ಕಲ್ಬುರ್ಗಿ: ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಕುಂಚಾವರಂ ಠಾಣೆ ಪೊಲೀಸರು ಪ್ರಾಚಾರ್ಯ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ವಸತಿ ಶಾಲೆಯ ಪ್ರಾಚಾರ್ಯ ಮತ್ತು ಕಂಪ್ಯೂಟರ್ ಆಪರೇಟರ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿ ಸಿಬ್ಬಂದಿಯನ್ನು ಥಳಿಸಿದ್ದಾರೆ.
ಈ ಶಾಲೆಯ ಕೆಲವು ವಿದ್ಯಾರ್ಥಿನಿಯರು ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿದ್ಯಾರ್ಥಿನಿಯರ ದಿನಚರಿ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿನಿಯರು ತಮಗೆ ಕಳೆದ ಕೆಲವು ದಿನದಿಂದ ತುಂಬ ಕಿರಿಕಿರಿಯಾಗುತ್ತಿದೆ, ಶಾಲೆಯ ಪ್ರಾಚಾರ್ಯ, ಕಂಪ್ಯೂಟರ್ ಆಪರೇಟರ್ ಇಬ್ಬರು ರಾತ್ರಿ ಬಂದು ತಮ್ಮ ಮುಟ್ಟುವ ಮೂಲಕ ಕಿರಿಕಿರಿ ಮಾಡುತ್ತಿದ್ದಾರೆಂದು ಹೇಳುತ್ತ ಇದರಿಂದಲೇ ಮೈಕೈ ನೋವು, ಅನಾರೋಗ್ಯ ಅನ್ನಿಸುತ್ತಿದೆ ಎಂದಾಗ ಇದರಿಂದ ಚಕಿತಗೊಂಡ ವೈದ್ಯರು ತಕ್ಷಣ ಸದರಿ ವಿಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇದಾದ ನಂತರ ಸಮಾಜ ಕಲ್ಯಾಣಾಧಿಕಾರಿ ಬುಳ್ಳಾ ವಿದ್ಯಾರ್ಥಿನಿಯರನ್ನು ಕಂಡು ಮಾತನಾಡಿಸಿ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರಿಂದ ಕುಂಚಾವರಂ ಠಾಣೆಯಲ್ಲಿ ಶಾಲೆಯ ಪ್ರಾಚಾರ್ಯ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಭೇಟಿ : ಜಿಲ್ಲಾಧಿಕಾರಿ ಯಶವಂತ್ ರವರು, ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕುಂಚಾವರಂ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಇಬ್ಬರೂ ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದರು.
ಶಾಲೆಗೆ ಮಹಿಳಾ ವಾರ್ಡನ್ ಕಂಪ್ಯೂಟರ್ ಆಪರೇಟರ್ ಮತ್ತು ಮಹಿಳಾ ಪ್ರಾಂಶುಪಾಲರನ್ನು ನಿಯೋಜಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿ ಲಭ್ಯವಾಗದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಅವರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಸದಸ್ಯತ್ವ ಪಡೆದ ಆರೋಪಿ: ಬಂಧನಕ್ಕೊಳಗಾದ ಬಳಿಕ ವಸತಿ ಶಾಲೆಯ ಪ್ರಾಚಾರ್ಯ ಹುದ್ದೆಯಿಂದ ಅಮಾನತುಗೊಂಡಿರುವ ಚೇತನ್ ರೆಡ್ಡಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಚಿಹ್ನೆ ಇರುವ ಶಾಲು ಹಾಕಿಕೊಂಡು ಕಾರ್ಯಕರ್ತರೊಂದಿಗೆ ಇರುವ ಚಿತ್ರಗಳು ಬಹಿರಂಗವಾಗಿವೆ.