ಬೆಂಗಳೂರು: ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ 289 ಹುದ್ದೆಗಳು ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಹೇಳಿದೆ. ವಿಧಾನ ಪರಿಷತ್ ಕಲಾಪದಲ್ಲಿ ಪದವೀಧರ ಕ್ಷೇತ್ರದ ಸದಸ್ಯ ಡಾ. ಚಂದ್ರಶೇಖರ್ ಬಿ. ಪಾಟೀಲ್ ಈ ಕುರಿತು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು.
ವಿಧಾನಮಂಡಲದ ರಾಜ್ಯ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಸರ್ಕಾರ ಈ ಕುರಿತು ಲಿಖಿತ ಉತ್ತರ ನೀಡಿದೆ. ಡಾ. ಚಂದ್ರಶೇಖರ್ ಬಿ. ಪಾಟೀಲ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ಎಂದು ಪ್ರಶ್ನಿಸಲಾಗಿತ್ತು. ಇಲಾಖೆಯಲ್ಲಿ ಎ, ಬಿ, ಸಿ ಮತ್ತು ಡಿ ವರ್ಗಗಳ 289 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಮಾಹಿತಿ ಕೊಟ್ಟಿದೆ.
ಗ್ರೂಪ್ ಎ 21 ಹುದ್ದೆಗಳು, ಗ್ರೂಪ್ ಬಿ 11 ಹುದ್ದೆಗಳು, ಗ್ರೂಪ್ ಸಿ 181 ಹುದ್ದೆಗಳು ಮತ್ತು ಗ್ರೂಪ್ ಡಿ 76 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಲಿಖಿತ ಉತ್ತರದಲ್ಲಿ ತಿಳಿಸಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳು ಏನು? ಎಂದು ಸಹ ಪರಿಷತ್ ಸದಸ್ಯರ ಕೇಳಿದ್ದಾರೆ. ಇದಕ್ಕೆ ಸಹ ಸರ್ಕಾರ ವಿವರಣೆ ನೀಡಿದೆ.
ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮವು 1978ರಲ್ಲಿ ಸಮಗ್ರ ಪರಿಷ್ಕರಣೆಗೆ ಒಳಗಾಗಿದ್ದು, ನಂತರ ಇದುವರೆಗೂ ಪರಿಷ್ಕರಣೆಯಾಗಿರುವುದಿಲ್ಲ. ಹಾಲಿ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಆಧುನಿಕ ವಿದ್ಯಾರ್ಹತೆ ಮತ್ತು ಸೇವಾನುಭವದ ಆಧಾರದ ಮೇಲೆ ಸಮಗ್ರವಾಗಿ ಪರಿಷ್ಕರಿಸಲು ಕ್ರಮವಹಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ.