ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದು 24 ಗಂಟೆಗಳ ನಂತರವೂ ಇನ್ನೂ ಯಾರು ಮುಂದಿನ ಅಧ್ಯಕ್ಷರಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿರುಸಿನ ಸ್ಪರ್ಧೆ ಮತ್ತು ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ಹೇಳಿಕೆಗಳಿಂದ ಅಂಗಡಿಗಳು ಮಾಲ್ ಗಳನ್ನು ಆತಂಕದಿಂದ ಮುಚ್ಚಲಾಗಿದೆ. ಒಂದು ಕಡೆ ‘ನಾನು ಗೆದ್ದಿದ್ದೇನೆ’ ಎಂದು ಏಕಪಕ್ಷೀಯವಾಗಿ ಘೋಷಿಸುತ್ತಾ, ಇನ್ನೊಂದು ಕಡೆ ಭಾರೀ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಟ್ರಂಪ್ ಆಪಾದಿಸಿದ್ದಾರೆ. ಚುನಾವಣಾ ನಿಯಮಗಳನ್ನು ಲೆಕ್ಕಿಸದೆ ‘ಮತ ಎಣಿಕೆ’ ನಿಲ್ಲಬೇಕು. ಇಲ್ಲದಿದ್ದರೆ ನಾನು ಸುಪ್ರೀಂ ಕೋರ್ಟಿಗೆ ಹೋಗುತ್ತೇನೆ’ ಎಂದು ಬೆದರಿಸಿದ್ದಾರೆ. ಕೆಲವು ಕಡೆ ಕೋರ್ಟಿಗೆ ಹೋಗಿದ್ದಾರೆ ಕೂಡಾ. ಅಗತ್ಯ ಬಿದ್ದರೆ ಚುನಾವಣಾ ಎಣಿಕೆಯಲ್ಲಿ ಅಕ್ರಮ ನಿಲ್ಲಿಸಲು ಜನ ಎಣಿಕೆ ಕೇಂದ್ರಗಳಿಗೆ ತೆರಳಬೇಕು ಎಂದು ಹೇಳಿದ್ದಾರೆ.
ಸಶಸ್ತ್ರ ಟ್ರಂಪ್ ಬೇಂಬಲಿಗರು ಇದನ್ನು ಗಂಭೀರವಾಗಿ ತೆಗೆದುಕೊಂಡು ಹಲವು ಕಡೆ ಎಣಿಕೆ ಕೇಂದ್ರಗಳನ್ನು ಸುತ್ತುವರೆದಿದ್ದಾರೆ. ‘ಮತ ಎಣಿಕೆ ನಿಲ್ಲಿಸಬೇಕು’ ಎಂದು ಟ್ರಂಪ್ ಬೆಂಬಲಿಗರು ಮತ್ತು ‘‘ಪ್ರತಿಯೊಂದು ಮತವನ್ನೂ ಎಣಿಸಬೇಕು’ ಎಂದು ಬೈಡನ್ ಬೆಂಬಲಿಗರು ಪ್ರತಿಭಟನಾ ಪ್ರದರ್ಶನಗಳನ್ನು ಮಾಡಿದ್ದಾರೆ. ಹಲವು ಕಡೆ ನೇಶನಲ್ ಗಾರ್ಡ್‍ಸ್ (ನಮ್ಮ ಸಿ.ಆರ್.ಪಿ.ಎಫ್. ನಂತೆ ತುರ್ತು ಪರಿಸ್ಥಿತಿಯಲ್ಲಿ ಕರೆಯುವ ಕೇಂದ್ರೀಯ ಸಶಶ್ತ್ರ ಪಡೆ) ನ್ನು ಅಣಿ ನೆರೆಸಲಾಗಿದೆ. ಹಿಂಸಾಚಾರದ ಮತ್ತು ಆಂತರಿಕ ಯುದ್ಧದ ಬೀತಿ ಹರಡಿದೆ. ಟ್ರಂಪ್ ಸೋತರೂ ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯಿದ್ದು ಸಂವಿಧಾನಿಕ ಬಿಕ್ಕಟ್ಟು ತಲೆದೋರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಟ್ರಂಪ್ ಹೇಳಿಕೆ ಮತ್ತು ಕ್ರಮಗಳನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಜಾಗತಿಕ ನಿರೀಕ್ಷಣಾ ತಂಡ ‘ಅಧಿಕಾರದ ಭಾರೀ ದುರುಪಯೋಗ’ ಎಂದು ಟೀಕಿಸಿದೆ.
ಬೈಡನ್ 7.2 ಕೋಟಿ (50.4%) ಮತ ಗಳಿಸಿ ಸ್ಪಷ್ಟ ಬಹುಮತ ಪಡೆದಿದ್ದರೂ, ಹತ್ತಿರದ ಸ್ಪರ್ಧಿ ಅಧ್ಯಕ್ಷ ಟ್ರಂಪ್ (6.9 ಕೋಟಿ, 48%)ಕ್ಕಿಂತ 30ಲಕ್ಷ ಹೆಚ್ಚು ಮತ ಪಡೆದಿದ್ದರೂ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಇರುವ ವಿಚಿತ್ರವಾದ ಪರೋಕ್ಷ ಪದ್ಧತಿಯಿಂದಾಗಿ ಅವರಿಗೆ ಇನ್ನೂ ಅಧ‍್ಯಕ್ಷತೆ ದಕ್ಕಿಲ್ಲ. ಈ ಪರೋಕ್ಷ ಪದ್ಧತಿಯಲ್ಲಿ ಅಮೆರಿಕದ 50 ರಾಜ್ಯಗಳಿಗೆ (ಸ್ಥೂಲವಾಗಿ ಜನಸಂಖ್ಯೆಯ ಆಧಾರದಲ್ಲಿ) ಒಟ್ಟು 540 ‘ಅಧ್ಯಕ್ಷೀಯ ಮತ’ಗಳನ್ನು ಕೊಡಲಾಗಿದೆ. ಒಂದು ರಾಜ್ಯದಲ್ಲಿ ಒಬ್ಬ ಅಭ‍್ಯರ್ಥಿ ಬಹುಮತ ಪಡೆದರೆ ಆ ರಾಜ್ಯದ ಎಲ್ಲಾ ‘ಅಧ್ಯಕ್ಷೀಯ ಮತ’ಗಳು ಆತನಿಗೆ ಹೋಗುತ್ತವೆ, ಪಡೆದ ಮತದ ಪ್ರಮಾಣದಲ್ಲಿ ಹಂಚಲಾಗುವುದಿಲ್ಲ. (ಉದಾ: ಈ ಚುನಾವಣೆಯಲ್ಲಿ ಬೈಡನ್ ಕ್ಯಾಲಿಫೋರ್ನಿಯದಲ್ಲಿ ಬಹುಮತ ಪಡೆದಿದ್ದು ಆ ರಾಜ್ಯದ ಎಲ್ಲ 55 ಮತಗಳು ಅವರಿಗೆ, ಟ್ರಂಪ್ ಟೆಕ್ಸಾಸ್ ನಲ್ಲಿ ಬಹುಮತ ಪಡೆದಿದ್ದು ಆ ರಾಜ್ಯದ ಎಲ್ಲ 38 ಮತಗಳು ಅವರಿಗೆ ಹೋಗುತ್ತವೆ). ಈ ಪರೋಕ್ಷ ಪದ್ಧತಿಯಲ್ಲಿ ಒಟ್ಟು ಮತಗಳಲ್ಲಿ ಬಹುಮತ ಗಳಿಸಿದ ಅಭ‍್ಯರ್ಥಿ, ‘ಅಧ್ಯಕ್ಷೀಯ ಮತ’ಗಳಲ್ಲಿ ಬಹುಮತ ಗಳಿಸದೆ ಸೋಲಬಹುದು. ಈ ಪದ್ಧತಿಯಿಂದಾಗಿಯೇ 2000 ರಲ್ಲಿ ಬುಶ್ ಮತ್ತು 2016 ರಲ್ಲಿ ಟ್ರಂಪ್ ಗೆದ್ದಿದ್ದು. ಅವರಿಗೆ ಒಟ್ಟು ಮತಗಳಿಕೆಯಲ್ಲಿ ಬಹುಮತ ಸಿಕ್ಕಿರಲಿಲ್ಲ.
ಇದು ವರೆಗೆ ಮತ ಎಣಿಕೆ ಮುಗಿದ ಅಥವಾ ಇನ್ನೂ ಎಣಿಸಬೇಕಾದ ಮತಗಳಿಗಿಂತ ಮತ ಅಂತರ ಹೆಚ್ಚಿರುವ ರಾಜ್ಯಗಳ ಫಲಿತಾಂಶ ಗಣನೆಗೆ ತೆಗೆದುಕೊಂಡರೆ (ನ.5 ರಾತ್ರಿ 9 ಗಂಟೆಗೆ) ಬೈಡನ್ 540 ರಲ್ಲಿ 253 ‘ಅಧ್ಯಕ್ಷೀಯ ಮತ’ಗಳನ್ನುಪಡೆದಿದ್ದಾರೆ. ಟ್ರಂಪ್ 214 ಮತಗಳನ್ನು ಪಡೆದು ಹಿಂದಿದ್ದಾರೆ. 6 ರಾಜ್ಯಗಳಲ್ಲಿ ಇಬ್ಬರು ಅಭ‍್ಯರ್ಥಿಗಳ ಮತ ಅಂತರಕ್ಕಿಂತ ಇನ್ನೂ ಎಣಿಸಬೇಕಾದ ಮತಗಳು ಗಮನಾರ್ಹವಾಗಿ ಜಾಸ್ತಿ ಇದ್ದು, ಇದು ಅತಂತ್ರ ಸ್ಥಿತಿಗೆ ಕಾರಣವಾಗಿವೆ. ಇಂತಹ 6 ರಾಜ್ಯಗಳಲ್ಲಿ ಅರಿಝೋನಾ (11 ಅಧ್ಯಕ್ಷೀಯ ಮತಗಳು) ಮತ್ತು ನೆವಾದಾ (6 ಅ.ಮ.) ಬೈಡನ್ ಮುಂದಿದ್ದಾರೆ. ಇನ್ನೂ ಎಣಿಸಬೇಕಾದ ಮತಗಳು ಪೋಸ್ಟಲ್ ಮತಗಳು ಅಥವಾ ಡೆಮೊಕ್ರಾಟಿಕ್ ಬಹುಮತ ಕ್ಷೇತ್ರಗಳಾಗಿದ್ದು ಬೈಡನ್ ತಮ್ಮ ಮುನ್ನಡೆ ಕಾದುಕೊಳ್ಳುವುದು ಮಾತ್ರವಲ್ಲ, ಗೆಲುವಿನ ಅಂತರವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಎರಡು ರಾಜ್ಯಗಳನ್ನು ಗೆದ್ದರೆ ಸಾಕು, ಬೈಡನ್ 270ರ ಮ್ಯಾಜಿಕ್ ನಂಬರ್ ತಲುಪುತ್ತಾರೆ. ಉಳಿದ 3 ರಾಜ್ಯಗಳಾದ ಪೆನ್ಸಿಲ್ವೇನಿಯ (20 ಅಧ್ಯಕ್ಷೀಯ ಮತಗಳು), ನಾರ್ತ್ ಕೆರೊಲಿನಾ(15 ಅ.ಮ.) ಮತ್ತು ಜಾರ್ಜಿಯ (16 ಅ.ಮ.) ಗಳಲ್ಲಿ ಟ್ರಂಪ್ ಅಲ್ಪ ಮುನ್ನಡೆ ಸಾಧಿಸಿದ್ದರೂ, ಇನ್ನೂ ಎಣಿಸಬೇಕಾದ ಮತಗಳಲ್ಲಿ ಪೋಸ್ಟಲ್ ಮತಗಳು ಅಥವಾ ಡೆಮೊಕ್ರಾಟಿಕ್ ಬಹುಮತ ಕ್ಷೇತ್ರಗಳೇ ಹೆಚ್ಚಿರುವುದರಿಂದ ಟ್ರಂಪ್ ಅಂತರ ಅಳಿಸಿ ಹಾಕಿ ಬೈಡನ್ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಅಲಾಸ್ಕಾ (3 ಅ.ಮ.) ದಲ್ಲಿ ಮಾತ್ರ ಟ್ರಂಪ್ ಅವರ ಮುನ್ನಡೆ ಗಮನಾರ್ಹವಾಗಿದೆ.
ಟ್ರಂಪ್ 270ರ ಮ್ಯಾಜಿಕ್ ನಂಬರ್ ತಲುಪಬೇಕಾದರೆ ನೆವಾದಾ, ಪೆನ್ಸಿಲ್ವೇನಿಯ, ನಾರ್ತ್ ಕೆರೊಲಿನಾ, ಅಲಾಸ್ಕಾ ಮತ್ತು ಜಾರ್ಜಿಯ ರಾಜ್ಯಗಳನ್ನು ಗೆಲ್ಲಬೇಕು. ಇದರ ಸಾಧ್ಯತೆ ಕಡಿಮೆ. ಆದ್ದರಿಂದ ಅವರು ಈ ರಾಜ್ಯಗಳಲ್ಲಿ ಕೋರ್ಟಿಗೆ ಹೋಗುವ ಮೂಲಕ ‘ಮತ ಎಣಿಕೆ ನಿಲ್ಲಿಸುವ’ ತಂತ್ರ ಹೂಡಿದ್ದಾರೆ. ಇದಕ್ಕೆ ನ.3 ರ ನಂತರ ತಲುಪಿದ (ನಿಯಮಗಳ ಪ್ರಕಾರ ನ.3ಕ್ಕಿಂತ ಮೊದಲಿನ ಪೋಸ್ಟ್ ಸ್ತಾಂಪ್ ಇದ್ದರೆ ಸಾಕು) ಪೋಸ್ಟಲ್ ಮತಗಳನ್ನು ಎಣಿಸಬಾರದು, ಪೋಸ್ಟಲ್ ಮತಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಗದ್ದಲ ಎಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಇದಲ್ಲದೆ ಬೈಡನ್ ಸ್ಪಷ್ಟ ಮುನ್ನಡೆ ಪಡೆದಿರುವ ವಿಸ್ಕೊನ್ಸಿನ್ ಮತ್ತು ಮಿಷಿಗನ್ ಗಳಲ್ಲಿ ಟ್ರಂಪ್ ಬೆಂಬಲಿಗರು ಮರುಎಣಿಕೆಗೆ ಒತ್ತಾಯಿಸಿದ್ದಾರೆ. ನಿಯಮಗಳ ಪ್ರಕಾರ, ಪೂರ್ಣ ಎಣಿಕೆಯ ನಂತರ ಮತ ಅಂತರ ಶೇ.1ಕ್ಕಿಂತ ಕಡಿಮೆ ಇದ್ದರೆ ಮತ್ತು ಅಕ್ರಮಗಳ ಕುರಿತು ಪುರಾವೆ ಇದ್ದರೆ ಮಾತ್ರ ಮರುಎಣಿಕೆಗೆ ಕೋರಿಕೆ ಸಲ್ಲಿಸಬಹುದು.
ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಭಾರೀ ಅಂತರದಿಂದ ಟ್ರಂಪನ್ನು ಸೋಲಿಸುತ್ತಾರೆ ಎಂಬ ನಿರೀಕ್ಷೆ ಮತ್ತು ಚುನಾವಣಾ-ಪೂರ್ವ ಸಮೀಕ್ಷೆಗಳ ‘ಭವಿಷ್ಯ’ ಮತ್ತೆ ಮುಗ್ಗರಿಸಿವೆ. ಡೆಮೊಕ್ರಾಟಿಕ್ ಅಧ್ಯಕ್ಷೀಯ ಆಭ್ಯರ್ಥಿಯ ಆಯ್ಕೆಯಲ್ಲಿ ಸ್ಪಷ್ಟ ಜನಪರ ಬದಲಿ ನೀತಿಗಳನ್ನು ಪ್ರತಿಪಾದಿಸುವ ಎಡಪಂಥೀಯ ಅಭ್ಯರ್ಥಿ (ಬರ್ನಿ ಸ್ಯಾಂಡರ್ಸ್) ನಡುಪಂಥೀಯ ಮತಗಳನ್ನು ಪಡೆಯುವುದಿಲ್ಲ. ಬೈಡನ್ ಎಡ ಮತ್ತು ನಡುಪಂಥೀಯ ಎರಡೂ ಮತಗಳನ್ನು ಪಡೆದು ‘ಸುಭದ್ರ ಅಭ‍್ಯರ್ಥಿ’ಯಾಗಿರುತ್ತಾರೆ ಆದ್ದರಿಂದ ಟ್ರಂಪನ್ನು ಭಾರೀ ಅಂತರದಿಂದ ಸೋಳಿಸುತ್ತಾರೆ ಎಂಬ ಅಂದಾಜು ಸಹ ತಪ್ಪು ಎಂದು ಸಾಬೀತಾಗಿದೆ. ಟ್ರಂಪ್ ನ ಬೆಂಬಲಿಗರ ಬಡ ಮತ್ತು ಕೆಳ-ಮಧ್ಯಮ ವರ್ಗದ ಬಿಳಿಯರ ವಿಭಾಗವನ್ನು ಬರ್ನಿ ಸ್ಯಾಂಡರ್ಸ್ ರಂತಹ ಅಭ್ಯರ್ಥಿ ಆಕರ್ಷಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಟ್ರಂಪ್ ಅವರ ಆಡಳಿತದ ಪ್ರತೀಕವಾಗಿದ್ದ ತೀವ್ರ ಕೊವಿದ್ ಆರೋಗ್ಯ ಬಿಕ್ಕಟ್ಟು ಮತ್ತು ಬಂಡವಾಳಶಾಹಿ ಧೋರಣೆಗಳ ಘೋರ ವೈಫಲ್ಯಕ್ಕೆ ಬದಲಿ ನೀಡುವ ದಿಟ್ಟ ನೀತಿಗಳ ಮೂಲಕ ಟ್ರಂಪ್ ಅವರನ್ನು ಇನ್ನೂ ಸುಲಭವಾಗಿ ಮತ್ತು ನಿರ್ಣಾಯಕವಾಗಿ ಸೋಲಿಸಬಹುದಿತ್ತು ಎಂದೂ ಅಂದಾಜಿಸಲಾಗಿದೆ.
ಈ ಚುನಾವಣೆ 120 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಮತದಾನದ ಪ್ರಮಾಣಕ್ಕೆ (ಶೇ. 67) ಮತ್ತು ಚುನಾವಣಾ ದಿನಕ್ಕಿಂತ ಮೊದಲು (ಅಮೆರಿಕನ್ ನಿಯಮಗಳ ಪ್ರಕಾರ ಚುನಾವಣಾ ದಿನವಾದ ನ.3ಕ್ಕಿಂ ತ ಹಲವು ದಿನಗಳ ಮೊದಲಿನಿಂದ ಮತದಾನ ಆರಂಭವಾಗುತ್ತದೆ) ಮಾಡಿದ ಮತದಾರರ ಪ್ರಮಾಣ ಶೇ. 67 ಇತ್ತು. ಇದು ಅತ್ಯಂತ ಕುತೂಹಲ ಕೆರಳಿಸಿದ ಚುನಾವಣೆಯಾಗಿದ್ದದ್ದು ಬಹುಶಃ ಇದಕ್ಕೆ ಕಾರಣವಾಗಿತ್ತು. ಸಾಮಾನ್ಯವಾಗಿ ಮತದಾನ ಶೇ. 50 ನ್ನು ದಾಟುವುದಿಲ್ಲ.
