ಯುಎಸ್‍ ಅಧ್ಯಕ್ಷರನ್ನು ‘ಖುಶಿಪಡಿಸುವುದು ಮುಖ್ಯ’ !

ಒಂದೇ ವಾರದಲ್ಲಿ ಎರಡು ಬಾರಿ ಯುಎಸ್ ಅಧ್ಯಕ್ಷ ಭಾರತದ ಪ್ರಧಾನಿಯವರನ್ನು ಒಬ್ಬ ದೀನ ಯಾಚಕನೆಂಬಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನನುಸರಿಸಿ ಬಂದಿರುವ ಇನ್ನೂ 3-4 ಸುದ್ದಿಗಳು ಭಾರತದ ವಿದೇಶಾಂಗ ನೀತಿ ಮತ್ತು ಜಗತ್ತಿನಲ್ಲಿ ಭಾರತದ ವರ್ಚಸ್ಸಿನ ಬಗ್ಗೆ ಕಳವಳವನ್ನು ಉಂಟು ಮಾಡಿವೆ.
ವೇದರಾಜ ಎನ್‌ ಕೆ

ಜನವರಿ 4ರಂದು ತನ್ನ ವಿಶೇಷ ಅಧ್ಯಕ್ಷೀಯ ವಿಮಾನ ಏರ್‌ಪೋರ್ಸ್ ಒನ್‌ನಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತ ಅಧ್ಯಕ್ಷ ಟ್ರಂಪ್ “ಅವರು(ಭಾರತ) ನನ್ನನ್ನು ಖುಶಿಪಡಿಸ ಬಯಸುತ್ತಾರೆ, ಮೂಲತಃ ಮೋದಿ ಒಬ್ಬ ಒಳ್ಳೆಮನುಷ್ಯ, ಒಳ್ಳೆಯವರು. ನನಗೆ ಖುಶಿಯಾಗಿಲ್ಲ, ಮತ್ತು ನನ್ನನ್ನು ಖುಶಿಪಡಿಸುವುದು ಮುಖ್ಯ ಎಂದು ಅವರಿಗೆ ಗೊತ್ತಿತ್ತು” ಎಂದು ಹೇಳಿರುವುದಾಗಿ ವರದಿಯಾಗಿದೆ.

ನಂತರ ಜನವರಿ 6ರಂದು ತನ್ನ ರಿಪಬ್ಲಿಕನ್ ಪಕ್ಷದ ಸದನ ಸದಸ್ಯರೊಂದಿಗೆ ಮಾತಾಡುತ್ತ “ಭಾರತ 68 ಅಪಾಚೆ(ಹೆಲಿಕಾಪ್ಟರ್)ಗಳಿಗೆ ಆರ್ಡರ್ ಕೊಟ್ಟಿದ್ದರು, ಪ್ರಧಾನ ಮಂತ್ರಿ ಮೋದಿ ನನ್ನನ್ನು ನೋಡಲು ಬಂದಿದ್ದರು. ‘ಸರ್, ದಯಮಾಡಿ ನಾನು ನಿಮ್ಮನ್ನು ಕಾಣಬಹುದೇ’ ಎಂದು ಕೇಳಿದರು. ಹೌದು, ನನಗೆ ಅವರೊಂದಿಗೆ ಒಂದು ಅತ್ಯುತ್ತಮ ಸಂಬಂಧ ಇದೆ……ನಿಮಗೆ ಗೊತ್ತು-ಅವರು ನನ್ನ ಬಗ್ಗೆ ಅಷ್ಟೊಂದು ಖುಶಿಯಾಗಿಲ್ಲ. ಅವರು ಈಗ ಬಹಳ ಸುಂಕ ತೆರುತ್ತಿದ್ದಾರೆ. ಯಾಕೆಂದರೆ ರಷ್ಯಾದಿಂದ ತೈಲದ ಬಗ್ಗೆ ಏನೂ ಮಾಡಲಿಲ್ಲ. ಆದರೆ ಈಗ ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ” ಎಂದು ಹೇಳಿದ್ದಾರಂತೆ (ದಿ ವೈರ್, ಜನವರಿ 7).

ಇದಾದ ನಂತರ ಜನವರಿ 8 ರಂದು ಮತ್ತೊಂದು ಸುದ್ದಿ ಬಂದಿದೆ. ರಷ್ಯಾದಿಂದ ತೈಲ ಮತ್ತು ಯುರೇನಿಯಂ ಖರೀದಿಸುವ ದೇಶಗಳ ಮೇಲೆ 500%ದ ವರೆಗೆ ಸುಂಕವನ್ನು ವಿಧಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ಕೊಡುವ ಮಸೂದೆಯೊಂದರ ಮೇಲೆ ಮುಂದಿನ ವಾರ ಅಲ್ಲಿನ ಶಾಸಕಾಂಗವಾದ ಕಾಂಗ್ರೆಸ್ ನಲ್ಲಿ ಮತದಾನ ನಡೆಸಲು ಅಧ್ಯಕ್ಷ ಟ್ರಂಪ್ ಮಂಜೂರಾತಿ ನೀಡಿದ್ದಾರೆ. ಇದು ಸಾಕಷ್ಟು ಸುಲಭವಾಗಿಯೇ ಅಂಗೀಕಾರಗೊಳ್ಳುವ ಸಾಧ್ಯತೆ ಇದೆಯಂತೆ. ಅಧ್ಯಕ್ಷರು ತಮ್ಮ ವಿವೇಚನೆಯಂತೆ ಈಗಾಗಲೇ ವಿಧಿಸಿರುವ ಭಾರತದ ಮೇಲೆ ಈ ಕಾರಣಕ್ಕಾಗಿ ವಿಧಿಸಿದ್ದ ಹೆಚ್ಚುವರಿ 25%ಸುಂಕವನ್ನು 500%ಕ್ಕೂ ಹೆಚ್ಚಿಸಬಹುದಂತೆ(ದಿ ಹಿಂದು, ಜನವರಿ 9). ಸಾಲದ್ದಕ್ಕೆ ಭಾರತಕ್ಕೆ ಯುಎಸ್‌ನ ರಾಯಭಾರಿಯಾಗಿ ನೇಮಕಗೊಂಡಿರುವ ಸರ್ಜಿಯೊ ಗೊರ್ ಭಾರತವು ರಷ್ಯಾದಿಂದ ತೈಲ ಆಮದನ್ನು ಕೊನೆಗೊಳಿಸಬೇಕು. ಅಧ್ಯಕ್ಷರು ಈಗ 25% ಮಾತ್ರ ಸುಂಕ ವಿಧಿಸಿದ್ದಾರೆ, ಅದನ್ನು ಎಷ್ಟಕ್ಕೆ ಬೇಕಾದರೂ ಏರಿಸಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಇದೇ ದಿನ, ಅಂದರೆ ಜನವರಿ 8 ರಂದು, ಯುಎಸ್‍ ನ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುತ್ನಿಕ್  ಭಾರತ -ಯುಎಸ್‍ ವ್ಯಾಪಾರ ಒಪ್ಪಂದ ಇನ್ನೂ ಆಗದಿರಲು ಕಾರಣ-ನಮ್ಮ ಪ್ರಧಾನ ಮಂತ್ರಿಗಳು ಯುಎಸ್‍ ಅಧ್ಯಕ್ಷರಿಗೆ ಈ ಬಗ್ಗೆ ಕರೆ ಮಾಡದಿರುವುದು ಎಂದು ಹೇಳಿರುವುದಾಗಿ ವರದಿಯಾಗಿದೆ.  ಒಪ್ಪಂದವನ್ನು ಮಾಡಿಕೊಳ್ಳುವಂತೆ ಅಧ್ಯಕ್ಷರಿಗೆ ಕರೆ ಮಾಡಲು ತಾನು ಮೋದಿಯವರಿಗೆ ಹೇಳಿದೆ, ಆದರೆ ಭಾರತ ಒಪ್ಪಂದಕ್ಕೆ ಸಿದ್ಧವಿರಲಿಲ್ಲ, ಹಾಗೆ ಮಾಡಲು ಅದಕ್ಕೆ ಇರುಸುಮುರುಸಾಯಿತು, ಮೋದಿಯವರು ಕರೆ ಮಾಡಲಿಲ್ಲ  ಎಂದು ಒಂದು ಪಾಡ್‍ಕಾಸ್ಟ್ ನಲ್ಲಿ ಹೇಳಿದ್ದಾರೆ. ಕಳೆದ ಫೆಬ್ರುವರಿಯಿಂದ ಆರು ಸುತ್ತಿನ ಮಾತುಕತೆಗಳು ನಡೆದಿದ್ದು ,ಈ ನಡುವೆ ಯುಎಸ್‍ ಭಾರತದ ಮೇಲೆ 50% ಸುಂಕವನ್ನು ಪ್ರಕಟಿಸಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ನೋಡಿ : “ವೆನೆಜುವೇಲಾದ ಮೇಲೆ ಪೂರ್ಣ ಯುದ್ಧ ಹೂಡಿದರೆ, ಯು.ಎಸ್ ಗೆ ಅದು ಇನ್ನೊಂದು ವಿಯೆಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ!”

ಗಮನಿಸಬೇಕಾದ ಸಂಗತಿಯೆಂದರೆ,ಜನವರಿ 4 ಮತ್ತು ಜನವರಿ6 ರ ಟ್ರಂಪ್‍ರವರ ಬಹಿರಂಗ ಹೇಳಿಕೆಗಳ ಬಗ್ಗೆ  ಪ್ರಧಾನಿಗಳಾಗಲೀ, ಭಾರತ ಸರಕಾರದ ಯಾವುದೇ ಇಲಾಖೆಯ ವಕ್ತಾರರಾಗಲೀ ಏನೂ ಹೇಳಿರಲಿಲ್ಲ.

                                                                                      “ಆನಂದ  ಸೂಚ್ಯಂಕದ ಬಗ್ಗೆ ಅವರಿಗೆ   ಬಹಳ ಯೋಚನೆಯಾಗಿದೆ                                                                                                    
ಕೃಪೆ: ಸತೀಶ ಆಚಾರ್ಯ@ ಫೇಸ್ಬುಕ್     

ಜನವರಿ 9ರಂದು  ಕೊನೆಗೂ ಭಾರತ ಸರಕಾರದಿಂದ ಯುಎಸ್‍ ‍ವಾಣಿಜ್ಯ ಕಾರ್ಯದರ್ಶಿಗಳ  ಹೇಳಿಕೆಯ ಬಗ್ಗೆ ಮಾತ್ರ ಒಂದು ಪ್ರತಿಕ್ರಿಯೆ ಬಂತು. ಆದರೆ ಅದರಲ್ಲೂ ಅವರ ಹೇಳಿಕೆಯನ್ನು ನೇರವಾಗಿ ನಿರಾಕರಿಸದೆ, ಅದು ‘ಕರಾರುವಾಕ್ಕಾಗಿಲ್ಲ” ಎಂದಷ್ಟೇ ನಮ್ಮ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದರು. ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ಆಸಕ್ತಿ ಖಂಡಿತಾ ಇದೆ, ನಮ್ಮಪ್ರಧಾನಿಗಳು ಯುಎಸ್ ‍ಅಧ್ಯಕ್ಷರಿಗೆ ಕರೆ ಮಾಡಲಿಲ್ಲ ಎಂಬುದು ಸರಿಯಲ್ಲ, 2025ರಲ್ಲಿ ಎಂಟು ವಿವಿಧ ಸಂದರ್ಭಗಳಲ್ಲಿ ಮೋದಿಯವರು ಕರೆ ಮಾಡಿದ್ದಾರೆ  ಎಂದೂ ಅವರು ಹೇಳಿದರು! ಹೌದು, ಒಂದು ತಿಂಗಳ ಹಿಂದೆಯಷ್ಟೇ ಈಗಿರುವ  ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಹೊಸ ಹೆಸರುಗಳಲ್ಲಿ ವಿಮಾವಲಯದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ ತೆರೆದು ಕೊಡುವ  ಮಸೂದೆಯನ್ನು,  ಪರಮಾಣು ಶಕ್ತಿ ವಲಯವನ್ನು ವಿದೇಶಿ ಖಾಸಗಿಯವರಿಗೂ ತೆರೆದ ಕೊಡುವ ಮತ್ತು ಪರಮಾಣು ಅಪಘಾತಗಳಾದಲ್ಲಿ ಪರಿಹಾರವನ್ನು ಬಹಳಷ್ಟು ಸೀಮಿತಗೊಳಿಸಿ, ಅದರ ಹೊರೆಯನ್ನು ನಮ್ಮ ಮೇಲೆಯೇ ಹಾಕಿಕೊಳ್ಳುವ ‘ಶಾಂತಿ’ ಮಸೂದೆಯನ್ನು ತರಾತುರಿಯಿಂದ ಪಾಸು ಮಾಡಿಸಿ ಕೊಡಲಾಗಿದೆ ಎಂಬ ಇದೇ ನಿಟ್ಟಿನಲ್ಲಿನ ಸರಕಾರದ ‘ಸಾಧನೆ’ಯನ್ನು ಹೇಳಿಕೊಳ್ಳಲಿಲ್ಲ!

 30ದಿನಗಳಲ್ಲಿ ಟ್ರಂಪ್‍ರನ್ನು ಖುಶಿಪಡಿಸುವುದು ಹೇಗೆ?
   ಕೃಪೆ: ಸುಭಾನಿ, ಡೆಕ್ಕನ್‍ ಕ್ರಾನಿಕಲ್

ಈ ನಡುವೆ, ಜನವರಿ 7ರಂದೇ ಮತ್ತೊಂದು ಸುದ್ದಿ ದೇಶದ ಎಲ್ಲ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟವಾಯಿತು. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಯುಎಸ್‌ನಲ್ಲಿ ಭಾರತದ ರಾಯಭಾರಿ ಕಚೇರಿ ಯುಸ್ ನೊಂದಿಗೆ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಯುಎಸ್ ನ ಆಡಳಿತಗಾರರೊಂದಿಗೆ ಮತ್ತು ಸರಕಾರೀ ಪರ ಮಾಧ್ಯಮದೊಂದಿಗೆ ವಶೀಲಿ ನಡೆಸಲು ಟ್ರಂಪ್ ಆಪ್ತರೊಬ್ಬರ ವಶೀಲಿ(ಲಾಬಿ) ಕಂಪನಿಯನ್ನು ನೇಮಿಸಿಕೊಂಡಿತ್ತು ಎಂಬುದೇ ಆ ಸುದ್ದಿ.

ಈ ಅಧಿಕಾರಿಗಳೆಂದರೆ, ಶ್ವೇತಭವನದ ಮುಖ್ಯಸ್ಥ ಸೂಸಿ ವೈಲ್ಸ್, ಯುಎಸ್ ವ್ಯಾಪಾರ ಪ್ರತಿನಿಧಿ(ಯುಎಸ್‍ಟಿಆರ್) ಜೇಮಿಸನ್ ಗ್ರೀರ್, ಯುದ್ಧದ ಅಧೀನ ಕಾರ್ಯದರ್ಶಿ(ಅಂಡರ್ ಸೆಕ್ರೆಟರಿ) ಎಲ್ಬ್ರಿಡ್ಜ್ ಕೋಲ್ಬಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‍ಎಸ್‍ಸಿ) ಅಧಿಕಾರಿ ರಿಕಿ ಗಿಲ್.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ, ಯುಎಸ್ ಆಡಳಿತದಲ್ಲಿನ ಪ್ರಭಾವಿ ಅಧಿಕಾರಿಗಳನ್ನು ಸಂಪರ್ಕಿಸಲು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಜಿ ಟ್ರಂಪ್ ಸಹಾಯಕ ಜೇಸನ್ ಮಿಲ್ಲರ್ ನೇತೃತ್ವದ ಎಸ್‌ಹೆಚ್‌ಡಬ್ಲ್ಯು ಎಲ್‌ಎಲ್‌ಸಿ ಎಂಬ ಲಾಬಿಯಿಂಗ್ ಕಂಪನಿಯನ್ನು ಬಳಸಿಕೊಂಡಿದೆ ಎಂದು ಆ ಕಂಪನಿ, ಯುಎಸ್ ನ್ಯಾಯ ಇಲಾಖೆಗೆ ಅಲ್ಲಿನ ಕಾನೂನಿನ ಪ್ರಕಾರ ಸಲ್ಲಿಸಿರುವ ವಿವರಗಳಿಂದ ತಿಳಿದು ಬಂದಿದೆ.

ಭಾರತಕ್ಕಾಗಿ ವಶೀಲಿ ಮಾಡಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಭಾರತದ ರಾಯಭಾರ ಕಚೇರಿ ನೇಮಿಸಿಕೊಂಡ ಈ ಕಂಪನಿಗೆ ಕಳೆದ ಆರು ತಿಂಗಳುಗಳಲ್ಲಿ 9,00,000 ಡಾಲರ್ (ಅಂದರೆ ಸುಮಾರು 8 ಕೋಟಿ ರೂ.)ಪಾವತಿಸಲಾಗಿದೆ ಎಂದೂ ತಿಳಿದು ಬಂದಿದೆ. ಇದು ಒಂದು ವರ್ಷಕ್ಕೆ 18ಲಕ್ಷ ಡಾಲರುಗಳನ್ನು ತೆರುವ ಕಾಂಟ್ರಾಕ್ಟ್ ಎಂದೂ ಹೇಳಲಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಪ್ರಿಲ್ 24 ರಂದು ಭಾರತೀಯ ರಾಯಭಾರಿ ಕಚೇರಿಯ ಕೇಳಿಕೆಯ ಪ್ರಕಾರ ಭಾರತದ ರಾಯಭಾರಿ ವಿನಯ್ ಕ್ವಾತ್ರ ಮತ್ತು ಯುಎಸ್ ಆಡಳಿತದ ಯುದ್ಧ ನೀತಿ ಅಧೀನ ಕಾರ್ಯದರ್ಶಿ ಎಲ್ಬ್ರಿಡ್ಜ್ ಕೋಲ್ಬಿ ಏಪ್ರಿಲ್ 29 ರಂದು ಭೇಟಿಯನ್ನು ಈ ಕಂಪನಿ ಏರ್ಪಡಿಸಿತು. ಮೇ 7 ರ ಮುಂಜಾನೆ ಆಪರೇಷನ್ ಸಿಂಧೂರ್ ಪ್ರಾರಂಭವಾದ ನಂತರ, ಒಂದು ಬಲಪಂಥೀಯ ಮಾಧ್ಯಮ ಸಂಸ್ಥೆಯಾದ ಫಾಕ್ಸ್ ನ್ಯೂಸ್‌ನ ಸುದ್ದಿ ನಿರೂಪಕ ಬ್ರೆಟ್ ಬೇಯರ್‌ರಿಂದ ಕ್ವಾತ್ರ ಅವರ ಸಂದರ್ಶನವನ್ನು ಏರ್ಪಡಿಸಿತು. ಮೇ 10 ರಂದು, ಅಂದರೆ ಆಪರೇಷನ್ ಸಿಂಧೂರ್ ಅನುಸರಿಸಿ ಕದನ ವಿರಾಮವನ್ನು ಘೋಷಿಸಿದ ದಿನ, ಈ ಲಾಬ್ಬಿ ಕಂಪನಿ “ಆಪರೇಷನ್ ಸಿಂಧೂರ್‌ನ ಮಾಧ್ಯಮ ವರದಿ”ಯನ್ನು ಚರ್ಚಿಸುವ ಉದ್ದೇಶದೊಂದಿಗೆ ಯುಎಸ್ ವ್ಯಾಪಾರ ಪ್ರತಿನಿಧಿ ಗ್ರೀರ್, ವೈಲ್ಸ್ ಮತ್ತು ವೈಟ್ ಹೌಸ್ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರನ್ನು ತಲುಪಲು ಭಾರತಕ್ಕೆ ಸಹಾಯ ಮಾಡಿತು.

ಯುಎಸ್‌ನಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳು ಲಾಬ್ಬಿ ಕಂಪನಿಗಳ ನೆರವು ಪಡೆಯುವುದು ಅಲ್ಲಿ ಸಾಮಾನ್ಯ ಸಂಗತಿ, ಭಾರತವೂ ಇದನ್ನು 1950 ರ ದಶಕದಿಂದ ಮಾಡುತ್ತ ಬಂದಿದೆ ಎಂದು ಭಾರತದ ರಾಯಭಾರ ಕಚೇರಿ ಇದಕ್ಕೆ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ, ಇದು ಪೂರ್ತಿ ನಿಜವಲ್ಲ ಎಂದು ಹೇಳಲಾಗಿದೆ. ನಿಜ, ಅಲ್ಲಿನ ರಾಜಕೀಯ ಪಕ್ಷಗಳೊಂದಿಗೆ ಭಾರತ ಸರಕಾರದ ನಿಲುವುಗಳನ್ನು ತಿಳಿಸಲು ಲಾಬ್ಬಿ ಕಂಪನಿಗಳನ್ನು ಈ ಹಿಂದೆ ಬಳಸಿದ್ದರೂ, ಸರಕಾರದ ಅಧಿಕಾರಿಗಳೊಂದಿಗೆ ಮಾತಾಡಲು ಇದನ್ನು ಬಳಸಿರುವುದು ಇದೇ ಮೊದಲು ಎಂದೂ ಹೇಳಲಾಗಿದೆ. ವಿಶೇಷವಾಗಿ ಮೇ 10ರಂದು ಕದನ ವಿರಾಮ ನಡೆದದ್ದು ತನ್ನಿಂದಾಗಿ, ತಾನು ವ್ಯಾಪಾರ ಕುರಿತ ಬೆದರಿಕೆ ಹಾಕಿದ್ದರಿಂದಾಗಿ ಎಂದು ಅಧ್ಯಕ್ಷ ಟ್ರಂಪ್ ಪದೇ ಪದೇ (ಐವತ್ತಕ್ಕೂ ಹೆಚ್ಚು ಬಾರಿ !) ಹೇಳುತ್ತಿರುವುದು, ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ನೇರವಾಗಿ ಹೇಳದೆ, ಕದನ ವಿರಾಮ ನಿರ್ಧಾರದಲ್ಲಿ ಹೊರಗಿನವರ ಪಾತ್ರವಿರಲಿಲ್ಲ ಎಂದು ಭಾರತ ಸರಕಾರದ ವಕ್ತಾರರು ಹೇಳಿರುವುದು  ಈ ಸುದ್ದಿಯ ಹಿನ್ನೆಲೆಯಲ್ಲಿ ಹೊಸ ಅರ್ಥ ಪಡೆದಿದೆ.

ಅಲ್ಲದೆ, ವೆನೆಜುವೆಲಾದ ಅಧ್ಯಕ್ಷರ ಅಪಹರಣದ ನಂತರ ಭಾರತ ಸರಕಾರದ  ಹೇಳಿಕೆಯಲ್ಲಿ ಯುಎಸ್‍ ಆಡಳಿತ ನಮ್ಮಂತಹ ಮೂರನೇ ಜಗತ್ತಿನ  ಸಾರ್ವಭೌಮ ದೇಶವೊಂದರ ರಾಷ್ಟ್ರಾಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿರುವ ಬಗ್ಗೆ ಒಂದೇ ಒಂದು ಖಂಡನೆಯ ಮಾತೂ ಇರಲಿಲ್ಲ ಎಂಬುದಕ್ಕೆ ಎಡಪಂಥೀಯರು ಮಾತ್ರವಲ್ಲ ಎಲ್ಲ ಪ್ರಜಾಪ್ರಭುತ್ವವಾದಿಗಳು ಕಳವಳ ವ್ಯಕ್ತಪಡಿಸಿರುವುದನ್ನು ಕೂಡ ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.  ಎಡಪಕ್ಷಗಳಂತೂ ಭಾರತ ಸರಕಾರ ಹಿಂಜರಿಯುತ್ತಲೇ ನೀಡಿರುವ ಹೇಳಿಕೆ  “ಅಂಜುಬುರುಕ, ಅವಮಾನಕರ” ಹೇಳಿಕೆ  ಎಂದು ಖಂಡಿಸಿದ್ದವು.

ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ  ಮೇಲೆ ಹೇಳಿದ ಜನವರಿ 4ರ ಟಿಪ್ಪಣಿಯಲ್ಲಿ ತಮ್ಮ ಸುಂಕ ಏರಿಕೆಯ  ಕ್ರಮ ಯುಎಸ್‍ನ್ನು ಶ್ರೀಮಂತಗೊಳಿಸಿದೆ, 650 ಬಿಲಿಯ ಡಾಲರುಗಳನ್ನು ತಂದು ಸುರಿಯಲಿದೆ ಎಂದು ಹೇಳಿದರೆ,  ಜನವರಿ 6ರ ಹೇಳಿಕೆಯಲ್ಲಿ, ವೆನೆಜುವೆಲಾದಲ್ಲಿ ತಮ್ಮ ದುಸ್ಸಾಹಸ ಯುಎಸ್‍ನ ತೈಲ ಕಂಪನಿಗಳಿಗೆ ಅಪಾರ ಲಾಭ ತರಲಿದೆ ಎಂದು ಬೀಗಿಕೊಂಡು ಹೇಳಿರುವುದಾಗಿಯೂ ವರದಿಯಾಗಿದೆ!

ಇಂತಹ ಸಂದರ್ಭದಲ್ಲಿ ಸ್ವಯಂ ಘೋಷಿತ ‘ವಿಶ್ವಗುರು’ವಿನ ಮುಂದುವರೆಯುತ್ತಿರುವ ಮೌನ ಇನ್ನೂ ದಿವ್ಯವಾಗಿ ಕಾಣುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇನ್ನು ಕೆಲವರು ಯುಎಸ್‍ ಅಧ್ಯಕ್ಷರು ಇಷ್ಟೊಂದು ಕೆಣಕುವ ಮಾತುಗಳನ್ನಾಡುತ್ತಿದ್ದರೂ ಈ ದಿವ್ಯಮೌನ ಏಕಿರಬಹುದು ಎಂದು ಸಂದೇಹವನ್ನೂ ವ್ಯಕ್ತಪಡಿಸುತ್ತಿದ್ದಾರೆ.

                              ವಿದೇಶಾಂಗ ಧೋರಣೆ
              ಕೃಪೆ: ಸಜಿತ್‍ ಕುಮಾರ್, ಡೆಕ್ಕನ್‍ ಕ್ರಾನಿಕಲ್

 

ಇದನ್ನೂ ನೋಡಿ : ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !

 

Donate Janashakthi Media

Leave a Reply

Your email address will not be published. Required fields are marked *