ಬಾಲಿವುಡ್ ತಾರೆ ಕಂಗನಾ ರನೌತ್ ಅವರಿಗೆ ಕೇಂದ್ರ ಗೃಹಮಂತ್ರಾಲಯ ‘ವೈ ಪ್ಲಸ್’ ಭದ್ರತೆಯನ್ನು ಒದಗಿಸಿರುವ ಸುದ್ದಿ ದೇಶದ ಗಮನ ಸೆಳೆದಿದೆ, ವ್ಯಂಗ್ಯಚಿತ್ರಕಾರರದ್ದೂ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಶಿವಸೇನಾ ಮುಖಂಡರು ಮತ್ತು ಮಹಾರಾಷ್ಟ್ರ ಸರಕಾರ ಹಾಗೂ ಈ ಬಾಲಿವುಡ್ ತಾರೆಯ ನಡುವಿನ ಇತ್ತೀಚಿನ ವಾಗ್ವಾದಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಮಂತ್ರಾಲಯ ಈ ಭದ್ರತೆಯನ್ನು ಒದಗಿಸಿದೆ ಎನ್ನಲಾಗಿದೆ.ಇದು ಸಿ ಆರ್ ಪಿ ಎಫ್ ನ ಹನ್ನೊಂದು ಕಮಾಂಡೋಗಳಿಂದ ಭದ್ರತೆಯ ವ್ಯವಸ್ಥೆ!
“ಪರಿಸ್ಥಿತಿಯನ್ನು ಗಮನಿಸಿ ಸ್ವಲ್ಪದಿನಗಳ ನಂತರ ಮುಂಬೈಗೆ ಹೋಗಿ ಎಂದು ಗೃಹಮಂತ್ರಿಗಳು ಹೇಳಬಹುದಾಗಿತ್ತಾದರೂ ಅವರು ಈ ಭದ್ರತೆಯನ್ನು ಒದಗಿಸಿದ್ದಕ್ಕಾಗಿ” ಕಂಗನಾ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಇದರಿಂದ ‘ಉಳಿದವರು ಈಗ ಸುರಕ್ಷಿತರಾಗಿದ್ದಾರೆ, ದೇವರ ದಯ‘ ಎಂದು ಹಲವರಿಗೆ ಅನಿಸುತ್ತಿದೆಯಂತೆ.
ಭಾರತದ ಗೃಹಮಂತ್ರಿಗಳು “ಭಾರತದ ಒಬ್ಬ ಮಗಳ ಮಾತಿನ ಮಾನ ಕಾಪಾಡಿದ್ದಾರೆ, ನಮ್ಮ ಸ್ವಾಭಿಮಾನ ಮತ್ತು ಆತ್ಮಗೌರವದ ಮಾನ ಕಾಪಾಡಿದ್ದಾರೆ” ಎಂದೂ ಕಂಗನಾ ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರಂತೆ.
ದಿಲ್ಲಿಯ ಪಕ್ಕದ ಉತ್ತರ ಪ್ರದೇಶದಲ್ಲಿ 17 ವರ್ಷದ, 13 ವರ್ಷದ, 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಎಂಬ ಸುದ್ದಿಯೊಂದಿಗೆ ವೈ+ ಭದ್ರತೆಯ ಸುದ್ದಿ ಬಂದಿದೆ ಎಂಬ ಸಂಗತಿಯತ್ತ ವ್ಯಂಗ್ಯಚಿತ್ರಕಾರ ಮಂಜುಲ್ ಅವರು ಇಲ್ಲಿ ಗಮನ ಸೆಳೆದಿದ್ದಾರೆ.ಬಹುಶಃ ಕಂಗನಾ ಅವರ ಟ್ವೀಟ್‍ನ್ನು ಕೂಡ ಇದರ ಪಕ್ಕದಲ್ಲಿಟ್ಟು ಮೆಚ್ಚಿಕೊಳ್ಳಬಹುದು.
ಹೌದು, ಈ ಹಿಂದೆ ಇನ್ನೊಂದು ‘ಸೇನೆ’ ದೀಪಿಕಾ ಪಡುಕೋಣೆಯವರ ತಲೆ ಕಡಿಯುವುದಾಗಿ ಹೇಳಿದ್ದಾಗ ಅವರಿಗೆ ಭದ್ರತೆ ಒದಗಿಸಿರಲಿಲ್ಲ,ಈಗೇಕೆ ತಕ್ಷಣವೇ ಈ ಉನ್ನತ ಮಟ್ಟದ ಭದ್ರತೆ? ನಿಜವಾಗಿ ಈ ಭದ್ರತೆ ಯಾರಿಗೆ? ಈ ಬಾಲಿವುಡ್ ತಾರೆಗೋ,ಅಥವ ಆ ಮೂಲಕ ಈ ಸರಕಾರಕ್ಕೋ?
“ಯಾಕೆ”? ವೈ? ವೈ? ಜಿಎಸ್ಟಿ, ಜಿಡಿಪಿ, ಆತ್ಮ ಹತ್ಯೆ, ಉದ್ಯೋಗ, ಪರೀಕ್ಷೆ ಮುಂತಾದ ವಿದ್ಯಾರ್ಥಿಗಳ, ಯುವಜನರ, ರೈತರ,ರಾಜ್ಯಗಳ, ಇಡೀ ಅರ್ಥವ್ಯವಸ್ಥೆಯ ಪ್ರಶ್ನೆಗಳಿಂದ ಸರಕಾರಕ್ಕೆ ಭದ್ರತೆ ಕೊಡಲಿಕ್ಕಾಗಿ ಇರಬಹುದೇ? ಇರಬಹುದೇನೋ!
ವೈ ಭದ್ರತೆ ಮತ್ತು ಜೆ ಭದ್ರತೆಯೂ,ಭದ್ರತೆಯ ಉದ್ಯೋಗವೂ!
ಸರಿ,ನಮಗೇನೂ ವೈ ಪ್ಲಸ್ ಭದ್ರತೆ ಬೇಡ,’ಜೆ’ ಭದ್ರತೆ ಕೊಡಿ, ಸಾಕು ಎಂದು ಜನರು ಕೇಳುತ್ತಿದ್ದಾರಂತೆ.
ಏನಿದು ಜೆ ಭದ್ರತೆ? ಇದು ನಮಗಷ್ಟೇ ಅಲ್ಲ , ಪ್ರಧಾನ ಮಂತ್ರಿಗಳಿಗೂ ಗೊತ್ತಿರಲಿಲ್ಲವಂತೆ.
“ಅವರಿಗೆ ಜೆ ಕೆಟಗರಿಯಲ್ಲಿ ಜಾಬ್ ಸೆಕ್ಯುರಿಟಿ ಬೇಕಂತೆ“ ಅಂದರೆ ಉದ್ಯೋಗ ಭದ್ರತೆ!
“ಮಿತ್ರೋಂ, ವೈ ಕೆಟಗರಿಯಲ್ಲಿ 11 ಭದ್ರತಾ ಉದ್ಯೋಗಗಳನ್ನು ಈಗಷ್ಟೇ ನಿರ್ಮಿಸಿದ್ದೇನೆ“!
ಅಂದರೆ ವರ್ಷಕ್ಕೆ 2 ಕೋಟಿ ಉದ್ಯೋಗಕ್ಕೆ,ಕನಿಷ್ಟ 1.8 ಲಕ್ಷ ಮಂದಿಗೆ ವೈ ಪ್ಲಸ್ ಭದ್ರತೆ ಒದಗಿಸಲು ಗೃಹಮಂತ್ರಗಳಿಗೆ ಹೇಳಬೇಕಾಗಿದೆಯೇ?