತಳಿಯಿಂದ ಅಲ್ಲಲ್ಲಿ ಕ್ಲಸ್ಟರ್ ಆಗಿದೆ. ಎರಡು ಹಂತಗಳಲ್ಲಿ ಇದನ್ನು ನಿಭಾಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡು ತ್ತಿದ್ದು, ವೈಜ್ಞಾನಿಕವಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ತನಿಖೆಗೆ ಎನ್.ಸಿ.ಬಿ.ಎಸ್.ಗೂ ಮಾದರಿಗಳನ್ನು ಕಳುಹಿಸಲಾಗಿದೆ. ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕ್ಲಸ್ಟರ್ ಗಳ ಬಗ್ಗೆ ವಿಶೇಷ ಮಾರ್ಗಸೂಚಿ ನೀಡಲಾಗಿದ್ದು, ಭಾಗವಹಿಸಿದ ಎಲ್ಲರನ್ನು ಟೆಸ್ಟ್ ಮಾಡಬೇಕು. 7ನೇ ದಿನದೊಳಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕೆಂದು ಸೂಚಿಸಿದ್ದೇವೆ. ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಸುಮಾರು 4 ಸಾವಿರ ಜನರ ಪರೀಕ್ಷೆಯನ್ನು ಮಾಡಲಾಗಿದೆ. ಅದೇ ರೀತಿ ಮೈಸೂರು, ಹಾಸನ ಮತ್ತು ಬೆಂಗಳೂರಿನ ಆನೇಕಲ್ ನಲ್ಲಿನ ಕಸ್ಟರ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಕೋವಿಡ್ ಹೊಸ ರೂಪಾಂತರಿ ಕುರಿತಂತೆ ಸಚಿವರ ಮಟ್ಟದ ಸಭೆ ಇಂದು ನಡೆಯಲಿದೆ. ಕೂಲಂಕುಷ ಚರ್ಚೆಯ ಬಳಿಕ, ವರದಿ ಪಡೆದು ನಾನು ಸಹ ಚರ್ಚೆ ನಡೆಸುತ್ತೇನೆ. ಬೆಳಗಾವಿ ಅಧಿವೇಶನದಲ್ಲಿ ಕೋವಿಡ್ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ. ಸಂಘ ಸಂಸ್ಥೆಗಳು ಸಭೆ ನಡೆಸಿದರೂ ಅಗತ್ಯ ಕ್ರಮೈಕೊಗಳ್ಳಬೇಕು. ವಿದೇಶದಲ್ಲಿ ಹೊಸ ರೂಪಾಂತರಿ ಪತ್ತೆಯಾದ ನಂತರ ರಾಜ್ಯ ಸರ್ಕಾರ ಅತ್ಯಂತ ಕಟ್ಟೆಚ್ಚರ ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.