ಕೃಷಿನೀತಿ ಪರಿಶೀಲಿಸಿ ರೈತರನ್ನು ಕಾಪಾಡಿ – ವರುಣ್ ಗಾಂಧಿ

ನವದೆಹಲಿ : ಉತ್ತರ ಪ್ರದೇಶದ ರೈತ ಸಮೋಧ ಸಿಂಗ್ ಕಳೆದ 15 ದಿನಗಳಿಂದ ತಾನು ಬೆಳೆದ ಭತ್ತವನ್ನು ಮಾರಾಟ ಮಾಡಲು ಮಂಡಿ ಅಲೆದಾಡಿದ್ದಾನೆ. ಆದರೆ ಎರಡು ವಾರವಾದರೂ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಕಳೆದೆರಡು ವಾರದಿಂದ ಮಂಡಿ ಅಲೆದು ಬೇಸತ್ತಿದ್ದ ರೈತ ಸಮೋಧ ಸಿಂಗ್, ತಾನು ಬೆಳೆದ ಭತ್ತಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಈ ವಿಡಿಯೋವನ್ನು ವರುಣ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈತರ ಸುಧಾರಣೆಗೆ ತಂದಿರುವ ಕೃಷಿ ನೀತಿಯಿಂದ ರೈತ ಎಲ್ಲಿ ನಿಂತಿದ್ದಾನೆ. ಹೀಗಾಗಿ ಕೃಷಿ ನೀತಿಯನ್ನು ಮರು ಪರಿಶೀಲಿಸುವ ಅಗತ್ಯವಿದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೇಂದ್ರದ ಕೃಷಿ ಮಸೂದೆ ವಿರುದ್ಧ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ರೈತರ ಬೇಡಿಕೆಯಂತೆ ಮೂರು ಕೃಷಿ ಕಾಯ್ದೆ ರದ್ದತಿಗೆ ಈ ಮೂಲಕ ಆಗ್ರಹಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಉತ್ತರ ಪ್ರದೇಶ ಯೋಗಿ ಸರ್ಕಾರದ ವಿರುದ್ಧ ಸದಾ ಕಿಡಿ ಕಾರುತ್ತಿರುವ ಬಿಜೆಪಿ ನಾಯಕ ವರುಣ್ ಗಾಂಧಿ ಇದೀಗ ಮತ್ತೆ ರೈತರ ಪರ ನಿಂತು ತಮ್ಮದೇ ಪಕ್ಷವನ್ನು ಕುಟುಕಿದ್ದಾರೆ. ಲಂಖೀಪುರ ಹಿಂಸಾಚಾರ ರಾಯಬರೇಲಿ ಪ್ರವಾಹ ಸೇರಿದಂತೆ ಕೆಲ ಪ್ರಮುಖ ವಿಚಾರ ಹಿಡಿದು ಯೋಗಿ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ಇದೀಗ ತನ್ನ ಭತ್ತದ ಬೆಳೆ ಮಾರಾಟ ಮಾಡಲಾಗದೆ ಬೆಂಕಿ ಹಚ್ಚಿದ ರೈತನ ವಿಡಿಯೋ ಶೇರ್ ಮಾಡಿ, ಕೇಂದ್ರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಹಲವು ಬಾರಿ ವರುಣ್ ಗಾಂಧಿ ನಿಂತಿದ್ದಾರೆ. ಪ್ರತಿ ಭಾರಿ ರೈತರ ವಿಡಿಯೋ ಅಥವಾ ವಿಚಾರ ಹಿಡಿದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೆಲ ದಿನಗಳಿಂದ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ವರುಣ್ ಗಾಂಧಿ ಆಕ್ರೋಶ ಹೊರಹಾಕಿದ್ದರು.

ಬಿಜೆಪಿ ಸರ್ಕಾರದ ಹುಳುಕುಗಳನ್ನು ಹಿಡಿದು ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವರುಣ್ ಗಾಂಧಿಯವರ ಮಾತುಗಳನ್ನು ಮೋದಿ ಸರಕಾರ ಆಲಿಸಲಿ ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.

 

Donate Janashakthi Media

Leave a Reply

Your email address will not be published. Required fields are marked *