ವಿಬಿ-ಜಿರಾಮ್ (ಜಿ): “ಸಮರ್ಥಿಸಿಕೊಳ್ಳಲಾಗದನ್ನು ಸಮರ್ಥಿಸಿಕೊಳ್ಳಲು ಈಗ ಕೃಷಿ ಸಚಿವರ ಜುಮ್ಲಾಗಳು”

(ಸಂಗ್ರಹ: ಜಿ ಎಸ್ ಮಣಿ)

ಮೋದಿ ಸರ್ಕಾರ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ’ಯ (ಮನರೆಗಾ) ಜಾಗದಲ್ಲಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್‌ ಅಂಡ್ ಅಜೀವಿಕಾ ಮಿಷನ್‌ (ಗ್ರಾಮೀಣ್)‌ ಕಾಯ್ದೆ (ವಿಬಿ-ಜಿ ರಾಮ್‍ ಜಿ)ಯನ್ನು ಬಹಳ ತರಾತುರಿಯಲ್ಲಿ ಜಾರಿಗೆ ತಂದಿದೆ. ಆದರೆ ಇದಕ್ಕೆ ಕಾರ್ಮಿಕರು ಮತ್ತು ರೈತರಿಂದ ಮಾತ್ರವಲ್ಲ, ಜನಪರ ಕಾರ್ಯಕರ್ತರು, ಅಧ್ಯಯನಕಾರರು ಮತ್ತು ಅರ್ಧಶಾಸ್ತ್ರಜ್ಞರಿಂದ ಭಾರತದಲ್ಲೂ ಮತ್ತು ಜಾಗತಿಕವಾಗಿಯೂ ವ್ಯಾಪಕವಾಗಿ ಆತಂಕ ವ್ಯಕ್ತವಾಗಿರುವುದನ್ನು ಕಂಡ ಕೇಂದ್ರ ಕೃಷಿ ಮಂತ್ರಿಗಳು ದೊಡ್ಡ ಪತ್ರಿಕೆಗಳಲ್ಲಿಈ ಬಗ್ಗೆ ಲೇಖನ ಬರೆಯಬೇಕಾಗಿ ಬಂದಿದೆ.  ಇಂತಹ ಆತಂಕಗಳು ಈ ಹೊಸ ಕಾಯ್ದೆಯನ್ನು ತಪ್ಪಾಗಿ ಓದಿರುವುದರಿಂದ ಉಂಟಾಗಿವೆ, ಮನರೆಗಾದಲ್ಲಿನ “ಸಂರಚನಾತ್ಮಕ ಕಂದರ”ಗಳನ್ನು ಮುಚ್ಚಲು ಹೊಸ ಕಾಯ್ದೆ ತರಲಾಗಿದೆ, ಇದು ಹಳೆಯದಕ್ಕಿಂತ ಪರಿಣಾಮಕಾರಿ ಎಂದು ಅವರು ಈ ಹೊಸ ಕಾಯ್ದೆಯನ್ನು ಸಮರ್ಥಿಸಿಸಿಕೊಳ್ಳಲು ಪ್ರಯತ್ನಿಸುತ್ತ  ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಆದರೆ ಇದು ಅತ್ಯಂತ ಅಸಮರ್ಥನೀಯವಾದುದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ, ಕೃಷಿ ಮಂತ್ರಿಗಳು ಈ ಆತಂಕಗಳು ತಪ್ಪು ಎಂಧು ತೋರಿಸುವ  ಯಾವುದೇ ತರ್ಕವನ್ನು ತಮ್ಮ   ಲೇಖನದಲ್ಲಿ ಮುಂದಿಟ್ಟಿಲ್ಲ ಎಂದು ಇದಕ್ಕೆ ಪ್ರತಿಕ್ರಿಯಿಸುತ್ತ ಅಖಿಲ ಭಾರತ  ಕೃಷಿ ಕೂಲಿಕಾರ ಸಂಘ(ಎಐಎಡಬ್ಲ್ಯುಯು)ದ ಜಂಟಿ ಕಾರ್ಯದರ್ಶಿ ವಿಕ್ರಂ ಸಿಂಗ್ ಟಿಪ್ಪಣಿ ಮಾಡಿದ್ದಾರೆ. (ಪೀಪಲ್ಸ್ ಡೆಮಾಕ್ರಸಿ, ಜನವರಿ 25) ವಿಬಿ-ಜಿರಾಮ್

ಮನರೆಗಾ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತಮಗೊಳಿಸಿ ಹೊಸ ಯೊಜನೆ ತಯಾರಾಗಿದೆ. “ಒಂದು ಸಮೃದ್ಧ ಚೈತನ್ಯಶೀಲ ಗ್ರಾಮೀಣ ಭಾರತಕ್ಕಾಗಿ  ಸಬಲೀಕರಣ, ಬೆಳವಣಿಗೆ, ಒಮ್ಮಖತೆ ಮತ್ತು ಪರಿಪೂರ್ಣತೆಯನ್ನು ಪ್ರೋತ್ಸಾಹಿಲು” ಈ ಕಾಯ್ದೆಯನ್ನು ತರಲಾಗಿದೆ” ಎಂದು ಈ ಕಾಯ್ದೆಯ ಧ್ಯೇಯೋದ್ದೇಶಗಳಲ್ಲಿ ಹೇಳಿದುದನ್ನು ಪುನರುಚ್ಚರಿಸಿದರೂ, ಹಾಗೆಂದರೇನು ಎಂದು ವಿವರಿಸುವ ಗೊಡವೆಗೆ ಅವರು ಹೋಗಿಲ್ಲ. ಉದ್ಯೋಗ ವ್ಯವಸ್ಥೆಯನ್ನು ಆಧುನೀಕರಿಸುವ, ಖಾತ್ರಿ ಉದ್ಯೋಗ ದಿನಗಳನ್ನು ಹೆಚ್ಚಿಸುವ ಮತ್ತು 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನಕ್ಕೆ ಗ್ರಾಮೀಣ ಅಭಿವೃದ್ಧಿಯನ್ನು ಹೊಂದಿಸುವ ಕಾನೂನು ಎಂದು ಇದನ್ನು ಪ್ರಸ್ತುತಪಡಿಸಲಾಗುತ್ತಿದೆ. ಒಂದು ಹಕ್ಕು ಆಧಾರಿತ ಭರವಸೆಯನ್ನು ಕಳಚಿ ಹಾಕುವ ಕಾಯ್ದೆ ಹೇಗೆ ತಾನೇ ಇದನ್ನು ಮಾಡುತ್ತದೆ ಎಂಬುದನ್ನು ಸ್ಪಷ್ಟೀಕರಿಸುವ ಬದಲು ಇದನ್ನು ಮತ್ತಷ್ಟು ಅಸ್ಪಷ್ಟ ಗೊಳಿಸಲಾಗಿದೆಯಷ್ಟೇ ಎಂದು ವಿಕ್ರಂ ಸಿಂಗ್‍ ಹೇಳುತ್ತಾರೆ.

ಉಲ್ಲಂಘನೆ ಈಗ ಕಾನೂನುಬದ್ಧ!

ಹೊಸ ಕಾನೂನು ಬೇಡಿಕೆ-ಪ್ರೇರಿತವಾಗಿಯೇ ಇದೆ, ಏಕೆಂದರೆ ಕೆಲಸ ಕಾರ್ಮಿಕರ ಮೂಲದಿಂದಲೇ ಬರುತ್ತದೆ  ಎಂಬುದು ಕೃ಼ಷಿ ಸಚಿವರು ಮುಂದಿಟ್ಟಿರುವ ತರ್ಕ.  ಆದರೆ ಮನರೆಗಾ ಸಂಪೂರ್ಣವಾಗಿ ಬೇರೆಯೇ ಅರ್ಥ ಹೊಂದಿತ್ತು —ಅದರ ಪ್ರಕಾರ ಕಾರ್ಮಿಕರು ಕೆಲಸ ಕೇಳಿದಾಗ ಅದಕ್ಕೆ ಹಣಕಾಸು ಒದಗಿಸಲು ಸರಕಾರ  ಬಾಧ್ಯವಾಗಿತ್ತು. ಅಂದರೆ ಹಣವಿಲ್ಲದ್ದರಿಂದ ಕೆಲಸ ಕೊಡದಿರುವುದು ಕಾನೂನಿನ ಉಲ್ಲಂಘನೆಯಾಗುತ್ತಿತ್ತು. ಕಳೆದ ವರ್ಷಗಳಲ್ಲಿ, ಕೇಂದ್ರವು ನರೆಗಾ ಯೋಜನೆಗೆ ಹಂಚಿಕೆಗಳನ್ನು ನಿರಂತರವಾಗಿ ಕಡಿತಗೊಳಿಸುತ್ತ ಬಂದಿದೆ, ಹೊಸ ಕಾಯ್ದೆಯು ಈ ಪ್ರವೃತ್ತಿಯನ್ನು ಸರಿಪಡಿಸಲು ಅಲ್ಲ, ಬದಲಾಗಿ ಅದನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತದೆ.

ಹೊಸ ಕಾಯಿದೆಯ ಸೆಕ್ಷನ್ 4(5) ಕೇಂದ್ರವು ಪ್ರತಿ ರಾಜ್ಯಕ್ಕೂ “ಪ್ರಮಾಣಿತ ಹಂಚಿಕೆ”ಯನ್ನು ನಿಗದಿಪಡಿಸಲು ಅಧಿಕಾರ ನೀಡುತ್ತದೆ. ನಂತರ ಸೆಕ್ಷನ್ 4(6) ಈ ಮಿತಿಯನ್ನು ಮೀರಿದ ಯಾವುದೇ ಖರ್ಚಿನ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸುತ್ತದೆ, ಹೆಚ್ಚುವರಿ ವೆಚ್ಚವನ್ನು ಕೇಂದ್ರವು ಸೂಚಿಸಿದ ರೀತಿಯಲ್ಲಿ ರಾಜ್ಯಗಳು ಭರಿಸಬೇಕು ಎಂದು ನಿರ್ದಿಷ್ಟಪಡಿಸುತ್ತದೆ. ಬಜೆಟ್ ಮಿತಿಯನ್ನು ವಿಧಿಸಿದ ನಂತರ ಮತ್ತು ಹೆಚ್ಚುವರಿ ಬೇಡಿಕೆಯು ರಾಜ್ಯದ ಹೊಣೆಗಾರಿಕೆಯಾದ ನಂತರ, ಉದ್ಯೋಗ ಖಾತರಿಯು ಮನರೆಗಾದಲ್ಲಿರುವಂತೆ ನಿಜವಾಗಿಯೂ ಬೇಡಿಕೆ-ಪ್ರೇರಿತವಾಗಿ ಹೇಗೆ ತಾನೇ ಉಳಿಯಲು ಸಾಧ್ಯ? 60:40 ಪ್ರಮಾಣದ ನಿಧಿ ಮಾದರಿಯು ಕೇಂದ್ರ ಪ್ರಾಯೋಜಿತ ಯೋಜನೆಗಳ ಪ್ರಮಾಣಿತ ಮಾದರಿಯನ್ನು ಅನುಸರಿಸುತ್ತದೆ ಎಂದು ಸಚಿವರೇ ಹೇಳುತ್ತಾರೆ. ಅಂದರೆ ಕೇಂದ್ರ ಸರಕಾರ  ಹೊಸ ಕಾನೂನಿನ ಪ್ರಕಾರ ಹೆಚ್ಚುವರಿ ಬೇಡಿಕೆಗೆ ಹೆಚ್ಚುವರಿ ಹಣ ಒದಗಿಸಲು ಬಾಧ್ಯವಾಗಿಲ್ಲ! ಹೀಗಿರುವಾಗ ಕೆಲಸದ “ಬೇಡಿಕೆ” ಈಗಲೂ ಕಾರ್ಮಿಕರಿಂದಲೇ ಬರುತ್ತದೆ ಎಂಬ ತರ್ಕ ಮತ್ತು ಆ ಮೂಲಕ ವಿಬಿ- ಜಿ ರಾಮ್‍ ಜಿ ಕೂಡ ‘ಬೇಡಿಕೆ-ಪ್ರೇರಿತ’ವಾಗಿಯೇ ಉಳಿದಿದೆ ಎಂಬುದು ಅರ್ಥಹೀನ.

ಸಾರ್ವತ್ರಿಕ ಖಾತ್ರಿಗೆ ಕತ್ತರಿ

ಮನರೆಗಾ ಯೋಜನೆಯ ಪ್ರಕಾರ ಗ್ರಾಮೀಣ ಕುಟುಂಬದ ಯಾವುದೇ ಪ್ರಾಪ್ತವಯಸ್ಕ ಸದಸ್ಯರು ತಮ್ಮ ಸ್ಥಳೀಯ ಗ್ರಾಮ ಪಂಚಾಯಿತಿಯ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು. ಆ ಬೇಡಿಕೆಯನ್ನು ನೋಂದಾಯಿಸಿದ ನಂತರ, ರಾಜ್ಯ ಸರ್ಕಾರಕ್ಕೆ 15 ದಿನಗಳೊಳಗೆ ಕೆಲಸ ನೀಡಬೇಕಾದ ಜವಾಬ್ದಾರಿ ಇತ್ತು. ಆ ಅವಧಿಯಲ್ಲಿ ಕೆಲಸ ನೀಡದಿದ್ದರೆ, ಕಾರ್ಮಿಕರು ರಾಜ್ಯ ಸರ್ಕಾರದಿಂದ ನಿರುದ್ಯೋಗ ಭತ್ಯೆಗೆ ಕಾನೂನಾತ್ಮಕವಾಗಿ ಅರ್ಹರಾಗುತ್ತಿದ್ದರು. ಹೊಸ ಕಾನೂನಿನಲ್ಲಿಯೂ  ಈ ಅರ್ಹತೆ ಮುಂದುವರೆದಿದೆ, ಅಷ್ಟೇ ಅಲ್ಲ, ಖಚಿತ ಉದ್ಯೋಗ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ ಎಂದು ಕೃಷಿ ಸಚಿವರು ಹೇಳಿದ್ದಾರೆ.

ಆದರೆ ಅದೊಂದು ಭಾರೀ ದೊಡ್ಡ ರಾಜಕೀಯ ಕೈಚಳಕ. ಸಾರ್ವಜನಿಕರ ಕಣ್ಣಲ್ಲಿ ಇದು ಮನರೆಗಾಕ್ಕಿಂತ ಉತ್ತಮವಾದ ಕಾನೂನು ಎಂದು ಬಿಂಬಿಸುತ್ತಲೇ ಒಳಗಿನಿಂದಲೇ ಉದ್ಯೋಗ ಖಾತ್ರಿಯ ಅಂಶವನ್ನು ಟೊಳ್ಳು ಮಾಡಿದ್ದೇವೆ ಎಂಬುದನ್ನು ಸಚಿವರು ಮರೆಮಾಚುತ್ತಾರೆ. ಇಂದು ಕೇವಲ 2ಶೇ. ಮಂದಿ 100ದಿನಗಳ ಕೆಲಸ ಪಡೆದಿರುವ ಸಂದರ್ಭದಲ್ಲಿ 125 ದಿನಗಳು ಶುದ್ಧ ಮೋಸವಲ್ಲದೆ ಬೇರೇನೂ ಅಲ್ಲ.

ಅಲ್ಲದೆ ಕೃಷಿ ಚಟುವಟಿಕೆಗಳು ಉತ್ತುಂಗದಲ್ಲಿರುವಾಗ 60 ದಿನಗಳ ಅವಧಿಗೆ ಈ ಖಾತ್ರಿಯನ್ನೇ ಅಮಾನತುಗೊಳಿಸುವ ಹೊಸ ಅಂಶವನ್ನು ಇದರಲ್ಲಿ ಸೇರಿಸಿ ಖಾತ್ರಿಯೆಂಬ ಪರಿಕಲ್ಪನೆಯನ್ನೇ ಈ ಕಾನೂನಿನಿಂದ ಹೊರಗಟ್ಟಲಾಗಿದೆ.

ಇಷ್ಟೇ ಅಲ್ಲ, ಉದ್ಯೋಗವನ್ನು ಕೇಂದ್ರ ಸರಕಾರ ಅಧಿಸೂಚಿಸುವ ಗ್ರಾಮೀಣ ಪ್ರದೇಶದಲ್ಲಿ ಮಾತ್ರವೇ ಕೊಡಲಾಗುವುದು ಎಂದು ಸೆಕ್ಷನ್‍ 5(1) ರಲ್ಲಿ ಹೇಳಲಾಗಿದೆ.ಅಂದರೆ ಹೀಗೆ ಅಧಿಸೂಚನೆ ಪಡೆಯದ ಹಳ್ಳಿ ಪ್ರದೇಶಗಳ ಜನರಿಗೆ ಈ ಉದ್ಯೋಗ ಖಾತ್ರಿಯ ಹಕ್ಕೇ ಇರುವುದಿಲ್ಲ. ಅಂದರೆ ಮನರೆಗಾದ ಹಕ್ಕು-ಆಧಾರಿತ ಸಾರ್ವತ್ರಿಕ ಖಾತ್ರಿ ಎಂಬುದೇ ಇರುವುದಿಲ್ಲ- ಇನ್ನು ಮುಂದೆ ಖಾತ್ರಿಯೆಂಬುದು  ಕೇಂದ್ರ ಸರಕಾರದ ಮರ್ಜಿಗೆ ಒಳಪಟ್ಟು ಕೆಲವರಿಗೆ ಸೀಮಿತವಾಗುತ್ತದೆ ಎಂದು ಎಐಎಡಬ್ಲ್ಯುಯು ಜಂಟಿ ಕಾರ್ಯದರ್ಶಿ ಕೇಂದ್ರ ಕೃಷಿಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಕೂಲಿ ಕಾರ್ಮಿಕರಿಗೆ ಕೂಲಿ ಬೆಂಬಲವನ್ನು ತೆಗೆದುಹಾಕುವ ಮತ್ತು ಆ ಮೂಲಕ ಗ್ರಾಮೀಣ ಜಮೀನ್ದಾರಿಗಳ ವರ್ಗಕ್ಕೆ  ಅಗ್ಗದ ಕಾರ್ಮಿಕರನ್ನು ಲಭ್ಯಗೊಳಿಸುವ ದೊಡ್ಡ ಚಿತ್ರಣ ಹೊಸ ಮಸೂದೆಯಲ್ಲಿ ಅಡಗಿದೆ. ರಾಜ್ಯಗಳಲ್ಲಿ ಸರ್ಕಾರಗಳು ಶಾಸನಬದ್ಧ ಕನಿಷ್ಠ ವೇತನವನ್ನು ಪಾವತಿಸುವುದನ್ನು ಅದಾಗಲೇ ನಿಲ್ಲಿಸಿದ್ದವು. ಹಣದುಬ್ಬರಕ್ಕೆ ವೇತನ ತಳಕು ಹಾಕುವ ಪದ್ಧತಿಯನ್ನು ಕೈಬಿಡಲಾಗಿದೆ. ಕೂಲಿ ನಿರ್ಧಾರದ ಹಕ್ಕು ಕೇಂದ್ರ ಸರ್ಕಾರದ ಕೈಗೆ ಬಂದಿರುವುದು ಆತಂಕ ಹೆಚ್ಚುವ ವಿಷಯವಾಗಿದೆ ಎಂದು ಅವರು ಮುಂದುವರೆದು ಹೇಳುತ್ತಾರೆ.

ಇದನ್ನೂ ಓದಿ : ಭರವಸೆಗಳನ್ನು ನೀಡಲಾಯಿತು, ಆದರೆ ಯಾವುದೂ ಜಾರಿಗೆ ಬಂದಿಲ್ಲ: ಧವಾಳೆ

ಎಲ್ಲಾ ಅಧಿಕಾರಗಳು ಕೇಂದ್ರಕ್ಕೆ ಮೀಸಲು

ಇದು ಹೊಸ ಕಾಯ್ದೆಯ ಬಗ್ಗೆ ಇರುವ ಮತ್ತೊಂದು ಪ್ರಮುಖ ಟೀಕೆ. ಹೀಗೆ ಟೀಕೆ ಮಾಡುವವರು ಈ ಕಾಯ್ದೆಯ “ಶಿಲ್ಪ”ವನ್ನು ಗಮನಿಸಿಲ್ಲ ಎನ್ನುತ್ತಾರೆ ಕೃಷಿ ಸಚಿವರು. ಆದರೆ  ಈ ಕಾಯ್ದೆ ಮನರೆಗಾದಲ್ಲಿ ಗ್ರಾಮಸಭೆಗಳು/ಪಂಚಾಯತುಗಳಿಗೆ ಇದ್ದ ಸ್ವಾಯತ್ತತೆಯನ್ನು ಮೊಟಕು ಮಾಡಿದೆ. ಮನರೆಗಾದ ಅಡಿಯಲ್ಲಿ ಗ್ರಾಮಸಭೆ/ಪಂಚಾಯತುಗಳಿಗೆ ಸ್ಥಳೀಯ ಆದ್ಯತೆಗಳಿಗೆ ಅನುಗಣವಾಗಿ ಕಾಮಗಾರಿಗಳನ್ನು ಮಂಜೂರು ಮಾಡುವ ಅಧಿಕಾರ ಇತ್ತು. ಹೊಸ ಕಾಯ್ದೆ ಅದನ್ನು ಬದಲಿಸಿದೆ. ಕೇಂದ್ರ ಸರಕಾರ ತನ್ನ ವಿಕಸಿತ್‍ ಭಾರತ್, ಪಿಎಂ ಗತಿಶಕ್ತಿ ಮುಂತಾದ ಯೋಜನೆಗಳಿಗೆ ಹೊಂದುವಂತೆ ರಾಜ್ಯಗಳಿಗೆ, ಜಿಲ್ಲೆಗಳಿಗೆ ಮತ್ತು ಪಂಚಾಯತೀ ರಾಜ್ಯ ಸಂಸ್ಥೆಗಳಿಗೆ ‘ಮಾರ್ಗದರ್ಶನ’ ನೀಡುತ್ತದೆ ಎಂದು ಈ ಹೊಸ ಕಾಯ್ದೆಯ ಷೆಡ್ಯೂಲ್‍ 1, ಕಲಮು 6(4)  ಹೇಳುತ್ತದೆ. ಹೀಗಿರುವಾಗ ಗ್ರಾಮ ಸಭೆಗಳು ಮಾಡಿದ ನಿರ್ಧಾರಗಳಿಗೆ ಆಧ್ಯತೆ ಎಲ್ಲಿ ಬರಲು ಸಾಧ್ಯ ಎಂದು ವಿಕ್ರಂಸಿಂಗ್‍ ಪ್ರಶ್ನಿಸುತ್ತಾರೆ.

ಕೃಷಿ ಸಚಿವರು ಹೇಳುವ ಹೊಸ ಕಾಯ್ದೆಯ  ‘ಶಿಲ್ಪ’ ದಿಲ್ಲಿಯಿಂದ ಉದುರುವ ಕೇಂದ್ರೀಕರಣವನ್ನೇ ಸಾರಿ ಹೇಳುತ್ತಿರುವುದು ಸ್ಪಷ್ಟ. ಇದು ಹಕ್ಕು ಆಧಾರಿತ ಉದ್ಯೋಗ ಖಾತ್ರಿ ಮನರೆಗಾವನ್ನು ಕೇಂದ್ರ ಸರಕಾರ ನಿರ್ವಹಿಸುವ ಪೂರೈಕೆ-ಸೀಮಿತ ಕಾರ್ಯಕ್ರಮವಾಗಿ ಪರಿವರ್ತಿಸಿದೆ. ಅಲ್ಲದೆ, ಕೇಂದ್ರದಿಂದ ಪ್ರಸ್ತಾವನೆಗಳು ಬಂದು ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ನಿಗದಿಪಡಿಸಿದಾಗ, ಈ ಕೆಲಸದ “ಖಾತರಿ”ಯನ್ನು ಸಹ ಕಾರ್ಯಗತಗೊಳಿಸುವ ಸಂಪೂರ್ಣ ಹೊರೆ ರಾಜ್ಯಗಳ ಮೇಲೆ ಬೀಳುತ್ತದೆ.

ಸಮಾಲೋಚನೆಯೆಂಬ ಬೊಗಳೆ

ಈ ಮಸೂದೆಯನ್ನು ಮಂಡಿಸುವ ಮೊದಲು  ವ್ಯಾಪಕ ಸಮಾಲೋಚನೆ ನಡೆಸಲಾಗಿತ್ತು ಎಂಬ ಕೃಷಿ ಸಚಿವರ ಮಾತಂತೂ ಪಕ್ಕಾ ಬೊಗಳೆಯೇ  ಆಗಿದೆ. ಅವರು ಹೇಳುವಂತೆ ರಾಜ್ಯಗಳೊಂದಿಗಾಗಲೀ, ಸಂಬಂಧಪಟ್ಟ ಯಾವುದೇ ವಿಭಾಗದೊಂದಿಗಾಗಲೀ ಚರ್ಚೆಗಳು, ಟೆಕ್ನಿಕಲ್‍ ವರ್ಕ್‍ಶಾಪ್‍ಗಳು ಇತ್ಯಾದಿಗಳು ನಡೆಯಲೇ ಇಲ್ಲ. ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವ ಮೊದಲು ಆ ಕುರಿತು ಸಾರ್ವಜನಿಕ ಮಾಹಿತಿಯೂ ಇರಲಿಲ್ಲ. ಈ  ಬಗ್ಗೆ ಅಧ್ಯಯನಗಳಲ್ಲಿ ತೊಡಗಿದ್ದವರಿಗೆ ಮತ್ತು ಸಂಸದರಿಗಷ್ಟೇ ಅಲ್ಲ, ಈ ಹಿಂದೆ 2005ರಲ್ಲಿ ಮನರೆಗಾ ಮಸೂದೆಯನ್ನು ಕರಡು ತರಯಾರಿಸಿದ ವ್ಯಕ್ತಿಗಳಿಗೂ ಇಂತಹದೊಂದು ಮಸೂದೆಯ ಮಂಡನೆ ಆಘಾತಕಾರೀ ಸುದ್ದಿಯಾಗಿ ಬಂದಿರುವುದೇ ‘ವ್ಯಾಪಕ ಸಮಾಲೋಚನೆ’ ಎಂಬುದು ಬರೀ ಬೊಗಳೆ ಎನ್ನುವುದನ್ನು ತೋರಿಸುತ್ತದೆ ಎಂದು ವಿಕ್ರಂಸಿಂಗ್‍ ಕಟುವಾಗಿ ಟಿಪ್ಪಣಿ ಮಾಡಿದ್ದಾರೆ.

ಸುಳ್ಳು ದಾವೆಗಳು-ನೆಪಗಳು, ಮರೆಮಾಚಿದ ಸತ್ಯಗಳು

ಮೋದಿ ನೇತೃತ್ವದ ಸರಕಾರಗಳು ಮನರೆಗಾಕ್ಕೆ ಹೆಚ್ಚಿನ ಹಣ ನೀಡಿವೆ ಎಂಬ ಕೃಷಿ ಮಂತ್ರಿಗಳ ದಾವೆ ಮತ್ತೊಂದು ಬೊಗಳೆ. ಏಕೆಂದರೆ 2009-10ರಲ್ಲಿ ಯುಪಿಎ ಸರಕಾರ  ಈ ಯೋಜನೆಗೆ ನೀಡಿದ್ದ ರೂ.39000 ಕೋಟಿ, ಆ ಬಜೆಟ್‍ನ 3.5% ಆಗಿತ್ತು, ಆದರೆ ಈಗ ಎನ್‍ಡಿಎ ಸರಕಾರ ನೀಡಿರುವ 86,000 ಕೋಟಿ ರೂ. ಬಜೆಟಿನ ಕೇವಲ 1.6% ಎಂಬುದನ್ನು  ಕೃಷಿಮಂತ್ರಿಗಳು ಮರೆಮಾಚಿದ್ದಾರೆ.

ಮನರೆಗಾದ ಅಡಿಯಲ್ಲಿ ಕೂಲಿಯ ಮೌಲ್ಯಸವೆತ  ಈ ಬೊಗಳೆಯನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತದೆ. ಅರ್ಥಶಾಸ್ತ್ರಜ್ಞ ಜೀನ್‍ ಡ್ರೀಜ್ ತಮ್ಮ “ ಮನರೆಗಾದ ಸಂಕ್ಷಿಪ್ತ ಇತಿಹಾಸ’ ಕೃತಿಯಲ್ಲಿ ಇದನ್ನು ತೋರಿಸಿದ್ದಾರೆ. ಮನರೆಗಾದ ಅಡಿಯಲ್ಲಿ ಕೂಲಿ ದರಗಳು ಆರಂಭದಲ್ಲಿ ಕೃಷಿಕೂಲಿದರಗಳಿಗಿಂತ ಮೇಲಿದ್ದವು. ಆದರೆ 2014-15ರಿಂದ ಕ್ರಮೇಣ ಅವು ಹಿಂದೆ ಬೀಳಲಾರಂಭಿವೆ. ಗಂಡಸರಿಗೆ ಸಿಗುವ ಕೃಷಿಕೂಲಿಯ 2/3ರಷ್ಟಕ್ಕೆ ಇಳಿಯಿತು. ಈ ಅಂತರ ಹಾಗೆಯೇ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಮನರೆಗಾ ವನ್ನು ಯುಪಿಎ ಅಧಿಕಾರಾವಧಿಯಲ್ಲಿ ತರಲಾಯಿತು. ಆದರೆ ಆ ಕಾಯ್ದೆಯನ್ನು ಯುಪಿಎ ಯೇ ತಂದಿತು ಎಂಬ ತಪ್ಪು ಕಲ್ಪನೆಯಿದೆ. ವಾಸ್ತವವಾಗಿ ಯುಪಿಎ-1 ಸರಕಾರ ಎಡಪಕ್ಷಗಳ ಬೆಂಬಲವನ್ನು ಅವಲಂಬಿಸಿದ್ದಾಗ ಇದನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಆದರೆ ಯುಪಿಎ ಸರಕಾರಕ್ಕೆ ಎಡಪಕ್ಷಗಳು ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಜಾರಿಯಲ್ಲಿ ಅವನತಿ ಆರಂಭವಾಯಿತು. ಆದರೂ, ಆ ಕಾಯ್ದೆಯ ನೀತಿಗೆ ಅಡ್ಡಿ ಬಂದಿರಲಿಲ್ಲ. ಆದರೆ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ಮೊದಲ ವರ್ಷದಲ್ಲೇ ಉದ್ಯೋಗ ನಿರ್ಮಾಣದಲ್ಲಿ ತೀವ್ರ ಇಳಿಕೆ ಕಂಡುಬಂತು. ಮೊದಲ ಬಾರಿಗೆ ಕೆಲಸದ ಒಟ್ಟು ವ್ಯಕ್ತಿ-ದಿನಗಳ ಸಂಖ್ಯೆ 200 ಕೋಟಿಗಿಂತ ಕೆಳಗಿಳಿಯಿತು. ಕೇವಲ 166 ಕೋಟಿಯಾಯಿತು.

ಇಷ್ಟೇ ಅಲ್ಲ, ಜಾರಿಯನ್ನು ಉತ್ತಮಗೊಳಿಸುವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟದ ನೆಪದಲ್ಲಿ, ಜನಗಳನ್ನು ಹೊರತುಪಡಿಸುವ ತಂತ್ರಜ್ಞಾನಗಳನ್ನು ಪರಿಚಯಿಸಲಾಯಿತು, ಇದರಿಂದಾಗಿ ಕೋಟ್ಯಂತರ ಜಾಬ್ ‍ಕಾರ್ಡ್‍ಗಳನ್ನು ರದ್ದುಮಾಡಿ ಹಲವಾರು ಕುಟುಂಬಗಳು ಕೆಲಸ ಕೇಳದಂತೆ ಮಾಡಲಾಗಿದೆ. 2025ರ ಅಕ್ಟೋಬರ್‍ 10ರಿಂದ ನವಂಬರ್ 14ರ  ನಡುವೆ 27 ಲಕ್ಷ ಜಾಬ್‍ ಕಾರ್ಡ್‍ಗಳನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.

ಯುಪಿಎ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳುತ್ತಲೇ, ಎನ್‍ಡಿಎ ಅಧಿಕಾರಾವಧಿಯಲ್ಲಿ ಈ ಭ್ರಷ್ಟಾಚಾರ ಉತ್ತುಂಗಕ್ಕೆ ಏರಿರುವುದು ಕಂಢು ಬಂದಿದೆ. ಮನರೆಗ ಕಾಯ್ದೆಯ ಅಡಿಯಲ್ಲಿ ನಡೆಸಬೇಕಾದ  ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ 2020-21 ರಿಂದ 2024-25ರ ಅವಧಿಯಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳೀತ ಪ್ರದೇಶಗಳಲ್ಲಿ ಒಟ್ಟು 6,15,840 ವಂಚನೆಯ ಪ್ರಕರಣಗಳಲ್ಲಿ ಒಟ್ಟು 889.19 ಕೋಟಿ ರೂ.ಗಳ ದುರುಪಯೋಗ ನಡೆದಿದೆ ಎಂಧು ಕಂಡುಬಂದಿದೆ. ಇತ್ತೀಚೆಗೆ ಗುಜರಾತಿನಲ್ಲಿ  71 ಕೋಟಿ ರೂ.ಗಳ ಮನರೆಗ ಹಗರಣದಲ್ಲಿ ಬಿಜೆಪಿ ಮುಖಂಡನ ಮಗನನ್ನು ಬಂಧಿಸಲಾಗಿದೆ. ಈ ಹಗರಣದ ತನಿಖೆ ಇನ್ನೂ ನಡೆದಿಲ ಎಂದು ವಿಕ್ರಂಸಿಂಗ್ ‍ಈ ಸಂದರ್ಭದಲ್ಲಿ ನೆನಪಿಸುತ್ತಾರೆ.

ಕಲ್ಯಾಣವೂ ಇಲ್ಲ, ಅಭಿವೃದ್ಧಿಯೂ ಇಲ್ಲ

ಕೃಷಿ ಮಂತ್ರಿಗಳು ಈ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತ ಇದರ ಬಗ್ಗೆ ವಿಮರ್ಶೆ ಅಭಿವೃದ್ಧಿ ಮತ್ತು ಜನಕಲ್ಯಾಣದ ನಡುವಿನ ಹುಸಿ ಚರ್ಚೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಇಂತಹ ಟೀಕೆಯನ್ನು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವವರು ಯಾರೂ ಮಾಡಿಲ್ಲ. ಬಹುಶಃ ಮಧ್ಯಮ ವರ್ಗದವರನ್ನು ದಾರಿ ತಪ್ಪಿಸಲು ಇದು ನೆರವಾಗಬಹುದಷ್ಟೇ. ಕಾನೂನಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಿರುವಾಗ, ಬೇಡಿಕೆ ಹೆಚ್ಚುತ್ತಿದ್ದರೂ ಹಣನೀಡಿಕೆಯನ್ನು ಕುಗ್ಗಿಸುತ್ತಿರುವಾಗ ಮತ್ತು ಹಕ್ಕುದಾರರಾಗಿರುವ ನಾಗರಿಕರನ್ನು ಉದ್ಯೋಗಕ್ಕೆ ಕೈಚಾಚಬೇಕಾದ ಭಿಕ್ಷುಕರನ್ನಾಗಿ ಮಾಡಿರುವಾಗ ಜನಕಲ್ಯಾಣವೂ ಸಾಧ್ಯವಿಲ್ಲ, ಅಭಿವೃದ್ಧಿಯೂ ಸಾಧ್ಯವಿಲ್ಲ.

ಪರಮಾನಂದ, 11 ವರ್ಷಗಳ  “ಉದ್ಯೋಗ ಖಾತ್ರಿ” ಕೆಲಸದ ನಂತರ!

ವ್ಯಂಗ್ಯಚಿತ್ರ ಕೃಪೆ: ಸಜಿತ್‍ ಕುಮಾರ್, ಡೆಕ್ಕನ್ ‍ಹೆರಾಲ್ಡ್

 

ಇದನ್ನೂ ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media

Donate Janashakthi Media

Leave a Reply

Your email address will not be published. Required fields are marked *