ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದ ನೂರಾರು ಕೋಟಿ ರೂಪಾಯಿ ಹಗರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ. ಬುಧವಾರ ಜಾರಿ ನಿರ್ದೇಶನಾಲಯ ತಂಡದ ಅಧಿಕಾರಿಗಳು ದಾಳಿ ಮಾಡಿದ್ದು, ಆರೋಪಿಗಳಿಗೆ ಡವಡವ ಆರಂಭವಾಗಿದೆ. ರಾಜ್ಯದ 18 ಕಡೆಗಳಲ್ಲಿ ದಾಳಿ ನಡೆದಿದ್ದು, ಇದೇ ವೇಳೆ ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಿಎ ಅವರನ್ನು ಬಂಧಿಸಲಾಗಿದೆ.
ಬಂಧಿತ ಹರೀಶ್ ಅವ್ಯವಹಾರದ ವೇಳೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದು, ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೈದರಾಬಾದ್ನ ಆರೋಪಿ ಸತ್ಯನಾರಾಯಣ ವರ್ಮಾರಿಂದ ಬಂದಿದ್ದ ಹಣ ಹರೀಶ್ಗೆ ತಲುಪಿತ್ತು. ಪಿಎ ಹರೀಶ್ ಏಪ್ರಿಲ್ ತಿಂಗಳಿನ ಎರಡನೇ ವಾರ ಬಿಬಿಎಂಪಿ ಕಚೇರಿಯ ಶ್ರೀನಿಧಿ ಸಾಗರ್ ಹೋಟೆಲ್ ಬಳಿ ಪದ್ಮನಾಭರಿಂದ 25 ಲಕ್ಷ ಹಣ ಪಡೆದ ಆರೋಪ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಮನೆ ಮೇಲೆ ED ದಾಳಿ
ಮಾಜಿ ಸಚಿವ್ ನಾಗೇಂದ್ರ ಅವರ ಪರವಾಗಿ ಹರೀಶ್ ಹವಾಲಾ ಹಣ ಮತ್ತು ಚಿನ್ನದ ಬಿಸ್ಕೆಟ್ ಪಡೆದುಕೊಂಡಿದ್ದಾರೆ. ಅಲ್ಲದೆ, 50ರಿಂದ 60 ಕೋಟಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಹರೀಶ್ನನ್ನು ಬಂಧಿಸಿದ್ದಾರೆ.ತಮ್ಮ ಆಪ್ತ ಹರೀಶ್ ಅವರ ಬಂಧನ ಆಗುತ್ತಿದ್ದಂತೆ ಮಾಜಿ ಸಚಿವರಿಗೆ ಹೆದರಿಕೆ ಶುರುವಾಗಿದೆ. ನಾಗೇಂದ್ರ ಇಂದು ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.
ಘಟನೆಯ ಹಿನ್ನೆಲೆ : ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಿಂದ ಬೇಸತ್ತು ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಪ್ರಕರಣದ ತನಿಖಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಅತ್ತ ಸಿಬಿಐ ಕೂಡ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಇದೀಗ ಜಾರಿ ನಿರ್ದೇಶನಾಲಯ ಏಕಾಏಕಿ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.