ಕೋಲ್ಕತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆಸ್ಪತ್ರೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ.
ಆರ್ ಜಿ ಕಾರ್ ಆಸ್ಪತ್ರೆಗೆ ನುಗ್ಗಿದ ಸಾವಿರಾರು ಜನರ ಗುಂಪು ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿತ್ತು. ಆಸ್ಪತ್ರೆ ಮೇಲೆ ದಾಂಧಲೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ವೈದ್ಯರು 24 ಗಂಟೆಗಳ ಪ್ರತಿಭಟನೆ ಘೋಷಿಸಿದ್ದಾರೆ.
ಇದೇ ವೇಳೆ ದಾಂಧಲೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪಶ್ಚಿಮಬಂಗಾಳದ ಕೋಲ್ಕತಾ ಹೈಕೋರ್ಟ್, ಘಟನೆಗೆ ರಾಜ್ಯದ ಆಡಳಿತ ಯಂತ್ರದ ವೈಫಲ್ಯ ಕಾರಣ ಎಂದು ಕಿಡಿಕಾರಿದೆ. ಅಲ್ಲದೇ 7000 ಮಂದಿ ಆಸ್ಪತ್ರೆಗೆ ನುಗ್ಗುವಾಗ ಪೊಲೀಸರು ಏನು ಮಾಡುತ್ತಿದ್ದರು? ಮುನ್ನೆಚ್ಚರಿಕೆ ಯಾಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದೆ.
ಇಡೀ ದೇಶವನ್ನು ಬೆಚ್ಚಿಬಿಳಿಸಿರುವ ಭಯಾನಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಲು ಆಸ್ಪತ್ರೆ ಸಿಬ್ಬಂದಿಯನ್ನು ಒಳಗೊಂಡ ಬೃಹತ್ ಗುಂಪು ಮಧ್ಯರಾತ್ರಿ ಪ್ರತಿಭಟನೆಗೆ ಕುಳಿತಿದ್ದರು. ‘ರೀಕ್ಲೈಮ್ ದಿ ನೈಟ್’ (ಮಹಿಳೆಯರ ಅತ್ಯಾಚಾರ ಮತ್ತು ಹಿಂಸಾಚಾರದ ವಿರುದ್ಧದ ಪ್ರತಿಭಟನೆ) ರಾಷ್ಟ್ರವ್ಯಾಪಿ ಚಳವಳಿಯ ಭಾಗವಾಗಿ ಈ ಪ್ರತಿಭಟನೆ ನಡೆದಿತ್ತು. ಬ್ಯಾರಿಕೇಡ್‌ಗಳನ್ನು ಉರುಳಿಸಿದ ಪ್ರತಿಭಟನಾಕಾರರು, ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾದ 31 ವರ್ಷದ ವೈದ್ಯೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದರು.