“ವೆನೆಜುವೇಲಾದ ಮೇಲೆ ಪೂರ್ಣ ಯುದ್ಧ ಹೂಡಿದರೆ, ಯು.ಎಸ್ ಗೆ ಅದು ಇನ್ನೊಂದು ವಿಯೆಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ!”

ವೆನೆಜುವೇಲಾದ ಮೇಲೆ ದಾಳಿ ಮತ್ತು ಅಧ್ಯಕ್ಷ ಮದುರೊ ಅವರ ಅಪಹರಣ ಇಡೀ ಜಗತ್ತಿಗೆ ಆಘಾತಕಾರಿ ಸುದ್ದಿ. ಅಂತರರಾಷ್ಟ್ರೀಯ ಕಾನೂನುಗಳ ಇಂತಹ ನಗ್ನ ಉಲ್ಲಂಘನೆ ಗೆ  ಯು.ಎಸ್ ಉದ್ದೇಶಗಳೇನು? ಇರಾಕ್, ಲಿಬ್ಯ ಗಳಂತೆ ವೆನೆಜುವೇಲಾದ ಮೇಲೂ ಯು.ಎಸ್ ಪೂರ್ಣ ಯುದ್ಧ ನಡೆಸುತ್ತಾ ?  ಮುಂದೇನು ?  – ಈ  ಎಲ್ಲ ವಿಷಯಗಳ ಬಗ್ಗೆ ಗುರುರಾಜ ದೇಸಾಯಿ ಜನಶಕ್ತಿ ಮೀಡಿಯಾಕ್ಕೆ ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ ವಸಂತರಾಜ ಎನ್.ಕೆ ಜತೆ ಮಾತಾಡಿದ್ದಾರೆ. ಸಂದರ್ಶನದ ಪರಿಷ್ಕೃತ ಪಠ್ಯ ರೂಪ

 1. ಕಳೆದ ಶನಿವಾರ ಅಂದರೆ, ಜನವರಿ 3ರಂದು ಮಧ್ಯಾಹ್ನದ (ಭಾರತೀಯ ಸಮಯ) ಹೊತ್ತಿಗೆ ಅತ್ಯಂತ ಅನಿರೀಕ್ಷಿತ ಆಘಾತಕಾರಿ ಸುದ್ದಿಯೊಂದು ಇಡೀ ಜಗತ್ತನ್ನು ಅಪ್ಪಳಿಸಿತು. ವೆನೆಜುವೇಲಾದ ಮೇಲೆ (ಸ್ಥಳೀಯ ಸಮಯದ ಪ್ರಕಾರ ಮಧ್ಯರಾತ್ರಿಯಲ್ಲಿ ) ರಾಜಧಾನಿ ಕರಾಕಸ್ ಯಲ್ಲಿ ಯು.ಎಸ್ ಪಡೆಗಳು ವಿಮಾನದಾಳಿ ಮಾಡಿ, ಅಧ್ಯಕ್ಷ ನಿಕೊಲಸ್ ಮದುರೊ ಮತ್ತು ಅವರ ಪತ್ನಿಯನ್ನು ಅಪಹರಣ ಮಾಡಿ ನ್ಯೂಯಾರ್ಕ್ ಗೆ ಒಯ್ದವು. ಮದುರೊ ಅವರನ್ನು ಮಾದಕದ್ರವ್ಯ-ಭಯೋತ್ಪಾದನೆಯ (ನರ್ಕೊ-ಟೆರರಿಸಂ) ಆಪಾದನೆ ಮೇಲೆ ಬಂಧಿಸಲಾಗಿದೆ. ಅವರನ್ನು ಈ ಆಪಾದನೆ ಮೇಲೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಟ್ರಂಪ್ ಹೇಳಿದರು. ಏನಿದು ನರ್ಕೊ-ಟೆರರಿಸಂ? ಇದು ಅಂತರರಾಷ್ಟ್ರೀಯ ಅಥವಾ ಯು.ಎಸ್ ಕಾನೂನು-ನಿಯಮಗಳ ಪ್ರಕಾರ ಸರಿನಾ? ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ವೆನೆಜುವೇಲಾದ ಒಳಗೆ ಯು.ಎಸ್ ನ ಈ ಕಾರ್ಯಾಚರಣೆ ಆಘಾತಕಾರಿ ಖಂಡಿತ, ಆದರೆ ತೀರಾ ಅನಿರೀಕ್ಷಿತವೇನಲ್ಲ. ಯಾಕೆಂದರೆ 2025ರ ಸೆಪ್ಟೆಂಬರ್ ನಲ್ಲೇ ಕೆರಿಬಿಯನ್ ಸಮುದ್ರದಲ್ಲಿ (ಅಂದರೆ ಯು.ಎಸ್ ಮತ್ತು ವೆನೆಜುವೇಲಾದ ನಡುವೆ ಇರುವ ಸಮುದ್ರ ಪ್ರದೇಶ) ಇತ್ತೀಚಿನ ದಶಕಗಳಲ್ಲೇ ಕಂಡಿರದ ಭಾರೀ ನೌಸೇನಾ ಪಡೆಗಳು ಮತ್ತಿತರ ಸಶಸ್ತ್ರ ಪಡೆಗಳನ್ನು ಜಮಾಯಿಸಲಾಗಿತ್ತು. ಈ ಜಮಾವಣೆಯಲ್ಲಿ ಹತ್ತು ವಿವಿಧ ವಿಶೇಷ ಕಾರ್ಯಾಚರಣೆ ಮಾಡಬಲ್ಲ ಟೊಮೊಹಾಕ್ ನಂತಹ ಕ್ಷಿಪಣಿಗಳು, ಶಸ್ತ್ರಗಳು, ಎಫ್-35 ನಂತಹ ಯುದ್ಧ ವಿಮಾನಗಳು, ಸಬ್ ಮೇರಿನ್ ಗಳು  ಇದ್ದವು. ದಕ್ಷಿಣ ಮತ್ತು ಮಧ್ಯ ಅಮೆರಿಕದಿಂದ ಮಾದಕದ್ರವ್ಯಗಳನ್ನು ಯು.ಎಸ್ ಗೆ  ಗ್ಯಾಂಗ್ ಗಳು ವ್ಯವಸ್ಥಿತವಾಗಿ ಸಾಗಾಣಿಕೆ ಮಾಡುತ್ತಿದ್ದು ಇವನ್ನು ನಿಲ್ಲಿಸುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ತುರ್ತಿನದು ಎಂದು ಹೇಳಲಾಯಿತು.  ಇಂತಹ 19 ಗ್ಯಾಂಗ್ ಗಳನ್ನು ವಿದೇಶಿ ಭಯೋತ್ಪಾದಕ ಗುಂಪುಗಳೆಂದು ಘೋಷಿಸಲಾಯಿತು. ಮದುರೊ ಅವರು ಇಂತಹ ಗ್ಯಾಂಗಿನ ನಾಯಕರೆಂದು ಕರೆದು ಅವರನ್ನು ಹಿಡಿದುಕೊಟ್ಟವರಿಗೆ 5 ಕೋಟಿ (50 ಮಿಲಿಯ) ಡಾಲರ್ ಬಹುಮಾನ ಘೋಷಿಸಲಾಯಿತು. ಅಧ್ಯಕ್ಷ ಪದವಿಯಿಂದ ಕೆಳಗಿಳಿಯಬೇಕೆಂದು ಬೆದರಿಕೆ ಹಾಕಲಾಯಿತು. ವೆನೆಜುವೇಲಾದಿಂದ ತೈಲ ಒಯ್ಯುತ್ತಿದ್ದ ಎರಡು ಹಡಗಗಳನ್ನು “ದಿಗ್ಬಂಧನಕ್ಕೊಳಗಾದ ತೈಲ” ಇದೆ ಎಂಬ ಕಾರಣವೊಡ್ಡಿ  ಕಡಲಕಳ್ಳರಂತೆ  ತಡೆದು ನಿಲ್ಲಿಸಲಾಯಿತು.

ಇದನ್ನೂ ಓದಿ: ವೆನೆಜುವೆಲಾ ದೇಶದ ಮೇಲಿನ ಅಮೇರಿಕಾ ಧಾಳಿ ಖಂಡಿಸಿ ಮಂಗಳೂರಿನಲ್ಲಿ ಸಮಾನ ಮನಸ್ಕರಿಂದ ಪ್ರತಿಭಟನೆ

ಆದರೆ ಮಾದಕದ್ರವ್ಯಗಳ ಕಳ್ಳಸಾಗಾಣಿಕೆ ವಿರುದ್ಧ ಕಾರ್ಯಾಚರಣೆಯ ಜವಾಬ್ದಾರಿಯಿರುವ ಯು.ಎಸ್ ಸರಕಾರಿ ಸಂಸ್ಥೆ ಡಿ.ಇ.ಎ ಯ ವರದಿಯ ಪ್ರಕಾರವೇ 85%  ಮಾದಕದ್ರವ್ಯ  ಶಾಂತ (ಫೆಸಿಫಿಕ್) ಸಾಗರದ ಮೂಲಕ ಬರುತ್ತದೆ. ಕೇವಲ 15% ಕೆರಿಬಿಯನ್ ಸಮುದ್ರ ದ ಮೂಲಕ ಬರುತ್ತದೆ. ಅದರಲ್ಲೂ ಸಿಂಹ ಪಾಲು ಕೊಲಂಬಿಯದ್ದು. ವೆನೇಜುವಾಲಾ ದ ಪಾಲು ಬಹಳ ಕಡಿಮೆ. ಇದನ್ನೇ ಮಾದಕದ್ರವ್ಯ ಸಾಗಾಣಿಕೆಯ ಬಗ್ಗೆ ವಿಶ್ವಸಂಸ್ಥೆಯ ವರದಿ ಸಹ ಹೇಳುತ್ತದೆ.  ಮದುರೊ ಬಸ್ ಚಾಲಕನಾಗಿ ಕೆಲಸ ಮಾಡಿದ್ದು ಸಾಗಾಣಿಕೆ ಯೂನಿಯನ್ ನಾಯಕರಾಗಿ ಸೋಶಲಿಸ್ಟ್ ಪಕ್ಷದ ರಾಜಕೀಯಕ್ಕೆ ಬಂದು ಪಾರ್ಲಿಮೆಂಟ್ ಸದಸ್ಯರಾಗಿ ಬೆಳೆದವರು. ಅವರ ವಿರುದ್ಧ ದೇಶದೊಳಗೂ ಬೇರೆ ಯಾವ ದೇಶದಲ್ಲೂ ಇಂತಹ ಆಪಾದನೆಗಳಿಲ್ಲ.

ಕೆರಿಬಿಯನ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾಗರಿಕ ದೋಣಿಗಳ ಮೇಲೆ ವಿಮಾನ ದಾಳಿಯ ಸರಣಿ ಆರಂಭವಾಯಿತು. ಯಾವುದೇ ಪುರಾವೆಯಿಲ್ಲದೆ ಅವು ಮಾದಕದ್ರವ್ಯ ಸಾಗಿಸುತ್ತಿದ್ದ ಗ್ಯಾಂಗ್ ಗಳ ದೋಣಿಗಳು ಎಂದು ಆಫಾದಿಸಿ ಇಂಥಹ 35 ದೋಣಿಗಳ ಮೇಲೆ ಮಾಡಿದ ದಾಳಿಗಳಲ್ಲಿ 115 ಜನ ಸತ್ತರು. ವೆನೇಜುವೇಲಾದ ಕರಾವಳಿಯ ಮೇಲೆ ಹಲವು ಗಸ್ತು ಹಾರಾಟಗಳನ್ನು ನಡೆಸಲಾಯಿತು. ಕರಾವಳಿಯ ಒಂದು ಕಡೆ  ದಾಳಿ ಸಹ ಮಾಢಲಾಯಿತು. ಇವೆಲ್ಲ ನೋಡಿದರೆ ಇದು ;ಟಾರ್ಗೆಟ್ ಪ್ರಾಕ್ಟೀಸ್’ ಮಾತ್ರ. ಪ್ರಮುಖ ಕಾರ್ಯಾಚರಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯಿತ್ತು  ಆದರೆ ಅಧ್ಯಕ್ಷರನ್ನೇ ಅಪಹರಣ ಮಾಡಬಹುದು ಎಂಬುದು ಆಘಾತಕಾರಿಯೂ, ಅನಿರೀಕ್ಷಿತವೂ ಎರಡೂ ಆಗಿತ್ತು.

ಒಂದು ಸಾರ್ವಭೌಮ ದೇಶದ ಚುನಾಯಿತ ಅಧ್ಯಕ್ಷನ ಮೇಲೆ ಯಾವುದೇ ಪುರಾವೆಯಿಲ್ಲದೆ ಆಪಾದನೆಗಳನ್ನು ಮಾಡುವುದು ಮತ್ತು ಹೀಗೆ ಅಪಹರಣ ಮಾಡುವುದು ವಿಶ್ವಸಂಸ್ಥೆಯ ಸನ್ನದು (ಚಾರ್ಟರ್ ) ಮತ್ತು ಹಲವು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ.   ಮಾತ್ರವಲ್ಲ ಹಲವು ಸೆನೆಟರ್ ಗಳು ಕಾನೂನುತಜ್ಞರು ಹೇಳಿರುವಂತೆ ಇದು ಯು.ಎಸ್ ಸಂವಿಧಾನ ಮತ್ತು ಕಾನೂನುಗಳ ಉಲ್ಲಂಘನೆ ಸಹ. ವಿದೇಶಗಳಲ್ಲಿ   ಯಾವುದೇ ಮಿಲಿಟರಿ ಕಾರ್ಯಾಚರಣೆ ಮಾಡಲು ವಿದೇಶ ವ್ಯವಹಾರಗಳ ಸೆನೆಟ್ ಸಮಿತಿಯ ಸಮ್ಮತಿ ಬೇಕು.  ಅದಕ್ಕಾಗಿಯೇ ಈ ‘ನರ್ಕೊ-ಟೆರರಿಸಂ’ ಕಟ್ಟುಕತೆ ಹೆಣೆದಿರುವುದು ಎನ್ನಲಾಗಿದೆ. ಯು.ಎಸ್ ದೇಶದ ಮಾದಕ ದ್ರವ್ಯ -ನಿರೋಧಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಆಪಾದಿಸಿದರೆ ಅದು ‘ವಿದೇಶಿ’ ಅಥವಾ ‘ಅಂತರರಾಷ್ಟ್ರೀಯ’ ವ್ಯವಹಾರ ಆಗುವುದಿಲ್ಲ ವೆಂಬ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ತೆಳುವಾದ ಪ್ರಯತ್ನವಷ್ಟೇ.

2. ಈ ಕಾರ್ಯಾಚರಣೆಗೆ ಯು.ಎಸ್ ಮತ್ತು ಜಗತ್ತಿನ ವಿವಿಧ ದೇಶಗಳ ಜನತೆ, ಸರಕಾರಗಳ ಪ್ರತಿಕ್ರಿಯೆ ಏನಿದೆ?

ಈ ಅಪರಾಧಿ ಕೃತ್ಯಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಶ್ಯ. ಚೀನಾ, ಮೆಕ್ಸಿಕೊ, ಕ್ಯೂಬಾ, ಬ್ರೆಜಿಲ್, ಇರಾನ್, ದಕ್ಷಿಣ ಆಫ್ರಿಕಾ, ಕೊಲಂಬಿಯ, ಮತ್ತು ಇತರ ಹಲವು ಲ್ಯಾಟಿನ್ ಅಮೆರಿಕದ ದೇಶಗಳ ಸರಕಾರಗಳು ಒಂದು ದೇಶದ ಸಾರ್ವಭೌಮತ್ವ ಮತ್ತು  ಅಂತರರಾಷ್ಟ್ರೀಯ ಕಾನೂನು-ನಿಯಮಗಳ ಉಲ್ಲಂಘನೆಯೆಂದು  ಕಟುವಾಗಿ ಖಂಡಿಸಿವೆ. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸಹ ಇದು ಅಂತರರಾಷ್ಟ್ರೀಯ ಕಾನೂನು-ನಿಯಮಗಳ ಉಲ್ಲಂಘನೆ ಎಂದಿದ್ದಾರೆ.  ಯು.ಎಸ್ ನ ಸಹಚರ ದೇಶಗಳಾದ ಕೆನಡಾ, ಯುರೋ ಕೂಟದ ದೇಶಗಳೂ ತಕ್ಷಣ ಪ್ರತಿಕ್ರಿಯಿಸದೆ ಬಹಳ ತಡವಾಗಿ ಪ್ರತಿಕ್ರಿಯಿಸಿದ್ದು, ಇದನ್ನು ‘ಕಳವಳಕಾರಿ ಬೆಳವಣಿಗೆ’ಯೆಂದು ಕರೆದಿವೆ.

ಯು.ಕೆ, ಜರ್ಮನಿ, ಫ್ರಾನ್ಸ್, ಇಟಲಿ ಯಂತಹ ಪ್ರಮುಖ ದೇಶಗಳು ಯು.ಎಸ್ ಕಾರ್ಯಾಚರಣೆಯನ್ನು ಖಂಡಿಸದಿದ್ದರೂ, ಈ ಸಂಘರ್ಷ ಮುಂದೊಯ್ಯಬಾರದು ಶಾಂತಿಯುತವಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂಭರ್ಥ ಬರುವಂತೆ ಹೇಳಿಕೆ ನೀಡಿವೆ. ಯು.ಎಸ್ ಕಾರ್ಯಾಚರಣೆಯಿಂದ ತಮ್ಮ ದೂರವನ್ನು ಕಾಯ್ದುಕೊಂಡಿವೆ. ಯು.ಕೆ ಪ್ರಧಾನಿ ಈ ಕಾರ್ಯಾಚರಣೆಯಲ್ಲಿ ತಮ್ಮ ದೇಶದ ಯಾವುದೇ ಪಾತ್ರವಿರಲಿಲ್ಲ ಎನ್ನುವಷ್ಟು ಮುಂದೆ ಹೋಗಿದ್ದಾರೆ.

ಸ್ಪೈನ್ ಈ ಕಾರ್ಯಾಚರಣೆ ಸಮರ್ಥನೀಯವಲ್ಲ ಎಂದು, ಮುಂದೆ ಇದನ್ನು ಶಾಂತಿಯುತವಾಗಿ ಬಗೆಹರಿಸಲು ತಾನು ಮಧ್ಯಸ್ತಿಕೆ ನಡೆಸಲು ಸಿದ್ಧವೆಂದು ಹೇಳಿದೆ. ಈ ನಿಟ್ಟಿನಲ್ಲಿ ಬಾರತದ ಪ್ರತಿಕ್ರಿಯೆ ತೀರಾ ಅವಮಾನಕರ. ಸಾಮ್ಆಜ್ಯಶಾಹಿ-ವಿರೋಧಿ ಅಲಿಪ್ತ ಚಳುವಳಿಯ ನಾಯಕನಾಗಿದ್ದ ಭಾರತದ ಸರಕಾರಕ್ಕೆ ಈ ಅಪರಾಧಿ ಕೃತ್ಯವನ್ನು ಖಂಡಿಸುವ ಧೈರ್ಯವಿಲ್ಲವೆಂಬುದು ನಾಚಿಕೆಗೇಡಿನ ಸಂಗತಿ.

ಈ ದೇಶಗಳ ಸರಕಾರಗಳು ಅಧಿಕೃತವಾಗಿ ಏನೇ ಹೇಳಲಿ ಬಿಡಲಿ, ಅಲ್ಲಿನ ಜನ ಭಾರೀ ಪ್ರತಿಭಟನೆಗಳ ಮೂಲಕ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ. ಯು.ಎಸ್, ಯುರೋಪಿನ ಹೆಚ್ಚಿನ ರಾಜಧಾನಿ ಮತ್ತು 100 ಕ್ಕೂ ಹೆಚ್ಚುಪ್ರಮುಖ ನಗರಗಳಲ್ಲಿ ಸ್ವಯಂ-ಸ್ಫೂರ್ತ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. “ವೆನೆಜುವೇಲಾದ ವಿರುದ್ಧ ಯುದ್ಧ ಬೇಡ”, “ಫ್ಯಾಸಿಸ್ಟ್ ಟ್ರಂಪ್ ಗೆ ಧಿಕ್ಕಾರ” ಮುಂತಾದ ಘೋಷಣೆಗಳು ಕಂಡು ಬಂದಿವೆ. ಕೇಳಿಸಿವೆ. ಭಾರತದಲ್ಲೂ ಹಲವು ಪ್ರದರ್ಶನಗಳು ನಡೆದಿವೆ.

3. ನರ್ಕೊ-ಟೆರರಿಸಂ ಬರಿಯ ಕಟ್ಟು ಕತೆ. ನಿಜವಾದ ಕಾರಣ ವೆನೆಜುವೇಲಾದ ತೈಲ ನಿಕ್ಷೇಪ ಎಂಬುದು ಜಗಜ್ಜಾಹೀರವಾಗಿದೆಯಲ್ಲ. ಇವತ್ತಿನ ಜಾಗತಿಕ ತೈಲ ಪೂರೈಕೆಯಲ್ಲಿ ವೆನೆಜುವೇಲಾದ ಪಾಲು ಕೇವಲ ಶೇ.1 ಇದ್ದರೂ, ಅಲ್ಲಿರುವ ತೈಲ ನಿಕ್ಷೇಪ (ಅಂದರೆ ಇನ್ನೂ ಬಳಸದ್ದು) ವಿಶ್ವದ ಶೇ.20 ಮತ್ತು ಅತಿ ಹೆಚ್ಚು (ಸೌದಿ ಅರೇಬಿಯಕ್ಕಿಂತಲೂ ಹೆಚ್ಚು). ಟ್ರಂಪ್ ಭಾಷಣದಲ್ಲೂ ವೆನೆಜುವೇಲಾದ ತೈಲ ಯು.ಎಸ್ ಗೆ ಸೇರಿದ್ದು ಎಂದು ಹೇಳಿದರಲ್ಲ. ಭವಿಷ್ಯದ ತೈಲದ ಮೇಲೆ ನಿಯಂತ್ರಣಕ್ಕಾಗಿಯೇ ಈ ಭೀಕರ ಕಾರ್ಯಾಚರಣೆಯೇ?

ತೈಲ  ಪ್ರಮುಖ ಕಾರಣ ನಿಜ. ತೈಲ ಅಲ್ಲದೆ  ಅಲ್ಲಿ ಬಾಕ್ಸೈಟ್ (ಅಲ್ಯುಮಿನಿಯಂ ಮೂಲ), ಕಲ್ಲಿದ್ದಲು, ನಿಕ್ಕೆಲ್ ಮತ್ತು ಹಲವು ಅಪರೂಪದ ಲೋಕ/ಖನಿಜ ಸಂಪತ್ತು ಸಹ ಇದೆ.  ಈ ಪ್ರಾಕೃತಿಕ ಸಂಪನ್ಮೂಲದ ಅಸ್ತಿತ್ವದ ಜತೆಗೆ ವೆನೆಜುವೇಲಾದಲ್ಲಿ ಇನ್ನೂ ಕೆಲವು ವಿಶಿಷ್ಟ ಸಂಗತಿಗಳು ಸೇರಿಕೊಂಡಿವೆ.

ಈ ವಿಶಿಷ್ಟ ಸಂಗತಿಗಳು ವೆನೆಜುವೇಲಾದಲ್ಲಿ 1998ರಲ್ಲಿ ಚವೇಝ್ ಆರಂಭಿಸಿದ ‘ಬೊಲಿವಾರಿಯನ್ ಕ್ರಾಂತಿ’ಯಿಂದ ಆರಂಭವಾಯಿತು.  ಇದಕ್ಕಿಂತ ಹಿಂದೆ ಯು.ಎಸ್ -ಪರ ಸರಕಾರಗಳು ಆಡಳಿತ ನಡೆಸುತ್ತಿದ್ದು 1999ರಲ್ಲಿ ಹೊಸ ಸಂವಿಧಾನ ಅಂಗೀಕರಿಸಲಾಯಿತು. 2001ರಲ್ಲಿ ಚವೇಝ ಸರಕಾರ ತಂದ ಹೈಡ್ರೋಕಾರ್ಬನ್ ಕಾನೂನು ಪ್ರಕಾರ ದೇಶದಲ್ಲಿರುವ ಎಲ್ಲ ತೈಲ ಸಂಬಂಧಿತ ಪ್ರಾಕೃತಿಕ ಸಂಪತ್ತು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲಾಯಿತು.  ಅದರ ಬಳಕೆ, ರಫ್ತು ಗಳಲ್ಲಿ ತೊಡಗುವ ಕಂಪನಿಗಳು ಸರಕಾರಿ ಕಂಪನಿಯೊಂದಿಗೆ ಜಂಟಿ ಉದ್ಯಮವಾಗಿ ನಡೆಸಬೇಕು. 2007ರಲ್ಲಿ ಇದನ್ನು ಜಾರಿ ಮಾಡಲು ಯತ್ನಿಸಿದಾಗ ಅಲ್ಲಿದ್ದ ಎರಡು ದೈತ್ಯ ಯು.ಎಸ್ ತೈಲ ಕಂಪನಿಗಳಲ್ಲಿ ಒಂದು – ಶೇವ್ರಾನ್ ಈ ನಿಯಮ ಒಪ್ಪಿಕೊಂಡಿತು. ಆದರೆ ಇನ್ನೊಂದು – ಎಕ್ಸಾನ್-ಮೊಬಿಲ್ ಅದನ್ನು ನಿರಾಕರಿಸಿ ಹೊರನಡೆಯಿತು. ಅದರ ತೈಲ ಸ್ಥಾವರಗಳನ್ನು ರಾಷ್ಟ್ರೀಕರಿಸಲಾಯಿತು. ಇದು ಯು.ಎಸ್ ಮತ್ತು ವೆನೆಜುವೇಲಾ ನಡುವೆ ಸಂಘರ್ಷದ ಮೂಲ. ಪ್ರಾಕೃತಿಕ ಸಂಪತ್ತಿನ  ರಾಷ್ಟ್ರೀಯ ಒಡೆತನವನ್ನು ಕಾನೂನು ಮೂಲಕ ಸ್ತಾಪಿಸಿದ್ದು ಒಂದು ವಿಶಿಷ್ಟ ಕಾರಣ.

ಚವೇಝ್ ಆರಂಭಿಸಿದ ‘ಬೊಲಿವಾರಿಯನ್ ಕ್ರಾಂತಿ’ ಯ ಮೂರು ಮುಖ್ಯ ಸಾಧನೆಗಳು ವೆನೇಜುವೇಲಾ ಯು.ಎಸ್ ಆಕ್ರೋಶಕ್ಕೆ ಕಾರಣವಾದವು.  ಚವೇಝ್ ಸರಕಾರ ದೇಶದ ತೈಲ ಸಂಪತ್ತಿನ ಆದಾಯದ ಗಮನಾರ್ಹ ಭಾಗವನ್ನು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ, ಬಡತನ ನಿವಾರಣೆಯ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿತು. ರೈತರು, ಕಾರ್ಮಿಕರ ಸಹಕಾರಿ ಉತ್ಪಾದನಾ ಘಟಕಗಳನ್ನು ಸ್ತಾಪಿಸಲಾಯಿತು. 1998ರ ಮೊದಲು ಸರಕಾರದಲ್ಲಿ ಸಮಾಜದಲ್ಲಿ ಶ್ರೀಮಂತ ವರ್ಗ ಹೊಂದಿದ್ದ ಪೂರ್ಣ ಯಜಮಾನಿಕೆಗೆ ಕುತ್ತು ಬಂತು. ಬಡವರ-ರೈತರ-ಕಾರ್ಮಿಕರ ಬಲ ಹೆಚ್ಚಾಯಿತು. ಚವೇಝ್ ವೆನೆಜುವೇಲಾದಲ್ಲಿ ಜಾರಿ ಮಾಡಿದ  ಸಾಮಾಜಿಕ-ಆರ್ಥಿಕ-ರಾಜಕೀಯ ಬದಲಾವಣೆಯ ಮಾದರಿಯನ್ನು “ಚವಿಸ್ಮೊ’ ಅಥವಾ “21ನೇ ಶತಮಾನದ ಸಮಾಜವಾದ”ದ ಮಾದರಿ ಎಂದು ಜಾಗತಿಕವಾಗಿ ಚರ್ಚಿತವಾಗತೊಡಗಿತು.

ಚವೇಝ್ ಅವರ ಇನ್ನೊಂದು ಸಾಧನೆಯೆಂದರೆ ಲ್ಯಾಟಿನ್ ಅಮೆರಿಕದ ದೇಶಗಳೊಂದಿಗೆ ಪ್ರಾದೇಶಿಕ ಸಹಕಾರ ಸೌಹಾರ್ದತೆಗೆ ಸಾಂಸ್ಥಿಕ ಚೌಕಟ್ಟಿಗೆ ಬುನಾದಿ ಹಾಕಿದ್ದು. ಇದರಲ್ಲಿ ತೈಲವನ್ನು   ಕ್ಯೂಬಾ, ಕೆರಿಬಿಯನ್ ಮುಂತಾದ ದೇಶಗಳಿಗೆ ಅಗ್ಗದ ದರದಲ್ಲಿ ಕೊಟ್ಟದ್ದು ಸೇರಿದೆ. ALBA (ಅಮೆರಿಕದ ಬೊಲಿವಾರಿಯನ್ ಕೂಟ) , ಪೆಟ್ರೊಕೆರಿಬಿ, UNASUR (ದಕ್ಷಿಣ ಅಮೆರಿಕದ ದೇಶಗಳ ಒಕ್ಕೂಟ) TELESUR (ದಕ್ಷಿಣ ಅಮೆರಿಕದ ಸಾಮಾನ್ಯ ಟೆಲಿವಿಶನ್ ವಾಹಿನಿ) ಇಂತಹ ಸಂಘಟನೆಗಳು. ಈ ಸಂಘಟನೆಗಳು ಚವೇಝ್ ನಾಯಕತ್ವದಲ್ಲಿ  ಯು.ಎಸ್ ಪ್ರಭಾವ, ಒತ್ತಡಕ್ಕೆ ಪ್ರತಿರೋಧ ಒಡ್ಡುವಲ್ಲಿ ಮಹತ್ವದ ಪಾತ್ರ ವಹಿಸಿದವು.  ಇವೆಲ್ಲದರ ಪ್ರಭಾವ ಲ್ಯಾಟಿನ್ ಅಮೆರಿಕದ ಹೆಚ್ಚಿನ ದೇಶಗಳ ರಾಜಕೀಯದ ಮೇಲೆ ಆಗಿ ಹಲವು ದೇಶಗಳಲ್ಲಿ ಎಡ ಅಥವಾ ಎಡ-ನಡುಪಂಥೀಯ ಒಕ್ಕೂಟದ ಅಧ್ಯಕ್ಷರು ಸರಕಾರಗಳು ಚುನಾಯಿತವಾದವು. ಈ ಟ್ರೆಂಡ್ “ಎಳೆಗೆಂಪು ಅಲೆ”(ಪಿಂಕ್ ಟೈಡ್) ಎಂದು ಪ್ರಸಿದ್ಧವಾಯಿತು.

ಚವೇಝ್ ಅವರ ಮೂರನೆಯ ಸಾಧನೆಯೆಂದರೆ ಕ್ಯೂಬಾದ ಜತೆ ಸೇರಿ ಲ್ಯಾಟಿನ್ ಅಮೆರಿಕದಲ್ಲಿ  ಮಾತ್ರವಲ್ಲ ಜಾಗತಿಕವಾಗಿ ಯು.ಎಸ್ ಅಧಿಪತ್ಯಕ್ಕೆ ಸವಾಲು ಹಾಕಿ ಸಾಮ್ರಾಜ್ಯಶಾಹಿ-ವಿರೋಧೀ ಕೂಟ ಕಟ್ಟಿದ್ದು. ಚೀನಾ ಮತ್ತು ರಶ್ಯಾದ ಜತೆ ಆರ್ಥಿಕ ವ್ಯಾಪಾರ ಸಂಬಂಧಗಳನ್ನು ಆರಂಭಿಸಿ ಯು.ಎಸ್ ಗೆ ಸೆಡ್ಡು ಹೊಡೆದದ್ದು. ಈ ಕ್ರಮಗಳನ್ನು ಇತರ ಲ್ಯಾಟಿನ್ ಅಮೆರಿಕದ ದೇಶಗಳು ಅನುಸರಿಸಲಾರಂಭಿಸಿದವು.

4. ಚವೇಝ್ ನಂತರ ಈ ಸಾಧನೆಗಳು ಮುಂದುವರೆದವೇ? ಮದುರೊ ಚವೇಝ ರಷ್ಟು ಪ್ರಭಾವಿ ನಾಯಕರಲ್ಲವಾದ್ದರಿಂದ ವೆನೆಜುವೇಲಾ ದುರ್ಬಲವಾಗಿದ್ದರಿಂದ ಯು.ಎಸ್ ದಾಳಿ ಮಾಡಲು ನಿರ್ಧರಿಸಿತೆ ?

ಮದುರೊ ಚವೇಝರಷ್ಟು ಪ್ರಭಾವಿ ನಾಯಕರಲ್ಲ, ನಿಜ. ಚವೇಝ್ ನಿಧನದ (2013) ನಂತರ ವೆನೆಜುವೇಲಾ ದುರ್ಬಲವಾಯಿತು ಎಂಬುದು ಸಹ ನಿಜ. ಆದರೆ ಅದು ಮದುರೊ ಅವರಿಂದಾಗಿ ಅಲ್ಲ. ಪ್ರಮುಖವಾಗಿ ಅಂತರರಾಷ್ಟ್ರೀಯವಾಗಿ ತೈಲದ ಬೆಲೆ ಮದುರಾ ಆಡಳಿತದ ಅವಧಿಯಲ್ಲಿ ಕುಸಿಯಿತು (2000 ದಿಂದ  ಸರಾಸರಿ ಪ್ರತಿ ಬ್ಯಾರೆಲ್ ಗೆ 50 ಡಾಲರಿನಿಂದ 2008ರ ವರೆಗೆ 190 ಡಾಲರ್ ವರೆಗೆ ಏರುತ್ತಾ ಹೋಗಿ 2007-2013  ಅವಧಿಯಲ್ಲಿ ಸರಾಸರಿ130 ಡಾಲರ್ ಇತ್ತು.  2014ರ ನಂತರದ ಅವಧಿಯಲ್ಲಿ ಬೆಲೆ ಕುಸಿದು ಸರಾಸರಿ 60-70 ಡಾಲರಿಗಿಳಿದಿದೆ.) ಇದೇ ಅವಧಿಯಲ್ಲಿ ಯು.ಎಸ್ ವೆನೆಜುವೇಲಾದ ಮೇಲೆ ಕ್ರೂರ ಆರ್ಥಿಕ ದಿಗ್ಬಂಧನಗಳನ್ನು ಹೇರಿತು. ಹಾಗಾಗಿ ಮದುರೋ ಅವರ ಅವಧಿ ಚವೇಝ್ ಅವಧಿಗಿಂತ ಭಾರೀ ಸವಾಲಿನದಾಗಿತ್ತು.

ಆದರೆ ಯು.ಎಸ್ ದಾಳಿಗಳು ತೈಲ ಮಾತ್ರವಲ್ಲ, ಮೇಲೆ ಹೇಳಿದ ವಿಶಿಷ್ಟ ಕಾರಣಗಳಿಂದಾಗಿ ಚವೇಝ್ ಕಾಲದಿಂದಲೂ ನಡೆಯುತ್ತಾ ಬಂದಿವೆ. ಯು.ಎಸ್ ಮೂರು ರೀತಿಯ – ರಾಜಕೀಯ, ಆರ್ಥಿಕ, ಮಿಲಿಟರಿ ದಾಳಿಗಳನ್ನು ನಡೆಸುತ್ತಾ ಬಂದಿದೆ.

ರಾಜಕೀಯವಾಗಿ ಮೂರು ದೊಡ್ಡ ಕ್ಷಿಪ್ರಕ್ರಾಂತಿಯ (2002ರಲ್ಲಿ ಚವೇಝ್ ವಿರುದ್ಧ, 2019 ಎಪ್ರಿಲ್ ಮತ್ತು 2020 ಎಪ್ರಿಲ್ ನಲ್ಲಿ ಮದುರೊ ವಿರುದ್ಧ) ಮೂಲಕ ಸರಕಾರ ಉರುಳಿಸುವ ಪ್ರಯತ್ನ ಮಾಡಲಾಯಿತು. ಹಲವು ಸಣ್ಣ ದಂಗೆ, ಪಿತೂರಿಗಳನ್ನು ಸಹ ಪ್ರಯತ್ನಿಸಲಾಯಿತು. ಬಲಪಂಥೀಯ ಗುಂಪುಗಳಿಗೆ ಯು.ಎಸ್ ( USAID, National Endowment ಮುಂತಾದ ಸಂಸ್ಥೆಗಳ ಮೂಲಕ) ಹಣ ಮತ್ತಿತರ ಸಹಾಯ ಮಾಡಿ ಸತತ ರಾಜಕೀಯ ಪ್ರತಿಭಟನೆ ದಂಗೆಗಳನ್ನು ಮಾಡಲು ಪ್ರಚೋದನೆ ನಡೆಸಲಾಯಿತು. ಇತ್ತೀಚೆಗೆ ನಗೆಪಾಟಲಾದ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮರಿಯಾ ಮಚಾದೊ ರಂತಹ ವ್ಯಕ್ತಿಗಳಿಗೆ ಕುಮ್ಮಕ್ಕು ಕೊಡಲಾಯಿತು. ಚವೇಝ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಅವರನ್ನು ಹಿಂದಕ್ಕೆ ಕರೆಯುವ ಜನಮತಸಂಗ್ರಹಕ್ಕೆ ಹಿಂಸಾತ್ಮಕ ಪ್ರಚಾರಾಂದೋಲನ ನಡೆಸಿದ್ದು ಆಕೆಯ ಮೊದಲ “ಶಾಂತಿ ಕೆಲಸ”ವಾಗಿತ್ತು.

ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !

ಯು.ಎಸ್ ಆರ್ಥಿಕ ದಿಗ್ಬಂಧನಗಳನ್ನು ಹೇರಿತು. ಯು.ಎಸ್ ಮತ್ತು ಯುರೋಪಿನಲ್ಲಿದ್ದ ವೆನೆಜುವೇಲಾದ ಹಣ ಮತ್ತು ಆಸ್ತಿಗಳನ್ನು ಸ್ಥಗಿತಗೊಳಿಸಲಾಯಿತು. ಐ.ಎಂ.ಎಫ್ ಸಾಲ ಕೊಡಲು ನಿರಾಕರಿಸಿತು. ತೈಲ ರಫ್ತಿನ ಮೇಲಿದ್ದ ನಿಷೇಧ ದೇಶದ ಮತ್ತು ಸರಕಾರದ ಆದಾಯದಲ್ಲಿ ಭಾರೀ ಕಡಿತ ಮಾಡಿತು.  ಎಲ್ಲ ರೀತಿಯ ಆಹಾರ, ಔಷಧಿ ಸೇರಿದಂತೆ ದಿನನಿತ್ಯದ ಆವಶ್ಯಕ ವಸ್ತುಗಳ ಕೊರತೆ, ಮತ್ತು ಭಾರೀ ಬೆಲೆ ಏರಿಕೆ. ಜನತೆಯ ಜೀವನ ದುರ್ಭರ ಮಾಡಿತು.  ಜನತೆಯ ಜೀವನ ಎಷ್ಟು ದುರ್ಭರವಾಯಿತೆಂದರೆ ಸುಮಾರು 80 ಲಕ್ಷ ಜನ ಬೇರೆಯ ದೇಶಗಳಿಗೆ ವಲಸೆ ಹೋದರು. ‘ಬೊಲಿವಾರಿಯನ್ ಕ್ರಾಂತಿ’ಯ ಮೊದಲ ಹತ್ತು ವರ್ಷಗಳಲ್ಲಿ ಜನಜೀವನ ಮಟ್ಟದಲ್ಲಿ ಸಾಧಿಸಿದ್ದ ಪ್ರಗತಿ ಕಳೆದುಕೊಳ್ಳುವುದಲ್ಲದೆ ಪರಿಸ್ಥಿತಿ ಬಿಗಡಾಯಿಸಿತು. ಆರ್ಥಿಕ ಒತ್ತಡ ಹೇರಿ ಮದುರು ಸರಕಾರದ ವಿರುದ್ಧ ಜನತೆ ದಂಗೆಯೇಳುವಂತೆ ಪ್ರಯತ್ನಿಸಲಾಯಿತು. ಆದರೂ ರಾಜಕೀಯವಾಗಿ ಮದುರೊ ಸರಕಾರವನ್ನು ಸೋಲಿಸಲಾಗಲಿಲ್ಲ.

ಕೆಲವು ಖಾಸಗಿ  ಬಾಡಿಗೆ ಸೈನಿಕರನ್ನು ಶಸ್ತ್ರಾಸ್ತ್ರದ ಜತೆ ಕಳಿಸಿ  ದಂಗೆ, ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವುದು, ನೇರ ಕ್ಷಿಪ್ರದಂಗೆಗೆ ಪ್ರಯತ್ನ ಮುಂತಾದ ಮಿಲಿಟರಿ ಕ್ರಮಗಳನ್ನು ಸಹ ಕೈಗೊಳ್ಳಲಾಯಿತು. ತೈಲ ಸ್ತಾವರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಯಿತು. ಚವೇಝ್, ಮದುರೊ ಸೇರಿದಂತೆ ಹಲವು ನಾಯಕರ ಕೊಲೆಗೆ ಸಹ ಪ್ರಯತ್ನಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ವೆನೆಜುವೇಲಾ ಚೀನಾಕ್ಕೆ ತೈಲ ರಫ್ತು ಮಾಡುವ ಮತ್ತು ರಶ್ಯಾದ ಸಹಕಾರದಿಂದ ತೈಲ ಸ್ಥಾವರಗಳನ್ನು ಉತ್ತಮ ಪಡಿಸುವ ಹೊಸ ಸ್ಥಾವರಗಳನ್ನು ಕಟ್ಟುವ ಮೂಲಕ, ಚೀನಾ-ರಶ್ಯಾ ತಯಾರಿಸಿದ ಬದಲಿ ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆ ಬಳಸುವ ಮೂಲಕ ಯು.ಎಸ್ ಹೊರಿಸಿರುವ ಆರ್ಥಿಕ ದಿಗ್ಬಂಧನ ಸೋಲಿಸುವ ಹಾದಿಯಲ್ಲಿತ್ತು.

ಇವೆಲ್ಲಕ್ರಮಗಳು  ಮದುರೊ ಸರಕಾರವನ್ನು ಉರುಳಿಸಲು ವಿಫಲವಾದ್ದರಿಂದ, ಅದರ ಪ್ರತಿರೋಧ , ಿನ್ನಷ್ಟು ಹೆಚ್ಚುತ್ತಿದ್ದರಿಂದ,ಮತ್ತು ಆ ಆಕ್ರಾಮಕ ಕ್ರಮಗಳ  ಮುಂದುವರಿಕೆಯಾಗಿ ಸೆಪ್ಟೆಂಬರ್ 2025ರಿಂದೀಚಿನ ‘ನರ್ಕೊ ಟೆರರಿಸಂ’ ವಿರುದ್ಧ ಕಾರ್ಯಾಚರಣೆಯ ಪ್ರಹಸನ ನಡೆಸಲಾಗುತ್ತಿದ್ದು,  ಅಧ್ಯಕ್ಷರನ್ನೇ ಅಪಹರಿಸುವ ಈ ಆಘಾತಕಾರಿ ಕ್ರಮ ಕೈಗೊಳ್ಳಲಾಗಿದೆ.

5. ತೈಲ ಸಂಪತ್ತು ಇರುವ ದೇಶಗಳಲ್ಲಿ(ಉದಾಹರಣೆಗೆ ಇರಾಕ್,ಲಿಬ್ಯ) ಯು.ಎಸ್  ಗೆ ಬಾಗುವ ಸರಕಾರ ಇಲ್ಲದಾಗ ಹಿಂದೆನೂ ದಿಗ್ಬಂಧನಗಳ ಮೂಲಕ ದುರ್ಬಲಗೊಳಿಸಿ, ಕೊನೆಗೂ ಯುದ್ಧ ಹೂಡಿ ಸರಕಾರಗಳನ್ನು ಉರುಳಿಸಿದ ಉದಾಹರಣೆಗಳಿವೆ. ಆದರೆ ಇಲ್ಲಿ ಅಂತಹ ಯುದ್ಧ ಹೂಡದೆ ಅಧ್ಯಕ್ಷರ ಅಪಹರಣ ಮಾಡಲು ಕಾರಣವೇನಿರಬಹುದು ?

ಇರಾಕ್, ಲಿಬ್ಯಾ, ವೆನೆಜುವೇಲಾ ಗಳ ನಡುವೆ ತೈಲ ಸಂಪತ್ತು ಅಲ್ಲದೆ ಯು.ಎಸ್ ಕಾರ್ಯಾಚರಣೆಗೆ ಕಾರಣವಾದ ಇನ್ನೂ  ಕೆಲವು ಸಮಾನತೆಗಳಿವೆ, ಹಾಗೆನೇ ವ್ಯತ್ಯಾಸಗಳೂ ಇವೆ.

