ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ ದುರ್ಬಲ: US ನ್ಯಾಯ ಇಲಾಖೆ

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಮತ್ತು ಇನ್ನೂ ಏಳು ಸಹಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸುವ ತನ್ನ ನಿರ್ಧಾರವನ್ನು ಅಮೆರಿಕದ ನ್ಯಾಯ ಇಲಾಖೆ (US Department of Justice) ಸಮರ್ಥಿಸಿಕೊಂಡಿದ್ದು, ಈ ಪ್ರಕರಣ ಮೂಲತಃ ದುರ್ಬಲವಾಗಿದ್ದು ಆರಂಭದಲ್ಲೇ ದಾಖಲಿಸಬಾರಿತ್ತು ಎಂದು ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿದೆ.

ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಫೆಡರಲ್ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಿನ್ಸಿಪಲ್ ಅಸೋಸಿಯೇಟ್ ಡೆಪ್ಯುಟಿ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕಾಟರ್, ಪ್ರಕರಣವನ್ನು “with prejudice” (ಮತ್ತೆ ದಾಖಲಿಸಲು ಅವಕಾಶವಿಲ್ಲದಂತೆ) ವಜಾಗೊಳಿಸಲು ಯಾಕೆ ಮನವಿ ಮಾಡಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಈ ಕುರಿತು ಜೂನ್ 26ರಂದು ನ್ಯಾಯಾಧೀಶ ನಿಕೋಲಸ್ ಗರಾಫಿಸ್ ಹೆಚ್ಚುವರಿ ವಿವರ ಕೇಳಿದ್ದರು.

ನ್ಯಾಯ ಇಲಾಖೆ ಹೇಳುವಂತೆ, ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವ ಮನವಿಗಳು ಸಾಮಾನ್ಯವಾಗಿ ಸಂಕ್ಷಿಪ್ತವಾಗಿರುತ್ತವೆ. ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದು ಆಂತರಿಕ ಚರ್ಚೆಗಳನ್ನು ಹೊರಗೆ ತರುವುದರಿಂದ ಕಾರ್ಯಪಾಲಕ ವಿಭಾಗದ ಅಧಿಕಾರಕ್ಕೆ ಧಕ್ಕೆಯುಂಟಾಗಬಹುದು. ಆದಾಗ್ಯೂ, ಈ ಪ್ರಕರಣದ ಕುರಿತು ತಿಂಗಳುಗಳ ಕಾಲ ಪರಿಶೀಲನೆ ನಡೆಸಿದ ಬಳಿಕ ಮುಂದುವರಿಸಲು ಸಾಧ್ಯವಿಲ್ಲವೆಂಬ ನಿರ್ಣಯಕ್ಕೆ ಬಂದಿರುವುದಾಗಿ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಅನ್ನದಾತರ ಕಣ್ಣೀರು: ವೆಚ್ಚ ಹೆಚ್ಚಳ, ಬೆಲೆ ಕುಸಿತದಿಂದ ರೈತರು ಕಂಗಾಲು

ಪ್ರಕರಣದ ಮೂಲಭೂತ ಅಂಶವೆಂದರೆ ಆರೋಪಿತ ಅಕ್ರಮಗಳು ಬಹುತೇಕ ಭಾರತದಲ್ಲೇ ನಡೆದಿವೆ ಎಂಬುದು. ಹೀಗಾಗಿ ಇದನ್ನು ಅಮೆರಿಕದಲ್ಲಿ ವಿಚಾರಣೆ ನಡೆಸುವುದು ಸೂಕ್ತವಲ್ಲ; ಭಾರತವೇ ಈ ಆರೋಪಗಳನ್ನು ಪರಿಶೀಲಿಸಲು ಸೂಕ್ತ ವೇದಿಕೆ ಎಂದು ಇಲಾಖೆ ವಾದಿಸಿದೆ. ಭಾರತೀಯ ಸಂಸ್ಥೆಗಳು ಈಗಾಗಲೇ ಹಲವು ಆರೋಪಗಳನ್ನು ಪರಿಶೀಲಿಸಿ ಯಾವುದೇ ಕಾನೂನು ಕ್ರಮಕ್ಕೆ ಯೋಗ್ಯವಾದ ಅಕ್ರಮ ಕಂಡುಬಂದಿಲ್ಲ ಎಂದು ವರದಿಗಳಲ್ಲಿ ಹೇಳಿರುವುದನ್ನೂ ಉಲ್ಲೇಖಿಸಿದೆ.

ಪ್ರಕರಣಕ್ಕೆ ಸಾಕ್ಷ್ಯಾಧಾರಗಳ ಕೊರತೆಯೂ ದೊಡ್ಡ ಅಡಚಣೆಯಾಗಿದೆ ಎಂದು ಇಲಾಖೆ ಹೇಳಿದೆ. ಪ್ರಕರಣದಲ್ಲಿ ಉಲ್ಲೇಖಿಸಿರುವ ಎರಡು ಸಾಲಪತ್ರಗಳನ್ನು ಸಂಪೂರ್ಣವಾಗಿ ಮರುಪಾವತಿಸಲಾಗಿದೆ; ಉಳಿದವುಗಳಲ್ಲಿಯೂ ಡಿಫಾಲ್ಟ್ ಲಕ್ಷಣಗಳಿಲ್ಲ. ಹೀಗಾಗಿ ಹೂಡಿಕೆದಾರರಿಗೆ ನಷ್ಟವಾಗಿಲ್ಲ ಎಂಬ ವಾದ ಮುಂದಿಟ್ಟಿದೆ.

ಇನ್ನೂ, ಪ್ರಮುಖ ಸಾಕ್ಷಿಗಳು ಹಾಗೂ ದಾಖಲೆಗಳ ಬಹುಪಾಲು ಭಾರತದಲ್ಲಿರುವುದರಿಂದ ಅಮೆರಿಕದಲ್ಲಿ ವಿಚಾರಣೆ ನಡೆಸುವುದು ಕಷ್ಟಕರವಾಗುತ್ತದೆ. ಆರೋಪಿಗಳಲ್ಲಿ ಯಾರೂ ನ್ಯೂಯಾರ್ಕ್ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ ಹಾಗೂ ಅವರು ವಿದೇಶದಲ್ಲಿ ವಾಸಿಸುತ್ತಿರುವುದರಿಂದ ಹಾಜರಾಗುವ ಸಾಧ್ಯತೆಯೂ ಕಡಿಮೆ ಎಂದು ತಿಳಿಸಿದೆ.

ಗೌತಮ್ ಅದಾನಿ, ಸಾಗರ್ ಅದಾನಿ ಸೇರಿ ಕೆಲವರ ವಿರುದ್ಧ ದಾಖಲಿಸಿದ್ದ ಸೆಕ್ಯೂರಿಟೀಸ್ ವಂಚನೆ ಆರೋಪಗಳು “ಮೂಲತಃ ದಾಖಲಿಸಬಾರದವು” ಎಂದು ಇಲಾಖೆ ಹೇಳಿದೆ. ಆರೋಪಿತ ಕೃತ್ಯಗಳು ಅಮೆರಿಕದ ಹೊರಗಡೆ ನಡೆದಿದ್ದು, ಅಮೆರಿಕದ ಕಾನೂನು ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳಿವೆ. ಜೊತೆಗೆ, ಕಂಪನಿಗಳ ನೈತಿಕತೆ ಮತ್ತು ಅನುಸರಣೆ ಕುರಿತು ನೀಡಿದ ಸಾಮಾನ್ಯ ಹೇಳಿಕೆಗಳನ್ನು ನ್ಯಾಯಾಲಯಗಳು ಹಲವಾರು ಬಾರಿ ಕಾನೂನುಬದ್ಧವಾಗಿ ಪ್ರಶ್ನಿಸಲು ಅಸಾಧ್ಯವಾದ “puffery” ಎಂದು ಪರಿಗಣಿಸುತ್ತವೆ ಎಂದು ಹೇಳಿದೆ.

ವಿದೇಶಿ ಭ್ರಷ್ಟಾಚಾರ ಅಭ್ಯಾಸ ಕಾಯ್ದೆ ಅಡಿ ದಾಖಲಿಸಿದ ಆರೋಪಗಳಿಗೂ ಪ್ರಸ್ತುತ ಆದ್ಯತೆಗಳಾದ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆ ಅಥವಾ ಅಮೆರಿಕದ ಕಂಪನಿಗಳಿಗೆ ನಷ್ಟ ಎಂಬ ಅಂಶಗಳು ಅನ್ವಯವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಇದಲ್ಲದೆ, ಈ ಪ್ರಕರಣವನ್ನು ವಜಾಗೊಳಿಸುವ ನಿರ್ಧಾರವು ಅಮೆರಿಕದಲ್ಲಿ ಅದಾನಿ ಗುಂಪಿನ ಹೂಡಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂಬ ವರದಿಗಳನ್ನು ಇಲಾಖೆ ತಳ್ಳಿಹಾಕಿದ್ದು, ಆ ರೀತಿಯ ಹೇಳಿಕೆಗಳು “ಸುಳ್ಳು” ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸೌರ ವಿದ್ಯುತ್ ಒಪ್ಪಂದಗಳಿಗೆ ಸಂಬಂಧಿಸಿದ ಲಂಚ ಆರೋಪಗಳು ಹಾಗೂ ಅಮೆರಿಕದ ಹೂಡಿಕೆದಾರರನ್ನು ತಪ್ಪು ದಾರಿಗೆಳೆದು ಹಣ ಸಂಗ್ರಹಿಸಿದರೆಂಬ ಆರೋಪಗಳ ಹಿನ್ನೆಲೆ ಈ ಪ್ರಕರಣ ದಾಖಲಾಗಿತ್ತು. ಮೇ ತಿಂಗಳಲ್ಲಿ ಪ್ರಕರಣವನ್ನು ವಜಾಗೊಳಿಸಲು ನ್ಯಾಯ ಇಲಾಖೆ ಮನವಿ ಮಾಡಿದ್ದರೂ, ನ್ಯಾಯಾಲಯ ಹೆಚ್ಚಿನ ಸ್ಪಷ್ಟನೆ ಕೇಳಿತ್ತು.

ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *