ವಂಚನೆ ಆರೋಪ: ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಮೊಕದ್ದಮೆ ದಾಖಲು

ಬೆಂಗಳೂರು: ನಿವೇಶನ ಹಾಗೂ ಫ್ಲ್ಯಾಟ್‌ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ₹2.84 ಕೋಟಿ ವ್ಯವಹಾರ ನಡೆಸಿ ವಂಚನೆ ಮಾಡಿರುವ ಆರೋಪಕ್ಕಾಗಿ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಈ ಬಗ್ಗೆ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಕೊನೆಗೆ ವಂಚನೆಗೆ ಒಳಗಾದ ವ್ಯಕ್ತಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

2004 ರಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಶಾಸಕರಾಗಿದ್ದಾಗ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಂತ ಹಂತವಾಗಿ ಒಟ್ಟು 2 ಕೋಟಿ 84 ಲಕ್ಷ ರೂಪಾಯಿಗಳನ್ನು ಇಂಡ್ ಸಿಂಡ್ ಕಂಪನಿಯಿಂದ ನಗದು ಮತ್ತು ಚೆಕ್ ಮೂಲಕ ಪಡೆದು ವಂಚನೆ ಮಾಡಲಾಗಿದೆ.

‘ಇಂಡ್‌ ಸಿಂಗ್ ಡೆವಲಪರ್ಸ್ ಕಂಪನಿ ನಿರ್ದೇಶಕ ಎಂ. ಕೃಷ್ಣ ಎಂಬುವರ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಅದರನ್ವಯ ಎಂ. ಕೃಷ್ಣ ಅವರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಎಂ. ಕೃಷ್ಣ ಹಲವು ವರ್ಷಗಳಿಂದ ಪರಿಚಿತರು. ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ನಿವೇಶನ ಹಾಗೂ ಫ್ಲ್ಯಾಟ್‌ಗಳನ್ನು ಖರೀದಿ ಮಾಡುವ ಸಲುವಾಗಿ ಕಟ್ಟಾ ಸುಬ್ರಮಣ್ಯ ಅವರು ಕೃಷ್ಣ ಅವರಿಂದ ಹಂತ ಹಂತವಾಗಿ ₹ 2.84 ಕೋಟಿ ಪಡೆದಿದ್ದರು. ಕೆಲ ದಿನ ಬಿಟ್ಟು ದುಪ್ಪಟ್ಟು ಲಾಭ ನೀಡುವುದಾಗಿಯೂ ಹೇಳಿದ್ದರು.’

‘ಹಲವು ದಿನ ಕಳೆದರೂ ಹಣ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಕೃಷ್ಣ ಅವರು ವಿಚಾರಿಸಿದಾಗ ₹ 2 ಲಕ್ಷವನ್ನು ಮಾತ್ರ 2018ರಲ್ಲಿ ಹಿಂದಿರುಗಿಸಿದ್ದರು. ಉಳಿದ ಹಣ ನೀಡಲು ಸುಬ್ರಮಣ್ಯ ಹಿಂದೇಟು ಹಾಕಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *