ಬೆಂಗಳೂರು: ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಎಲ್ಲರಿಗೂ ಏಳು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ತೀವ್ರತೆಯ ಕುರಿತಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಇಲಾಖೆ ಸಮಿತಿ ಸಭೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ. ಸುಧಾಕರ್ ಕೆ ಅವರು ‘ವಿದೇಶಗಳಿಂದ ಬರುವ ಎಲ್ಲರಿಗೂ ತಕ್ಷಣವೇ ಆರ್‌ಟಿ–ಪಿಸಿಆರ್ ವಿಧಾನದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಸೋಂಕಿನ ಲಕ್ಷಣ ಇರುವವರಿಗೆ ಐದನೇ ದಿನ ಮತ್ತೆ ಪರೀಕ್ಷೆ ನಡೆಸಲಾಗುವುದು. ಸೋಂಕಿನ ಲಕ್ಷಣಗಳಿಲ್ಲದವರಿಗೆ ಏಳನೇ ದಿನ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗುವುದು. ಎಲ್ಲರಿಗೂ ಏಳು ದಿನಗಳ ಕ್ವಾರಂಟೈನ್ ಕಡ್ಡಾಯ’ ಎಂದು ಹೇಳಿದರು.
ಓಮೀಕ್ರಾನ್ ತಳಿಯ ಕೊರೊನಾ ವೈರಾಣು ಪತ್ತೆಯಾಗಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು.
ಇದನ್ನು ಓದಿ : ಲಾಕ್‌ಡೌನ್ ಪ್ರಸ್ತಾವನೆ ಇಲ್ಲ-ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ: ಸಚಿವ ಡಾ. ಕೆ. ಸುಧಾಕರ್
ಕೋವಿಡ್‌ಗೆ ಏಕರೂಪದ ಚಿಕಿತ್ಸಾ ಕ್ರಮಗಳನ್ನು ಪಾಲಿಸುವ ಸಂಬಂಧ ಶಿಫಾರಸು ನೀಡಲು ಬೆಂಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ರವಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ನೀಡುವ ಶಿಫಾರಸುಗಳನ್ನು ಆಧರಿಸಿ ಏಕರೂಪ ಚಿಕಿತ್ಸೆಯ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ವಿದೇಶಗಳಿಂದ ರಾಜ್ಯಕ್ಕೆ ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಯಾವುದೇ ದೇಶಗಳಿಂದ ಬಂದ ಪ್ರಯಾಣಿಕರಿಗೂ ಪರೀಕ್ಷೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಜಗತ್ತಿನ 12 ದೇಶಗಳಲ್ಲಿ ಕೋವಿಡ್ ನ ಹೊಸ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ರಾಜ್ಯದಲ್ಲೂ ಇದು ಬರಬಹುದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಜನಸಂಖ್ಯೆ, ಆರೋಗ್ಯ ಮೂಲಸೌಕರ್ಯಗಳನ್ನು ಪರಿಗಣಿಸಿದರೆ ಬೇರೆ ದೇಶಗಳಿಗಿಂತ ನಾವು ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯ ವ್ಯವಸ್ಥೆಯಲ್ಲಿ ಮಾಡಬೇಕಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.
ಹಾಸಿಗೆ, ಆಕ್ಸಿಜನ್ ಹಾಸಿಗೆ, ವೈದ್ಯರು ಹಾಗೂ ಅಧಿಕಾರಿಗಳ ನಿಯೋಜನೆ, ಔಷಧಿ ಪೂರೈಕೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಜನರು ಸುರಕ್ಷಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕಿದೆ. ಇದಕ್ಕಾಗಿ ಕೆಲ ಕ್ರಮಗಳನ್ನು ವಹಿಸಬೇಕೆಂದು ಸಲಹೆ ನೀಡಲಾಗಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಬೇಕಾಗಿರುವವರ ಸಂಖ್ಯೆ 41 ಲಕ್ಷ ಇದೆ. ಇದಕ್ಕಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದರು.