ಭಾರತದ ಮೇಲೆ ಅಮೇರಿಕ 500ರಷ್ಟು ಸುಂಕ ವಿಧಿಸುವ ಸಾಧ್ಯತೆ

ವಾಷಿಂಗ್ಟನ್‌: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 500ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಟ್ರಂಪ್‌ ಒಪ್ಪಿಗೆ ನೀಡಿದ್ದಾರೆ ಎಂದು ಅಮೇರಿಕದ ಓರ್ವ ಸೆನೆಟರ್‌ ವರದಿ ಮಾಡಿದ್ದೂ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆಯೂ ಸಹ ಅಮೇರಿಕ 500ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಮೇರಿಕ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆನೆಟರ್‌ ಲಿಂಡ್ಸೆ ಗ್ರಹಾಂ, ಭಾರತ ಮತ್ತು ಚೀನ ಸಹಿತ ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳ ಸರಕುಗಳ ಮೇಲೆ ಶೇ. 500ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಟ್ರಂಪ್‌ ಬೆಂಬಲಿಸಿದ್ದಾರೆ ಎಂದಿದ್ದಾರೆ. ಅಮೇರಿಕ

3 ವರ್ಷಗಳ ಕಾಲ ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದರೂ ಆ ದೇಶದೊಂದಿಗೆ ವಹಿವಾಟು ನಡೆಸುತ್ತಿರುವ ದೇಶಗಳ ಮೇಲೆ ದೊಡ್ಡ ಮಟ್ಟದ ತೆರಿಗೆ ಹಾಕಲು ಅಮೆರಿಕ ಸಿದ್ಧವಾಗಿದೆ ಎಂದವರು ಹೇಳಿದ್ದಾರೆ. ಹಾಗಾಗಿ ಇದರ ನೇರ ಪರಿಣಾಮ ಭಾರತ ಮತ್ತು ಚೀನಗಳಿಗೆ ತಟ್ಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮೂಲಕ ರಷ್ಯಾದ ಆರ್ಥಿಕತೆಯನ್ನು ದುರ್ಬಲಗೊಳಿಸುವುದಲ್ಲದೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಉಕ್ರೇನ್‌ ಜತೆ ಮಾತುಕತೆ ನಡೆಸಲು ಮುಂದಾಗುವಂತೆ ಮಾಡುವುದು ಈ ಲೆಕ್ಕಾಚಾರದ ಹಿಂದಿದೆ.

ಇದನ್ನೂ ಓದಿ: ಬ್ರಹ್ಮಾವರ ವಾರಂಬಳ್ಳಿ ಪಂಚಾಯತ್ ಅವ್ಯವಸ್ಥೆಗಳ ಆಗರ

ಭಾರತಕ್ಕೇನು ಪರಿಣಾಮ?

ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ್ದರೂ ಭಾರತ ಮತ್ತು ಚೀನ ಕಡಿಮೆ ಬೆಲೆಯ ರಷ್ಯಾದ ತೈಲವನ್ನು ಖರೀದಿಸುತ್ತಲೇ ಬಂದಿವೆ. ಈ ಹಿಂದೆ ರಷ್ಯಾದಿಂದ ಭಾರತದ ತೈಲ ಆಮದು ಶೇ. 1ಕ್ಕಿಂತ ಕಡಿಮೆ ಇತ್ತು. ಆದರೀಗ ಶೇ. 40-44ಕ್ಕೇರಿದೆ. ಇತ್ತೀಚೆಗೆ ಇರಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡಿದಾಗ ತೈಲ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹಾಗಾಗಿ ಭಾರತವು ಜೂನ್‌ನಲ್ಲಿ ರಷ್ಯಾದಿಂದ ಮಧ್ಯಪ್ರಾಚ್ಯ ದೇಶಗಳಿಗಿಂತ ಹೆಚ್ಚು ತೈಲವನ್ನು ಖರೀದಿಸಿತ್ತು.

ಒಂದು ವೇಳೆ ಅಮೆರಿಕವು ಈ ಹೊಸ ಕಾನೂನನ್ನು ಜಾರಿಗೆ ತಂದರೆ ಅಮೆರಿಕಕ್ಕೆ ರಫ್ತಾಗುವ ಭಾರತದ ವಸ್ತುಗಳ ಮೇಲೆ ಶೇ. 500ರಷ್ಟು ತೆರಿಗೆ ಬೀಳಬಹುದು. ಇದು ಭಾರ ತದ ಔಷಧ, ಜವಳಿ, ಐಟಿ ಸೇವೆಗಳು, ಆಟೋ ಮೊಬೈಲ್‌ ಬಿಡಿ ಭಾಗಗಳ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರ ಬಹುದು ಎಂದು ಅಂದಾಜಿಸಲಾಗಿದೆ.

ಆದರೆ ಈ ಮಧ್ಯೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಒಪ್ಪಂದಕ್ಕೆ ಸಾಧ್ಯವಾದರೆ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಗ್ರಹಾಂಗೆ ಅಧಿಕಾರವಿಲ್ಲ: ರಷ್ಯಾ

ರಷ್ಯಾ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, ಸೆನೆಟರ್‌ ಗ್ರಹಾಂ ಅಭಿಪ್ರಾಯಗಳ ಬಗ್ಗೆ ನಮಗೆ ಗೊತ್ತು. ಅವರು ಸದಾ ರಷ್ಯಾವನ್ನು ದ್ವೇಷಿಸುತ್ತಲೇ ಬಂದಿದ್ದಾರೆ. ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಅವರಿಗಿದ್ದಿದ್ದರೆ ಈ ಹಿಂದೆಯೇ ನಿರ್ಬಂಧ ವಿಧಿಸುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಅನ್ನ ತಿನ್ನುವವರೆಲ್ಲ ರೈತರ ಹೋರಾಟ ಬೆಂಬಲಿಸಬೇಕು | ಚನ್ನರಾಯಪಟ್ಟಣ ಹೋರಾಟಕ್ಕೆ ಸಾಹಿತಿ ಕಲಾವಿದರ ಸಾತ್

Donate Janashakthi Media

Leave a Reply

Your email address will not be published. Required fields are marked *