ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು

ಬೆಂಗಳೂರು : ನಾನೊಬ್ಬ ವೈದ್ಯನಾಗಿ ಹೇಳುತ್ತಿದ್ದೇನೆ. ಪ್ರಧಾನಿ ಪರಿಹಾರ ನಿಧಿ (ಪಿಎಂ ಕೇರ್ಸ್‌ ಫಂಡ್‌) ಯೋಜನೆಯಡಿ ರಾಜ್ಯಕ್ಕೆ ಬಂದಿರುವ 1500 ವೆಂಟಿಲೇಟರ್‌ಗಳು ನಕಲಿ. ಸರ್ಕಾರಿ ಆಸ್ಪತ್ರೆಯ ವೈದ್ಯರೂ ಈ ವೆಂಟಿಲೇಟರ್‌ಗಳನ್ನು ಬಳಸುತ್ತಿಲ್ಲ ಎಂದು ಕುಣಿಗಲ್‌ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಪರಿಹಾರ ನಿಧಿಯ ಯೋಜನೆಯಿಂದ ರಾಜ್ಯಕ್ಕೆ ನೀಡಿರುವ 1500 ವೆಂಟಿಲೇಟರ್‌ಗಳು ನಕಲಿ. ವೆಂಟಿಲೇಟರ್‌ಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರೂ ಬಳಸುತ್ತಿಲ್ಲ. ಬೇಕಿದ್ದರೆ ಯಾವುದೇ ಆಸ್ಪತ್ರೆಗೆ ಹೋಗಿ ವಿಚಾರಿಸಿ ನೋಡಿ. ಜನರ ಪ್ರಾಣ ಉಳಿಸಲು ಇನ್ವೇಸಿವ್‌ ವೆಂಟಿಲೇಟರ್‌ಗಳು ಬೇಕು. ಆಸ್ಪತ್ರೆಗಳಿಗೆ ನೀಡಿರುವ ವೆಂಟಿಲೇಟರ್‌ಗಳಲ್ಲಿ ಈ ಸೌಲಭ್ಯ ಇಲ್ಲ. ಸರ್ಕಾರ ಹೇಳುತ್ತಿರುವುದಕ್ಕೂ ವಾಸ್ತವ ಚಿತ್ರಣಕ್ಕೂ ಒಂದೂ ಸಂಬಂಧವಿಲ್ಲ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ. ಕೋವಿಡ್‌ ನಿಯಂತ್ರಣ, ಸೋಂಕಿತರಿಗೆ ಸೂಕ್ತ ಆರೋಗ್ಯ ಸೌಲಭ್ಯ, ಚಿಕಿತ್ಸೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಸರ್ಕಾರ ವೆಂಟಿಲೇಟರ್‌ ಬೆಡ್‌ ಹಾಗೂ ರೆಮ್‌ಡೆಸಿವಿರ್‌ ಔಷಧ ಸಮಸ್ಯೆ ಇಲ್ಲ ಎಂದು ಹೇಳುತ್ತಿರುವುದೆಲ್ಲವೂ ಸುಳ್ಳು. ರೆಮ್‌ಡೆಸಿವಿರ್‌ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೆಡ್‌ಗಳು ಖಾಲಿ ಇಲ್ಲ. ಮಾಧ್ಯಮದವರು ಸೇರಿ ಯಾರು ಬೇಕಾದರೂ ಪರಿಶೀಲಿಸಿ. ಒಂದೇ ಒಂದು ಬೆಡ್‌ ಖಾಲಿ ಇರುವುದನ್ನು ಹುಡುಕಿಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಕೊರೋನಾದ ಎರಡನೇ ಅಲೆಗೆ ನಮ್ಮ ಸರ್ಕಾರಗಳೇ ಕಾರಣ. ಆಕ್ಸಿಜನ್‌ ಕೊರತೆಗೆ ಸರ್ಕಾರವೇ ನೇರ ಹೊಣೆ. ರಾಜ್ಯದಲ್ಲಿ ಕೈಗಾರಿಕಾ ಆಕ್ಸಿಜನ್‌ ಸಾಕಷ್ಟಿದೆ. ಇದನ್ನು ಹಾಸ್ಪಿಟಲ್‌ ಆಕ್ಸಿಜನ್‌ಗೆ ಪರಿವರ್ತಿಸಬಹುದು. ಆದರೂ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಎಚ್ಚೆತ್ತು ಬಿಗಿ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎಂದು ರಂಗನಾಥ ಎಚ್ಚರಿಸಿದ್ದಾರೆ.

ನಕಲಿ ವೆಂಟಿಲೇಟರ್ ಎಂದ ರಾಜಸ್ಥಾನ ಸರಕಾರ : ಕೊರೋನ ಸೋಂಕು ಚಿಕಿತ್ಸೆಯಲ್ಲಿ ಬಳಸಲು ಪಿಎಂ ಕೇರ್ಸ್ ನಿಧಿಯಡಿ ಪೂರೈಸಿರುವ ವೆಂಟಿಲೇಟರ್‌ಗಳು ದೋಷಯುಕ್ತವಾಗಿವೆ ಎಂದು ರಾಜಸ್ತಾನ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ರಾಜ್ಯದಾದ್ಯಂತದ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಂದ ಮಾಹಿತಿ ಪಡೆದ ಬಳಿಕ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ರಾಜಸ್ತಾನದ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವೈಭವ್ ಗಾಲ್ರಿಯಾ ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಪಿಎಂ ಕೇರ್ಸ್ ನಿಧಿಯಡಿ ಒದಗಿಸಲಾದ 85 ವೆಂಟಿಲೇಟರ್‌ಗಳು ದೋಷಪೂರ್ಣವಾಗಿದೆ. 1ರಿಂದ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಿದ ಬಳಿಕ ವೆಂಟಿಲೇಟರ್‌ಗಳು ಸ್ತಬ್ಧವಾಗುತ್ತವೆ. ತುರ್ತು ಸೇವಾ ವಿಭಾಗದಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಪಿಎಂ ಕೇರ್ಸ್ ವೆಂಟಿಲೇಟರ್‌ಗಳ ಬಗ್ಗೆ ವಿಶ್ವಾಸವಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಉದಯ್‌ಪುರದ ಟಾಗೋರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಲಖನ್ ಪೊಸ್ವಾಲ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *