ಉತ್ತರ ಪ್ರದೇಶ: ತರಗತಿಯಲ್ಲೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಕಗಳಿಂದ ಹೊಡೆಸಿದ ಶಿಕ್ಷಕಿ

ಲಕ್ನೋ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಕ್ಕೆ ಹೊಡೆಯುವಂತೆ ಶಿಕ್ಷಕಿಯೊಬ್ಬರು ತರಗತಿಯೊಂದರಲ್ಲಿ ಮಕ್ಕಳಿಗೆ ಸೂಚಿಸಿದ ಘಟನೆ ನಡೆದಿದೆ. ಅದಾಗ್ಯೂ ಶಿಕ್ಷಕಿಯು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು ಮಗುವನ್ನು ಶಿಸ್ತುಬದ್ಧಗೊಳಿಸಲು  ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹೊಡೆಯುವಂತೆ  ಮಗುವಿಗೆ ಚಿಕ್ಕಪ್ಪ ತನ್ನನ್ನು ಕೇಳಿಕೊಂಡಿದ್ದರು, ಆದರೆ ತಾನು ‘ಅಂಗವಿಕಲ’ ಆಗಿರುವುದರಿಂದ ಬೇರೆ ವಿದ್ಯಾರ್ಥಿಗಳಿಂದ ಹೊಡೆಸಿದ್ದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ನೇಹಾ ಪಬ್ಲಿಕ್ ಸ್ಕೂಲ್‌ ಎಂಬ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪ್ರಕರಣದ ಆರೋಪಿಯನ್ನು ತ್ರಿಪ್ತ ತ್ಯಾಗಿ ಎಂದು ಗುರುತಿಸಲಾಗಿದ್ದು, ಶನಿವಾರ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಛೇ, ಮಿನಿಮಮ್ ಗೌರವ ಇಲ್ಲದಾಯಿತೇ? ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್‌

ವೈರಲ್ ವೀಡಿಯೊದಲ್ಲಿ, ಶಿಕ್ಷಕಿಯು “ಅವನಿಗೆ ಜೋರಾಗಿ ಹೊಡೆಯಿರಿ” ಎಂದು ಇತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ದಾಖಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಯ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟೆ ಅಲ್ಲದೆ ಮಗುವಿಗೆ ಹೊಡೆದ ಸಹಪಾಠಿಯೊಂದಿಗೆ, ”ಅವನ ಸೊಂಟಕ್ಕೆ ಹೊಡೆಯಿರಿ” ಎಂದು ಹೇಳುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ.

ಘಟನೆಯ ನಂತರ ತನ್ನ ಮಗನನ್ನು ಶಾಲೆಯಿಂದ ಬಿಡಿಸಿದ್ದಾಗಿ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ. ಪಾವತಿಸಿದ ಪ್ರವೇಶ ಶುಲ್ಕವನ್ನು ಮರುಪಾವತಿಸುತ್ತಾರೆ ಎಂದು ಶಾಲೆಯ ಅಧಿಕಾರಿಗಳು ಹೇಳಿದ್ದು, ಹೀಗಾಗಿ ತಾನು ಪೊಲೀಸ್ ದೂರು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜವನ್ನು ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯಾಗಿ ಪರಿವರ್ತಿಸುವುದರಿಂದ ಶಿಕ್ಷಕನು ದೇಶಕ್ಕಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದೇ ಸೀಮೆಎಣ್ಣೆ ಬಿಜೆಪಿಯವರು ಹರಡಿ ಭಾರತದ ಮೂಲೆ ಮೂಲೆಗೆ ಬೆಂಕಿ ಹಚ್ಚಿದ್ದಾರೆ. ಮಕ್ಕಳು ಭಾರತದ ಭವಿಷ್ಯ, ಅವರನ್ನು ದ್ವೇಷಿಸಬೇಡಿ, ನಾವೆಲ್ಲರೂ ಒಟ್ಟಾಗಿ ಪ್ರೀತಿಯನ್ನು ಕಲಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶ ಸ್ವತಂತ್ರಗೊಂಡು 76 ವರ್ಷಗಳಾದರೂ ಅಟೆಂಡರ್ ಹುದ್ದೆ ಸಿಗದ ಸಮುದಾಯಗಳಿವೆ: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್

ಈ ಮಧ್ಯೆ ಉತ್ತರ ಪ್ರದೇಶ ಮೂಲದ ವಕೀಲ ಎಸ್‌.ಎಂ. ಹೈದರ್ ಅವರು ವಿದ್ಯಾರ್ಥಿಯ ವಿರುದ್ಧ ಕೋಮು ತಾರತಮ್ಮ ಎಸಗಲಾಗಿದೆ ಎಂದು ಶಾಲಾ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್‌ಎಚ್‌ಆರ್‌ಸಿ) ಸಂಪರ್ಕಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295ಎ, 298, 323, 504 ಮತ್ತು 506ರ ಅಡಿಯಲ್ಲಿ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರಿನಲ್ಲಿ ಕೇಳಲಾಗಿದೆ. ಹೆಚ್ಚುವರಿಯಾಗಿ, ಸಂತ್ರಸ್ತ ವಿದ್ಯಾರ್ಥಿಗೆ ಪರಿಹಾರವಾಗಿ ರಾಜ್ಯ ಸರ್ಕಾರದ ವೆಚ್ಚದಲ್ಲಿ ದೆಹಲಿ ಅಥವಾ ದೇಶದ ಇತರ ಯಾವುದೇ ಜಿಲ್ಲೆಯ ಶಾಲೆಗೆ ಸೇರಿಸುವಂತೆ ಕೇಳಿಕೊಂಡಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಆರೋಪಿ ಶಿಕ್ಷಕಿ ತ್ರಿಪ್ತ ತ್ಯಾಗಿ, “ಎರಡು ತಿಂಗಳ ಹಿಂದಿನ ಪಾಠವನ್ನು ವಿದ್ಯಾರ್ಥಿ ಕಂಠಪಾಠ ಮಾಡಿರಲಿಲ್ಲ. ಆದ್ದರಿಂದ, ನಾನು ಅವನನ್ನು ಶಿಸ್ತುಕ್ರಮಕ್ಕೆ ಒಳಪಡಿಸಬೇಕಾಗಿತ್ತು, ಆದರೆ ನಾನು ಅಂಗವಿಕಲೆಯಾಗಿದ್ದರಿಂದ ಬೇರೆ ವಿದ್ಯಾರ್ಥಿಗಳ ಮೂಲಕ ಅವನ ಕಪಾಳಕ್ಕೆ ಹೊಡೆಯುವಂತೆ ಮಾಡಿದ್ದೇನೆ. ವಿದ್ಯಾರ್ಥಿಯನ್ನು ಶಿಕ್ಷಿಸಲು ಅವರ ಚಿಕ್ಕಪ್ಪ ನನ್ನನ್ನು ಕೇಳಿಕೊಂಡಿದ್ದರು” ಎಂದು ಹೇಳಿದ್ದಾರೆ.

ಮಗುವನ್ನು ಶಾಲೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಗುರಿಪಡಿಸಲಾಗಿದೆ ಎಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ನಾವು ಶಾಲೆಯಲ್ಲಿ ಹಿಂದೂ-ಮುಸ್ಲಿಂ ಮಾಡುತ್ತಿಲ್ಲ. ನಮ್ಮ ಗ್ರಾಮದಲ್ಲಿ ವಿವಿಧ ಧರ್ಮದ ಜನರಿದ್ದಾರೆ ಮತ್ತು ನಾವು ಸಾಮರಸ್ಯದಿಂದ ಬದುಕುತ್ತೇವೆ, ಮಗುವಿನ ವಿರುದ್ಧ ನನಗೆ ಏನೂ ದ್ವೇಷವಿಲ್ಲ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಬುದ್ದಿ ಹೇಳಿದ ಉಪನ್ಯಾಸಕನಿಗೆ ಲಾಂಗ್‌ ತೋರಿಸಿದ ವಿದ್ಯಾರ್ಥಿ!Janashakthi Media

Donate Janashakthi Media

Leave a Reply

Your email address will not be published. Required fields are marked *