ಬೆಂಗಳೂರು: ಮಂಡ್ಯದ ಕೆಆರ್‌ಎಸ್ ಅಣೆಕಟ್ಟು ಬಳಿ ಕಲ್ಲಿದ್ದಲು ಗಣಿಗಾರಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತು ಸಂಸದೆ ಸುಮಲತಾ ನಡುವೆ ನಡೆಯುತ್ತಿರುವ ವಾಗ್ದಾಳಿ ವೈಯಕ್ತಿಕ ಹಂತಕ್ಕೆ ತಲುಪುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾತಿನ ಸಮರಕ್ಕೆ ಕದನ ವಿರಾಮ ಘೋಷಿಸಲು ಸೂಚಿಸಿದ್ದಾರೆ.
ಎರಡೂ ಬಣಗಳಿಗೆ ಸಂದೇಶ ಕಳುಹಿಸಿರುವ ಗೌಡರು, ಆರೋಪ, ಪ್ರತ್ಯಾರೋಪ ಸಾಕು ಮಾಡುವಂತೆ ತಾಕೀತು ಮಾಡಿದ್ದಾರೆ.
ಇದನ್ನು ಓದಿ: ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ
ಎರಡು ದಿನಗಳ ಹಿಂದೆ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ, ಈ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದ ದೇವೇಗೌಡರು ಇದೀಗ ಕದನಕ್ಕೆ ವಿರಾಮ ಹಾಕಲು ಮಧ್ಯಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ನಾಯಕರು ಮಾತಿನಲ್ಲಿ ಹಿಡಿತ ಕಳೆದುಕೊಳ್ಳುತ್ತಿರುವುದನ್ನು ಗೌಡರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಟೀಕೆ-ಟಿಪ್ಪಣಿಗಳು ತೀವ್ರ ವೈಯಕ್ತಿಕ ಮಟ್ಟಕ್ಕೆ ಹೋದರೆ ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ, ರಾಜ್ಯದ ಜನತೆಗೆ ಬೇರೆ ಸಂದೇಶ ರವಾನೆಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದಂತೆ ದೇವೇಗೌಡರು ತಮ್ಮ ಪಕ್ಷದ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುಮಲತಾ ಬಣಕ್ಕೂ ವಿವಾದಕ್ಕೆ ಇತ್ಯರ್ಥ ಹಾಡುವಂತೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಕೆಆರ್‌ಎಸ್ ಅಣೆಕಟ್ಟು ಬಿರುಕು ಮತ್ತು ಸುತ್ತಲಿನ ಪ್ರದೇಶಗಳ ಅಕ್ರಮ ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಮಧ್ಯೆ ತೀರ ವೈಯಕ್ತಿಕವಾಗಿ ಹೋಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಉಭಯ ನಾಯಕರು ವೈಯುಕ್ತವಾಗಿ ಧಾಳಿಗೆ ಮುಂದಾಗಿದ್ದರು.