- 30 ಕೋಟಿಗೆ ಬೇಡಿಕೆ – ನ.25ರಂದು ಘಟನೆ -ಡಿ.1ರಂದು ದೂರು
ಬೆಂಗಳೂರು: ಮಾಜಿ ಸಚಿವ ಆರ್. ವರ್ತೂರು ಪ್ರಕಾಶ್ (54) ಅವರನ್ನು ಅಪಹರಿಸಿದ್ದ ಅಪರಿಚಿತ ತಂಡ ₹ 30 ಕೋಟಿಗೆ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದು, 48 ಲಕ್ಷ ರೂ ನೀಡಿದ್ದೇನೆ ಎಂದು ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಘಟನೆ ಸಂಬಂಧ ವರ್ತೂರು ಪ್ರಕಾಶ್, ಎರಡು ಪುಟಗಳ ದೂರು ನೀಡಿದ್ದಾರೆ. ಎಂಟು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಬಳಿ ರಸ್ತೆಯಿಂದ ಕಾರು ಚಾಲಕ ಸುನೀಲ್ ಸಮೇತ ಪ್ರಕಾಶ್ ಅವರನ್ನು ನ. 25ರಂದು ದುಷ್ಕರ್ಮಿಗಳ ತಂಡ ಅಪಹರಣ ಮಾಡಿತ್ತು. ನಂತರ, ಕೈ ಕಾಲು ಕಟ್ಟಿಹಾಕಿ ಚಿತ್ರಹಿಂಸೆ ನೀಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಬಿಡುಗಡೆ ಮಾಡಲು ₹ 30 ಕೋಟಿಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.
‘ಕಾರಿನಲ್ಲಿ ಸುತ್ತಾಡಿಸಿದ್ದ ಆರೋಪಿಗಳು ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭೀತಿಯಲ್ಲಿ ಹೊಸಕೋಟೆ ಬಳಿಯ ಶಿವನಾಪುರ ಗ್ರಾಮದ ಪ್ರಕಾಶ್ ಅವರನ್ನು ಬಿಟ್ಟುಹೋಗಿದ್ದರು. ನಂತರ, ಸಾರ್ವಜನಿಕರೊಬ್ಬರ ವಾಹನದಲ್ಲಿ ಆಸ್ಪತ್ರೆಗೆ ಹೋದ ಪ್ರಕಾಶ್ ಚಿಕಿತ್ಸೆ ಪಡೆದಿದ್ದರು. ಅವರ ಕಾರು ಬೆಳ್ಳಂದೂರು ಬಳಿಯ ಸ್ಮಶಾನದಲ್ಲಿ ಮಂಗಳವಾರ ಪತ್ತೆಯಾಗಿದೆ. ನಂತರವೇ ಪ್ರಕಾಶ್, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.
‘ಕೈ– ಕಾಲು ಕಟ್ಟಿ, ರಾಡ್–ಲಾಂಗ್‌ನಿಂದ ಹಲ್ಲೆ
‘ನ. 25ರಂದು ಸಂಜೆ 7 ಗಂಟೆ ಸುಮಾರಿಗೆ ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮ ಬಳಿ ಇರುವ ನನ್ನ ಫಾರ್ಮ್‌ಹೌಸ್‌ನಿಂದ ಕಾರಿನಲ್ಲಿ ಬೆಂಗಳೂರಿನತ್ತ ಬರುತ್ತಿದ್ದೆ. ಚಾಲಕ ಸುನೀಲ್ ಸಹ ಜೊತೆಗಿದ್ದ. ಫಾರ್ಮ್‌ಹೌಸ್‌ನಿಂದ ಒಂದು ಕಿ.ಮೀ ದೂರ ಬರುತ್ತಿದ್ದಂತೆ, ಎರಡು ಕಾರುಗಳಲ್ಲಿ ಬಂದ ಎಂಟು ದುಷ್ಕರ್ಮಿಗಳು ನನ್ನ ಕಾರು ಅಡ್ಡಗಟ್ಟಿದ್ದರು. ರಾಡ್ ಹಾಗೂ ಲಾಂಗ್ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಗಳು, ನನ್ನನ್ನು ಹಾಗೂ ಚಾಲಕನನ್ನು ಕಾರಿನ ಹಿಂಬದಿ ಸೀಟಿಗೆ ತಳ್ಳಿದ್ದರು. ನಂತರ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿದ್ದರು. ನನ್ನದೇ ಕಾರಿನಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು’…
ಇದು, ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಅವರು ತಮ್ಮ ಅಪಹರಣ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿರುವ ವಿವರ. ಇದನ್ನು ಆಧರಿಸಿ, ಅಪಹರಣ, ಕೊಲೆ ಯತ್ನ, ಹಲ್ಲೆ, ಅಕ್ರಮ ಬಂಧನ ಆರೋಪದಡಿ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
30 ಕೋಟಿ ತರಿಸಿಕೊಡುವಂತೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಾನು ಒಪ್ಪಿರಲಿಲ್ಲ. ಆಗ, ಬಟ್ಟೆ ಬಿಚ್ಚಿಸಿ ಕೈ–ಕಾಲು ಕಟ್ಟಿ ಹಾಕಿ ರಾಡ್ ಹಾಗೂ ಲಾಂಗ್‌ನಿಂದ ಹಲ್ಲೆ ಮಾಡಿದ್ದರು. ಕಾಲು ಹಾಗೂ ಕೈಗೆ ಗಾಯವಾಯಿತು. ಬಾಯಿಯಲ್ಲಿ ರಕ್ತ ಬರಲಾರಂಭಿಸಿತ್ತು. ನನ್ನ ಚಾಲಕನ ಮೇಲೂ ಹಲ್ಲೆ ಮಾಡಿದ್ದರು. ಆರೋಪಿಗಳ ಹಿಂಸೆ ತಾಳಲಾರದೇ, ಪರಿಚಯಸ್ಥ ನಯಾಜ್ ಎಂಬುವರ ಮೂಲಕ ಕೋಲಾರದ ಕಾಫಿ ಡೇ ಬಳಿ ನ. 26ರಂದು ಆರೋಪಿಗಳಿಗೆ 48 ಲಕ್ಷ ಕೊಡಿಸಿದ್ದೆ. ಅದಾದ ನಂತರವೂ ಆರೋಪಿಗಳು, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಚಿತ್ರಹಿಂಸೆ ಮುಂದುವರಿಸಿದ್ದರು’ ಎಂದೂ ಅವರು ವಿವರಿಸಿದ್ದಾರೆ.
‘ನ. 28ರಂದು ಸಹ ನನ್ನ ಚಾಲಕನ ತಲೆಗೆ ರಾಡ್‌ನಿಂದ ಹೊಡೆದು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ್ದರು. ಆತ ಮೃತಪಟ್ಟಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದ ಆರೋಪಿಗಳು, ಮದ್ಯ ಸೇವಿಸಲು ಹೋಗಿದ್ದರು. ಅದೇ ವೇಳೆ ಚಾಲಕ, ಅಲ್ಲಿಂದ ಪರಾರಿಯಾಗಿ ಹೋಗಿದ್ದ. ಆತ ಪೊಲೀಸರಿಗೆ ಮಾಹಿತಿ ನೀಡಬಹುದೆಂದು ತಿಳಿದ ಆರೋಪಿಗಳು, ನನ್ನನ್ನು ಪುನಃ ಕಾರಿನಲ್ಲಿ ಹತ್ತಿಸಿಕೊಂಡು ಹಲವೆಡೆ ಸುತ್ತಾಡಿಸಿದ್ದರು. ಮರುದಿನ ನಸುಕಿನಲ್ಲಿ ಹೊಸಕೋಟೆ ಬಳಿಯ ಶಿವನಾಪುರ ಬಳಿ ನನ್ನನ್ನು ಕಾರಿನಿಂದ ತಳ್ಳಿ ಆರೋಪಿಗಳು ಪರಾರಿಯಾದರು.
‘ಆರೋಪಿಗಳ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾನು, ಸಾರ್ವಜನಿಕರೊಬ್ಬರ ಸಹಾಯದಿಂದ ಕೆ.ಆರ್.ಪುರದ ಸತ್ಯಸಾಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದೆ. ಮಂಗಳವಾರ (ಡಿ.1) ಬೆಳ್ಳಂದೂರು ಬಳಿಯ ಸ್ಮಶಾನದಲ್ಲಿ ನನ್ನ ಕಾರು ಪತ್ತೆಯಾದ ಸುದ್ದಿ ತಿಳಿಯಿತು. ನಂತರ ಠಾಣೆಗೆ ಬಂದು ದೂರು ನೀಡಿದ್ದೇನೆ’ ಎಂದೂ ದೂರಿನಲ್ಲಿ ಪ್ರಕಾಶ್ ತಿಳಿಸಿದ್ದಾರೆ.
‘ವರ್ತೂರು ಪ್ರಕಾಶ್ ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವ ವ್ಯಕ್ತಿಗಳೇ, ಅವರನ್ನು ಅಪಹರಣ ಮಾಡಿರುವ ಅನುಮಾನವಿದೆ. ಬಿಡುಗಡೆ ಆಗುವುದಕ್ಕಾಗಿ ಪ್ರಕಾಶ್ ಅವರು, ಪರಿಚಯಸ್ಥರ ಮೂಲಕ ಆರೋಪಿಗಳಿಗೆ ₹1.50 ಕೋಟಿ ಕೊಡಿಸಿರುವ ಶಂಕೆಯೂ ಇದೆ. ಆದರೆ, ದೂರಿನಲ್ಲಿ ಅವರು 48 ಲಕ್ಷವೆಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.