ವಿದ್ಯಾರ್ಥಿನಿಯರ ಉಡುಪು ಬಗ್ಗೆ ಕುಲಪತಿಯ ವಿವಾದಾತ್ಮಕ ಹೇಳಿಕೆ: ವಿದ್ಯಾರ್ಥಿಗಳ ಪ್ರತಿಭಟನೆ

ತಮಿಳುನಾಡು: ವಿದ್ಯಾರ್ಥಿನಿಯರ ಉಡುಪಿನ ಬಗ್ಗೆ ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ವಿ ನಾಗರಾಜ್ ನೀಡಿರುವ ಕೀಳುಮಟ್ಟದ ಹೇಳಿಕೆ ಈಗ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರು ಶಾರ್ಟ್ಸ್ ಧರಿಸುವುದರಿಂದ ಅಧ್ಯಾಪಕರ ಗಮನ ಭಂಗವಾಗುತ್ತದೆ ಮತ್ತು ಇದು ಲೈಂಗಿಕ ಕಿರುಕುಳಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂಬ ಇವರ ವಿವಾದಾತ್ಮಕ ಮಾತುಗಳು ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ.
ಘಟನೆಯ ವಿವರ

ತರಗತಿಯ ಪ್ರತಿನಿಧಿಗಳೊಂದಿಗೆ ನಡೆಸಿದ ಸಾಮಾನ್ಯ ಸಭೆಯಲ್ಲಿ ಕುಲಪತಿಗಳು ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಹಿಳಾ ವಿದ್ಯಾರ್ಥಿನಿಯರು ಇಂತಹ ಬಟ್ಟೆ ಧರಿಸುವುದು ಸರಿಯಲ್ಲ ಎನ್ನುವ ಮೂಲಕ, ಕಿರುಕುಳಕ್ಕೆ ಸಂತ್ರಸ್ತೆಯರ ಬಟ್ಟೆಯೇ ಕಾರಣ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಈ ಹೇಳಿಕೆಯು ಹೊರಬರುತ್ತಿದ್ದಂತೆ ವಿಶ್ವವಿದ್ಯಾಲಯದ ಆವರಣ ಪ್ರತಿಭಟನಾ ಕಣವಾಗಿ ಮಾರ್ಪಟ್ಟಿತು. ನೂರಾರು ವಿದ್ಯಾರ್ಥಿಗಳು ಆಡಳಿತ ಕಚೇರಿಯ ಮುಂದೆ ಜಮಾಯಿಸಿ ಕುಲಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಏ.19ರಿಂದ ಜನಗಣತಿ ಆರಂಭ: ನಾಗರಿಕರ ಸಹಕಾರ ಅಗತ್ಯ

ಕುಲಪತಿಗಳ ನಡೆಯನ್ನು ಖಂಡಿಸಲು ವಿದ್ಯಾರ್ಥಿಗಳು ವಿಭಿನ್ನ ಹಾದಿ ತುಳಿದರು. ನೂರಾರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿಯೇ ಶಾರ್ಟ್ಸ್ ಧರಿಸಿ ಬಂದು ಕುಲಪತಿಗಳ ಕಚೇರಿ ಮುಂದೆ ನಿಂತು ಪ್ರತಿಭಟನೆ ನಡೆಸಿದರು.

ನಮ್ಮ ಬಟ್ಟೆಗಳನ್ನು ಬದಲಿಸುವಂತೆ ಹೇಳುವ ಬದಲು ನಿಮ್ಮ ಕೊಳಕು ಮನಸ್ಥಿತಿಯನ್ನು ಬದಲಿಸಿಕೊಳ್ಳಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರೊಫೆಸರ್ ನಾಗರಾಜ್ ಅವರು ಈ ಹೇಳಿಕೆಯನ್ನು ತಂದೆಯ ಸ್ಥಾನದಲ್ಲಿ ನಿಂತು ನೀಡಿದ ಸಲಹೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರಾದರೂ, ವಿದ್ಯಾರ್ಥಿಗಳು ಅದನ್ನು ಕಿಂಚಿತ್ತೂ ಒಪ್ಪಲಿಲ್ಲ. ಕ್ಷಮೆಯಾಚನೆ ಮಾಡಲೇಬೇಕು ಎಂದು ಪಟ್ಟು ಹಿಡಿದರು.

ಪ್ರೊಫೆಸರ್ ನಾಗರಾಜ್ ಅವರಿಗೆ ಇಂತಹ ವಿವಾದಗಳು ಹೊಸದೇನಲ್ಲ. 2016ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಅವರು ವಿದ್ಯಾರ್ಥಿನಿಯೊಬ್ಬಳ ಬಟ್ಟೆಯ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು.

ಅಂದು ಕೂಡ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಒಬ್ಬ ಹಿರಿಯ ಪ್ರೊಫೆಸರ್ ಪದೇ ಪದೇ ಇಂತಹ ಲಿಂಗಭೇದದ ಹೇಳಿಕೆಗಳನ್ನು ನೀಡುತ್ತಿರುವುದು ಅವರ ವ್ಯವಸ್ಥಿತ ಪಿತೃಪ್ರಧಾನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

32 ವರ್ಷಗಳ ಅನುಭವದ ಮೇಲೆ ಕರಿನೆರಳು

ಒಡಿಶಾ ಮತ್ತು ಜಬಲ್‌ಪುರದ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ನಾಗರಾಜ್ ಅವರು ವಿದೇಶಿ ವಿವಿಗಳಲ್ಲೂ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾನೂನು ಕಲಿಸುವ ಮತ್ತು ಸಂವಿಧಾನದ ಸಮಾನತೆಯನ್ನು ಎತ್ತಿ ಹಿಡಿಯಬೇಕಾದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಈ ರೀತಿ ಲೈಂಗಿಕ ಕಿರುಕುಳವನ್ನು ಸಮರ್ಥಿಸುವಂತೆ ಮಾತನಾಡಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದ್ದು, ಕುಲಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ನೋಡಿ: ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ | ಡಾ ಸಿದ್ದಲಿಗಯ್ಯ | ಪಿಚ್ಚಳ್ಳಿ ಶ್ರೀನಿವಾಸ Janashakthi Media

Donate Janashakthi Media

Leave a Reply

Your email address will not be published. Required fields are marked *