ಮನುಷ್ಯನಿಗೆ ಹಂದಿ ಹೃದಯ ಕಸಿ : ಅಮೆರಿಕ ವೈದ್ಯರ ಸಾಧನೆ

ವಾಷಿಂಗ್ಟನ್ : ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸುವಂತೆ ಇದೇ ಮೊದಲ ಬಾರಿಗೆ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಲಾಗಿದೆ. ಹೌದು, ಅಮೆರಿಕದ ಮೆರಿಲ್ಯಾಂಡ್‌ ಆಸ್ಪತ್ರೆಯ ವೈದ್ಯರು ಈ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಿದ್ದಾರೆ.

57 ವರ್ಷದ ಹೃದಯ ಸಂಬಂಧಿ ರೋಗಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ ಅಮೆರಿಕದ ವೈದ್ಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದ್ದು, ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಒಂದು ದಿನ ಸಹಾಯ ಮಾಡುತ್ತದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯು ಶುಕ್ರವಾರ ನಡೆಯಿತು ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯವು ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬೆನೆಟ್‌ ಗೆ ಹೃದಯ ದಾನ ಮಾಡಿದ ಹಂದಿ ಜೆನೆಟಿಕ್ ಎಡಿಟಿಂಗ್ ಪ್ರೊಸೀಜರ್ ಗೆ ಒಳಗಾದ ಹಿಂಡಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ರೋಗಿ ಡೇವಿಡ್ ಬೆನೆಟ್ ಗೆ ಮಾನವ ಕಸಿ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಗಿತ್ತು. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

“ನಾನು ಸಾಯಬೇಕಿತ್ತು ಅಥವಾ ಈ ಕಸಿ ಮಾಡಿಸಿಕೊಳ್ಳಬೇಕಿದೆ. ನಾನು ಬದುಕಲು ಬಯಸುತ್ತೇನೆ. ಇದು ಕತ್ತಲೆಯಲ್ಲಿ ಗುಂಡು ಹಾರಿಸುವಂತಹ ಅವಕಾಶ ಎಂದು ನನಗೆ ತಿಳಿದಿದೆ, ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿದೆ” ಎಂದು ಮೇರಿಲ್ಯಾಂಡ್ ನಿವಾಸಿ ಡೇವಿಡ್ ಬೆನೆಟ್ ಶಸ್ತ್ರಚಿಕಿತ್ಸೆಗೆ ಒಂದು ದಿನ ಮೊದಲು ಹೇಳಿದ್ದರು.

ಹೃದಯ-ಶ್ವಾಸಕೋಶದ ಬೈಪಾಸ್ ಯಂತ್ರದಲ್ಲಿ ಸಮಸ್ಯೆಯುಂಟಾಗಿ ಡೇವಿಡ್ ಬೆನೆಟ್ ಕಳೆದ ಕೆಲವು ತಿಂಗಳಿನಿಂದ ಅನರೋಗ್ಯಕ್ಕೀಡಾಗಿದ್ದರು.  “ಇನ್ನು ಗುಣಮುಖನಾಗಿ ನಾನು ಹಾಸಿಗೆಯಿಂದ ಎದ್ದೇಳಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಗಗಳ ಕೊರತೆಯಿರುವ ಈ ಸಂದರ್ಭದಲ್ಲಿ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಅನ್ವೇಷಣೆಗಳು ನಡೆಯುತ್ತಿವೆ. ಈ ಅನ್ವೇಷಣೆಗೆ ಅಮೆರಿಕ​ ವೈದ್ಯರು ನಡೆಸಿರುವ ಈ ಶಸ್ತ್ರಚಿಕಿತ್ಸೆ ಹಲವರಿಗೆ ಪ್ರೇರಣೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *