ವೆಮುಲಾ ಬಿ ರಿಪೋರ್ಟ್ : ಆರೋಪಿಗಳಿಗೆ ಕ್ಲೀನ್ ಚಿಟ್, ಬಲಿಪಶುವೇ ಆರೋಪಿ

– ನಾಗರಾಜ ನಂಜುಂಡಯ್ಯ

 “ಸಾಕ್ಷಾದಾರಗಳ ಕೊರತೆ”ಯಿಂದ ಪ್ರಕರಣವನ್ನು ಮುಚ್ಚಲಾಗುತ್ತಿದೆ  ಎಂದು ಎಂಟು ವರ್ಷಗಳ ನಂತರ, ವೇಮುಲಾ ಪ್ರಕರಣದ ತನಿಖಾಧಿಕಾರಿಯು ಮಾರ್ಚ್ 21 ರಂದು, ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.  ಇದರಿಂದ ‌ ಈ‌‌ ಪ್ರಕರಣ‌ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.  ರೋಹಿತ್ ದಲಿತನಲ್ಲ ಎಂಬ ನಿರೂಪಣೆಯನ್ನು ಸ್ಥಾಪಿಸಲು ವರದಿಯು ಅಸಾಧಾರಣವಾಗಿ ಪ್ರಯತ್ನಿಸಿದೆ. ಪೋಲೀಸ್ ವರದಿಯಲ್ಲಿ  ಅರ್ಧದಷ್ಟು ಭಾಗವನ್ನು  ಅದಕ್ಕೆ ವ್ಯಯಿಸಲಾಗಿದೆ.  ವರದಿಯ ಅತ್ಯಂತ ಕ್ರೂರ ಭಾಗವೆಂದರೆ ಅದು ರೋಹಿತ್ ಆತ್ಮಹತ್ಯೆಗೆ ವಾಸ್ತವ ಕಾರಣಗಳನ್ನು ಹುಡುಕದೆ, ಕೇವಲ ಊಹಿಸಲು ಮಾತ್ರ ಪ್ರಯತ್ನಿಸುತ್ತದೆ. ಬಿಜೆಪಿ ನಾಯಕರು ಮತ್ತು ಉಪಕುಲಪತಿಗಳನ್ನು ಸಂಪೂರ್ಣವಾಗಿ ಆರೋಪ-ಮುಕ್ತಗೊಳಿಸಿದ ವರದಿಯು ರೋಹಿತ್‌’ ನ ಸಾವಿನ ಹೊಣೆಯನ್ನು ರೋಹಿತ್‌ನ ಮೇಲೆಯೇ ಹೊರಿಸಿದೆ. ವೆಮುಲಾ

ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆ ನಡೆದು 8 ವರ್ಷಗಳಾಯಿತು.‌ ಜನವರಿ, 17, 2016 ಅಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ರೋಹಿತ್ ವೆಮುಲಾ ಟಿಪ್ಪಣಿ ಬರೆದು ಆತ್ಮಹತ್ಯೆ ಮಾಡಿಕೊಂಡರು. ವಿಶ್ವವಿದ್ಯಾಲಯದ ಆಡಳಿತ, ಎಬಿವಿಪಿ‌ ರೂಪಿಸಿದ ಜಾತಿ ತಾರತಮ್ಯದ ಒಳಸಂಚಿಗೆ, ಹಾಗೂ ಇದರೊಂದಿಗೆ ಕೇಂದ್ರ ಮಾನವ ಅಭಿವೃದ್ಧಿ ಸಂಪನ್ಮೂಲ ಸಚಿವರ ಸಂಪೂರ್ಣ ಸಹಕಾರದೊಂದಿಗೆ, ಉಂಟಾದ ಕಿರುಕುಳ, ಅವಮಾನ, ತಾರತಮ್ಯದ ಆರೋಪಗಳನ್ನು  ಸಹಿಸಲಾರದೆ, ರೋಹಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದ.

ಕಳೆದ 8 ವರ್ಷಗಳಿಂದ, ದೇಶದಾದ್ಯಂತ ಇದು ಆತ್ಮಹತ್ಯೆಯಲ್ಲ, ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ದಲಿತರ‌ ಮೇಲೆ ‌ನಡೆಯುತ್ತಿರುವ ಸಾಂಸ್ಥಿಕ ಕೊಲೆಯ  ಪ್ರಕರಣ ಎಂಬ‌‌ ಕೂಗು ದೇಶಾದ್ಯಂತ ಮಿಂಚಿನಂತೆ  ಪಸರಿಸಿತು.  ನ್ಯಾಯಕ್ಕಾಗಿ ರಾಷ್ಟ್ರವ್ಯಾಪಿ ಚಳುವಳಿ ನಡೆಯಿತು.‌

ವೆಮುಲಾ ಬಿ ರಿಪೋರ್ಟ್ : ಆರೋಪಿಗಳಿಗೆ ಕ್ಲೀನ್ ಚಿಟ್, ಬಲಿಪಶುವೇ ಆರೋಪಿ

ಬಲಿಪಶುವನ್ನೇ ಆರೋಪಿ ಮಾಡುವ ಆಘಾತಕಾರಿ ಬಿ ರಿಪೋರ್ಟ್

 ಈ ಎಂಟು ವರ್ಷಗಳ ನಂತರ, ವೇಮುಲಾ ಪ್ರಕರಣದ ತನಿಖಾಧಿಕಾರಿಯು ಮಾರ್ಚ್ 21 ರಂದು, ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.  “ಸಾಕ್ಷಾದಾರಗಳ ಕೊರತೆ”ಯಿಂದ ಪ್ರಕರಣವನ್ನು  ಮುಚ್ಚಲಾಗುತ್ತಿದೆ ಎಂದು ಈ ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ‌ ಈ‌‌ ಪ್ರಕರಣ‌ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ವರದಿಯ ಆಘಾತಕಾರಿ ಅಂಶವೆಂದರೆ, “ರೋಹಿತ್ ವೆಮುಲಾ “ದಲಿತರಲ್ಲ, ತನ್ನ ನಿಜವಾದ ಜಾತಿಯ ಗುರುತು ಬಯಲಾಗುವ ಭಯದಿಂದ ಆತ್ಮಹತ್ಯೆ ಗೆ ಶರಣಾಗಿದ್ದಾರೆ” ಎಂದು ವರದಿ ಹೇಳಿದೆ.  ಆತ್ಮಹತ್ಯೆಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ ಅಥವಾ ಉಪಕುಲಪತಿಗಳಾಗಿದ್ದ, ಪ್ರೊ.ಅಪ್ಪಾ ರಾವ್ ಪೊಡಿಲೆ ಸೇರಿದಂತೆ, ಯಾವುದೇ ರಾಜಕೀಯ ವ್ಯಕ್ತಿಗಳ  ಪಾತ್ರ ಏನೂ ಇಲ್ಲ ಎಂದು ಹೇಳಲಾಗಿದೆ. ವೆಮುಲಾ 

ವೆಮುಲಾ ಅವರ ಆತ್ಮಹತ್ಯಾ ಟಿಪ್ಪಣಿಯು ಸಹಾ, ಯಾವುದೇ ಬಾಹ್ಯ ಅಂಶಗಳನ್ನು ಅಥವಾ ರಾಜಕೀಯ ಪ್ರಭಾವವನ್ನು ದೂಷಿಸಿಲ್ಲ, ಬದಲಿಗೆ ತಮ್ಮ ಹೋರಾಟಗಳು ಮತ್ತು ವೈಯಕ್ತಿಕ ಜೀವನದ  ಜಿಜ್ಞಾಸೆಯ ಅತೃಪ್ತಿಯನ್ನೇ ಸೂಚಿಸುತ್ತದೆ. ಆದಾಗ್ಯೂ, ಅವರ ಶೈಕ್ಷಣಿಕ ಸಾಧನೆಯ‌ ಕುರಿತಂತೆ ವರದಿಯು‌ ಉಲ್ಲೇಖಿಸಿದ್ದರೂ,  ವೆಮುಲಾ ತನ್ನ ದಲಿತೇತರ ಗುರುತು ಮತ್ತು ಸ್ವಾಭಿಮಾನ- ಸ್ಥಾನಮಾನ, ಪರಿಶಿಷ್ಟ ಜಾತಿ ಪ್ರಮಾಣ ‌ಪತ್ರದ ಸಿಂಧುತ್ವದ ಸಾಭೀತು.  ಇವುಗಳ ಒತ್ತಡಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ‌ ಎಂದಿದೆ ವರದಿ.

