— ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ವಿ.
ಆಧುನಿಕ ಸರಕುಗಳನ್ನು ಬಳಸಲಾಗುತ್ತಿದೆಯೇ ಎಂಬುದು ಬಡತನವನ್ನು ನಿರ್ಧರಿಸುವ ಮಾನದಂಡವಾಗಲಾರದು. ಆ ಹೊಸ ಸರಕುಗಳನ್ನು ಬಳಸುವಾಗ ಕುಟುಂಬವು ತನ್ನ ಅಲ್ಪ ಆದಾಯದ ಬಹುಪಾಲನ್ನು ಖರ್ಚುಮಾಡಬೇಕಾಗಿದೆಯೇ ಅಥವ ಇತರ ಬಹುಮುಖ್ಯ ಕೊರತೆಗಳನ್ನು ಅನುಭವಿಸ ಬೇಕಾಗುತ್ತಿದೆಯೇ ಎಂಬುದು ಮಾನದಂಡವಾಗಬೇಕು. ಇಲ್ಲಿಯೇ , ಯುಎನ್‌ಡಿಪಿ ಮತ್ತು ಒಪಿಹೆಚ್‌ಐ ಅಭಿವೃದ್ಧಿಪಡಿಸಿದ ಬಹು-ಆಯಾಮದ ಬಡತನದ ಸೂಚ್ಯಂಕದಲ್ಲಿನ ದೋಷ ಕಾಣುವುದು. ಇದು ಆದಾಯವನ್ನಾಗಲಿ ಅಥವಾ ನೈಜ ಉಪಭೋಗವನ್ನಾಗಲಿ, ಪೋಷಕಾಂಶಗಳ ಲಭ್ಯತೆಯನ್ನಾಗಲೀ ಪರಿಗಣಿಸುವುದಿಲ್ಲ. ಬಡತನದ ಪ್ರಮಾಣ ಈಗ ಪ್ರಮಾಣ ಕೇವಲ 2 ಶೇ. ಎಂದು ಸರಕಾರ ಹೇಳುತ್ತಿರುವಾಗಲೇ, ಇದೇ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ ಲೆಕ್ಕ ಹಾಕಲಾಗುವ ಸುಮಾರು 115 ದೇಶಗಳಲ್ಲಿ 100ಕ್ಕಿಂತಲೂ ಆಚಿನ ಸ್ಥಾನದಲ್ಲಿದೆ; ಹಾಗೆಯೇ ಬದುಕು ಸಾಗಿಸಲು ತಿಂಗಳಿಗೆ 5 ಕಿಲೋಗ್ರಾಂ ಆಹಾರ ಧಾನ್ಯಗಳ ಸರ್ಕಾರಿ ನೆರವನ್ನು ನಿರೀಕ್ಷಿಸುವ ಅಪಾರ ಸಂಖ್ಯೆಯ ಜನರು ಇರುವ ವಿರೋಧಾಭಾಸವನ್ನು ನಾವು ಕಾಣುತ್ತಿದ್ದೇವೆ. ಆಧುನಿಕ
ಬಂಡವಾಳಶಾಹಿ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ ಉತ್ಪಾದನಾ ಪ್ರಕ್ರಿಯೆ ಮತ್ತು ಉತ್ಪನ್ನಗಳ ನಿರಂತರವಾಗಿ ನವೀನಗೊಳಿಸುತ್ತಿರುವುದು. ಇದರ ಪರಿಣಾಮವಾಗಿ ಜನರು ಉಪಯೋಗಿಸುವ ಸರಕು-ಗುಚ್ಛವು ಕಾಲಕಾಲಕ್ಕೆ ಬದಲಾಗುತ್ತಲೇ ಹೋಗುತ್ತದೆ. ಹೊಸ ಸರಕುಗಳನ್ನು ಸಾಮಾನ್ಯವಾಗಿ ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡೇ ಬಂಡವಾಳಶಾಹಿ ಉತ್ಪಾದಕರು ಪರಿಚಯಿಸುತ್ತಾರೆ. ಹೊಸ ಸರಕುಗಳು ಹಳೆಯ ಸರಕುಗಳನ್ನು ಬದಲಿಸಲು ಆರಂಭಿಸಿದೊಡನೆ, ಹಳೆಯ ಸರಕುಗಳನ್ನು ಉತ್ಪಾದಿಸುವ ಕ್ಷೇತ್ರಗಳ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತದೆ ಮತ್ತು ಸಂಪೂರ್ಣ ಜನಸಮೂಹವೂ, ಬೇಕಿದ್ದರೂ, ಬೇಡದಿದ್ದರೂ ಹೊಸ ಸರಕುಗಳನ್ನು ಖರೀದಿಸಲು ಬಾಧ್ಯರಾಗುತ್ತಾರೆ. ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ಜನರೆಲ್ಲರಿಗೂ ಹಳೆಯ ಹಾಗೂ ಹೊಸ ಸರಕುಗಳ ನಡುವೆ ಆಯ್ಕೆ ಇರುತ್ತದೆ, ಮತ್ತು ಅವರು ಹಳೆಯದಕ್ಕಿಂತ ಹೊಸದನ್ನೇ ಮೆಚ್ಚುತ್ತಾರೆ ಎಂಬಂತೆ ತೋರಿಸುತ್ತಾರೆ. ಆದರೆ ವಾಸ್ತವದಲ್ಲಿ ಹಾಗಿಲ್ಲ; ಸಾಮಾನ್ಯವಾಗಿ ಮಧ್ಯಮ ವರ್ಗಕ್ಕೆ ಸೇರಿದ ಸಾಕಷ್ಟು ಜನರು ಹೊಸ ಸರಕನ್ನು ಖರೀದಿಸಲು ಆರಂಭಿಸಿದ ನಂತರ, ಅದು ಯಾವುದರ ಬದಲಿಗೆ ಬಂದಿದೆಯೋ ಆ ಹಳೆಯ ಸರಕಿನ ಉತ್ಪಾದನೆ ಕ್ಷೀಣಿಸುತ್ತದೆ ಮತ್ತು ಉಳಿದ ಜನರನ್ನು ಅಂಥದೇ ಹೊಸ ಸರಕಿನತ್ತ ಹೆಚ್ಚು ಕಡಿಮೆ ಬಲವಂತವಾಗಿ ತಳ್ಳಲಾಗುತ್ತದೆ.
ಇದರಿಂದ ಉಳಿದ ಜನಸಂಖ್ಯೆಯ ಮುಂದೆ ಆಯ್ಕೆಯಿದ್ದರೆ ಅವರು ಹಳೆಯ ಸರಕನ್ನೇ ಮೆಚ್ಚುತ್ತಿದ್ದರು ಎಂದರ್ಥವಲ್ಲ; ಆದರೆ ವಾಸ್ತವದಲ್ಲಿ ಅವರಿಗೆ ಯಾವುದೇ ಆಯ್ಕೆಯನ್ನೇ ನೀಡಲಾಗುವುದಿಲ್ಲ ಎನ್ನುವುದಷ್ಟೇ ಅರ್ಥ. ಆದ್ದರಿಂದ ಹೊಸ ಸರಕುಗಳ ಪರಿಚಯದ ಆಧಾರದ ಮೇಲೆ ಬಡತನ ಕಡಿಮೆಯಾಗಿದೆ ಎಂದು ಹೇಳುವುದಕ್ಕೆ ಯಾವುದೇ ತಾರ್ಕಿಕ ಆಧಾರವಿಲ್ಲ. ಇಲ್ಲಿ ಪ್ರಸ್ತುತವಾಗಿರುವುದು ಹೊಸ ಸರಕುಗಳ ಬಳಕೆಯ ಸಂಗತಿಯಲ್ಲ, ಬದಲಾಗಿ ಅವುಗಳನ್ನು ಬಳಸಲು ಸಾಮಾನ್ಯ ದುಡಿಯುವ ಜನರಿಗೆ ಸಾಕಷ್ಟು ಆದಾಯವಿದೆಯೇ, ಅಥವಾ ಅವರು ಇತರ ಅಗತ್ಯ ಉಪಭೋಗ ವಸ್ತುಗಳಲ್ಲಿ ಕಡಿತ ಮಾಡಬೇಕಾಗುತ್ತಿದೆಯೇ ಎಂಬುದು.
ಆದರೆ ಇನ್ನೊಂದು ರೀತಿಯ ಸಂದರ್ಭಗಳಿವೆ; ಅಲ್ಲಿ ಎಲ್ಲರೂ ಸ್ಪಷ್ಟವಾಗಿ ಉತ್ತಮ ಸ್ಥಿತಿಗೆ ಬಂದಿದ್ದು, ತಮ್ಮ ಸ್ವಂತ ಆಯ್ಕೆಯಿಂದಾಗಿಯೇ ಅಲ್ಲದಿದ್ದರೂ, ಸ್ವತಂತ್ರ ಮೌಲ್ಯಮಾಪನದ ಆಧಾರದ ಮೇಲೆ ಹೇಳಬಹುದಾಗಿರುತ್ತದೆ. ಇಂತಹ ಸಂದರ್ಭಗಳು ವಿಜ್ಞಾನ, ವಿಶೇಷವಾಗಿ ವೈದ್ಯಕೀಯ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದವು. ಆದರೂ ಈ ಅರ್ಥದಲ್ಲಿ ಉತ್ತಮ ಸ್ಥಿತಿಗೆ ಬಂದಿರುವುದು ಬಡತನ ಕಡಿಮೆಯಾಗಿದ್ದರಿಂದಾಗಿ ಎಂದು ಸಮೀಕರಿಸಲಾಗುವುದಿಲ್ಲ. ಕಾಲಿನ ಗಾಯದಿಂದ ಉಂಟಾದ ಹುಣ್ಣಿನಿಂದ ಸಾವನ್ನಪ್ಪಿದ ಇಂಗ್ಲೆಂಡಿನ ಎಂಟನೇ ಹೆನ್ರಿ ರಾಜನ ಕಾಲದಲ್ಲಿ ಆಂಟಿಬಯೋಟಿಕ್‌ಗಳು ಕಂಡುಹಿಡಿಯಲ್ಪಟ್ಟಿದ್ದರೆ, ಅವನು ಇನ್ನೂ ದೀರ್ಘಕಾಲ ಬದುಕಬಹುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಆಂಟಿಬಯೋಟಿಕ್‌ಗಳು ಮತ್ತು ಅನೇಕ ಔಷಧಿಗಳು ಲಭ್ಯವಿರುವುದರಿಂದ, ಇಂದಿನ ಮನೆಕೆಲಸದಾಕೆ ಈ ಅಂಶದಲ್ಲಿ ಹೆನ್ರಿ ಎಂಟನೇಯನಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾಳೆ ಎಂದು ಹೇಳಬಹುದು. ಆದರೆ ಆ ಕಾರಣಕ್ಕೆ ಆಕೆ ಹೆನ್ರಿ ಎಂಟನೇಯನಿಗಿಂತಲೂ ಕಡಿಮೆ ಬಡವಳು ಎಂದು ಹೇಳಲು ಸಾಧ್ಯವಿಲ್ಲ.
ವಾಸ್ತವದಲ್ಲಿ ಬಹುಮಂದಿಗೆ ಯಾವುದೇ ಆಯ್ಕೆಯನ್ನೇ ನೀಡಲಾಗುವುದಿಲ್ಲ . ಆದ್ದರಿಂದ ಹೊಸ ಸರಕುಗಳ ಪರಿಚಯದ ಆಧಾರದ ಮೇಲೆ ಬಡತನ ಕಡಿಮೆಯಾಗಿದೆ ಎಂದು ಹೇಳುವುದಕ್ಕೆ ಯಾವುದೇ ತಾರ್ಕಿಕ ಆಧಾರವಿಲ್ಲ
ಬಹು-ಆಯಾಮ ಬಡತನ ಸೂಚ್ಯಂಕದಲ್ಲಿನ ದೋಷ
ಅಂದರೆ ಬಡತನದ ಇಳಿಕೆಯನ್ನು ನಿರ್ಧರಿಸುವ ಮಾನದಂಡಗಳು ಉತ್ಪನ್ನ ನವೀನತೆಗಳು ನಡೆದಿವೆ ಎಂಬುದರಿಂದ ಸಂಪೂರ್ಣವಾಗಿ ವಿಭಿನ್ನವಾಗಿರಬೇಕು — ಅವು ಜೀವನಮಟ್ಟವನ್ನು ಹೆಚ್ಚಿಸುತ್ತವೆಯೋ ಇಲ್ಲವೋ ಎಂಬುದನ್ನೂ ಮೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, “ಆಧುನಿಕತೆ” ಮತ್ತು ಬಡತನ ಇಲ್ಲದಿರುವುದು ಇವೆರಡನ್ನು ಭಿನ್ನವಾಗಿ ಕಾಣಬೇಕು. ಹೊಸ ಸರಕುಗಳನ್ನು ಬಳಸಲಾಗುತ್ತಿದೆಯೇ ಎಂಬುದು ಬಡತನವನ್ನು ನಿರ್ಧರಿಸುವ ಮಾನದಂಡವಲ್ಲ, ಆ ಹೊಸ ಸರಕುಗಳನ್ನು ಬಳಸುವಾಗ ಕುಟುಂಬವು ತನ್ನ ಅಲ್ಪ ಆದಾಯದ ಬಹುಪಾಲನ್ನು ಖರ್ಚುಮಾಡಬೇಕಾಗಿದೆಯೇ ಅಥವ ಇತರ ಬಹುಮುಖ್ಯ ಕೊರತೆಗಳನ್ನು ಅನುಭವಿಸ ಬೇಕಾಗುತ್ತಿದೆಯೇ ಎಂಬುದು ಮಾನದಂಡವಾಗಬೇಕು. ಅಂದರೆ ಬಡತನದ ನಿರೂಪಕ ಲಕ್ಷಣ ಹೊಸ ಸರಕು-ಗುಚ್ಛಗಳ ಲಭ್ಯತೆ ಅಲ್ಲ; ಆ ಲಭ್ಯತೆಗಾಗಿ ಇತರ ಅವಶ್ಯಕತೆಗಳಲ್ಲಿ ಕಡಿತ ಮಾಡಬೇಕಾಗುತ್ತಿದೆಯೇ ಎಂಬುದು.
ಇಲ್ಲಿಯೇ , ಯುಎನ್‌ಡಿಪಿ ಮತ್ತು ಒಪಿಹೆಚ್‍ಐ(ಆಕ್ಸ್ಫರ್ಡ್ ಪಾವರ್ಟಿ ಅಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ ) ಅಭಿವೃದ್ಧಿಪಡಿಸಿದ ಬಹು-ಆಯಾಮದ ಬಡತನದ ಸೂಚ್ಯಂಕ (Multi-dimensional Poverty Index)ದಲ್ಲಿ ದೋಷ ಕಾಣುವುದು. ಇದು ಶಾಲಾಶಿಕ್ಷಣದ ವರ್ಷಗಳು, ಮಕ್ಕಳ ಮರಣ ಪ್ರಮಾಣ, ವಿದ್ಯುತ್, ಕುಡಿಯುವ ನೀರು, ಹುಲ್ಲಿನ ಛಾವಣಿಯಲ್ಲದ ಮನೆ ಮತ್ತು ಅಡುಗೆ ಇಂಧನದ ಲಭ್ಯತೆ , ನಿರ್ದಿಷ್ಟ ಕನಿಷ್ಠ ದೇಹ ದ್ರವ್ಯರಾಶಿ ಸೂಚ್ಯಂಕ (BMI) ಮತ್ತು ‘ಹಣಕಾಸು ಒಳಗೊಳ್ಳುವಿಕೆ’ (ಬ್ಯಾಂಕ್ ಖಾತೆ) ಸೇರಿದಂತೆ ಹತ್ತು ಸೂಚಕಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿಯೊಂದಕ್ಕೂ ನಿರ್ದಿಷ್ಟ ತೂಕ ನೀಡಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ವ್ಯಕ್ತಿಗಳು ಬಡವರು ಎಂದು ನಿರ್ಧರಿಸಲಾಗುತ್ತದೆ. ಆದರೆ ಇದು ಆದಾಯವನ್ನಾಗಲಿ ಅಥವಾ ನೈಜ ಉಪಭೋಗವನ್ನಾಗಲಿ ಪರಿಗಣಿಸುವುದಿಲ್ಲ.
ಈ ಸೂಚ್ಯಂಕದಲ್ಲಿ ಎರಡು ಸ್ಪಷ್ಟ ಸಮಸ್ಯೆಗಳಿವೆ. ಮೊದಲನೆಯದು, ಈ ಮಾನದಂಡಗಳನ್ನು ಔಪಚಾರಿಕವಾಗಿ ಪೂರೈಸಿದರೆ ಅದಕ್ಕೆ ಹೆಚ್ಚು ಅರ್ಥವಿಲ್ಲ. ಉದಾಹರಣೆಗೆ, ಬ್ಯಾಂಕ್ ಖಾತೆ ಇರುವುದು ಬಡತನವಿಲ್ಲದಿರುವ ಸೂಚಕವೆಂದು ಪರಿಗಣಿಸಲಾಗಿದೆ; ಆದರೆ ಶೂನ್ಯ ಬ್ಯಾಲನ್ಸ್ ಖಾತೆ ಇರುವುದರಿಂದ ಏನೂ ಪ್ರಯೋಜನವಿಲ್ಲ. ಹಾಗೆಯೇ ಹುಲ್ಲಿನ ಗುಡಿಸಿಲಿನ ಬದಲಾಗಿ ತಲೆಯ ಮೇಲೊಂದು ಸೂರು ಬಡತನ ಕಡಿಮೆಯಾಗಿದೆ ಎನ್ನುವ ಸೂಚಕವೆಂದು ಭಾವಿಸಲಾಗುತ್ತದೆ. ಆದರೆ ಆ ಸೂರು ಕೇವಲ ಒಂದು ಶೆಡ್ ಮೇಲೆ ಹಾಕಿರುವ ತಗಡಿನ ಛಾವಣಿಯಾಗಿದ್ದರೆ, ಬಡತನ ಇಳಿದಿದೆ ಎಂಬ ದಾವೆ ಸಂಪೂರ್ಣ ಕೃತಕವಾಗುತ್ತದೆ. ಅದೇ ರೀತಿ, ಶಾಲಾ ವರ್ಷಗಳಲ್ಲಿ ಶಿಕ್ಷಕರ ನೇಮಕವಾಗದೆ ಶಾಲೆಯಲ್ಲಿ ತರಗತಿಗಳೇ ನಡೆದಿಲ್ಲದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ. ನಿರ್ದಿಷ್ಟ ಬಿಎಂಐ ಒಂದು ಅನುಪಾತವಾಗಿದ್ದು, ಅದನ್ನು ತೀವ್ರ ಪೋಷಕಾಂಶ ಕೊರತೆಯಲ್ಲಿರುವವರೂ, ಅವರು ವಯಸ್ಸಿಗೆ ಹೋಲಿಸಿದರೆ ಅತಿಯಾಗಿ ಕಡಿಮೆ ತೂಕದವರಾಗಿಯೂ, ಕಡಿಮೆ ಎತ್ತರದವರಾಗಿಯೂ ಇದ್ದರೂ ಪೂರೈಸಬಹುದು. ಹೀಗಾಗಿ ಇಂತಹ ಮಾನದಂಡಗಳ ಕೇವಲ ಔಪಚಾರಿಕ ಪೂರೈಕೆಯು ಬಡತನ ಇಳಿಕೆಯ ಸೂಚಕವಾಗಿ ಅತ್ಯಂತ ತಪ್ಪು ದಾರಿ ತೋರಿಸುವಂತದ್ದಾಗುತ್ತದೆ.
ಇದನ್ನೂ ಓದಿ : ವಿಬಿ-ಜಿರಾಮ್ (ಜಿ): “ಸಮರ್ಥಿಸಿಕೊಳ್ಳಲಾಗದನ್ನು ಸಮರ್ಥಿಸಿಕೊಳ್ಳಲು ಈಗ ಕೃಷಿ ಸಚಿವರ ಜುಮ್ಲಾಗಳು”
ಪೋಷಕಾಂಶದ ಲಭ್ಯತೆ ಒರೆಗಲ್ಲು
ಎರಡನೆಯ ಸಮಸ್ಯೆಯೆಂದರೆ ನಾವು ಈಗಾಗಲೇ ಚರ್ಚಿಸಿದಂತೆಯೇ, ಕೇವಲ “ಆಧುನಿಕತೆ”ಯನ್ನೇ ಬಡತನ ಇಲ್ಲದಿರುವುದು ಎಂದು ಸಮೀಕರಿಸುವಾಗ ಮೂಲ ಅಂಶ ಕಳೆದು ಹೋಗುತ್ತದೆ. ಇಲ್ಲಿ ನಿರ್ದಿಷ್ಟ ಸರಕು-ಗುಚ್ಛಗಳನ್ನು ಲಭ್ಯಗೊಳಿಸಿಕೊಳ್ಳಲು ಆ ವ್ಯಕ್ತಿಗಳು ಯಾವುದಾದರೂ ತಮ್ಮ ಅವಶ್ಯಕತೆಗಳನ್ನು ಕುಗ್ಗಿಸಿಕೊಂಡಿದ್ದಾರೆಯೇ ಎಂದು ನೋಡಬೇಕಾಗುತ್ತದೆ. ಇದರಲ್ಲಿ ನೋಡಬೇಕಾದ ಅತ್ಯಂತ ಸ್ಪಷ್ಟ ಅವಶ್ಯಕತೆ ಎಂದರೆ ಪೋಷಕಾಂಶ. ಇಲ್ಲಿ ಕೇಳಬೇಕಾಗಿರುವ ಪ್ರಶ್ನೆ- ಮಗುವನ್ನು ಶಾಲೆಗೆ ಕಳುಹಿಸುವುದಕ್ಕಾಗಿ, ಅಥವಾ ತಲೆಯ ಮೇಲೆ ಸೂರು ಹೊಂದುವುದಕ್ಕಾಗಿ, ಆ ಕುಟುಂಬದವರು ಹೊಟ್ಟೆ ಕಟ್ಟುತ್ತಾರೆಯೇ? ಹೀಗಿದ್ದರೆ, ಅವರು ಬಡತನವನ್ನು ನಿವಾರಿಸಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಪೋಷಕಾಂಶವನ್ನು ಹತ್ತು ಸೂಚಕಗಳಲ್ಲಿ ನೇರವಾಗಿ ಸೇರಿಸಿಲ್ಲ, ಏಕೆಂದರೆ ತೀವ್ರ ಪೋಷಕಾಂಶ ಕೊರತೆಯೂ ನಿರ್ದಿಷ್ಟ ಬಿಎಂಐ ಮೌಲ್ಯಕ್ಕೆ ಹೊಂದಿಕೊಳ್ಳಬಹುದು ಎಂದು ಈಗಾಗಲೇ ಹೇಳಲಾಗಿದೆ. ಆದರೆ ನಾನು ಹೇಳಲು ಬಯಸುತ್ತಿರುವುದು ಪೋಷಕಾಂಶವನ್ನು ನೇರವಾಗಿ ನೋಡಬೇಕು ಎಂಬುದಷ್ಟೇ ಅಲ್ಲ; ಅದನ್ನು ಒರೆಗಲ್ಲಾಗಿ ಪರಿಗಣಿಸಬೇಕು ಎಂದು. ಪೋಷಕಾಂಶವೇ ಎಲ್ಲವೂ ಎಂದೇನಲ್ಲ; ಆದರೆ ಜಾಗತಿಕ ದಕ್ಷಿಣದ ತಲಾ ಆದಾಯ ಮಟ್ಟಗಳಲ್ಲಿ ವ್ಯಕ್ತಿಯ ಒಟ್ಟಾರೆ ಕಲ್ಯಾಣವನ್ನು ಅಳೆಯಲು ಪೋಷಕಾಂಶ ಒಂದು ಪ್ರಮುಖ ಸೂಚಕ, ಒಂದು ಸಂಕೇತವಾಗಿದೆ ಎಂಬುದನ್ನು ಒತ್ತಿ ಹೇಳುವುದೇ ನನ್ನ ಉದ್ದೇಶ. ಇದೇ ಕಾರಣಕ್ಕೆ ಭಾರತೀಯ ಯೋಜನಾ ಆಯೋಗವು ಕ್ಯಾಲೊರಿ ಮಾನದಂಡದ ಆಧಾರದ ಮೇಲೆ ಬಡತನವನ್ನು ನಿರ್ಧರಿಸಿದ ಕ್ರಮ ಇಂದಿಗೂ ಅತ್ಯಂತ ಸೂಕ್ತವಾಗಿದೆ.