ಅಧ್ಯಕ್ಷೀಯ ಚುನಾವಣೆ ಜತೆಗೆ ಸೆನೆಟ್ (ಮೇಲ್ಮನೆ) ಮತ್ತು ಹೌಸ್ (ಕೆಳಮನೆ) ಚುನಾವಣೆಗಳು ನಡೆದಿದ್ದು ಡೆಮೊಕ್ರಾಟಿಕ್ ಪಕ್ಷ, ಸೆನೆಟನ್ನು ರಿಪಬ್ಲಿಕನ್ ಪಕ್ಷದಿಂದ ಕಸಿದುಕೊಳ್ಳುವುದರಲ್ಲಿ ವಿಫಲವಾಗಿದೆ. ಈವರೆಗೆ ಎರಡೂ ಪಕ್ಷಗಳು ತಲಾ 48 ಸೀಟುಗಳನ್ನು ಪಡೆದಿವೆ. ಹಿಂದೆ ರಿಪಬ್ಲಿಕನ್ ಪಕ್ಷ 53 ಸೀಟು ಹೊಂದಿದ್ದು ಡೆಮೊಕ್ರಾಟಿಕ್ ಪಕ್ಷ ಈವರೆಗೆ ಕೇವಲ 1 ಸೀಟು ಕಸಿದುಕೊಳ್ಳಲು ಸಾಧ್ಯವಾಗಿದೆ ಅಷ್ಟೇ. ಎಲ್ಲ ಸೀಟುಗಳಲ್ಲಿ ಮತ ಎಣಿಕೆ ಮುಂದುವರೆದಿದ್ದರೂ ಡೆಮೊಕ್ರಾಟಿಕ್ ಪಕ್ಷ ಬಹುಮತ ಪಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ ಎನ್ನಲಾಗಿದೆ. ಅದೇ ರೀತಿ ಹೌಸ್ (ಕೆಳಮನೆ) ಯಲ್ಲಿ ಯಾವುದೇ ರಿಪಬ್ಲಿಕನ್ ಸೀಟು ಕಸಿದುಕೊಳ್ಳದೆ, 6 ಸೀಟುಗಳನ್ನು ಕಳೆದುಕೊಂಡಿದೆ. ಆದರೂ (ಕೆಳಮನೆ) ನಲ್ಲಿ ಬಹುಮತ ಉಳಿಸಿಕೊಂಡಿದೆ. ಬೈಡನ್ ಅಧ್ಯಕ್ಷರಾಗಿ ಚುನಾಯಿತರಾದರೆ ಈಗಿನ ನೀತಿಗಳನ್ನು ಬದಲಿಸಿ ತಮ್ಮ ನೀತಿ ಜಾರಿ ಮಾಡಬೇಕಾದರೆ ಸೆನೆಟ್ ನಲ್ಲಿ ಬಹುಮತ ಅಗತ್ಯ. ಇಲ್ಲದಿದ್ದರೆ ಪ್ರಧಾನ ಸಿಬ್ಬಂದಿ ನೇಮಕ ಮತ್ತು ಹೊಸ ನೀತಿ ಜಾರಿಯಲ್ಲಿ ಹಲವು ತೊಡಕುಗಳು ಎದುರಾಗುತ್ತವೆ ಎನ್ನಲಾಗಿದೆ.