ನವದೆಹಲಿ: ಭಾನುವಾರ ಭೀಕರ ಮಳೆಗೆ ದೆಹಲಿ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ತತ್ತರಿಸಿ ಹೋಗಿವೆ. ಏಕಾಏಕಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಕೆಲವು ಭಾಗಗಳಲ್ಲಿ, ಜಲಾವೃತ, ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಉತ್ತರ ಭಾರತದ ಪ್ರಮುಖ ನಗರಗಳು ಅಪಾರ ಪ್ರಮಾಣದಲ್ಲಿ, ವಿದ್ಯುತ್ ಅಡಚಣೆ ಮನೆಮಠಗಳ ಕುಸಿತ, , ಮಾತ್ರವಲ್ಲದೇ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರಿಯಾಣ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ದೆಹಲಿ ಸರ್ಕಾರ ಪ್ರವಾಹದ ಎಚ್ಚರಿಕೆ ನೀಡಿದೆ. ಮಳೆಯ ಪರಿಣಾಮ ರೈಲು ಸಂಚಾರಕ್ಕೆ ಅಡಿಯಾಗಿದೆ.ಉತ್ತರ ರೈಲ್ವೆಯು 17 ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು,12 ರೈಲುಗಳ ಮಾರ್ಗ ಬದಲಾವಣೆ ಮಾಡಿದೆ.ಹಾಗೂ ಜಲಾವೃತದಿಂದಾಗಿ ನಾಲ್ಕು ಕಡೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿದ ನದಿಯಿಂದಾಗಿ ಅಂಗಡಿಗಳು ಮತ್ತು ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಿಮಾಚಲ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ 20 ಪ್ರದೇಶದಲ್ಲಿ ಉಂಟಾಗಿದ್ದು, 17 ಪ್ರದೇಶದಲ್ಲಿ ಹಠಾತ್ ಪ್ರವಾಹಗಳು ಉಂಟಾಗಿದೆ. 30 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಮತ್ತು ಭಾಗಶಃ ಹಾನಿಗೊಳಗಾಗಿವೆ. ಬಿಯಾಸ್, ಸಟ್ಲುಜ್, ರವಿ, ಸ್ವಾನ್ ಮತ್ತು ಸೇರಿದಂತೆ ಎಲ್ಲಾ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಳೆಯ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ ಓರ್ವ ಮಹಿಳೆ ಸಾವು : ರಾಜ್ಯದ ನಾನಾ ಕಡೆ ನಾಲ್ವರ ಬಲಿ
ನಿನ್ನೆ ಭೀಕರ ಸುರಿದ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಶಿಮ್ಲಾದ ಕೋಟ್‌ಗಢ ಗ್ರಾಮದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನಂತರ ಸಂತ್ರಸ್ತರ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ, ‘ಮೃತರನ್ನು ಅನಿಲ್, ಕಿರಣ್ ಮತ್ತು ಸ್ವಪ್ನಿಲ್ ಎಂದು ಗುರುತಿಸಲಾಗಿದೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದೆವೆ’ ಎಂದು ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಭೀಕರ ಮಳೆಯಾಗುವ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದಲ್ಲದೆ, ನಿರಂತರ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣ ಶಿಮ್ಲಾ-ಕಲ್ಕಾ ಮಾರ್ಗದಲ್ಲಿ ರೈಲು ಸೇವೆಗಳನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದ ಉಂಟಾದ ಭೂಕುಸಿತಗಳು ಕಲ್ಕಾ ಮತ್ತು ಶಿಮ್ಲಾ ನಡುವಿನ ವಿವಿಧ ಸ್ಥಳಗಳಲ್ಲಿ ರೈಲ್ವೇ ಹಳಿಗಳನ್ನು ಹಾನಿಗೊಳಿಸಿದ್ದು, ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಕಾರಣವಾಯಿತು ಎಂದು ಶಿಮ್ಲಾ ರೈಲು ನಿಲ್ದಾಣದ ಸ್ಟೇಷನ್ ಸೂಪರಿಂಟೆಂಡೆಂಟ್ ಜೋಗಿಂದರ್ ಸಿಂಗ್ ತಿಳಿಸಿದ್ದಾರೆ.
ಈ ಕುಲು, ಕಿನ್ನೌರ್ ಮತ್ತು ಚಂಬಾದ ನುಲ್ಲಾದಲ್ಲಿ ಹಠಾತ್ ಪ್ರವಾಹದಲ್ಲಿ ವಾಹನಗಳು ಕೊಚ್ಚಿಹೋಗಿವೆ ಅನಾಹುತವನ್ನು ಗಮನಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕೊಚ್ಚಿಹೋದ ಸೇತುವೆಗಳು “ಹಿಮಾಚಲದ ಗುರುತು” ಎಂದು ಹೇಳಿದ್ದಾರೆ. ಮಂಡಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯಿಂದ ಆಟ್ ಸೇತುವೆ, ಪಾಂಡೋ ಸೇತುವೆ ಮತ್ತು ಐತಿಹಾಸಿಕ ಪಂಚವಕ್ತ್ರ ಸೇತುವೆ ಸೇರಿದಂತೆ ಹಲವು ಸೇತುವೆಗಳು ಕುಸಿದು ಬಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.