ಬಹು-ಆಯಾಮದ ಬಡತನ ಸೂಚ್ಯಂಕವು ಆದಾಯವನ್ನು ನಿರ್ಲಕ್ಷಿಸಿ ಇತರ ಹತ್ತು ಲಕ್ಷಣಗಳ ಮೇಲೆ ಕೇಂದ್ರೀಕರಿಸುವ ಮೂಲಕ (ಅವು ಪೋಷಕಾಂಶದ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ), ಬಡತನದ ಕೆಳಂದಾಜು ಮಾಡುತ್ತದೆ. ಇತ್ತ ವಿಶ್ವ ಬ್ಯಾಂಕ್ ವೆಚ್ಚದ ಮೇಲೆ ಮಾತ್ರ ಗಮನ ಹರಿಸುತ್ತದೆ; ಆದರೆ ನೈಜ ವೆಚ್ಚವನ್ನು ಅಳೆಯಲು ಸಂಪೂರ್ಣ ಅಸಂಗತವಾದ ಬೆಲೆ ಸೂಚ್ಯಂಕವನ್ನು ಬಳಸುತ್ತದೆ. ಇದು ಹಳೆಯ ಉಪಭೋಗ ಗುಚ್ಛವನ್ನು ಆಧಾರವನ್ನಾಗಿ ಮಾಡಿಕೊಂಡು, ಆ ಆಧಾರ ವರ್ಷದಿಂದ ಬೆಲೆಗಳು ಎಷ್ಟು ಏರಿವೆ ಎಂಬುದನ್ನು ಲೆಕ್ಕಹಾಕುತ್ತದೆ. ಇದರಿಂದ ಉತ್ಪನ್ನ ನವೀನತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ; ಜೊತೆಗೆ ಶಿಕ್ಷಣ ಮತ್ತು ಆರೋಗ್ಯದಂತಹ ಅವಶ್ಯಕ ಸೇವೆಗಳ ಖಾಸಗೀಕರಣದಿಂದ ಉಂಟಾಗುವ ಪರಿಣಾಮಗಳನ್ನೂ ಲೆಕ್ಕಿಸದಂತಾಗುತ್ತದೆ. ಉದಾಹರಣೆಗೆ, ಆಧಾರ ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಸಾರ್ವಜನಿಕ ಆರೋಗ್ಯ ಸೇವೆಯ ಲಭ್ಯತೆ ಇದ್ದರೆ ಮತ್ತು ಅದರ ನೈಜ ವೆಚ್ಚ ಬದಲಾಗದೆ ಇದ್ದರೂ, ಆ ಸೇವೆಗಳು ಹಾಳಾಗಿಹೋಗಿ ಜನರು ಹೆಚ್ಚು ದುಬಾರಿ ಖಾಸಗಿ ಸೇವೆಗಳತ್ತ ಹೋಗಬೇಕಾದ ಪರಿಸ್ಥಿತಿ ಬಂದಿದ್ದರೆ, ಇದರ ಕಾರಣದಿಂದ ಉಂಟಾಗುವ ಜೀವನ ವೆಚ್ಚದ ನೈಜ ಏರಿಕೆ ಎಲ್ಲಿಯೂ ಪ್ರತಿಫಲಿಸುವುದಿಲ್ಲ. ಪರಿಣಾಮವಾಗಿ ನಿಜವಾದ ಜೀವನ ವೆಚ್ಚದ ಏರಿಕೆಯನ್ನು ಗ್ರಹಿಸಲಾಗುವುದಿಲ್ಲ; ಹಣ ವೆಚ್ಚವನ್ನು ಬೆಲೆ ಸೂಚ್ಯಂಕಕ್ಕೆ ಹೊಂದಿಸಿ ಲೆಕ್ಕ ಹಾಕುವ ‘ನೈಜ ವೆಚ್ಚ’ ಮೇಲಂದಾಜು ಆಗಿರುತ್ತದೆ; ಹಾಗಾಗಿ ಬಡತನದ ಪ್ರಮಾಣ ಕೆಳಂದಾಜಿಗೆ ಗುರಿಯಾಗುತ್ತದೆ.
ಹಳೆಯ ಯೋಜನಾ ಆಯೋಗದ ಬಡತನ ನಿರ್ಧಾರ ಮಾನದಂಡಗಳನ್ನು ಬಳಸಿದರೆ — ಅಂದರೆ ನಗರ ಭಾರತದಲ್ಲಿ ಪ್ರತಿವ್ಯಕ್ತಿಗೆ ದಿನಕ್ಕೆ 2100 ಕ್ಯಾಲೊರಿ ಮತ್ತು ಗ್ರಾಮೀಣ ಭಾರತದಲ್ಲಿ 2200 ಕ್ಯಾಲೊರಿ ಆಹಾರ ಲಭ್ಯತೆಯನ್ನು ಆಧರಿಸಿದರೆ — 1993-94ರಿಂದ 2017-18ರ ನಡುವೆ ಬಡತನದಲ್ಲಿ ಮಹತ್ತರ ಏರಿಕೆ ಕಂಡುಬರುತ್ತದೆ. ಈ ಅವಧಿ ನವಉದಾರ ಆರ್ಥಿಕ ವ್ಯವಸ್ಥೆಯ ವರ್ಷಗಳಾಗಿದ್ದವು. 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) ದತ್ತಾಂಶಗಳು ಸರ್ಕಾರಕ್ಕೆ ಎಷ್ಟೊಂದು ಮುಜುಗರ ಉಂಟುಮಾಡಿದ್ದವೆಂದರೆ, ಅವುಗಳನ್ನು ಸಾರ್ವಜನಿಕವಾಗಿ ಹಿಂಪಡೆಯಲಾಯಿತು
ವಿರೋಧಾಭಾಸ
ವಿರೋಧಾಭಾಸವೆಂದರೆ, ಒಂದೆಡೆ ವೆಚ್ಚವನ್ನೇ ಸಂಪೂರ್ಣ ನಿರ್ಲಕ್ಷಿಸುವ ಸೂಚ್ಯಂಕ ಮತ್ತು ಮತ್ತೊಂದೆಡೆ ಪೋಷಕಾಂಶದ ಮಟ್ಟವನ್ನು ಕಡೆಗಣಿಸಿ ಕೇವಲ ವೆಚ್ಚದ ಮೇಲೆ ಕೇಂದ್ರೀಕರಿಸುವ ಸೂಚ್ಯಂಕ — ಎರಡೂ ಬಡತನವನ್ನು ಭಾರೀ ಪ್ರಮಾಣದಲ್ಲಿ ಕೆಳಂದಾಜು ಮಾಡುತ್ತವೆ. ಇದೇ ಕಾರಣಕ್ಕೆ ಭಾರತವು ಬಹುತೇಕ ದಾರಿದ್ರ‍್ಯವನ್ನು ನಿರ್ಮೂಲನೆ ಮಾಡಿದೆ ಎಂಬಂತಹ ಅಸಂಬದ್ಧ “ಶೋಧನೆ”ಗಳು ಕಾಣಿಸುತ್ತವೆ .ಇಂತಹ ಅಂದಾಜುಗಳ ಪ್ರಕಾರ ಬಡತನದ ಪ್ರಮಾಣ ಈಗ ಕೇವಲ 2 ಶೇಕಡಾ. ಆದರೆ ಇದೇ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ ಲೆಕ್ಕ ಹಾಕಲಾಗುವ ಸುಮಾರು 115 ದೇಶಗಳಲ್ಲಿ 100ಕ್ಕಿಂತಲೂ ಆಚಿನ ಸ್ಥಾನದಲ್ಲಿದೆ; ಹಾಗೆಯೇ ಬದುಕು ಸಾಗಿಸಲು ತಿಂಗಳಿಗೆ 5 ಕಿಲೋಗ್ರಾಂ ಆಹಾರ ಧಾನ್ಯಗಳ ಸರ್ಕಾರಿ ನೆರವನ್ನು ನಿರೀಕ್ಷಿಸುವ ಅಪಾರ ಸಂಖ್ಯೆಯ ಜನರು ಇಲ್ಲಿದ್ದಾರೆ.
ಹಳೆಯ ಸೋವಿಯತ್ ಒಕ್ಕೂಟದಲ್ಲಿ ಬಡತನ ನಿಜಕ್ಕೂ ಅಳಿದುಹೋಗಿದ್ದಾಗ, ಕುಟುಂಬಗಳಿಗೆ ಧಾನ್ಯ ವಿತರಿಸುವುದು ಎಷ್ಟು ಅನಾವಶ್ಯಕವಾಗಿತ್ತು ಎಂದರೆ, ಅಧಿಕಾರಿಗಳು ನೀಡಿದ ಧಾನ್ಯವನ್ನು ಜನರು ಪೋಲುಮಾಡುತ್ತಿದ್ದರು. ಆದರೆ ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲಾಗುವ ಹೆಚ್ಚುವರಿ ಧಾನ್ಯವೇ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಜೀವನಾಡಿಯಾಗಿದೆ ಎಂಬುದಕ್ಕೆಅಲ್ಲಿ ವಾಸಿಸುವವರು ಅಥವಾ ಅಲ್ಲಿ ಇರುವ ಸ್ಥಿತಿಗತಿಗಳನ್ನು ಅರಿತವರು ಸುಲಭವಾಗಿ ಸಾಕ್ಷ್ಯ ನುಡಿಯುತ್ತಾರೆ.
ವಾಸ್ತವವಾಗಿ, ಹಳೆಯ ಯೋಜನಾ ಆಯೋಗದ ಬಡತನ ನಿರ್ಧಾರ ಮಾನದಂಡಗಳನ್ನು ಬಳಸಿದರೆ — ಅಂದರೆ ನಗರ ಭಾರತದಲ್ಲಿ ಪ್ರತಿವ್ಯಕ್ತಿಗೆ ದಿನಕ್ಕೆ 2100 ಕ್ಯಾಲೊರಿ ಮತ್ತು ಗ್ರಾಮೀಣ ಭಾರತದಲ್ಲಿ 2200 ಕ್ಯಾಲೊರಿ ಆಹಾರ ಲಭ್ಯತೆಯನ್ನು ಆಧರಿಸಿದರೆ — 1993-94ರಿಂದ 2017-18ರ ನಡುವೆ ಬಡತನದಲ್ಲಿ ಮಹತ್ತರ ಏರಿಕೆ ಕಂಡುಬರುತ್ತದೆ (ಉತ್ಸಾ ಪಟ್ನಾಯಕ್, Exploring the Poverty Question). ಈ ಅವಧಿಯೇ ನವಉದಾರ ಆರ್ಥಿಕ ವ್ಯವಸ್ಥೆಯ ವರ್ಷಗಳಾಗಿದ್ದವು. 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) ದತ್ತಾಂಶಗಳು ಸರ್ಕಾರಕ್ಕೆ ಎಷ್ಟೊಂದು ಮುಜುಗರ ಉಂಟುಮಾಡಿದ್ದವೆಂದರೆ, ಅವುಗಳನ್ನು ಸಾರ್ವಜನಿಕವಾಗಿ ಹಿಂಪಡೆಯಲಾಯಿತು ಮತ್ತು ನಂತರದ NSS ಸುತ್ತುಗಳಲ್ಲಿ ದತ್ತಾಂಶ ಸಂಗ್ರಹಣೆಯ ವಿಧಾನವನ್ನೇ ಬದಲಾಯಿಸಲಾಯಿತು. ಇದರಿಂದ 2022-23ರ ದತ್ತಾಂಶವನ್ನು ಹಿಂದಿನ ವರ್ಷಗಳೊಂದಿಗೆ ಹೋಲಿಸಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಲ್ಲಿನ ಸ್ಥಿತಿಗತಿಗಳನ್ನು ಗಮನಿಸುವ ಬಹುತೇಕ ವೀಕ್ಷಕರು — ಐಎಂಎಫ್ ಸಹಿತ — ಈಗಾಗಲೇ ಒಪ್ಪಿಕೊಂಡಿರುವಂತೆ, ಜಾಗತಿಕ ದಕ್ಷಿಣದಲ್ಲಿ ಅತ್ಯುತ್ತಮವಾಗಿದ್ದ ಭಾರತದ ಅಂಕಿ-ಅಂಶ ವ್ಯವಸ್ಥೆ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅತ್ಯಂತ ಅವಿಶ್ವಾಸಾರ್ಹವಾಗಿ ಬಿಟ್ಟಿದೆ.
ಇದನ್ನೂ ನೋಡಿ : ಇದು ಜನರ ಬಜೆಟ್ ಅಲ್ಲ- ಕಾರ್ಪೊರೇಟ್ ಲಾಭಕ್ಕೆ ಬಜೆಟ್! | ಟಿಆರ್‌ಸಿ | ಗುರುರಾಜ ದೇಸಾಯಿ Janashakthi Media