ಅಂತರರಾಷ್ಟ್ರೀಯ ತೈಲ ವ್ಯಾಪಾರದಲ್ಲಿ ಯು.ಎಸ್ ಡಾಲರನ್ನೆ ಬಳಸಬೇಕು  ಎಂಬುದು ಯು.ಎಸ್ 1970ರ ದಶಕದಿಂದ  (ಮಾರಾಟಗಾರ, ಖರೀದಿದಾರ) ಎಲ್ಲ ದೇಶಗಳ ಮೇಲೆ ಹೊರಿಸಿದ ಷರತ್ತು. ಇದನ್ನು ಪೆಟ್ರೋ-ಡಾಲರ್ ವ್ಯವಸ್ಥೆ ಎನ್ನುತ್ತಾರೆ. ತೈಲ ವ್ಯಾಪಾರಕ್ಕಾಗಿ ಎಲ್ಲ ದೇಶಗಳು ತಮ್ಮ ಆದಾಯದ ಒಂದು ದೊಡ್ಡ ಭಾಗವನ್ನು ಡಾಲರ್ ಠೇವಣಿಯಲ್ಲಿಡಬೇಕಾಗುತ್ತದೆ.  ಹಾಗಾಗಿ ಎಲ್ಲ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬಳಕೆಯಾಗುತ್ತದೆ. ಡಾಲರ್ ಪ್ರಮುಖ ವಿನಿಮಯದ  ಕರೆನ್ಸಿ ಆಗುತ್ತದೆ. ಎಂದೂ ಬೆಲೆ ಕಳೆದುಕೊಳ್ಳದಿರುವ, ಸುಭದ್ರವಾದ ಕರೆನ್ಸಿ ಆಗುತ್ತದೆ.  ದೇಶಗಳ ಕೇಂದ್ರೀಯ ಬ್ಯಾಂಕುಗಳು ಮತ್ತು ಜಗತ್ತಿನ ಶ್ರೀಮಂತರು ತಮ್ಮ ಹಣಕಾಸು ಆಸ್ತಿಯನ್ನು ಸುಭದ್ರವಾದ ಡಾಲರ್ ನಲ್ಲಿಡಲು ಇಷ್ಟ ಪಡುತ್ತಾರೆ.

ಇವರೆಲ್ಲ ಯು.ಎಸ್ ಟ್ರೆಶರಿ ಬಾಂಡ್ ನಲ್ಲಿ ತಮ್ಮ ಹಣವನ್ನು ಹೂಡಬೇಕಾಗುತ್ತದೆ. ಹೀಗಾಗಿ ಡಾಲರಿಗೆ ಯು.ಎಸ್ ಆರ್ಥಿಕತೆ ವ್ಯಾಪಾರದ ಮಿತಿಗಳನ್ನು ಮೀರಿ ಬೇಡಿಕೆ ಬರುತ್ತದೆ. ಬೇಡಿಕೆ ಹೆಚ್ಚುತ್ತಲೇ ಹೋಗುತ್ತದೆ. ಎಷ್ಟು ಬೇಕಾದರೂ ಡಾಲರ್ ಪ್ರಿಂಟ್ ಮಾಡಿ ಮನಬಂದಂತೆ ಮಿಲಿಟರಿ ಇತ್ಯಾದಿ ಭಾರೀ ಹೂಡಿಕೆ ಮೇಲೆ ಯು.ಎಸ್ ಖರ್ಚು ಮಾಡಬಹುದು. ಇದೇ ಯು.ಎಸ್ ನ ಆರ್ಥಿಕ ಅಧಿಪತ್ಯದ ಗುಟ್ಟು. ಇದನ್ನು ಬಳಸಿ ವಿಜ್ಞಾನ-ತಂತ್ರಜ್ಞಾನಗಳ ಮತ್ತು ಮಿಲಿಟರಿ ಅಧಿಪತ್ಯವನ್ನು ಸಹ ಕಟ್ಟಲಾಗಿದೆ. ಇವೆಲ್ಲ ಯು.ಎಸ್ ಸಾಮ್ರಾಜ್ಯಶಾಹಿಯ ಅಧಿಪತ್ಯದ ಅಡಿಪಾಯ.  ಡಾಲರಿನ ಈ ಅಧಿಪತ್ಯಕ್ಕೆ ಕುತ್ತು ಬಂದರೆ ಯು.ಎಸ್ ಸಾಮ್ರಾಜ್ಯಶಾಹಿಯು ಕೆಂಡಾಮಂಡಲವಾಗುತ್ತದೆ.

ಪೆಟ್ರೊಡಾಲರ್ ವ್ಯವಸ್ಥೆ ಉಲ್ಲಂಘಿಸುವ ಮೂಲಕ ಡಾಲರಿನ ಅಧಿಪತ್ಯಕ್ಕೆ ಈ ಮೂರು ದೇಶಗಳ ಸರಕಾರಗಳು ಸಹ ಯು.ಎಸ್ ನ್ನು ಕೆರಳಿಸಿದ್ದವು. ಇರಾಕ್ ನ ಸದ್ದಾಂ ಹುಸೇನ್ ತೈಲ ರಫ್ತಿನಲ್ಲಿ ಯುರೋ ಬಳಸಲು ಹೊರಟಿತ್ತು. ಲಿಬ್ಯಾದ ಗದ್ದಾಫಿ ಸರಕಾರ ಆಫ್ರಿಕನ್ ಒಕ್ಕೂಟದ ನಾಯಕನಾಗಿ ಚಿನ್ನದ ಭರವಸೆ ಇದ್ದ ಆಫ್ರಿಕನ್ ದಿನಾರ್ ಎಂಬ ಹೊಸ ಕರೆನ್ಸಿ ಬಳಸುವ ಯೋಜನೆ ಮಾಡಿತ್ತು. ಮದುರೊ ಸರಕಾರ ಚೀನಕ್ಕೆ ತೈಲ ರಫ್ತಿಗೆ ಚೀನಾದ ಕರೆನ್ಸಿ ಯೂವಾನ್ ಬಳಸಲು ಆರಂಬಿಸಿತ್ತು.

ಲಿಬ್ಯಾ ಮತ್ತು ವೆನೆಜುವೇಲಾಕ್ಕೆ ಇನ್ನೊಂದು ಸಾಮ್ಯವಿತ್ತು. ಎರಡೂ ಸರಕಾರಗಳು ದೇಶದ ತೈಲ ಸಂಪತ್ತನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿದವು. ಹಾಗಾಗಿ ಬಹುಸಂಖ್ಯಾತ ಜನರ ಸಾಕಷ್ಟು ಗಟ್ಟಿಯಾದ ಬೆಂಬಲ ಗಳಿಸಿದ್ದವು.  ಇದಕ್ಕೆ ವಿರುದ್ಧವಾಗಿ ಸದ್ದಾಂ ಹುಸೇನ್ ಸರಕಾರ ಸಾಮಾಜಿಕ ಕಲ್ಯಾಣ ಕ್ರಮಗಳಿಗೆ ಅಷ್ಟೇನೂ ಮಹತ್ವ ನೀಡಿರಲಿಲ್ಲ. ಹಾಗಾಗಿ ಗಟ್ಟಿಯಾದ ಜನಬೆಂಬಲವೂ ಇರಲಿಲ್ಲ.  ದಮನಕಾರಿಯಾಗಿತ್ತು ಅಲ್ಲದೆ ಯು.ಎಸ್ ಪ್ರಚೋದನೆ ಮೇಲೆ ಅದರ ಸಹಕಾರ-ಬೆಂಬಲದೊಂದಿಗೆ ಇರಾನ್ ಮೇಲೆ 8 ವರ್ಷದ ಯುದ್ಧ ಹೂಡಿತ್ತು. ಲಿಬ್ಯಾ ಮತ್ತು ವೆನೆಜುವೇಲಾಗಳ ನಡುವೆ ಒಂದು ವ್ತ್ಯತ್ಯಾಸವಿತ್ತು.  ಲಿಬ್ಯಾದಲ್ಲಿ ರಾಜಕೀಯ ದಮನವಿಲ್ಲದಿದ್ದರೂ ಜನತೆಗೆ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನುಭವವೇ ಇರಲಿಲ್ಲ.

ಅಂದರೆ ರಾಜಕೀಯ ಪ್ರಜ್ಞೆಯೇ ಇರಲಿಲ್ಲ.  ಆದರೆ ವೆನೆಜುವೇಲಾ ದ ಜನತೆಗೆ ದೀರ್ಘ ಹೋರಾಟ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದಾಗಿ ಹಾಗೂ ಕಳೆದ 25 ವರ್ಷಗಳ ‘ಬೊಲಿವಾರಿಯನ್ ಕ್ರಾಂತಿ”ಯ ಪ್ರಕ್ರಿಯೆಯಿಂದಾಗಿ  ರಾಜಕೀಯ ಪ್ರಜ್ಞೆ ದಟ್ಟವಾಗಿದೆ. ಮಾತ್ರವಲ್ಲದೆ, ಕಳೆದ ಸೆಪ್ಟೆಂಬರ್ ನಿಂದ ಕೆರಿಬಿಯನ್ ಸಮುದ್ರದಲ್ಲಿ ಯು.ಎಸ್ ಆಕ್ರಾಮಕ ಕ್ರಮಗಳಿಂದಾಗಿ ಮಿಲಿಟರಿ, ಜನತಾ ಸ್ವಯಂಸೇವಕ ಪಡೆಗಳೂ (ಮಿಲಿಶಿಯ) ಮತ್ತು ಜನತೆ ಸಹ ಆಕ್ರಮಣ ಎದುರಿಸಲು ಸನ್ನದ್ಧರಾಗಿದ್ದಾರೆ.

ಇರಾಕ್, ಅಫ್ಘಾನಿಸ್ತಾನಗಳಲ್ಲಿ ದೀರ್ಘ ಯುದ್ಧ ಮತ್ತು ಅವಮಾನಕಾರಿಯಾಗಿ ಹೊರಗೆ ಬರಬೇಕಾದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಯು.ಎಸ್ ಈ ಕಾರ್ಯಾಚರಣೆ ಯೋಜಿಸಿರಬೇಕು. ಮದುರೊ ಅವರ ಯಶಸ್ವಿ ಅಪಹರಣ, ಇತರ ನಾಯಕರನ್ನು ಅಧೀರಗೊಳಿಸಬಹುದು ಮತ್ತು ಸರಕಾರದ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಬಹುದು. ನೇರ ಪಡೆಗಳನ್ನು ಇಳಿಸುವುದು ತೀವ್ರ ಪ್ರತಿರೋಧಕ್ಕ ಈಡಾಗಬಹುದು.  ಹಂತ ಹಂತವಾಗಿ ಅದರತ್ತ ಹೋಗಬಹುದು ಎಂಬ ಲೆಕ್ಕಾಚಾರವಿರಬಹುದು.

ಇರಾಕ್, ಲಿಬ್ಯಾ, ಗಳಲ್ಲದೆ ಇನ್ನೆರಡು ಮಾದರಿಯ ಯು.ಎಸ್ ಮಿಲಿಟರಿ ಕಾರ್ಯಾಚರಣೆಗಳಿವೆ. 1989ರಲ್ಲಿ ಪನಾಮ ದ ಅಧ್ಯಕ್ಷ ನೊರಿಗಾ ಅವರನ್ನು ಇದೇ ರೀತಿ ದಾಳಿ ಮಾಡಿ ಅಪಹರಿಸಿ ಯು.ಎಸ್ ಗೆ ಒಯ್ಯಲಾಗಿತ್ತು. ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆ ಆಪಾದನೆ ಮಾಡಲಾಗಿತ್ತು. ಆದರೆ ಪನಾಮ 25 ಲಕ್ಷ ಜನಸಂಖ್ಯೆಯ ಸಣ್ಣದೇಶ.  ಆತ ಹಿಂದೆ ಸಿ.ಐ. ಎಏಜೆಂಟ್ ಆಗಿ ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ.  ಆತನಿಗೆ ಯಾವುದೇ ಜನಬೆಂಬಲವಿರಲಿಲ್ಲ. ಚಿಲಿಯಲ್ಲಿ 1973ರಲ್ಲಿ ಅಲೆಂದೆ ಅವರ ಸೋಶಲಿಸ್ಟ್ ಸರಕಾರವನ್ನು ಮಿಲಿಟರಿ ಕ್ಷಿಪ್ರದಂಗೆ ಮೂಲಕ ಉರುಳಿಸಲಾಗಿತ್ತು.  ಚಿಲಿಯಿಂದ ವ್ಯತಿರಿಕ್ತವಾಗಿ ವೆನೆಜುವೇಲಾದ ಮಿಲಿಟರಿ ಜನಪರ ರಾಜಕೀಯ ಪ್ರಜ್ಞೆ ಹೊಂದಿದೆ.

6. ಆದರೆ ಈ ಕಾರ್ಯಾಚರಣೆಯ ಸಮಯಕ್ಕೆ (ಅಂದರೆ ಈ ವಾರ ತೆಗೆದುಕೊಳ್ಳುವುದಕ್ಕೆ) ಏನಾದರೂ ಮಹತ್ವವಿದೆಯೆ?

ಹೌದು ಮತ್ತು ಇಲ್ಲ. ಕೆಲವು ಮೂಲಗಳು ಹೇಳುವಂತೆ ಎಪ್ ಸ್ಟೀನ್ ಫೈಲ್, ಯು.ಎಸ್ ಜನತೆಯ ಆರ್ಥಿಕ ದುಸ್ಥಿತಿ ಇತ್ಯಾದಿಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶವಂತೂ ಇದ್ದೇ ಇದೆ.  ಕ್ರಿಸ್ ಮಸ್ -ವರ್ಷಾಂತ್ಯದಲ್ಲಿ ವೆನೆಜುವೇಲಾದಲ್ಲಿ ಸನ್ನದ್ಧತೆ ಕಡಿಮೆ ಇರುತ್ತದೆ ಎಂಬ ಲೆಕ್ಕಾಚಾರವೂ ಇರಬಹುದು. ಮಾತ್ರವಲ್ಲ ಅಮೇರಿಕದ ಪಾರ್ಲಿಮೆಂಟಿನ ಚುನಾವಣೆಗಳು ನವೆಂಬರ್ ನಲ್ಲಿ ನಡೆಯಲಿದ್ದು ಅದಕ್ಕೆ ಅಭ್ಯರ್ಥಿ ಆಯ್ಕೆ ಇತ್ಯಾದಿ ಪ್ರಕ್ರಿಯೆ ಆರಂಭವಾಗಿದೆ.  ಹಲವು ಕಡೆ ಡೆಮೊಕ್ರಾಟಿಕ್ ಪಕ್ಷದ ಕೈ ಮೇಲಾಗುತ್ತಿದೆ. ರಿಪಬ್ಲಿಕನ್ ಪಕ್ಷದ ಒಳಗೆ ಮಾತ್ರವಲ್ಲ, ಟ್ರಂಪ್ ಅವರ ತಮ್ಮದೇ ಆದ ಮಗ (ಮೇಕ್ ಅಮೆರಿಕ ಗ್ರೇಟ್ ಅಗೈನ್) ಜನನೆಲೆಯಲ್ಲೂ ಟ್ರಂಪ್ ಹಲವು ಕ್ರಮಗಳು ಅನೈಕ್ಯತೆಗೆ ಕಾರಣವಾಗಿದೆ.  ಈ ಚುನಾವಣೆಗಳ ನಂತರ ಡೆಮೊಕ್ರಾಟಿಕ್ ಪಕ್ಷ ಬಹುಮತ ಪಡೆದರೆ ಟ್ರಂಪ್ ಗೆ ಗಂಭೀರ ಕಾನೂನಾತ್ಮಕ ಸವಾಲುಗಳು (ಇಂಪೀಚ್ ಮೆಂಟ್ ಸೇರಿ) ಎದುರಾಗಲಿವೆ.  ಟ್ರಂಪ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಲಿದ್ದು ಈ ವಾರ ದೇಶವನ್ನುದ್ದೇಶಿಸಿ ಟ್ರಂಪ್ ಭಾಷಣದಲ್ಲಿ ಏನಾದರೂ ಪ್ರಮುಖವಾದ ಸಾಧನೆ ಹೇಳಿಕೊಳ್ಳಬೇಕಾದ  ಒತ್ತಡ ಸಹ ಕೆಲಸ ಮಾಡಿರಬಹುದು.

ಆದರೆ ಇದಕ್ಕಿಂತ ಹೆಚ್ಚಾಗಿ ಜಾಗತಿಕವಾಗಿ ಯು.ಎಸ್ ಆರ್ಥಿಕ-ಮಿಲಿಟರಿ ಅಧಿಪತ್ಯಕ್ಕೆ ರಶ್ಯ-ಚೀನಗಳಿಂದ ಬಂದಿರುವ ಸವಾಲನ್ನು ಎದುರಿಸಬೇಕಾದ್ದು ಅತ್ಯಂತ ತುರ್ತಿನ ಸಂಗತಿ. ಉಕ್ರೇನ್ ಯುದ್ಧ ಗೆಲ್ಲುವುದರಲ್ಲಿ ಅಥವಾ ನಿಲ್ಲಿಸುವುದರಲ್ಲಿ ಹಾಗೂ ಚೀನಾ ವನ್ನು ಸುಂಕ ಸಮರದಲ್ಲಿ ಮಣಿಸುವುದರಲ್ಲಿ ಗಂಭೀರ ವೈಫಲ್ಯದ ಹಿನ್ನೆಲೆಯಲ್ಲಿ ವ್ಯೂಹಾತ್ಮಕ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಹೇಳಿದ ಹಾಗೆ ಡಾಲರ್ ಅಧಿಪತ್ಯಕ್ಕೆ ತೀವ್ರ ಸವಾಲು ಬಂದಿದ್ದು, ಅದೂ ಯು.ಎಸ್ ನ ಜಾಗತಿಕ ಅಧಿಪತ್ಯಕ್ಕೆ ಸವಾಲು ಮಾತ್ರವಲ್ಲ ಯು.ಎಸ್ ಆರ್ಥಿಕದ ತೀವ್ರ ಕುಸಿತಕ್ಕೂ ಕಾರಣವಾಗಬಹುದು

ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಭದ್ರತಾ ದಸ್ತಾವೇಜಿನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಈ ದಸ್ತಾವೇಜಿನ ಒಟ್ಟು ಸಾರಾಂಶವೆಂದರೆ ಯುರೋಪು, ಪಶ್ಚಿಮ ಏಶ್ಯಾ, ದಕ್ಷಿಣ ಚೀನಾ ಸೇರಿದಂತೆ ಇಡೀ ಜಗತ್ತಿನಲ್ಲಿ ಅಧಿಪತ್ಯದ ಪ್ರಯತ್ನದ ಬದಲು (ಅದನ್ನು ಬಿಟ್ಟು ಬಿಡುವುದು ಅಲ್ಲದಿದ್ದರೂ) ಪಶ್ಚಿಮ ಗೋಲಾರ್ಧದಲ್ಲಿ ತನ್ನ ಪೂರ್ಣ ಏಕಾಧಿಪತ್ಯ ಸ್ಥಾಪಿಸಲು ಆದ್ಯತೆ ನೀಡಲಾಗುತ್ತದೆ. ಲ್ಯಾಟಿನ್ ಅಮೆರಿಕದಲ್ಲಿ ತನ್ನ ಯಜಮಾನಿಕೆಗೆ ಸವಾಲು ಹಾಕುವ ಹೊರಗಿನ (ರಶ್ಯ, ಚೀನಾ ಅಂತ ಓದಿಕೊಳ್ಳಿ) ಮತ್ತು ಒಳಗಿನ ಶಕ್ತಿಗಳಿಗೆ ಬುದ್ಧಿ ಕಲಿಸ ಲಾಗುತ್ತದೆ. “ಲ್ಯಾಟಿನ್ ಅಮೆರಿಕ ನಮ್ಮ ಹಿತ್ತಲು” ಎಂದು ಘೋಷಿಸಿದ್ದ 200 ವರ್ಷಗಳ ಹಳೇಯ ಮನ್ರೋ ಸಿದ್ಧಾಂತ ವನ್ನು ಟ್ರಂಪ್ ಉಪಸಿದ್ಧಾಂತದೊಂದಿಗೆ ಜಾರಿ ಮಾಡಲಾಗುವುದು. ಇದು ಹೊಸ ವ್ಯೂಹ.

ಇದರ ಭಾಗವಾಗಿಯೇ ಸೆಪ್ಟೆಂಬರ್ 2025ರಿಂದ ವೆನೆಜುವೇಲಾದ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭವಾಗಿದ್ದು ಮತ್ತು ಈಗಿನ ಮದುರೊ ಅಪಹರಣ ನಡೆಸಿದ್ದು.  ಒಟ್ಟಾರೆಯಾಗಿ ಹೇಳುವುದಾದರೆ ಈ ಕಾರ್ಯಾಚರಣೆ ಯು.ಎಸ್ ಗೆ ತುರ್ತು ಇತ್ತು. ಆದರೆ ಈ ವಾರವೇ ಮಾಡಲು ಬೇರೆ ಕೆಲವು ಅಂಶಗಳು ಕಾರಣವಾಗಿರಬಹುದು.

7. ಟ್ರಂಪ್ ತಮ್ಮ ಪತ್ರಿಕಾ ಗೋಷ್ಟಿಯಲ್ಲಿ ಹಲವು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಚವೇಝ್, ಮದುರೊ ಯು.ಎಸ್ ಗೆ ಸೇರಿದ್ದ ಯು.ಎಸ್ ಕಂಪನಿಗಳು ತಮ್ಮ ಹಣದಲ್ಲಿ ಅಭಿವೃದ್ಧಿ ಪಡಿಸಿದ ತೈಲ ಸಂಪತ್ತನ್ನು ಕಸಿದುಕೊಂಡಿದ್ದಾರೆ.  ಅದನ್ನು ವಾಪಸು ಪಡೆಯಲಾಗುವುದು. ಯು.ಎಸ್ ಇಚ್ಛೆಯಂತೆ ವೆನೆಜುವೇಲಾ ಸರಕಾರ ನಡೆಯಲಿದೆ. ಸೂಕ್ತ ಸಮಯದಲ್ಲಿ ಹೊಸ ಸರಕಾರ ರಚಿಸಲಾಗುವುದು. ಎಂದೆಲ್ಲ ಹೇಳಿದ್ದಾರೆ. ಇವೆಲ್ಲ ಸಾಧ್ಯವೇ ? ಮುಂದೇನಾಗ ಹುದು?

ಈಗಾಗಲೇ ಹೇಳಿದ ಹಾಗೆ ನರ್ಕೊ-ಟೆರರಿಸಂ ಹುಸಿ ನೆಪವಷ್ಟೇ. ವೆನೆಜುವೇಲಾದಲ್ಲಿ ಸರಕಾರ ಬದಲಾವಣೆ ಮೂಲಕ ಅದರ ತೈಲ ಸಂಪತ್ತಿನ ಮೇಲೆ ಹತೋಟಿ, ಪೆಟ್ರೊಡಾಲರ್ ವ್ಯವಸ್ಥೆಯನ್ನು ಉಳಿಸುವುದು, ಸ್ವತಂತ್ರ ನೀತಿ ಅನುಸರಿಸ ಬಯಸುವ ಲ್ಯಾಟಿನ್ ಅಮೆರಿಕದ ಇತರ ದೇಶಗಳ ನಾಯಕರಿಗೆ ಎಚ್ಚರಿಕೆ ಮೂಲಕ ಲ್ಯಾಟಿನ್ ಅಮೆರಿಕವನ್ನು ಮತ್ತೆ ಹಿತ್ತಲು ಮಾಡುವುದು ಕಾರ್ಯಾಚರಣೆಯ ಉದ್ಧೇಶ. ಆದರೆ ಅದು ಎಷ್ಟರ ಮಟ್ಟಿಗೆ ಸಾಕಾರವಾಗಲಿದೆ ಎಂಬುದರ ಬಗ್ಗೆ ತೀವ್ರ ಅನುಮಾನಗಳಿವೆ.

ವೆನೆಜುವೇಲಾದಲ್ಲಿ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು ಸರಕಾರ ಒಟ್ಟಾರೆ ನಿಯಂತ್ರಣದಲ್ಲಿದೆ. ದೇಶದ ರಾಜಧಾನಿ ಸೇರಿದಂತೆ ಹಲವು ಕಡೆ ಭಾರೀ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ಕೆಲವು ಬಲಪಂಥೀಯ ಪಕ್ಷಗಳು ಬಿಟ್ಟರೆ ವಿರೋಧ ಪಕ್ಷಗಳು ಸಹ ಈ ದಾಳಿಯನ್ನು ಖಂಡಿಸಿವೆ. ಮದುರೊ ಮತ್ತು ಅವರ ಪತ್ನಿ ಸಹ “ನಾನು ಆಪಾದನೆ ನಿರಾಕರಿಸುತ್ತೇನೆ” ಮತ್ತು “ನಾನು ಈಗಲೂ ಅಧ್ಯಕ್ಷ” ಎಂದು ನ್ಯೂಯಾರ್ಕ್ ಕೋರ್ಟಿನಲ್ಲಿ ಹೇಳಿದ್ದಾರೆ. ಇದಕ್ಕಾಗಿಯೇ ವೆನೆಜುವೇಲಾದ ಸರಕಾರ, ಆಳುವ ಪಕ್ಷ ಮತ್ತು ಜನತೆಯ ಮನೋಬಲ ಕುಗ್ಗಿಸಲು “ಉಪಾಧ್ಯಕ್ಷರು ನಾವು ಹೇಳಿದ ಹಾಗೆ ಕೇಳುತ್ತಾರೆ” ಎಂದು ಟ್ರಂಪ್ ಹೇಳಿರುವುದು. ಹಾಗೂ ಜಾಗತಿಕ ಮಾಧ್ಯಮಗಳಲ್ಲಿ “ಉಪಾಧ್ಯಕ್ಷರು ಸೇರಿದಂತೆ ಹಲವು ಹಿರಿಯ ನಾಯಕರು ಯು.ಎಸ್ ಜತೆ ಶಾಮೀಲಾಗಿ ಮದುರೊ ಅಪಹರಣಕ್ಕೆ ಸಹಾಯ ಮಾಡಿದ್ದಾರೆ” ಎಂಬ ವದಂತಿ ಹರಡಿರುವುದು.  ಇದರಲ್ಲಿ ಎಳ್ಳಷ್ಟು ನಿಜವಿದ್ದರೂ ಬೊಲಿವಾರಿಯನ್ ಚಳುವಳಿಯ ನಾಯಕತ್ವ, ರಾಜಕೀಯ ಪಕ್ಷಗಳು ಜನತೆ ಇಂಥವರನ್ನು ಗುರುತಿಸಿ ಹಿಮ್ಮೆಟ್ಟಿಸುವ ಪ್ರಜ್ಞೆ, ಧೃಢತೆ ಹೊಂದಿವೆ ಎಂದು ಹೇಳಬಹುದು.

ಇತ್ತೀಚಿನ ವಿದೇಶ ಕಾರ್ಯದರ್ಶಿ ಮಾರ್ಕೊ ರುಬಿಯೊ ತಡೆ ಹಿಡಿದಿರುವ ತೈಲ ಹಡಗುಗಳನ್ನು ಬಿಡುಗಡೆ ಮಾಡಲು ಮಾತುಕತೆಗಳನ್ನು ನಡೆಸುವ ಮೂಲಕ ವೆನೆಜುವೇಲಾ ಸರಕಾರದ ಜತೆಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.  ಹಾಗಾಗಿ ದಾಳಿಯ ಬೆದರಿಕೆಯಿಂದ ಏನು ಸಾಧಿಸಬಹುದು ಎಂದು ಅವರು ಪರೀಕ್ಷಿಸುತ್ತಿರುವಂತಿದೆ. ಯು.ಎಸ್ ಒಳಗೆ ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಪಕ್ಷದ, ಮಗ ಚಳುವಳಿಯ ವಿಭಾಗಗಳು ಈ ದಾಳಿಯನ್ನು ವಿರೋಧಿಸಿವೆ. ಲ್ಯಾಟಿನ್ ಅಮೆರಿಕದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇವೆಲ್ಲದರ ನಂತರವೂ ಇರಾಕ್, ಲಿಬ್ಯ ದಂತಹ ಯುದ್ಧ ವನ್ನು ಯು.ಎಸ್ ಹೂಡುವುದಿಲ್ಲವೆಂದು ಹೇಳಲಾಗುವುದಿಲ್ಲ. ಆದರೆ ವೆನೆಜುವೇಲಾದ ಮೇಲೆ ಪೂರ್ಣ ಯುದ್ಧ ಹೂಡಿದರೆ, ಯು.ಎಸ್ ಗೆ ಅದು ಇನ್ನೊಂದು ವಿಯೆಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ! ಎಂಬುದಂತೂ ಖಚಿತ.

Donate Janashakthi Media

Leave a Reply

Your email address will not be published. Required fields are marked *