ಆರೋಪಿಗಳಿಗೆ ಕ್ಲೀನ್ ಚಿಟ್

ಇದರಿಂದ ಸಾಂಸ್ಥಿಕ ಕೊಲೆ ಎಂಬ ವಿವಾದಕ್ಕೆ ತೆರೆ ಎಳೆಯಲಾಗಿದೆ. ಅಂದಿನ ಉಪಕುಲಪತಿ  ಅಪ್ಪಾ ರಾವ್‌ ಪೊಡಿಲೆ, ಬಿಜೆಪಿ ನಾಯಕರಾದ ಸಂಸದರಾದ ಬಂಡಾರು ದತ್ತಾತ್ರೇಯ ಅವರನ್ನು ಸಂಪೂರ್ಣವಾಗಿ ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ.  ಸ್ಮೃತಿ ಇರಾನಿ ಮತ್ತು ಎನ್ ರಾಮಚಂದ್ರ ರಾವ್ ಮತ್ತು ಎಬಿವಿಪಿ ನಾಯಕ ಸುಶೀಲ್ ಕುಮಾರ್ ಅವರು ನಡೆಸಿದ ಬಹಿರಂಗವಾದ ಸಂಚುಗಳು ಗೊತ್ತಿದ್ದರೂ, ಅವರ ಮೇಲೆ ರೋಹಿತ್ ವೇಮುಲಾ ಹತ್ಯೆಯ ಯಾವುದೇ ಹೊಣೆಗಾರಿಕೆಯನ್ನು ವರದಿ ಪ್ರಸ್ತಾಪಿಸಿಲ್ಲ.

ಬಿಜೆಪಿ ಮತ್ತು ಎಬಿವಿಪಿ ನಿರ್ಮಿಸಿದ  ನಿರೂಪಣೆಗಳ ಆಧಾರದ ಮೇಲೆಯೇ ಈ ವರದಿಯು ಅಂತಿಮವಾಗಿ ತಯಾರಾಗಿದೆ. ರೋಹಿತ್ ಆತ್ಮಹತ್ಯೆ ಸಾಂಸ್ಥಿಕ ಹತ್ಯೆಯಲ್ಲ  ಎಂದು ಒದಗಿಸಿರುವ ಪುರಾವೆಗಳ ಹಿಂದಿನ ಕೈಗಳು, ಯಾವುದೆಂದು ಸ್ಪಷ್ಟಗೊಂಡಿದೆ. ಹಾಗಾಗಿ, ನ್ಯಾಯಕ್ಕಾಗಿ ಎಂಟು ವರ್ಷಗಳು ನಡೆಸಿದ ಹೋರಾಟವನ್ನು ಅಪಹಾಸ್ಯ ಮಾಡಿರುವ ವರದಿಯನ್ನು ತಿರಸ್ಕರಿಸಬೇಕಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿಯೇ,   ಸುಳ್ಳು‌ ಮಾಹಿತಿಗಳ ಸರಮಾಲೆಯನ್ನು‌ ಪೋಣಿಸಲಾಗಿದೆ.  ಆದ್ದರಿಂದ, ಈ ತನಿಖಾ ವರದಿಯ‌ ಮರುಪರಿಶೀಲನೆಗೆ ಆಗ್ರಹಿಸಬೇಕಾಗಿದೆ.

ರೋಹಿತ್ ವೇಮುಲನ ಸಾಂಸ್ಥಿಕ ಹತ್ಯೆಗೆ ಕಾರಣವಾದ ಘಟನಾವಳಿಯನ್ನು ಬಲ್ಲವರಿಗೆ ಪೊಲೀಸ್ ವರದಿಯಲ್ಲಿ ವ್ಯಾಪಕವಾಗಿರುವ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗದು.

ಇದೀಗ ಅಂತಿಮ‌ ತನಿಖಾ ವರದಿ‌ ಬಂದಿದೆ., ರೋಹಿತ್‌ನ ಸಾಂಸ್ಥಿಕ ಹತ್ಯೆಯ ಸುತ್ತ ಬಿಜೆಪಿ-ಎಬಿವಿಪಿ ನಿರೂಪಣೆಯ ನಿಖರವಾದ ಪುನರಾವರ್ತನೆಯನ್ನು ಈ ವರದಿಯಲ್ಲಿ ನೀಡಲಾಗಿದೆ. ಪುಟ ಒಂದರಿಂದ ಪೋಲೀಸ್ ವರದಿಯು ರೋಹಿತ್ ಮತ್ತು ಅವನ ಸ್ನೇಹಿತರನ್ನು ‘ಹಿಂಸಾತ್ಮಕ ಪ್ರವೃತ್ತಿಗಳಿಗೆ ಗುರಿಯಾಗುವ ಅಶಿಸ್ತಿನ ಗುಂಪು’ ಎಂದು ಚಿತ್ರಿಸಲು ಉತ್ಸುಕವಾಗಿದೆ.  ಈ ಕಟ್ಟು ಕಥೆಯ ವಿರುದ್ಧ ಇರುವ ಹಲವಾರು ಪುರಾವೆಗಳನ್ನು ನಿರ್ಲಕ್ಷಿಸಿದೆ.

ಘಟನೆ ನಡೆದ ಸ್ಥಳದಲ್ಲಿ ವಿಶ್ವವಿದ್ಯಾನಿಲಯದ ಏಕೈಕ ಅಧಿಕಾರಿಯಾಗಿದ್ದ ಡ್ಯೂಟಿ ಸೆಕ್ಯುರಿಟಿ ಅಧಿಕಾರಿಯ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಅವರು ಸುಶೀಲ್ ಕುಮಾರ್ ಆರೋಪಿಸಿದಂತೆ ಆಗಸ್ಟ್ 3,ರ ಘಟನೆಯ ರಾತ್ರಿ ಯಾವುದೇ ದೈಹಿಕ ಹಿಂಸೆ ನಡೆದಿಲ್ಲ ಎಂದು ನಿಸ್ಸಂದಿಗ್ಧವಾಗಿ ಪ್ರತಿಪಾದಿಸಿದ್ದಾರೆ. ಎರಡನೆಯದಾಗಿ, ತೆಲಂಗಾಣ ಹೈಕೋರ್ಟ್‌ಗೆ ವಿಶ್ವವಿದ್ಯಾನಿಲಯದ ಆಗಿನ ರಿಜಿಸ್ಟ್ರಾರ್ ಸಲ್ಲಿಸಿದ ಪ್ರತಿವಾದ ಅಫಿಡವಿಟ್ ಅನ್ನು ಸಹ ಅದು ನಿರ್ಲಕ್ಷಿಸುತ್ತದೆ.   ಅರ್ಚನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚೆನ್ನಾರೆಡ್ಡಿ ಅವರು ನೀಡಿದ ವೈದ್ಯಕೀಯ ಪ್ರಮಾಣಪತ್ರವನ್ನು ವರದಿಯು ನಿರ್ಲಕ್ಷಿಸಿದೆ.  ಇದು ಅವರು ಅಪೆಂಡಿಸೈಟಿಸ್‌’ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಅದು ಯಾವುದೇ ಹಲ್ಲೆಯ ಫಲಿತಾಂಶವಲ್ಲ ಎಂದು ದೃಢೀಕರಿಸುತ್ತದೆ. ಇದು ಹೈದರಾಬಾದ್ ವಿಶ್ವವಿದ್ಯಾನಿಲಯದ ಮುಖ್ಯ ವೈದ್ಯಕೀಯ ಅಧಿಕಾರಿಯ ಸಾಕ್ಷ್ಯವನ್ನು ಸಹ ನಿರ್ಲಕ್ಷಿಸುತ್ತದೆ, ಅವರು ಅದನ್ನೇ ದೃಢೀಕರಿಸುತ್ತಾರೆ.

ಸುಶೀಲ್ ಕುಮಾರ್ ಅವರ ನಿರೂಪಣೆಯನ್ನು ಮಾತ್ರ ವರದಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಮತ್ತು ಇದಕ್ಕೆ ವಿರುದ್ಧವಾದ ಎಲ್ಲಾ ಪುರಾವೆಗಳನ್ನು ನಿರ್ಲಕ್ಷಿಸಿದ್ದಾರೆ.‌  ಎಎಸ್‌ಎ ಸದಸ್ಯರಿಂದ ಹಿಂಸಾಚಾರದ ನಿದರ್ಶನಗಳನ್ನು ರಚಿಸುವಾಗ, ಅಂದಿನ ಬಿಜೆಪಿ ಎಂಎಲ್‌ಸಿ ರಾಮಚಂದ್ರ ರಾವ್ ಅವರು ಕ್ಯಾಂಪಸ್‌ಗೆ ಅತಿಕ್ರಮ ಪ್ರವೇಶ ಮಾಡಿ ದಲಿತ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸಿದ್ದರು ಎಂದು ಉಲ್ಲೇಖಿಸಲು ವರದಿ ವಿಫಲವಾಗಿದೆ. ಹೀಗಾಗಿ ಎಬಿವಿಪಿ ನಿರೂಪಣೆಯನ್ನು ಬೆಂಬಲಿಸಲು ರೋಹಿತ್ ಮತ್ತು ಅವನ ಸ್ನೇಹಿತರನ್ನು ಹಿಂಸಾತ್ಮಕ ಅಶಿಸ್ತಿನ ದೇಶ-ವಿರೋಧಿ ಜನಸಮೂಹ ವೆಂದು ಪ್ರಯತ್ನಿಸುವ ಮತ್ತು ಕೆರಳಿಸುವ ವರದಿಯ ಉದ್ದೇಶವು  ಸ್ಪಷ್ಟವಾಗಿದೆ. ವೆಮುಲಾ 

ಇದನ್ನು ಓದಿ : ಭಾರತ ಚುನಾವಣಾ ಆಯೋಗ ವಿಫಲದ‌ ವಿರುದ್ಧ ‘#GrowASpineOrResign’ ಅಭಿಯಾನ

ದತ್ತಾತ್ರೇಯ, ಅಪ್ಪಾ ರಾವ್ ರಕ್ಷಣೆ

ವೆಮುಲಾ  ದಲಿತ  ಅಲ್ಲವೆಂಬ ಹುಸಿ ಆರೋಪ

ಪೋಲೀಸ್ ವರದಿಯು ಆಗಿನ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಅವರ ಕ್ರಮಗಳ ಪರಿಣಾಮಗಳಿಂದ ರಕ್ಷಿಸಲು ಪ್ರಯತ್ನಿಸುತ್ತದೆ. ದತ್ತಾತ್ರೇಯ ಅವರು ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿಗಳ ದೇಶವಿರೋಧಿ ಚಟುವಟಿಕೆಗಳಿಗಾಗಿ, ಎಬಿವಿಪಿ ಅಧ್ಯಕ್ಷ ಸುಶೀಲ್ ಕುಮಾರ್ ಅವರ ಮೇಲೆ ‘(ಹುಸಿ) ದಾಳಿಗಾಗಿ  ಕ್ರಮ ಕೈಗೊಳ್ಳುವಂತೆ MHRD ಮತ್ತು ಉಪಕುಲಪತಿಗಳಿಗೆ ಹಲವು ಅಧಿಕೃತ ಅರೆ-ಅಧಿಕೃತ ಪತ್ರಗಳನ್ನು ಬರೆಯುವ ಮೂಲಕ ನಿರಂತರವಾಗಿ ಒತ್ತಡ ಹೇರಿದ್ದರು. ಇದರಿಂದಾಗಿ ಉಪಕುಲಪತಿ ಅಪ್ಪಾ ರಾವ್, ವಿ ವಿ , ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಕಾನೂನುಬಾಹಿರ ಶಿಕ್ಷೆಯ ಕುರಿತ ನಿರ್ಣಯದ  ದಾಖಲೆಗಳು ಮುಂತಾದ ಪುರಾವೆಗಳನ್ನು ನಿರ್ಲ್ಷಿಸಿದೆ.  ಈ‌ ಪ್ರಕರಣದ‌ ಮೂಲಕ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಂಪೂರ್ಣವಾಗಿ‌‌ ನಿರ್ಲಕ್ಷ್ಯ ಮಾಡಲಾಗಿದೆ.

ರೋಹಿತ್ ದಲಿತನಲ್ಲ ಎಂಬ ನಿರೂಪಣೆಯನ್ನು ಸ್ಥಾಪಿಸಲು ವರದಿಯು ಅಸಾಧಾರಣವಾಗಿ ಪ್ರಯತ್ನಿಸಿದೆ. ಪೋಲೀಸ್ ವರದಿಯಲ್ಲಿ  ಅರ್ಧದಷ್ಟು ಭಾಗವನ್ನು  ಅದಕ್ಕೆ ವ್ಯಯಿಸಲಾಗಿದೆ.  ಇದನ್ನು ಇತರ ಯಾವುದೇ ದಾಖಲೆಗಳನ್ನು ಪ್ರಸ್ತುತ ಪಡಿಸದೆ ಬರಿಯ  ಜಿಲ್ಲಾಧಿಕಾರಿಗಳ ಹೇಳಿಕೆಯ ಮೇಲೆ ಆಧಾರಿತವಾಗಿದೆ.

ವರದಿಯ ಅತ್ಯಂತ ಕ್ರೂರ ಭಾಗವೆಂದರೆ ಅದು ರೋಹಿತ್ ಆತ್ಮಹತ್ಯೆಗೆ ವಾಸ್ತವ ಕಾರಣಗಳನ್ನು ಹುಡುಕದೆ, ಕೇವಲ ಊಹಿಸಲು ಮಾತ್ರ ಪ್ರಯತ್ನಿಸುತ್ತದೆ. ಬಿಜೆಪಿ ನಾಯಕರು ಮತ್ತು ಉಪಕುಲಪತಿಗಳನ್ನು ಸಂಪೂರ್ಣವಾಗಿ ಆರೋಪ-ಮುಕ್ತಗೊಳಿಸಿದ ವರದಿಯು ರೋಹಿತ್‌’ ನ ಸಾವಿನ ಹೊಣೆಯನ್ನು ರೋಹಿತ್‌ನ ಮೇಲೆಯೇ ಹೊರಿಸಿದೆ. ರೋಹಿತ್ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರು, ತೀವ್ರ ಖಿನ್ನತೆ ಮತ್ತು ನಿರಾಶೆಯನ್ನು ಹೊಂದಿದ್ದರು ಎಂದು ವರದಿ ವಾದಿಸುತ್ತದೆ. ರೋಹಿತ್ ತನ್ನ ಪಿಎಚ್‌ಡಿ’ ಯನ್ನು ಒಂದು ವಿಭಾಗದಲ್ಲಿ ನಿಲ್ಲಿಸಿ ಮತ್ತೊಂದು ವಿಭಾಗದ ಪಿಎಚ್‌ಡಿ’ಗೆ ಸೇರಿದ್ದರು ಆದರೆ ಅವರ ‘ಶೈಕ್ಷಣಿಕೇತರ ಚಟುವಟಿಕೆಗಳಿಂದ’ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ ಎಂದು ಅವರು‌ ಕೊರಗಿದ್ದರು ಎಂದು‌‌ ವರದಿ ಹೇಳುತ್ತದೆ. ಇಲ್ಲಿ, ರೋಹಿತ್ ಎರಡು ವಿಭಿನ್ನ ವಿಭಾಗಗಳಲ್ಲಿ ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು ಎಂಬುದನ್ನು ವರದಿ‌ ಕಡೆಗಣಿಸುತ್ತದೆ.

ಆದರೆ, ಅಂತಿಮವಾಗಿ, ಆತ್ಮಹತ್ಯೆ ಟಿಪ್ಪಣಿಯಲ್ಲಿ ಅಪ್ಪಾ ರಾವ್ ವಿರುದ್ಧ ಅಂತಹ ಯಾವುದೇ ಅಸಮಾಧಾನ ದಾಖಲಾಗಿಲ್ಲ ಎಂಬುದನ್ನೇ ವರದಿಯು ಬಲವಾಗಿ ವಾದಿಸುತ್ತದೆ. ಆದರೆ, ಅಪ್ಪುರಾವ್ ರವರು, ವಿಶ್ವ ವಿದ್ಯಾಲಯದ ಎಲ್ಲಾ ನೀತಿ ನಿಯಮಗಳನ್ನು ಉಲಂಘಿಸಿ, ಹಾಸ್ಟೆಲ್ ‌ನಿಂದ‌ ಹೊರ ದಬ್ಬಿದ್ದು, ಸ್ಕಾಲರ್ಶಿಪ್ ನಿಲ್ಲಿಸಿದ್ದು, ಕೊರೆಯುವ ಚಳಿ ಯಲ್ಲಿ ಆಚೆ ಮಲಗಿಸಿದ್ದು, ಸಾಮಾಜಿಕ ಬಹಿಷ್ಕಾರ ಕ್ಕೆ ‌ಒಳಪಡಿಸಿದ್ದು‌, ಇವುಗಳನ್ನು‌ ತನಿಖಾ ವರದಿ‌ ಪರಿಗಣಿಸಿಲ್ಲ‌ ಏಕೆ ? ಇವೆಲ್ಲಾ ದಲಿತರ ‌ಮೇಲಿನ‌ ದಮನ‌ ಅಥವಾ ದೌರ್ಜನ್ಯ‌ವಲ್ಲವೇ ?

ವೆಮುಲಾ ಬಿ ರಿಪೋರ್ಟ್ : ಆರೋಪಿಗಳಿಗೆ ಕ್ಲೀನ್ ಚಿಟ್, ಬಲಿಪಶುವೇ ಆರೋಪಿ

ವರದಿಯ ಮರುಪರಿಶೀಲನೆಗೆ ಒತ್ತಾಯ, ಭರವಸೆ

ತೆಲಾಂಗಾಣ ದಲ್ಲಿ ಹೊಸದಾಗಿ ಚುನಾಯಿತ ಕಾಂಗ್ರೆಸ್ ಸರ್ಕಾರಕ್ಕೆ ಈ ವರದಿ ಸಂಕಷ್ಟ ತಂದಿದೆ.  ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು  ರಾಹುಲ್ ಗಾಂಧಿಯವರು ಸೇರಿದಂತೆ ಕಾಂಗ್ರೆಸ್ ನಾಯಕತ್ವವು ರೋಹಿತ್ ವೇಮುಲಾ ಚಳುವಳಿಗೆ ಅದರ ಆರಂಭದ ದಿನಗಳಿಂದಲೂ ರೋಹಿತ್ ವೆಮುಲಾಗೆ ನ್ಯಾಯಕ್ಕಾಗಿ ತಮ್ಮ ಬೆಂಬಲವನ್ನು ನಿರಂತರವಾಗಿ ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಾಂಸ್ಥಿಕ ತಾರತಮ್ಯದ ವಿರುದ್ಧ ರೋಹಿತ್ ಕಾಯಿದೆಯನ್ನು ಜಾರಿಗೊಳಿಸುವುದಾಗಿ, ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಹೇಳಿದೆ.  ಈ ದಿಸೆಯಲ್ಲಿ, ರಾಧಿಕಾ ವೇಮುಲಾ ಅವರು ಅನಾರೋಗ್ಯದ ಸ್ಥಿತಿಯಲ್ಲಿ ಇದ್ದಾಗ್ಯೂ, ಸಹಾ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.  ಅವರು ಸರ್ಕಾರದ ಬದಲಾವಣೆಯು ಭಾರತದಲ್ಲಿ ದಲಿತರಿಗೆ ನ್ಯಾಯದ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ ಎಂಬ ಆಶಯ‌ ಹೊಂದಿದ್ದಾರೆ. ವೆಮುಲಾ 

ಆದರೆ, ವಿಪರ್ಯಾಸವೆಂದರೆ, ಹೊಸದಾಗಿ ಚುನಾಯಿತ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ತೆಲಂಗಾಣ ಪೊಲೀಸರ ವರದಿಯಿಂದ ಇಂತಹ ಘೋರ ಅನ್ಯಾಯ ನಡೆದಿದೆ. ವರದಿಗೆ ತನಿಖಾ ಅಧಿಕಾರಿಗಳಾದ ಮೂವರು ಎಸಿಪಿ’ ಗಳಿದ್ದರು. ಅದರಲ್ಲಿ  ಶ್ರೀ ರಮಣ ರಾವ್ ಮತ್ತು ಶ್ರೀ ಎನ್. ಶ್ಯಾಮ್ ಪ್ರಸಾದ್ ರಾವ್ ಅವರು ವರದಿಯನ್ನು ಸಿದ್ಧಪಡಿಸಿದ ಪ್ರಮುಖರು. ಶ್ರೀ ರಮಣ ರಾವ್ ಮತ್ತು ಶ್ರೀ ಎನ್. ಶ್ಯಾಮ್ ಪ್ರಸಾದ್ ರಾವ್ ಇಬ್ಬರೂ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆಡಳಿತದಲ್ಲಿ ಕೆಲಸ ಮಾಡಿದ್ದವರು. ಇವರಿಬ್ಬರೂ ಎಬಿವಿಪಿ ಮತ್ತು ಬಿಜೆಪಿಯ ಸುಳ್ಳು ನಿರೂಪಣೆಗಳಿಗೆ ಹತ್ತಿರದ ಸಂಪರ್ಕವನ್ನು ಹೊಂದಿರುವವರು. ವಾಸ್ತವವಾಗಿ, ಪೊಲೀಸ್ ಅಧಿಕಾರಿಗಳು ಸತ್ಯಗಳಿಗೆ ಅಂಟಿಕೊಳ್ಳ‌ಬೇಕು. ನ್ಯಾಯವನ್ನು ‌ಒದಗಿಸಬೇಕು.‌ಇದೇ  ಈ ನೆಲದ ಕಾನೂನಿನ‌ ಪರಿಪಾಠ. ಆದರೆ, ಈ ಇಬ್ಬರು ಎಸಿಪಿ’ ಗಳು ಸುಳ್ಳು ಮತ್ತು ಕಾಲ್ಪನಿಕ ಕಥೆಗಳಲ್ಲಿ ತೇಲಿ ಹೋಗಿದ್ದಾರೆ. ಅಂದರೆ, ಆರೋಪಿಗಳ ಪರ‌ ನಿಂತು, ದಲಿತರಿಗೆ ನ್ಯಾಯವನ್ನು ಹಳಿತಪ್ಪಿಸಿದ್ದಾರೆ. ಇದು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೌರ್ಜನ್ಯಕ್ಕೆ ಸಮಾನವಾಗಿದೆ.

ಒಟ್ಟಾರೆಯಾಗಿ  ಈ ಸಂದರ್ಭದಲ್ಲಿ, ನ್ಯಾಯವು ಮೇಲುಗೈ ಸಾಧಿಸುವಂತಾಗಬೇಕು. ರೋಹಿತ್ ತಾಯಿಯವರು ‌ಮತ್ತು ವಿದ್ಯಾರ್ಥಿ‌ ಸಂಘಟನೆಗಳ ಜಂಟಿ ಹೋರಾಟ ಸಮಿತಿಯು, ತೆಲಂಗಾಣದ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.. ಇಬ್ಬರು ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ನಿಟ್ಟಿನಲ್ಲಿ, ತೆಲಂಗಾಣ ರಾಜ್ಯದ‌ ಮುಖ್ಯ ಮಂತ್ರಿಯವರು, ಕಾಂಗ್ರೆಸ್ ಸರ್ಕಾರ ‌ನಿಮ್ಮೊಂದಿಗೆ ಇದೆ. ಚುನಾವಣಾ ‌ಮುಗಿದ ತಕ್ಷಣವೇ, ವರದಿಯ ಮರು‌ ಪರಶೀಲನೆಗೆ ಒತ್ತು‌ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ದಲಿತ ವಿದ್ಯಾರ್ಥಿ ಓರ್ವನ ಮೇಲೆ ಮಾತ್ರ ನಡೆದ ಸಾಂಸ್ಥಿಕ ಕೊಲೆ‌ ಮಾತ್ರವಲ್ಲ. ದೇಶದಲ್ಲಿ ತಾಂಡವವಾಡುತ್ತಿರುವ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡುವ ಹೋರಾಟದ ಭಾಗವಾಗಿದೆ.  ಈ ಪ್ರಕರಣದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಆಗಬೇಕು.‌‌‌ ಸತ್ಯಕ್ಜೆ ಜಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಂತಹ ಅಮಾನುಷ ಜಾತಿ ತಾರತಮ್ಯ ಕೃತ್ಯಗಳ‌‌ನ್ನು ತಡೆಗಟ್ಟಬೇಕು. ವೆಮುಲಾ 

ಇದನ್ನು ನೋಡಿ : ಸಾಧಕನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದು ಸರಿಯಲ್ಲ. ಪುರುಷರಿಗೆ ಜೊತೆಯಾಗಿ, ಸಮಭಾಗಿಯಾಗಿ ಇರುತ್ತಾಳೆ

Donate Janashakthi Media

Leave a Reply

Your email address will not be published. Required fields are marked *