ಏಷ್ಯನ್ ಗೇಮ್ಸ್‌ಗೆ ಸೂರ್ಯ- ಗಿಲ್ ಔಟ್! ಯುವ ತಾರೆಗಳಿಗೆ ಬಿಸಿಸಿಐ ಮಣೆ – ವೈಭವ್ ಎಂಟ್ರಿ ಸಖತ್ ಸರ್ಪ್ರೈಸ್

ನವದೆಹಲಿ: ಐಚಿ-ನಗೋಯಾದಲ್ಲಿ ನಡೆಯಲಿರುವ ಮುಂಬರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಬಿಸಿಸಿಐ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಗೆ ಸಲ್ಲಿಸಿರುವ 30 ಸದಸ್ಯರ ಪುರುಷರ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಭಾರತ ಟಿ20 ಕ್ರಿಕೆಟ್‌ನ(Asian Games 2026) ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಟೆಸ್ಟ್-ಏಕದಿನ ತಂಡದ ಸಾರಥಿ ಶುಭ್‌ಮನ್ ಗಿಲ್ ಇಬ್ಬರನ್ನೂ ಪಟ್ಟಿಯಿಂದ ಸಂಪೂರ್ಣವಾಗಿ ಹೊರದಬ್ಬಲಾಗಿದೆ.

ಇವರಿಬ್ಬರ ಬದಲಿಗೆ ಇತ್ತೀಚೆಗೆ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹದಿಹರೆಯದ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡಿ ಬಿಸಿಸಿಐ ಭವಿಷ್ಯದ ದಿಕ್ಸೂಚಿ ತೋರಿಸಿದೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದ್ದು, ಇದೇ ಅವಧಿಯಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ತಾಯ್ನಾಡಿನಲ್ಲಿ ಸರಣಿ ಆಡಬೇಕಿರುವುದರಿಂದ ಬಿಸಿಸಿಐ ಏಕಕಾಲದಲ್ಲಿ ಎರಡು ವಿಭಿನ್ನ ಭಾರತೀಯ ತಂಡಗಳನ್ನು ಕಟ್ಟುವ ಅನಿವಾರ್ಯತೆಗೆ ಸಿಲುಕಿದೆ.
ಸೂರ್ಯ ಯುಗಾಂತ್ಯದ ಮುನ್ಸೂಚನೆ?; ಗಿಲ್ ಮಿಸ್ ಆಗಿದ್ದೇಕೆ?

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ: ಮಹಾ ವಿಕಾಸ್ ಅಘಾಡಿಯಲ್ಲಿ ಸ್ಥಾನ ಹಂಚಿಕೆ ಅಂತಿಮ

ಬಿಸಿಸಿಐ ಮೂಲಗಳ ಪ್ರಕಾರ, 2028ರ ಒಲಿಂಪಿಕ್ಸ್ ಹಾಗೂ ಮುಂದಿನ ಟಿ20 ವಿಶ್ವಕಪ್‌ನ ದೀರ್ಘಾವಧಿ ರೇಸ್‌ನಿಂದ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಸೆಲೆಕ್ಟರ್ಸ್ ಕೈಬಿಟ್ಟಿದ್ದಾರೆ. ಹೀಗಾಗಿ ಏಷ್ಯನ್ ಗೇಮ್ಸ್‌ನಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಲು ಸೂರ್ಯರನ್ನು ಕೈಬಿಟ್ಟಿರುವುದು ಸ್ಪಷ್ಟ ಮುನ್ಸೂಚನೆಯಾಗಿದೆ. ಇನ್ನೊಂದೆಡೆ, ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17 ರವರೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯಲ್ಲಿ ಗಿಲ್ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕಾರಣಕ್ಕಾಗಿಯೇ ಗಿಲ್ ಹೆಸರನ್ನು ಏಷ್ಯನ್ ಗೇಮ್ಸ್‌ನಿಂದ ಹೊರಗಿಡಲಾಗಿದೆ.

ಈ ಮಹತ್ವದ ಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ರುತುರಾಜ್ ಗಾಯಕ್ವಾಡ್ ಅವರನ್ನೂ ಈ 30ರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಬುಮ್ರಾ, ಪಂತ್ ಒಳಗೊಂಡ ಮೆಗಾ ಲಿಸ್ಟ್; ಜಂಟಿ ಸಮರಕ್ಕೆ ರೆಡಿಯಾದ ಬಿಸಿಸಿಐ!

ಏಷ್ಯನ್ ಗೇಮ್ಸ್‌ನ ಸಂಭಾವ್ಯ ಪಟ್ಟಿಯಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಅವರ ಹೆಸರಿದ್ದರೂ, 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಅವರಿಗೆ ವೆಸ್ಟ್ ಇಂಡೀಸ್ ಸರಣಿಯಲ್ಲೇ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಹಾಗೂ ಹಿರಿಯ ವೇಗಿ ಅರ್ಶದೀಪ್ ಸಿಂಗ್ ಪಟ್ಟಿಯಲ್ಲಿದ್ದಾರೆ.

ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಹರ್ಷ್ ದುಬೆ ಸ್ಥಾನ ಪಡೆದಿದ್ದು, ಇವರಲ್ಲಿ ಇಬ್ಬರು ಮಾತ್ರ ಏಷ್ಯನ್ ಗೇಮ್ಸ್ ಆಡಲಿದ್ದಾರೆ, ಉಳಿದ ಇಬ್ಬರು ವಿಂಡೀಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಬಿಸಿಸಿಐ ಸಲ್ಲಿಸಿರುವ ಐತಿಹಾಸಿಕ 30 ಸದಸ್ಯರ ಸಂಭಾವ್ಯ ಪಟ್ಟಿ:

ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ತಿಲಕ್ ವರ್ಮಾ, ಜಸ್ಪ್ರಿತ್ ಬುಮ್ರಾ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ಆಯುಷ್ ಬದೋನಿ, ಹರ್ಷ್ ದುಬೆ, ಧ್ರುವ್ ಜುರೆಲ್, ಖಲೀಲ್ ಅಹ್ಮದ್, ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ಶಾಹಬಾಜ್ ಅಹ್ಮದ್, ಶಿವಂ ದುಬೆ, ವಿಪ್ರಜ್ ನಿಗಮ್, ಹರ್ಷಿತ್ ರಾಣಾ, ಯಶ್ ಠಾಕೂರ್, ವಾಷಿಂಗ್ಟನ್ ಸುಂದರ್.

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ತಂದುಕೊಡಲು ಬಿಸಿಸಿಐ ಹಿರಿಯ ಮತ್ತು ಯುವ ಆಟಗಾರರ ಸಮ್ಮಿಶ್ರಣವನ್ನು ಸಿದ್ಧಪಡಿಸಿದ್ದು, ಅಂತಿಮ 15 ಸದಸ್ಯರ ತಂಡದ ಪ್ರಕಟಣೆಯ ಮೇಲಿನ ಕುತೂಹಲ ಈಗ ಇಡೀ ಕ್ರಿಕೆಟ್ ಲೋಕದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಇದನ್ನೂ ನೋಡಿ: ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ

Donate Janashakthi Media

Leave a Reply

Your email address will not be published. Required fields are marked *